More

    ಕಮಲದ ಸಹಾಯಹಸ್ತ

    ಅಶೋಕ ಶೆಟ್ಟರ
    ಬಾಗಲಕೋಟೆ: ಡಿಸಿಸಿ ಬ್ಯಾಂಕ್‌ನಲ್ಲಿ ಈ ಸಲ ಅಧಿಕಾರ ಗದ್ದುಗೆ ಹಿಡಿಯಲೇಬೇಕೆಂದು ರಾಜ್ಯದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಶಾಸಕರು ಮತ್ತು ಮುಖಂಡರು ಸೇರಿ ಹೆಣೆದ ರಣತಂತ್ರ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತಾಗಿದೆ.

    ಎಲ್ಲರ ಶ್ರಮವನ್ನು ವ್ಯರ್ಥಗೊಳಿಸಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಎಳ್ಳುನೀರು ಬಿಟ್ಟು ಕಮಲದಲ್ಲಿದ್ದ ಗೆಲುವಿನ ಹಾರವನ್ನು ಕಾಣದಂತೆ ಎತ್ತಿಕೊಂಡು ಹೋಗಿ ಕಾಂಗ್ರೆಸ್ ಕೊರಳಿಗೆ ಹಾಕಿರುವ ಇಬ್ಬರು ಕಮಲ ಕಲಿಗಳ ನಡೆ ಮಾತ್ರ ಜಿಲ್ಲೆಯ ಬಿಜೆಪಿ ಮುಖಂಡರಿಗೆ ಮುಖಭಂಗವನ್ನು ಉಂಟು ಮಾಡಿದೆ.

    ಹೌದು, ಇದು ಜಿಲ್ಲೆಯ ಪ್ರತಿಷ್ಠಿತ, ಸಾವಿರಾರು ಕೋಟಿ ರೂ. ವಹಿವಾಟಿನ ಹಾಗೂ ಜಿಲ್ಲಾ ರಾಜಕಾರಣದ ಮೇಲೆ ಅಗಾಧ ಪ್ರಭಾವ ಬೀರುತ್ತಲೇ ಬಂದಿರುವ ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ನಡೆದ ನಾಟಕೀಯ ಬೆಳವಣಿಗೆಯ ಸಂಕ್ಷಿಪ್ತ ಸಾರಾಂಶ!

    ಡಿಸಿಸಿ ಬ್ಯಾಂಕ್ ಚುನಾವಣೆಯನ್ನು ಅತ್ಯಂತ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದ ಬಿಜೆಪಿಗರು ಅಧಿಕಾರ ಚುಕ್ಕಾಣಿ ಹಿಡಿಯುವ ವೇಳೆ ಆ ಇಬ್ಬರು ಮಾಡಿದ ಎಡವಟ್ಟು ಇದೀಗ ಕೈ ಕೈ ಹೊಸಕಿಕೊಳ್ಳುವಂತೆ ಮಾಡಿದೆ. ಅವರನ್ನು ನಂಬಿ ಅಖಾಡಕ್ಕೆ ಇಳಿದಿದ್ದ ಅಭ್ಯರ್ಥಿಗಳಿಗೆ ಯಾರನ್ನ ನಂಬೋದು, ಇನ್ನ್ಯಾರನ್ನು ಬಿಡೋದು ಎನ್ನುವ ಧರ್ಮಸಂಕಟ ಎದುರಾಗಿದೆ.
    ಬ್ಯಾಂಕ್ ನಿರ್ದೇಶಕರ ಚುನಾವಣೆ ಬಳಿಕ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಎರಡನ್ನು ಪಡೆಯುವ ಎಲ್ಲ ಅವಕಾಶಗಳು ಬಿಜೆಪಿಗೆ ಇದ್ದವು. ಪಕ್ಷದ ಬೆಂಬಲದಿಂದ ಗೆದ್ದು ಬೀಗಿದ್ದವರು ಮಾತ್ರ ತಮ್ಮದೇ ಪಕ್ಷದ ಬೆಂಬಲಿತ ಅಭ್ಯರ್ಥಿಗಳಿಗೆ ಮತ ಹಾಕಿದ್ದರೆ ಸಾಕಿತ್ತು. ಬ್ಯಾಂಕ್ ಅಧಿಕಾರ ಗದ್ದುಗೆ ಮೇಲೆ ಕಮಲ ಕಲಿಗಳು ವಿರಾಜಮಾನರಾಗಿರುತ್ತಿದ್ದರು.

    ಆದರೆ, ತೆರೆಯ ಹಿಂದೆ ಪಕ್ಷನಿಷ್ಠೆಗಿಂತಲೂ ಮತ್ತೊಂದು ನಿಷ್ಠೆ ಮೇಲುಗೈ ಸಾಧಿಸಿದ್ದರಿಂದ ಗೆಲುವಿನ ಹಾರ ಮತ್ತೊಮ್ಮೆ ಕಾಂಗ್ರೆಸ್ ಪಾಲಾಗಿದೆ. ಇತ್ತ ನ.17 ಮತದಾನ ಮುಗಿಯುತ್ತಲೇ ತಮ್ಮದೆ ಪಕ್ಷದ ಬೆಂಬಲಿಗರ ಗೆಲುವು ಎಂದು ಅಗಾಧ ವಿಶ್ವಾಸ ಹೊಂದಿ ಸಾಮಾಜಿಕ ಜಾಲತಾಣದಲ್ಲಿ ಅಭಿನಂದನೆಗಳನ್ನು ಸಲ್ಲಿಸುತ್ತ ಸಂಭ್ರಮಿಸಿದ್ದ ಬಿಜೆಪಿ ಕಾರ್ಯಕರ್ತರಿಗೆ ಮಾತ್ರ ಈಗ ಇರುಸು-ಮುರುಸು. ಹಿರಿಯ ಮುಖಂಡರಿಗೆ ಮುಖಭಂಗ, ನಂಬಿಕೆಯಿಂದ ಅಖಾಡಕ್ಕೆ ಇಳಿದಿದ್ದ ಅಭ್ಯರ್ಥಿಗಳು ಬಲಿಪಶು!

    ಗೆಲುವಿಗೆ ಬೇಕಾದ ಮತ ಗಳಿಸಲು ಕಷ್ಟ ಇರಲಿಲ್ಲ
    ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಆಯ್ಕೆಗಾಗಿ ಒಟ್ಟು 16 ಮತಗಳು ಇದ್ದವು. ಆ ಪೈಕಿ ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನದಿಂದ ಒಬ್ಬರು ಮತ ಹಾಕಿರಲಿಲ್ಲ. ಇತ್ತ ಬಿಜೆಪಿಗೆ ಬೀಳಲಿದ್ದ ಸರ್ಕಾರದ ನಾಮನಿರ್ದೇಶಿತ ಸದಸ್ಯನ ಮತ ಎಣಿಕೆಗೆ ಹೈಕೋರ್ಟ್ ತಡೆಹಿಡಿದ ಪರಿಣಾಮ 14 ಮತಗಳನ್ನು ಎಣಿಕೆಗೆ ಪರಿಗಣಿಸಲಾಗಿತ್ತು.

    ಬಿಜೆಪಿ ಮತ್ತು ಕಾಂಗ್ರೆಸ್ ಬೆಂಬಲದ ತಲಾ 6 ಮತಗಳು ಇದ್ದವು. ಉಳಿದ ಎರಡು ಮತಗಳಲ್ಲಿ ಒಂದು ಅಪೆಕ್ಸ್ ಬ್ಯಾಂಕ್ ಪ್ರತಿನಿಧಿ, ಇನ್ನೊಂದು ಜಿಲ್ಲಾ ಸಹಕಾರಿ ಇಲಾಖೆ ಪ್ರಬಂಧಕರದ್ದು. ಈ ಎರಡು ಮತಗಳು ರಾಜ್ಯದಲ್ಲಿ ಅಧಿಕಾರರೂಢ ಬಿಜೆಪಿಗೆ ಫಿಕ್ಸ್ ಎನ್ನಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ನಿಂತಿದ್ದ ಕುಮಾರ ಜನಾಲಿ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಿಂತಿದ್ದ ಪ್ರಕಾಶ ತಪಶೆಟ್ಟಿ ತಲಾ ಎಂಟು ಮತ ಪಡೆದು ಆಯ್ಕೆ ಆಗುತ್ತಾರೆ ಎನ್ನುವ ಸರಳ ಲೆಕ್ಕಾಚಾರ ಬಿಜೆಪಿಯದ್ದಾಗಿತ್ತು.

    ಬಿಜೆಪಿಯಲ್ಲಿ ತೇರದಾಳ ಶಾಸಕ ಸಿದ್ದು ಸವದಿ, ಪರಿಷತ್ ಸದಸ್ಯ ಹನುಮಂತ ನಿರಾಣಿ, ರನ್ನ ಸಕ್ಕರೆ ಕಾರ್ಖಾನೆ ಅಧ್ಯಕ್ಷ ರಾಮಣ್ಣ ತಳೇವಾಡ, ಬಿಜೆಪಿ ಮುಖಂಡರಾದ ಪ್ರಕಾಶ ತಪಶೆಟ್ಟಿ, ಅಗಸಿಮುಂದಿನ ಹಾಗೂ ಸ್ವತಂತ್ರವಾಗಿ ಗೆದ್ದು ಬಂದಿದ್ದ ಕುಮಾರ ಜನಾಲಿ ಇದ್ದರು. ಕುಮಾರ ಜನಾಲಿ ಅಧ್ಯಕ್ಷ ಸ್ಥಾನ, ಪ್ರಕಾಶ ತಪಶೆಟ್ಟಿ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಗಳು. ಉಳಿದ ನಾಲ್ವರು ಬಿಜೆಪಿ ಕಟ್ಟಾಳುಗಳು! ಅಡ್ಡಮತದಾನ ಹೇಗೆ ಮಾಡಿಯಾರು? ಈ ವಿಶ್ವಾಸದಲ್ಲಿ ಬಿಜೆಪಿಗರಿಗೆ ಇದೀಗ ತಲೆತಿರುಗುವ ಫಲಿತಾಂಶ ಬಂದಿದೆ.

    ಫಲಿಸಿದ ಕೈ ತಂತ್ರ
    ಬಿಜೆಪಿ ಗೆಲುವು ಖಚಿತ ಎಂದು ಎಷ್ಟೆ ಬೀಗಿದ್ದರೂ ಇತ್ತ ಕಾಂಗ್ರೆಸ್ ಮಾತ್ರ ತನ್ನದೆ ಲೆಕ್ಕಾಚಾರದಲ್ಲಿ ಗೆದ್ದೆ ಗೆಲ್ಲುತ್ತೇವೆ ಎಂದು ಹೇಳುತ್ತಲೇ ಬಂದಿದ್ದರು. ಅದರಂತೆ ಅಲ್ಲಿನ ಘಟಾನುಘಟಿ ನಿರ್ದೇಶಕರಾಗಿರುವ ಪರಿಷತ್ ವಿಪಕ್ಷ ನಾಯಕ ಎಸ್.ಆರ್.ಪಾಟೀಲ, ಮಾಜಿ ಸಚಿವರಾದ ಎಚ್.ವೈ.ಮೇಟಿ, ಅಜಯಕುಮಾರ ಸರನಾಯಕ, ಶಾಸಕ ಆನಂದ ನ್ಯಾಮಗೌಡ ಹೆಣೆದ ರಣತಂತ್ರ ಕೈಹಿಡಿದು ಬಿಜೆಪಿಯಿಂದ ಇಬ್ಬರನ್ನು ಅಡ್ಡಮತದಾನ ಮಾಡಿಸುವಲ್ಲಿ ಯಶಸ್ವಿಯಾಗಿದ್ದಲ್ಲದೆ ಡಿಸಿಸಿ ಬ್ಯಾಂಕ್ ಅಧಿಕಾರ ಚುಕ್ಕಾಣಿ ಕೈ ತಪ್ಪದಂತೆ ನೋಡಿಕೊಂಡಿದ್ದಾರೆ. ಇದರಿಂದ ಮಾಜಿ ಸಚಿವ ಅಜಯಕುಮಾರ ಸರನಾಯಕ ಮತ್ತೊಮ್ಮೆ ಬ್ಯಾಂಕ್ ಅಧ್ಯಕ್ಷರಾಗಿ, ಸ್ವತಂತ್ರವಾಗಿ ಗೆದ್ದಿದ್ದ ಮುರುಗೇಶ ಕಡ್ಲಿಮಟ್ಟಿ ಉಪಾಧ್ಯಕ್ಷರಾಗಿ ಗೆಲುವಿನ ನಗೆ ಬೀರಿದ್ದಾರೆ.

    ಬಿಜೆಪಿಗೆ ಮುಖಭಂಗ ಇದು ಹೊಸದಲ್ಲ
    ಸ್ಥಳೀಯವಾಗಿ ಅಧಿಕಾರ ಗದ್ದುಗೆ ಹಿಡಿಯುವ ಅವಕಾಶ ಇದ್ದರೂ ಅದನ್ನು ಕಳೆದುಕೊಂಡು ಮುಖಭಂಗ ಅನುಭವಿಸುತ್ತಿರುವುದು ಬಿಜೆಪಿಗೆ ಇದು ಹೊಸದಲ್ಲ. ಈ ಹಿಂದಿನ ಜಿಲ್ಲಾ ಪಂಚಾಯಿತಿಯಲ್ಲಿ ಹಾಗೂ ಈಗ ಇರುವ ಹಾಲಿ ಜಿಪಂ ಆಡಳಿತದಲ್ಲೂ ಬಿಜೆಪಿ ಮುಖಭಂಗ ಅನುಭವಿಸಿತ್ತು. ಈಗ ಡಿಸಿಸಿ ಬ್ಯಾಂಕ್‌ನಲ್ಲೂ ಅದು ಮುಂದುವರಿದಿದೆ.

    ವರಿಷ್ಠರಿಗೆ ದೂರು ಕೊಡಲು ಸಿದ್ಧತೆ?
    ಕೈಗೆ ಬರುವ ಅಧಿಕಾರವನ್ನು ಹೊಂದಾಣಿಕೆ ರಾಜಕಾರಣಕ್ಕೆ ಬಲಿಕೊಟ್ಟಿರುವ ಕೆಲವರ ಬಗ್ಗೆ ಪಕ್ಷದಲ್ಲಿ ಅತೃಪ್ತಿಯ ಹೊಗೆಯಾಡುತ್ತಿದ್ದು, ಈ ಬೆಳವಣಿಗೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಅವರ ಗಮನಕ್ಕೂ ತರಲು ಪಕ್ಷದಲ್ಲಿ ಒಂದು ಗುಂಪು ಸಿದ್ಧತೆ ನಡೆಸಿದೆ ಎಂದು ಹೇಳಲಾಗುತ್ತಿದೆ.

    ನಮ್ಮ ಬಲ 8 ಇತ್ತು. ಈಗ ಏನಾಗಿದೆ ಎಂದು ಎಲ್ಲರಿಗೂ ಗೊತ್ತಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವುದು ಹಿರಿಯರಿಗೆ ಬಿಟ್ಟಿದ್ದು. ಯಾರು ಅಡ್ಡಮತದಾನ ಮಾಡಿದ್ದಾರೆ ಎನ್ನುವುದು ದೇವರಿಗೆ ಗೊತ್ತು. ಆ ಬಗ್ಗೆ ನಾನೇನು ಹೇಳಲ್ಲ.
    ಕುಮಾರ ಜನಾಲಿ, ಬಿಜೆಪಿಯ ಪರಾಜಿತ ಅಧ್ಯಕ್ಷ ಸ್ಥಾನದ ಅಭ್ಯರ್ಥಿ

    ಜಿಲ್ಲೆಯ ನಮ್ಮ ನಾಯಕರು ಸೇರಿ ಕಣಕ್ಕೆ ಇಳಿಸಿದ್ದರು. ಗೆಲ್ಲುವ ವಿಶ್ವಾಸ ಇತ್ತು. ಫಲಿತಾಂಶ ವ್ಯತರಿಕ್ತವಾಗಿದೆ. ಈ ಸೋಲಿನ ಅಪಮಾನ ಅಭ್ಯರ್ಥಿಗಳಿಗೆ ಮಾತ್ರವಲ್ಲ. ಡಿಸಿಎಂ, ಜಿಲ್ಲೆಯ ಶಾಸಕರು, ಪಕ್ಷದ ಮುಖಂಡರಿಗೆ ಆಗಿದ್ದು. ತಪ್ಪಿತಸ್ಥರು ಯಾರು ಎಂದು ಕಂಡು ಹಿಡಿದು ಕ್ರಮ ತೆಗೆದುಕೊಳ್ಳುವುದು ಪಕ್ಷದ ಹಿರಿಯರಿಗೆ ಬಿಟ್ಟಿದ್ದು.
    ಪ್ರಕಾಶ ತಪಶೆಟ್ಟಿ, ಬಿಜೆಪಿಯ ಪರಾಜಿತ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ

    ಸಹಕಾರಿ ಸಂಸ್ಥೆಯಲ್ಲಿ ಪಕ್ಷ ಇರಲ್ಲ. ಎಲ್ಲೊ ಒಂದು ಕಡೆ ಸ್ವಲ್ಪ ಇರುತ್ತದೆ. ಎಲ್ಲರೂ ಕೂಡಿಕೊಂಡು ನಮ್ಮನ್ನು ಗೆಲ್ಲಿಸಿದ್ದಾರೆ. ನಾನು ಆಪರೇಷನ್‌ನಲ್ಲಿ ನಂಬಿಕೆ ಇಟ್ಟಿಲ್ಲ. ನಮ್ಮ ಎದುರು ಬಿಜೆಪಿ ಶಾಸಕರು, ಸಚಿವರ ತಂತ್ರಗಾರಿಕೆ ಸೋತಿತು ಎನ್ನುವ ವಿಶ್ಲೇಷಣೆ ಬೇಡ. ನಾವು ಇಲ್ಲಿಗೆ ರಾಜಕೀಯ ನಿಲ್ಲಿಸಿ ಬಿಡುತ್ತೇವೆ. ಎಲ್ಲರೂ ಸೇರಿ ಕೆಲಸ ಮಾಡುತ್ತೇವೆ.
    ಅಜಯಕುಮಾರ ಸರನಾಯಕ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನದಲ್ಲಿ ಗೆದ್ದ ಅಭ್ಯರ್ಥಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts