More

    ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆ, ಉಕ್ಕಿದ ಘಟಪ್ರಭೆಗೆ 8 ಬ್ಯಾರೇಜ್ ಮುಳುಗಡೆ

    ಬಾಗಲಕೋಟೆ: ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯದಿದ್ದರೂ ಪಕ್ಕದ ಬೆಳಗಾವಿ ಮತ್ತು ನೆರೆಯ ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಪರಿಣಾಮ ಘಟಪ್ರಭಾ ಮತ್ತು ಕೃಷ್ಣಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ.

    ಹಿಡಕಲ್ ಜಲಾಶಯದಿಂದ ನೀರು ಹೊರಗೆ ಬಿಟ್ಟಿಲ್ಲವಾದರೂ ನದಿ ಪಾತ್ರಗಳಲ್ಲಿ ಹೆಚ್ಚಿನ ಮಳೆ ಆಗುತ್ತಿರುವುದರಿಂದ ಶುಕ್ರವಾರ ನದಿಗೆ 23 ಸಾವಿರ ಕ್ಯೂಸೆಕ್ ನೀರು ಹರಿದು ಬಂದಿದೆ. ಇದರಿಂದ ಬಾಗಲಕೋಟೆ ಜಿಲ್ಲೆಯಲ್ಲಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ 12 ಬ್ರಿಡ್ಜ್ ಕಂ ಬ್ಯಾರೇಜ್‌ಗಳ ಪೈಕಿ 9 ಬ್ಯಾರೇಜ್‌ಗಳು ಶುಕ್ರವಾರ ಸಂಜೆ ವೇಳೆಗೆ ಸಂಪೂರ್ಣ ಜಲಾವೃತವಾಗಿವೆ.

    ಉಳಿದಂತೆ ಮುಧೋಳ ತಾಲೂಕಿನ ಮಾಚಕನೂರು ಹೊಳೆಬಸವೇಶ್ವರ ದೇಗುಲ ಶುಕ್ರವಾರ ಸಂಪೂರ್ಣ ಜಲಾವೃತವಾಗಿದೆ. ದೇವಸ್ಥಾನ ಮೇಲ್ಛಾವಣಿ ಹತ್ತಿರಕ್ಕೆ ನೀರು ಆವರಿಸಿದ್ದು ಪೂಜಾ ಕೈಂಕರ್ಯಗಳು ಬಂದ್ ಆಗಿವೆ.

    ಘಟಪ್ರಭಾ ನದಿ ದಡದಲ್ಲಿ ನೀರಿನ ಹರಿವು ಹೆಚ್ಚಿದ್ದರಿಂದ ನದಿಗುಂಟ ಇರುವ ಕಬ್ಬು ಬೆಳೆಗೂ ನೀರು ನುಗ್ಗುತ್ತಿದೆ. ರೈತರ ಪಂಪ್‌ಸೆಟ್‌ಗಳು ನೀರಲ್ಲಿ ಮುಳುಗುತ್ತಿರುವುದರಿಂದ ರೈತರು ನೀರಿನ ಹರಿವು ಲೆಕ್ಕಿಸದೆ ಪಂಪ್‌ಸೆಟ್ ಹಾಗೂ ನೀರಿನ ಪೈಪ್‌ಗಳನ್ನು ಕಿತ್ತು ಹೊರಸಾಗಿಸಲು ಹರಸಾಹಸ ಪಡುತ್ತಿದ್ದಾರೆ. ಕೆಲ ಯುವಕರು ಭಾರವಾದ ಪಂಪ್‌ಸೆಟ್‌ಗಳನ್ನು ಬೆನ್ನಮೇಲೆ ಹೊತ್ತುಕೊಂಡು ಸಾಗುತ್ತಿದ್ದ ದೃಶ್ಯ ಕಂಡು ಬಂದಿತು.

    ನದಿಯಲ್ಲಿ ಇದೇ ಪ್ರಮಾಣದಲ್ಲಿ ನೀರಿನ ಹರಿವು ಮುಂದುವರಿದು ಹಿಡಕಲ್ ಜಲಾಶಯದಿಂದ ನೀರು ಬಿಡುಗಡೆ ಮಾಡಿದಲ್ಲಿ ಮುಧೋಳ ತಾಲೂಕಿನಲ್ಲಿ ಮತ್ತೊಮ್ಮೆ ಪ್ರವಾಹ ಸ್ಥಿತಿ ಎದುರಾಗಲಿದೆ. 2019 ಮತ್ತು 2020ರಲ್ಲಿ ಸತತ ಎರಡು ವರ್ಷ ಭೀಕರ ಪ್ರವಾಹದಿಂದ ರೈತರು ತತ್ತರಿಸಿ ಹೋಗಿದ್ದು, ಇದೀಗ ಮತ್ತೆ ಮೂರನೇ ವರ್ಷವೂ ಪ್ರವಾಹ ಎದುರಾಗುತ್ತಾ ಎನ್ನುವ ಆತಂಕದಲ್ಲಿ ಇದ್ದಾರೆ.

    ಜಲಾವೃತವಾಗಿರುವ ಬ್ಯಾರೇಜ್‌ಗಳು
    ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ, ಮುಧೋಳ, ಬೀಳಗಿ ತಾಲೂಕು ಸೇರಿದಂತೆ ಘಟಪ್ರಭಾ ನದಿಗೆ ಅಡ್ಡಲಾಗಿ ಒಟ್ಟು 70 ಕಿ.ಮೀ. ವ್ಯಾಪ್ತಿಯ 12 ಬ್ಯಾರೇಜ್‌ಗಳ ಪೈಕಿ ಢವಳೇಶ್ವರ, ನಂದಗಾಂವ, ಮಿರ್ಜಿ, ಚನಾಳ, ಜಾಲಿಬೇರ, ಜೀವಗಾಳ ಕಿರು ಸೇತುವೆ, ಇಂಗಳಗಿ, ಜಂಬಗಿ ಕೆಡಿ, ಕಸಬಾ ಜಂಬಗಿ ಬ್ಯಾರೇಜ್‌ಗಳು ಮುಳುಗಿವೆ ಎಂದು ಮುಧೋಳ ತಾಲೂಕಿನ ನೀರಾವರಿ ಇಲಾಖೆ ಎಇಇ ಅಜೀತ ಬಿರಾದಾರ ತಿಳಿಸಿದ್ದಾರೆ. ಸದ್ಯ ಬ್ಯಾರೇಜ್‌ಗಳು ಸಂಪೂರ್ಣ ಜಲಾವೃತವಾಗಿದ್ದರಿಂದ ಅನೇಕ ಗ್ರಾಮಗಳ ಸಂಪರ್ಕ ರಸ್ತೆಗಳು ಬಂದ್ ಆಗಿವೆ.

    ಹಿಪ್ಪರಗಿ ಬ್ಯಾರೇಜ್‌ಗೂ ಹೆಚ್ಚಿದ ನೀರಿನ ಹರಿವು
    ಕೃಷ್ಣಾ ನದಿಯಲ್ಲೂ ಶುಕ್ರವಾರ ನೀರಿನ ಹರಿವು ಹೆಚ್ಚಾಗಿದೆ. ರಬಕವಿ-ಬನಹಟ್ಟಿ ತಾಲೂಕಿನ ಹಿಪ್ಪರಗಿ ಜಲಾಶಯಕ್ಕೆ 72 ಸಾವಿರ ಕ್ಯೂಸೆಕ್ ಒಳಹರಿವು ಇದ್ದು 71 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಕೃಷ್ಣಾ ನದಿಯಲ್ಲಿ 2.50 ಲಕ್ಷ ಕ್ಯೂಸೆಕ್ ನೀರು ಬಂದರೆ ಮಾತ್ರ ಪ್ರವಾಹ ಭೀತಿ ಎದುರಾಗಲಿದ್ದು, ಸದ್ಯ ಕೃಷ್ಣಾ ಪಾತ್ರದಲ್ಲಿ ಪ್ರವಾಹ ಭೀತಿ ಇಲ್ಲ.

    ಘಟಪ್ರಭಾ ನದಿಯಲ್ಲಿ ನೀರಿನ ಹರಿವು ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಾಗಿದೆ. ಜನರು ಭಯಗೊಳ್ಳುವುದು ಬೇಡ. ಪ್ರವಾಹ ಸ್ಥಿತಿ ಎದುರಾದಲ್ಲಿ ಈಗಾಗಲೇ ಜಿಲ್ಲಾಡಳಿತ ಸೂಚನೆ ಮೇರೆಗೆ ಜನರನ್ನು ಸ್ಥಳಾಂತರ ಮಾಡಲು ಸುರಕ್ಷಿತ ಸ್ಥಳಗಳನ್ನು ಗುರುತಿಸಿದ್ದೇವೆ. ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಜನರು ಮುಂಜಾಗ್ರತೆ ಕ್ರಮವಾಗಿ ಸುರಕ್ಷಿತ ಸ್ಥಳಗಳಿಗೆ ಜಾನುವಾರು ಸಮೇತ ತೆರಳಬೇಕು.
    ಸಂಗಮೇಶ ಬಾಡಗಿ ತಹಸೀಲ್ದಾರ್, ಮುಧೋಳ

    
    
    Community-verified icon

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts