More

    ಸಕಲ ಸಿದ್ಧತೆಗೆ ಜಿಲ್ಲಾಧಿಕಾರಿ ರಾಜೇಂದ್ರ ಸೂಚನೆ

    ಬಾಗಲಕೋಟೆ: ರಾಜ್ಯ ಚುನಾವಣಾ ಆಯೋಗ ಗ್ರಾಪಂ ಚುನಾವಣೆಗಳಿಗೆ ವೇಳಾ ಪಟ್ಟಿ ಹೊರಡಿಸಿದ್ದು, ಜಿಲ್ಲೆಯ 193 ಗ್ರಾಮ ಪಂಚಾಯಿತಿಗಳಿಗೆ ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ಚುನಾವಣೆ ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ನಡೆಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾ ಚುನಾವಣಾಧಿಕಾರಿ ಕೆ.ರಾಜೇಂದ್ರ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮಂಗಳವಾರ ಗ್ರಾಪಂ ಚುನಾವಣೆ ಸಿದ್ಧತೆ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಸದಾಚಾರ ನೀತಿ ಸಂಹಿತೆ ಜಾರಿಯಲ್ಲಿದ್ದು, ಚುನಾವಣೆಗೆ ಸನ್ನದ್ಧರಾಗಬೇಕು ಎಂದು ತಿಳಿಸಿದರು.

    ಮೊದಲ ಹಂತದಲ್ಲಿ ಜಮಖಂಡಿ ಉಪವಿಭಾಗದ ಜಮಖಂಡಿ ತಾಲೂಕಿನ 26, ಮುಧೋಳ 22, ಬೀಳಗಿ 24, ರಬಕವಿ-ಬನಹಟ್ಟಿ 17 ಹಾಗೂ ಎರಡನೇ ಹಂತದಲ್ಲಿ ಬಾಗಲಕೋಟೆ ಉಪವಿಭಾಗದ ಬಾಗಲಕೋಟೆ ತಾಲೂಕಿನ 28, ಹುನಗುಂದ 18, ಬಾದಾಮಿ 30, ಇಳಕಲ್ಲ 16 ಹಾಗೂ ಗುಳೇದಗುಡ್ಡ 12 ಗ್ರಾಮ ಪಂಚಾಯಿತಿಗಳು ಸೇರಿ ಒಟ್ಟು 193 ಗ್ರಾಪಂ ಚುನಾವಣೆ ನಡೆಯಲಿದೆ. ಚುನಾವಣಾ ಆಯೋಗದಿಂದ ನೀಡಲಾದ ನಿರ್ದೇಶನದಂತೆ ಮತಗಟ್ಟೆಗಳಿಗೆ ನಂಬರ ಬರೆಯಬೇಕು. ಪ್ರವಾಹದಿಂದ ಮತಗಟ್ಟೆ ಕಟ್ಟಡಗಳು ಹಾನಿಗೊಳಗಾಗಿದ್ದರೆ ತಕ್ಷಣವೇ ಬೇರೆಡೆ ಮತಗಟ್ಟೆಯನ್ನು ಸ್ಥಾಪಿಸಲು ಕ್ರಮಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

    ಮತದಾರ ಪಟ್ಟಿಯನ್ನು ಪರಿಶೀಲಿಸತಕ್ಕದ್ದು. ಮತಗಟ್ಟೆ ಬದಲಾವಣೆಗೆ ಅನುಮತಿ ಪಡೆಯಲಾಗಿದೆ. ಸೂಕ್ಷ್ಮ, ಅತೀ ಸೂಕ್ಷ್ಮಮತಗಟ್ಟೆಗಳನ್ನು ಗುರುತಿಸಿ ಪಟ್ಟಿ ತಯಾರಿಸಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬೇಕು. ಮತಗಟ್ಟೆಗಳಿಗೆ ನೇಮಿಸಲಾದ ಆರ್‌ಒ ಮತ್ತು ಎಆರ್‌ಒಗಳ ಉತ್ತಮವಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗುವಂತವರನ್ನು ನೇಮಿಸಬೇಕು ಎಂದರು.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ಮಾತನಾಡಿ, ಚುನಾವಣಾ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ರಾಜ್ಯ ಚುನಾವಣಾ ಆಯೋಗದ ನೀತಿ ಸಂಹಿತೆಯನ್ನು ಕಟ್ಟು ನಿಟ್ಟಾಗಿ ಪಾಲನೆಯಾಗುವಂತೆ ಮಾಡಬೇಕು. ತುರ್ತಾಗಿ ಶಸಾಸಗಳ ಜಮೆಗೆ ಕ್ರಮ ಕೈಗೊಳ್ಳಬೇಕು. ಫ್ಲಾಯಿಂಗ್ ಸ್ಕ್ವಾಡ್‌ಗಳು ಚೆನ್ನಾಗಿ ಕೆಲಸ ಮಾಡಬೇಕು. ಸೋಷಿಯಲ್ ಮಿಡಿಯಾ ಬಗ್ಗೆ ಹೆಚ್ಚು ಗಮನ ಹರಿಸಲು ತಿಳಿಸಿದರು. ಪೊಲೀಸ್ ಇಲಾಖೆಯೊಂದಿಗೆ ವಿವಿಧ ಇಲಾಖೆ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

    ಜಿಪಂ ಸಿಇಒ ಟಿ.ಭೂಬಾಲನ್ ಮಾತನಾಡಿ, ಆರ್‌ಒ ಕಚೇರಿಗಳಿಗೆ ಬೇಕಾಗುವ ಎಲ್ಲ ಪೂರಕ ಸಾಮಗ್ರಿಗಳ ವ್ಯವಸ್ಥೆ ಮಾಡಿಕೊಳ್ಳಬೇಕು. ಗ್ರಾಮ ಮಟ್ಟದಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ಮಹತ್ವದ ಚುನಾವಣೆಯಾಗಿದೆ. ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸಬೇಕು. ಯಾವುದೇ ರೀತಿ ತೊಂದರೆಯಾಗದಂತೆ ನೋಡಿಕೊಂಡು ಚುನಾವಣೆ ಸುಸೂತ್ರವಾಗಿ ನಡೆಯಲು ಎಲ್ಲ ರೀತಿಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ಅಲ್ಲದೆ, ಸ್ವೀಪ್ ಚಟುವಟಿಕೆ ಸಹ ಹಮ್ಮಿಕೊಳ್ಳಬೇಕು ಎಂದು ಹೇಳಿದರು.

    ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪವಿಭಾಗಾಧಿಕಾರಿ ಎಂ.ಗಂಗಪ್ಪ, ಎನ್‌ಐಸಿ ಅಧಿಕಾರಿ ಗಿರಿಯಾಚಾರ, ತಹಸೀಲ್ದಾರ್ ಗುರುಸಿದ್ದಯ್ಯ ಹಿರೇಮಠ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎನ್.ವೈ.ಬಸರಿಗಿಡದ ಸೇರಿದಂತೆ ಆಯಾ ತಾಲೂಕು ತಹಸೀಲ್ದಾರರು ವಿಡಿಯೋ ಸಂವಾದದ ಮೂಲಕ ಉಪಸ್ಥಿತರಿದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts