More

    ಡಿಸಿಸಿ ಬ್ಯಾಂಕ್ ಕಾಂಗ್ರೆಸ್ ವಶ !

    ಬಾಗಲಕೋಟೆ : ಹೈಕೋರ್ಟ್ ಆದೇಶದಂತೆ ಪ್ರತಿಷ್ಠಿತ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆ ಪ್ರಕ್ರಿಯೆ ಮತ ಎಣಿಕೆ ಶುಕ್ರವಾರ ನಡೆಯಿತು. ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಅಜುಕುಮಾರ ಸರನಾಯಕ, ಉಪಾಧ್ಯಕ್ಷರಾಗಿ ಮುರುಗೇಶ ಕಡ್ಲಿಮಟ್ಟಿ ಆಯ್ಕೆಯಾದರು.

    ಡಿಸಿಸಿ ಬ್ಯಾಂಕ್‌ನಲ್ಲಿ ಬೆಳಗ್ಗೆ 11 ಗಂಟೆಗೆ ಚುನಾವಣೆ ಅಧಿಕಾರಿಯಾಗಿರುವ ಬಾಗಲಕೋಟೆ ಉಪ ವಿಭಾಗಾಧಿಕಾರಿ ಎಂ.ಗಂಗಪ್ಪ ನ್ಯಾಯಾಲಯದ ಆದೇಶದ ಅನ್ವಯ ಬ್ಯಾಂಕ್ ನಿರ್ದೇಶಕರ ಸಮ್ಮುಖದಲ್ಲಿ ಮತ ಎಣಿಕೆ ನಡೆಸಿದರು. ಬಳಿಕ ಒಟ್ಟು 14 ಮತಗಳಲ್ಲಿ 8 ಮತ ಪಡೆದು ಅಂದರೆ ಎರಡು ಮತಗಳ ಅಂತರದಿಂದ ಅಧ್ಯಕ್ಷರಾಗಿ ಅಜಯಕುಮಾರ ಸರನಾಯಕ, ಉಪಾಧ್ಯಕ್ಷ ಮುರುಗೇಶ ಕಡ್ಲಿಮಟ್ಟಿ ಆಯ್ಕೆಯಾಗಿದ್ದಾರೆ ಎಂದು ಘೋಷಣೆ ಮಾಡಿದರು.

    ಮುಗಿಲು ಮುಟ್ಟಿದ ಸಂಭ್ರಮ
    ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ವಿಜಯದ ನಗೆ ಬೀರುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರ ಸಂಭ್ರಮ ಮುಗಿಲು ಮುಟ್ಟಿತ್ತು. ಪಕ್ಷದ ಮುಖಂಡರು ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಸನ್ಮಾನಿಸಿದರು. ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಜಯಕಾರ ಹಾಕಿದರು. ಸಿಹಿ ಹಂಚಿ, ಪರಸ್ಪರ ಗುಲಾಲು ಎರಚಿ ಸಂಭ್ರಮಾಚರಣೆ ಮಾಡಿದರು.

    ನಿಜವಾಯಿತು ಅಡ್ಡಮತದಾನ
    ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬಣದಿಂದ ಕುಮಾರ ಜನಾಲಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಪ್ರಕಾಶ ತಪಶೆಟ್ಟಿ ಸ್ಪರ್ಧಿಸಿದ್ದರು. ಕಾಂಗ್ರೆಸ್ ಬಣದಿಂದ ಅಧ್ಯಕ್ಷ ಸ್ಥಾನಕ್ಕೆ ಅಜಯಕುಮಾರ ಸರನಾಯಕ, ಉಪಾಧ್ಯಕ್ಷ ಸ್ಥಾನಕ್ಕೆ ಮುರುಗೇಶ ಕಡ್ಲಿಮಟ್ಟಿ ಕಣದಲ್ಲಿದ್ದರು. ಒಟ್ಟು 16 ಮತಗಳ ಪೈಕಿ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಮತ ಚಲಾಯಿಸಿರಲಿಲ್ಲ.

    ಸರ್ಕಾರದ ನಾಮನಿರ್ದೇಶಿತ ಸದಸ್ಯನ ಮತ ಕೈಬಿಟ್ಟು ಉಳಿದಂತೆ ಅಪೆಕ್ಸ್ ಬ್ಯಾಂಕ್ ಪ್ರತಿನಿಧಿ ಹಾಗೂ ಜಿಲ್ಲಾ ಸಹಕಾರ ಇಲಾಖೆ ಪ್ರಬಂಧಕರ ಮತಗಳು ಸೇರಿ ಒಟ್ಟು 14 ಮತಗಳು ಎಣಿಕೆಗೆ ನ್ಯಾಯಾಲಯ ಗ್ರೀನ್ ಸಿಗ್ನಲ್ ನೀಡಿತ್ತು. ಆದರೆ, ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮತದಾನ ನಡೆದ ಸಂಜೆಯಿಂದಲೂ ಸಾರ್ವಜನಿಕ ವಲಯದಲ್ಲಿ ಅಡ್ಡಮತದಾನ ಬಿಸಿ ಬಿಸಿ ಚರ್ಚೆ ಜೋರಾಗಿ ನಡೆದಿತ್ತು. ಬಹುಮತವಿದ್ದರೂ ಬಿಜೆಪಿ ಅಧಿಕಾರ ಕೈ ತಪ್ಪಲಿದೆ ಎನ್ನುವ ಮಾತು ಬಲವಾಗಿ ಕೇಳಿ ಬಂದಿದ್ದವು. ಇದೀಗ ನಿಜವಾಗಿದ್ದು, ಅಡ್ಡಮತದಾನ ಮೂಲಕ ಕಾಂಗ್ರೆಸ್ ಅಧಿಕಾರ ಗದ್ದುಗೆ ಏರಿದರೆ ಬಿಜೆಪಿ ಭಾರಿ ಮುಖಭಂಗ ಅನುಭವಿಸಿದೆ. ಈ ಫಲಿತಾಂಶ ಕಾಂಗ್ರೆಸ್ ವಲಯದಲ್ಲಿ ಮಂದಹಾಸದ ನಗೆ ಬೀರಿದರೆ ಬಿಜೆಪಿಯಲ್ಲಿ ತಮ್ಮದೇ ನಾಯಕರ ವಿರುದ್ಧ ಆಕ್ರೋಶ ಮಡುಗಟ್ಟಿದಂತು ಸುಳ್ಳಲ್ಲ.

    ಸಹಕಾರಿ ಕ್ಷೇತ್ರದಲ್ಲಿ ರಾಜಕಾರಣ ಸಲ್ಲ
    ಫಲಿತಾಂಶ ಘೋಷಣೆಯಾದ ಬಳಿಕ ಡಿಸಿಸಿ ಬ್ಯಾಂಕ್ ನೂತನ ಅಧ್ಯಕ್ಷ ಅಜಯಕುಮಾರ ಸರನಾಯಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜಕೀಯ ನಾಯಕರು ಇದ್ದರು ಸಹ ಸಹಕಾರಿ ಸಂಸ್ಥೆಯಲ್ಲಿ ಪಕ್ಷ, ರಾಜಕಾರಣ ಮುಖ್ಯವಲ್ಲ. 17 ವರ್ಷಗಳಿಂದ ಡಿಸಿಸಿ ಬ್ಯಾಂಕ್ ಯಾವ ರೀತಿ ಪ್ರಗತಿ ಸಾಧಿಸಿದೆ. ಅದೇ ರೀತಿ ಬೆಳವಣಿಗೆ ಮಾಡುವ ಆಸೆ ಹೊಂದಿದ್ದೇವೆ. ಎಲ್ಲರ ಸಹಕಾರ ಬೇಕು. ಹೊಸದಾಗಿ ಮೂವರು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಫಲಿತಾಂಶದಲ್ಲಿ ಸೋಲು, ಗೆಲುವು ಮುಖ್ಯವಲ್ಲ. ವಿಜಯಾನಂದ ಕಾಶಪ್ಪನವರ ಆದಿಯಾಗಿ ಎಲ್ಲ ನಿರ್ದೇಶಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತೇವೆ ಎಂದರು.

    ಈ ಫಲಿತಾಂಶದಲ್ಲಿ ಏನಾಗಿದೆ ಎನ್ನುವ ಗುಟ್ಟು ಬಿಟ್ಟು ಕೊಡುವುದಕ್ಕೆ ಆಗುವುದಿಲ್ಲ. ಆಪರೇಷನ್ ಕಮಲ ಅಂತಹ ವಿಷಯಗಳಲ್ಲಿ ನನಗೆ ನಂಬಿಕೆ ಇಲ್ಲ. ಸಹಕಾರಿ ಸಂಸ್ಥೆಯ ಚುನಾವಣೆಗೂ ಮುನ್ನ ಬೆಳಗಾವಿ ಮಾದರಿಯಲ್ಲಿ ಅವಿರೋಧ ಆಯ್ಕೆ ನಡೆದಿದ್ದರೆ ಉತ್ತಮವಾಗಿ ಇರುತ್ತಿತ್ತು. ಚುನಾವಣೆ ಅಂದ ಮೇಲೆ ಪ್ರತಿಷ್ಠೆ ಇರುವುದು ನಿಜ. ಹೀಗಾಗಿ ಚುನಾವಣೆ ನಡೆಯಿತು. 2003 ರಲ್ಲಿ ವಿಜಯಪುರ ಜಿಲ್ಲೆಯಿಂದ ಡಿಸಿಸಿ ಬ್ಯಾಂಕ್ ವಿಭಜನೆಯಾದ ಬಳಿಕ 220 ಕೋಟಿ ರೂ. ಠೇವಣಿ ಇತ್ತು. ಇಂದು 2 ಸಾವಿರ ಕೋಟಿ ದಾಟಿದೆ. ಇದೇ ರೀತಿ ಬ್ಯಾಂಕ್ ಪ್ರತಿ ವರ್ಷ ಪ್ರಗತಿಯತ್ತ ಕೊಂಡೊಯ್ಯಲು ಶ್ರಮಿಸಲಾಗುವುದು. ಚುನಾವಣೆಗೋಸ್ಕರ ನಡೆದ ರಾಜಕೀಯ ತಿಕ್ಕಾಟ ಇಲ್ಲಿಗೆ ಅಂತ್ಯಗೊಳಿಸುತ್ತಿದ್ದೇವೆ. ಮುಸುಕಿನ ಗುದ್ದಾಟ ಕೂಡ ಇಲ್ಲ ಎಂದು ಸ್ಪಷ್ಟಪಡಿಸಿದರು.

    ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಮಾತನಾಡಿ, ವಿಜಯಾನಂದ ಕಾಶಪ್ಪನವರ ಯುವ ನಾಯಕರು ಇದ್ದಾರೆ. ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಮತದಾನಕ್ಕೆ ಪಕ್ಷದ ಎಲ್ಲ ಮುಖಂಡರು ಅವರಿಗೆ ಮನವಿ ಮಾಡಿದ್ದೇವೆ. ಈ ವಿಷಯದಲ್ಲಿ ಯಾವುದೇ ರೀತಿ ತಪ್ಪು ಆಗಿಲ್ಲ. ನಮ್ಮನ್ನು ಮತದಾನಕ್ಕೆ ವಿನಂತಿಸಿಲ್ಲ ಎನ್ನುವ ಅವರ ಹೇಳಿಕೆ ಸುಳ್ಳು ಎಂದರು.

    ಮಾಜಿ ಸಚಿವ, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್.ವೈ.ಮೇಟಿ, ಮುಖಂಡರಾದ ನಾಗರಾಜ ಹದ್ಲಿ, ಭರತಕುಮಾರ ಈಟಿ, ಎಸ್.ಎನ್.ರಾಂಪೂರ, ಮಂಜುನಾಥ ಪುರತಗೇರಿ, ಚನ್ನವೀರ ಅಂಗಡಿ ಸೇರಿ ಇತರರು ಇದ್ದರು.

    ಡಿಸಿಎಂ ಗೋವಿಂದ ಕಾರಜೋಳ, ಜಿಲ್ಲೆಯ ನಾಯಕರು ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸ್ಥಾನದ ಸ್ಪರ್ಧೆಗೆ ಇಳಿಸಿದ್ದರು. ಬಿಜೆಪಿ ಬಳಿ ನಿಶ್ಚಿತವಾಗಿ 8 ಮತ ಇದ್ದಾವೆ ಅಂತ ತಿಳಿಸಿದ್ದರು. ಅವರು ಹೇಳಿದಂತೆ ಸ್ಪರ್ಧೆ ಮಾಡಿದ್ದೇವು. ಗೆಲ್ಲುತ್ತೇವೆ ಎನ್ನುವ ನಿರೀಕ್ಷೆ ಇತ್ತು. ಇವತ್ತಿನ ಫಲಿತಾಂಶ ವ್ಯತಿರಿಕ್ತವಾಗಿ ಬಂದಿದೆ. ಇದಕ್ಕೆ ಏನು ಕಾರಣ ಎನ್ನುವುದು ಅವರೇ ಹೇಳಬೇಕು. ಸೋಲಿನ ಬಗ್ಗೆ ದೂರು ಕೊಡುವುದಕ್ಕೆ ಬರುವುದಿಲ್ಲ. ಅಪಮಾನವಾಗಿದ್ದು ನಮ್ಮ ಇಬ್ಬರಿಗೆ ಅಲ್ಲ. ಡಿಸಿಎಂ ಗೋವಿಂದ ಕಾರಜೋಳ, ಪಕ್ಷದ ನಾಯಕರು ಹಾಗೂ ಬಿಜೆಪಿಗೆ. ಸೋಲಿನ ಸತ್ಯಾಂಶ ಬಗ್ಗೆ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕು. ತಪ್ಪಿತಸ್ಥರ ಮೇಲೆ ಅವರು ಕ್ರಮ ತೆಗೆದುಕೊಳ್ಳಬೇಕು. ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ನಮ್ಮ ಸಹಕಾರ ನೀಡುತ್ತೇವೆ.
    ಪ್ರಕಾಶ ತಪಶೆಟ್ಟಿ, ಉಪಾಧ್ಯಕ್ಷ ಸ್ಥಾನದ ಪರಾಜಿತ ಅಭ್ಯರ್ಥಿ, ಬಸವೇಶ್ವರ ಬ್ಯಾಂಕ್ ಅಧ್ಯಕ್ಷ

    ಚುನಾವಣೆಯಲ್ಲಿ ಸೋಲು, ಗೆಲುವು ಸಹಜ. ಬಾದಾಮಿ ಪಿಕೆಪಿಎಸ್‌ಗೆ ಸ್ವತಂತ್ರವಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದೆ. ಪಕ್ಷದ ಮುಖಂಡರು ಸೂಚನೆ ಮೇರೆಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಕಣಕ್ಕೆ ಇಳಿದಿದ್ದವು. ಸೋಲಿನ ಬಗ್ಗೆ ಪಕ್ಷದ ನಾಯಕರ ಗಮನಕ್ಕೆ ತರಲಾಗುವುದು. ನನ್ನ ಬಲಿ ಪಶು ಮಾಡಿದರು ಎನ್ನುವ ಕಾರಣ ದೇವರೇ ಹೇಳಬೇಕು. ಹೊಂದಾಣಿಕ ರಾಜಕಾರಣ ಗೊತ್ತಿದ್ದ ವಿಷಯ. ಸಹಕಾರಿ ರಾಜಕಾರಣದಲ್ಲಿ ಇದೆಲ್ಲವು ಸಹಜ.
    ಕುಮಾರಗೌಡ ಜನಾಲಿ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸ್ಥಾನದ ಪರಾಜಿತ ಅಭ್ಯರ್ಥಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts