More

    ಅರ್ಥಪೂರ್ಣ ಆಚರಣೆಗೆ ನಿರ್ಧಾರ

    ಬಾಗಲಕೋಟೆ: ಜಿಲ್ಲಾದ್ಯಂತ ಜ.15 ರಂದು ಶಿವಯೋಗಿ ಸಿದ್ಧರಾಮೇಶ್ವರ, 19 ರಂದು ಮಹಾಯೋಗಿ ವೇಮನ ಹಾಗೂ 21 ರಂದು ಅಂಬಿಗರ ಚೌಡಯ್ಯ ಜಯಂತಿ ಆಚರಣೆಗೆ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಕೆ.ರಾಜೇಂದ್ರ ಅಧಿಕಾರಿಗಳಿಗೆ ಸೂಚಿಸಿದರು.

    ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪೂರ್ವ ಸಿದ್ಧತಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಿವಯೋಗಿ ಸಿದ್ಧರಾಮೇಶ್ವರ ಮತ್ತು ಮಹಾಯೋಗಿ ವೇಮನರ ಜಯಂತಿ ವೇದಿಕೆ ಕಾರ್ಯಕ್ರಮ ನವನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಬೇಕು. ಭಾವಚಿತ್ರಗಳ ಮೆರವಣಿಗೆಯನ್ನು ಜಿಲ್ಲಾಡಳಿತ ಭವನದಿಂದ ಆರಂಭಿಸಿ ಅಂಬೇಡ್ಕರ್ ಭವನದವರೆಗೆ ನಡೆಸಬೇಕು ಎಂದು ತಿಳಿಸಿದರು.

    ಜ.21 ರಂದು ಜರುಗುವ ಅಂಬಿಗರ ಚೌಡಯ್ಯ ಜಯಂತಿಯನ್ನು ನಗರದ ಚರಂತಿಮಠ ಶಿವಾನುಭವ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಬೇಕು. ಬಾಗಲಕೋಟೆ ನಗರದಲ್ಲಿ ಮೆರವಣಿಗೆ ಹಮ್ಮಿಕೊಳ್ಳಬೇಕು ಎಂದು ಸಮಾಜದ ಮುಖಂಡರು ಮನವಿ ಮಾಡಿದಾಗ ಜಿಲ್ಲಾಧಿಕಾರಿಗಳು ಒಪ್ಪಿಗೆ ಸೂಚಿಸಿದರು.

    ಮೆರವಣಿಗೆಗೆ ವಿವಿಧ ಜಾನಪದ ಕಲಾತಂಡಗಳನ್ನು ಆಹ್ವಾನಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳಿಗೆ ಹಾಗೂ ಮೆರವಣಿಗೆ ಮಾರ್ಗ ಹಾಗೂ ವೇದಿಕೆಯ ಸುತ್ತಮುತ್ತ ಸ್ವಚ್ಛತೆ ಕಾಯ್ದುಕೊಳ್ಳಲು ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ನಗರಸಭೆ ಆಯುಕ್ತರಿಗೆ ಡಿಸಿ ಸೂಚಿಸಿದರು. ಪೊಲೀಸ್ ಇಲಾಖೆ ಸೂಕ್ತ ಬಂದೋ ಬಸ್ತ್ ವ್ಯವಸ್ಥೆ ಕಲ್ಪಿಸಬೇಕು. ಎಲ್ಲ ಶಾಲೆ-ಕಾಲೇಜು ಹಾಗೂ ಸರ್ಕಾರಿ ಕಚೇರಿಗಳಲ್ಲಿ ಆಯಾ ಜಯಂತಿ ದಿನದಂದು ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ದೇಶನ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

    ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಪ್ರೊಬೇಷನರಿ ಐಎಎಸ್ ಅಧಿಕಾರಿ ಗರಿಮಾ ಪವ್ವಾರ, ಜಿಪಂ ಉಪಕಾರ್ಯದರ್ಶಿ ಎ.ಜಿ.ತೋಟದ, ತಹಸೀಲ್ದಾರ್ ಗುರುಬಸಯ್ಯ ಹಿರೇಮಠ ಸೇರಿದಂತೆ ವಿವಿಧ ಸಮಾಜದ ಮುಖಂಡರಾದ ಮುಕ್ಕಣ್ಣ ನಾಲತ್ವಾಡ, ಆರ್.ಎಂ.ಮುಧೋಳ, ಯಲ್ಲಪ್ಪ ಕೋಟಿಕಲ್, ಪ್ರಕಾಶ ವಡ್ಡರ, ಬ್ರಹ್ಮಋಷಿ ಪಾತ್ರೋಟ, ಎಸ್.ಪಿ.ಮಾಚಾ, ರಮೇಶ ಬದ್ನೂರ, ಎಚ್.ಜಿ.ಅಂಬಿಗೇರ, ಎಸ್.ಎಂ.ವಾಲಿಕಾರ, ಚಂದ್ರಶೇಖರ ದಳವಾಯಿ, ಸಂಜಯ ಕೋಲಕಾರ, ಪಾಂಡಪ್ಪ ಅಂಬಿಗೇರ ಸೇರಿದಂತೆ ಇತರರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜ ಶಿರೂರ ಸ್ವಾಗತಿಸಿ ಕೊನೆಗೆ ವಂದಿಸಿದರು.

    ಮಹಾಪುರುಷರ ಜೀವನ ಚರಿತ್ರೆಯ ಕುರಿತು ಮಾತನಾಡಲು ಉತ್ತಮ ಉಪನ್ಯಾಸಕರನ್ನು ಆಹ್ವಾನಿಸಬೇಕು. ಶಿಷ್ಟಾಚಾರದ ಪ್ರಕಾರ ಆಮಂತ್ರಣ ಪತ್ರಿಕೆ, ಜನಪ್ರತಿನಿಧಿಗಳಿಗೆ ಆಮಂತ್ರಣ ಪತ್ರ ತಲುಪಿಸುವ ಕಾರ್ಯ, ವೇದಿಕೆ ಸಿದ್ಧತೆ, ಭಾವಚಿತ್ರದ ಮೆರವಣಿಗೆ ವ್ಯವಸ್ಥೆಯನ್ನು ಸಂಬಂಧಿಸಿದ ಅಧಿಕಾರಿಗಳು ಮಾಡಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿ ಕೆ.ರಾಜೇಂದ್ರ ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts