More

    ಫಲಿತಾಂಶ ಬಿಜೆಪಿ ಶಕ್ತಿ ಹೆಚ್ಚಿಸಲ್ಲ, ಕಾಂಗ್ರೆಸ್ ಶಕ್ತಿ ಕುಂದಿಸಲ್ಲ

    ಬಾಗಲಕೋಟೆ: ಶಿರಾ ಮತ್ತು ಆರ್.ಆರ್. ನಗರ ಉಪ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ದುರುಪಯೋಗ ಹಾಗೂ ಹಣದ ಹೊಳೆಯನ್ನು ಹರಿಸಿ ಗೆಲುವು ಪಡೆದಿದೆ. ಅದಾಗ್ಯೂ ಈ ಗೆಲುವಿನಿಂದ ಅವರ (ಬಿಜೆಪಿ) ಶಕ್ತಿ ಹೆಚ್ಚಲ್ಲ, ನಮ್ಮ (ಕಾಂಗ್ರೆಸ್) ಶಕ್ತಿ ಕುಂದಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿಶ್ಲೇಷಿಸಿದರು.

    ಬಾದಾಮಿ ಪಟ್ಟಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಏನೇ ಇದ್ದರೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೋಲು, ಗೆಲುವು ಸಾಮಾನ್ಯ. ಜನರ ತೀರ್ಪು ಒಪ್ಪಿಕೊಂಡಿದ್ದೇವೆ ಎಂದರು.

    ಉಪ ಚುನಾವಣೆ ಸೋಲಿನ ಹೊಣೆಯನ್ನು ಡಿ.ಕೆ. ಶಿವಕುಮಾರ್ ಯಾಕೆ ಹೊರಬೇಕು? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಆಗಿದ್ದಾರೆ ಎಂದ ಮಾತ್ರಕ್ಕೆ ಅವರು ಹೊಣೆ ಹೊರಬೇಕಿಲ್ಲ. ಇದು ಉಪ ಚುನಾವಣೆ, 2023ಕ್ಕೆ ಸಾರ್ವತ್ರಿಕ ಚುನಾವಣೆಯಲ್ಲಿ ನಾವು ಗೆಲ್ಲುತ್ತೇವೆ ಎಂದು ತಿಳಿಸಿದರು.

    ಶಿರಾ ಮತ್ತು ಆರ್‌ಆರ್ ನಗರ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯಲ್ಲಿ ಯಾವುದೇ ಗೊಂದಲ ಇರಲಿಲ್ಲ. ಸ್ಥಳೀಯವಾಗಿ ಎಲ್ಲ ಮುಖಂಡರು ಶಿಫಾರಸು ಮಾಡಿದ ಮೇಲೆ ಆಯ್ಕೆ ಮಾಡಲಾಗಿತ್ತು. ಆರ್.ಆರ್. ನಗರದಲ್ಲಿ ಮಾತ್ರ ಅಭ್ಯರ್ಥಿ ಘೋಷಣೆ ಸ್ವಲ್ಪ ವಿಳಂಬವಾಗಿತ್ತು. ಶಿರಾದಲ್ಲಿ ಗೆಲ್ಲುವ ಹಾಗೂ ಆರ್.ಆರ್. ಕ್ಷೇತ್ರದಲ್ಲಿ ತೀವ್ರ ಸ್ಪರ್ಧೆ ಒಡ್ಡುವ ವಿಶ್ವಾಸ ಇತ್ತು. ಆದರೆ, ಎರಡು ಕಡೆಗೆ ಬಿಜೆಪಿ ಗೆದ್ದಿದೆ. ಗೆಲುವಿಗೆ ಹಣ ಹಾಗೂ ಅಧಿಕಾರ ದುರುಪಯೋಗ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

    ಡಿ.ಕೆ. ರವಿ ಹೆಸರು ಬಳಕೆ ಮಾಡಿಲ್ಲ
    ಆರ್.ಆರ್. ಕ್ಷೇತ್ರದ ಅಭ್ಯರ್ಥಿ ಕುಸುಮಾ ಅವರ ಪತಿ ಕುಟುಂಬದವರು ವಿರೋಧ ಮಾಡಿದ್ದು ಹಿನ್ನಡೆ ಆಯಿತೆ? ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಪಾಪಾ ಅವರೇನು ವಿರೋಧ ಮಾಡಿಲ್ಲ. ಪ್ರಚಾರನೂ ಮಾಡಿಲ್ಲ ಎಂದರು.
    ಅಲ್ಲದೆ, ಚುನಾವಣೆಯಲ್ಲಿ ಕುಸುಮಾ ಅವರಾಗಲಿ, ನಮ್ಮ ಪಕ್ಷದವರು ಡಿ.ಕೆ. ರವಿ ಅವರ ಹೆಸರು ಬಳಕೆ ಮಾಡಿಲ್ಲ. ಒಳ್ಳೆಯ ವಿದ್ಯಾವಂತ ಹೆಣ್ಣು ಮಗಳು ಅಂತ ಟಿಕೆಟ್ ಕೊಟ್ಟಿದ್ದೆವು. ಆದರೆ, ಜನರು ಗೆಲ್ಲಿಸಲಿಲ್ಲ ಎಂದರು.

    ಬಿಹಾರ ಫಲಿತಾಂಶಕ್ಕೆ ಮಾಜಿ ಸಿಎಂ ಅಚ್ಚರಿ
    ಬಿಹಾರ ಮತ ಏಣಿಕೆಯಲ್ಲಿ ಬೆಳಗ್ಗೆ ಮಹಾ ಘಟಬಂಧನ 30ಕ್ಕಿಂತ ಹೆಚ್ಚು ಸ್ಥಾನ ಮುಂದಿತ್ತು. ಆ ನಂತರ ಒಮ್ಮೆಲೆ ಬಿಜೆಪಿ ಅಷ್ಟು ಸ್ಥಾನಗಳನ್ನು ಹಿಂದಿಕ್ಕಿ ಮುನ್ನಡೆ ಸಾಧಿಸಿದ್ದು, ಕೆಲ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಬಗ್ಗೆ ಆ ಮೇಲೆ ನೋಡೋಣ ಎಂದ ಅವರು, ಇವಿಎಂ ಬಗ್ಗೆ ನಾನೇನು ಹೇಳಲ್ಲ. ಆ ಬಗ್ಗೆ ನನಗೆ ಗೊತ್ತಿಲ್ಲ. ಅದನ್ನು ಅಲ್ಲಿನ ಕಾಂಗ್ರೆಸ್, ಆರ್‌ಜೆಡಿ ಮುಖಂಡರು ಮಾತನಾಡುತ್ತಾರೆ ಎಂದು ಹೇಳಿದರು.

    ಚುನಾವಣಾ ಸಮೀಕ್ಷೆಗಳೆಲ್ಲವೂ ಎನ್‌ಡಿಎ ಸೋಲುತ್ತದೆ, ಮಹಾಘಟಬಂಧನ ಅಧಿಕಾರಕ್ಕೆ ಬರುತ್ತದೆ ಅಂತನೇ ಹೇಳಿದ್ದವು. ಆದರೆ, ಈಗ ಬಂದಿರುವ ಫಲಿತಾಂಶದಿಂದ ಅನುಮಾನ ಬರಲ್ವೇನ್ರಿ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

    ಸಿಂಹನಿಗೆ ಇನ್ನು ಪ್ರೌಢಿಮೆ ಇಲ್ಲ; ಬಿಎಸ್‌ವೈ ಖುರ್ಚಿ ಉಳಿಯಲ್ಲ
    ತಮ್ಮ ಬಗ್ಗೆ ಸಂಸದ ಪ್ರತಾಪ್‌ಸಿಂಹ ಮಾಡಿರುವ ಆರೋಪಕ್ಕೆ ಯಾವುದೇ ಉತ್ತರ ಕೊಡಲ್ಲ. ಅವರಿಗೆ ಇನ್ನೂ ರಾಜಕೀಯ ಪ್ರೌಢಿಮೆ ಬಂದಿಲ್ಲ ಎಂದ ಸಿದ್ದರಾಮಯ್ಯ, ಬಿಎಸ್‌ವೈ ವಿಚಾರದಲ್ಲಿ ನನಗೆ ಈಗಲೂ ಇರುವ ಮಾಹಿತಿ ಪ್ರಕಾರ ಬಿಜೆಪಿಯವರು ಅವರನ್ನು ಸಿಎಂ ಸ್ಥಾನದಿಂದ ಕೆಳಗೆ ಇಳಿಸುತ್ತಾರೆ ಎಂದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts