More

    ವರುಣ ಆರ್ಭಟಕ್ಕೆ ಜನತೆ ತತ್ತರ

    ಬಾಗಲಕೋಟೆ: ಜಿಲ್ಲೆಯಲ್ಲಿ ವರುಣನ ಆರ್ಭಟ ನಿರಂತರವಾಗಿ ಮುಂದುವರಿದಿದ್ದು, ರಣಮಳೆಗೆ ಜನರು ತತ್ತರಿಸಿಹೋಗಿದ್ದಾರೆ. ಕಳೆದ ಎರಡು ದಿನಗಳಿಂದ ರಾತ್ರಿಯಿಡಿ ಸುರಿಯುತ್ತಿರುವ ಧಾರಾಕಾರ ಮಳೆ ಹಲವು ಆವಾಂತರಗಳನ್ನು ತಂದೊಡ್ಡಿದೆ. ಮೊದಲೇ ಎರಡು ಭಾರಿ ಪ್ರವಾಹಕ್ಕೆ ನಲುಗಿ ಹೋಗಿರುವ ಬಾಗಲಕೋಟೆ ಜಿಲ್ಲೆಯ ಜನರಿಗೆ ವರುಣನ ಕಂಟಕ ಮುಂದುವರಿದಿದೆ.

    ಹಳೇ ಸೇತುವೆ ಜಲಾವೃತ
    ಮುಧೋಳ ತಾಲೂಕಿನ ಘಟಪ್ರಭಾ ನದಿ ನೀರಿನಲ್ಲಿ ಹರಿವು ಹೆಚ್ಚಾಗಿದ್ದರಿಂದ ಈಗ ಮುಧೋಳ ತಾಲೂಕಿನ ಗ್ರಾಮಗಳಾದ ಮಿರ್ಜಿ ಒಂಟಗೋಡಿ -ಮಹಾಲಿಂಗಪುರಕ್ಕೆ ಸಂಪರ್ಕ ಕಲ್ಪಿಸುವ ಹಳೆ ಸೇತುವೆ ಜಲಾವೃತಗೊಂಡಿದೆ. ಸೇತುವೆಯ ಮೇಲೆ ಸುಮಾರು ಐದು ಅಡಿಯಷ್ಟು ನೀರು ಹರಿಯುತ್ತಿದ್ದು ಇದ್ದು ಗ್ರಾಮಸ್ಥರು ಹಾಗೂ ವಾಹನ ಸವಾರರಿಗೆ ಸಂಚಾರಕ್ಕೆ ಅಡ್ಡಿಯುಂಟಾಗಿದೆ.

    ಮನೆಗಳಿಗೆ ನುಗ್ಗಿದ ನೀರು
    ಹುನಗುಂದ ತಾಲೂಕಿನಲ್ಲಿಯೂ ರಣಮಳೆ ಸಂಕಷ್ಟಗಳನ್ನ ಸೃಷ್ಟಿಸುತ್ತಲೇ ಇದೆ.ಇನ್ನೇನು ಮಳೆ ಕಡಿಮೆಯಾಯ್ತು ಅನ್ನುವಷ್ಟರಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಇಂದು ಸಹ ಹುನಗುಂದ ಪಟ್ಟಣದ ಕುಂಬಾರ ಓಣಿಯಲ್ಲಿ ಮನೆಗಳಿಗೆ ನೀರು ನುಗ್ಗಿದ್ದು ಜನರು ಪರದಾಡುವಂತಾಗಿದೆ. ರಸ್ತೆ ಸಂಚಾರಕ್ಕೂ ತೊಂದರೆಯಾಗಿದೆ.

    ಮಕ್ಕಳು ಅಪಾಯದಿಂದ ಪಾರು
    ಇಳಕಲ್ ತಾಲೂಕಿನ ಬಲಕುಂದಿ ಗ್ರಾಮದಲ್ಲಿ ಸಂಭವಿಸಬಹುದಾಗಿದ್ದ ದೊಡ್ಡ ದುರಂತ ತಪ್ಪಿದೆ. ನಿರಂತರ ಮಳೆಗೆ ಬಲಕುಂದಿ ಗ್ರಾಮದ ಐದಕ್ಕೂ ಅಧಿಕ ಮನೆಗಳ ಗೋಡೆಗಳು ಕುಸಿದಿವೆ. ಗ್ರಾಮದ ಪರಸಪ್ಪ ಎಂಬುವವರ ಮನೆ ಗೋಡೆ ಕುಸಿದಿದ್ದರಿಂದ ಮನೆಯಲ್ಲಿದ್ದ ನಾಲ್ವರು ಮಕ್ಕಳು ಮಣ್ಣಿನಲ್ಲಿ ಸಿಲುಕಿಕೊಂಡು ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದರು. ನಂತರ ಸಮಯ ಪ್ರಜ್ಞೆ ಹಾಗೂ ಮನೆಯವರು ಹಾಗೂ ಸ್ಥಳಿಯರ ಸಹಕಾರದಿಂದ ಮಕ್ಕಳನ್ನು ರಕ್ಷಿಸಲಾಗಿದೆ. ಇನ್ನು ಗೋಡೆ ಕುಸಿತದಿಂದ ಮನೆಯಲ್ಲಿನ ಪಾತ್ರೆಪಗಡಿ ಅವಶ್ಯಕ ವಸ್ತುಗಳು ಮಣ್ಣುಪಾಲಾಗಿದ್ದು ಕುಟುಂಬಸ್ಥರು ಕಣ್ಣೀರಿಡುವಂತಾಗಿದೆ.

    300ಕ್ಕೂ ಅಧಿಕ ಮನೆಗಳ ಕುಸಿತ
    ಹುನಗುಂದ, ಇಳಕಲ್, ಗುಳೇದಗುಡ್ಡ, ಬಾದಾಮಿ, ಮುಧೋಳ ತಾಲೂಕು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮುನ್ನೂರಕ್ಕೂ ಅಧಿಕ ಮನೆಗಳು ಕುಸಿದಿವೆ. ನೋಡ ನೋಡುತ್ತಲೇ ಮಣ್ಣಿನ ಮನೆಗಳು ಕುಸಿಯಯಲಾರಂಭಿಸಿದ್ದರಿಂದ ಜನರು ಜೀವ ಕೈಯಲ್ಲಿ ಹಿಡಿದುಕೊಂಡು ಬದುಕುವ ಸ್ಥಿತಿ ಎದುರಾಗಿದೆ.
    ಇನ್ನು ರಕ್ಕಸ ಮಳೆಯಿಂದ ನೂರಾರು ಹೆಕ್ಟರ್ ಪ್ರದೇಶದ ಬೆಳೆಗಳು ಹಾಳಾಗಿವೆ. ಒಟ್ಟಾರೆ ಜಿಲ್ಲೆಯಲ್ಲಿ ಸುರಿಯುತ್ತಿರುವ ನಿರಂತರ ರಣಮಳೆ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts