More

    ಅಂತಿಮ ಕಣದಲ್ಲಿ 25 ಅಭ್ಯರ್ಥಿಗಳು !

    ಬಾಗಲಕೋಟೆ: ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಚುನಾವಣೆಯ ನಾಮಪತ್ರ ಹಿಂಪಡೆಯುವ ಅವಧಿ ಮುಕ್ತಾಯವಾಗಿದ್ದು, ಅಂತಿಮವಾಗಿ 11 ಕ್ಷೇತ್ರಗಳಿಗೆ 25 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಹೀಗಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.

    13 ಸ್ಥಾನಗಳ ಪೈಕಿ ಬಾಗಲಕೋಟೆ ಪಿಕೆಪಿಸಿಎಸ್ ಕ್ಷೇತ್ರಕ್ಕೆ ಸ್ಪರ್ಧೆ ಮಾಡಿದ್ದ ಡಿಸಿಸಿ ಬ್ಯಾಂಕ್ ಹಾಲಿ ಅಧ್ಯಕ್ಷ ಅಜಯಕುಮಾರ ಸರನಾಯಕ, ಟಿಎಪಿಸಿಎಂಎಸ್ ಕ್ಷೇತ್ರಕ್ಕೆ ಮುಧೋಳದ ನಂದಕುಮಾರ ಪಾಟೀಲ ಅವಿರೋಧ ಆಯ್ಕೆ ಖಚಿತವಾದಂತಾಗಿದೆ. ಅವಿರೋಧ ಆಯ್ಕೆಗೆ ಕಸರತ್ತು ಫಲ ನೀಡದ ಪರಿಣಾಮ ಸಹಕಾರಿ ಕ್ಷೇತ್ರದಲ್ಲಿ ಘಟಾನುಘಟಿ ನಾಯಕರು ಕೂಡ ಚುನಾವಣೆ ಎದುರಿಸುವುದು ಅನಿವಾರ್ಯವಾಗಿದೆ. ನ.5 ರಂದು ಮತದಾನ ನಡೆಯಲಿದ್ದು, ಶುಕ್ರವಾರ ಸಂಜೆಯಿಂದ ಅಭ್ಯರ್ಥಿಗಳು, ರಾಜಕೀಯ ಪಕ್ಷಗಳು ಪ್ರಚಾರದ ಭರಾಟೆ ಆರಂಭಿಸಿವೆ.

    ಯಾವ ಕ್ಷೇತ್ರಕ್ಕೆ ಯಾರು ಪ್ರತಿ ಸ್ಪರ್ಧಿ
    ಎಲ್ಲ ಕುರಿ ಉಣ್ಣೆ ಉತ್ಪಾದಕರ ನೇಕಾರ ಸಹಕಾರ ಸಂಘಗಳ ಮತಕ್ಷೇತ್ರಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಮಾಜಿ ಸಚಿವ ಎಚ್.ವೈ.ಮೇಟಿ, ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸದಾಶಿವ ಕಲ್ಲಪ್ಪ ಇಟಕನ್ನವರ, ಎಲ್ಲ ಪಟ್ಟಣ ಬ್ಯಾಂಕ್‌ಗಳು ಮತ್ತು ಬಿನ್ ಶೇತ್ಕಿ ಸಹಕಾರ ಸಂಘಗಳ ಮತಕ್ಷೇತ್ರಕ್ಕೆ ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ(ಬಿಜೆಪಿ), ಶಿವಾನಂದ ಉದಪುಡಿ(ಕಾಂಗ್ರೆಸ್), ಇತರ ಸಹಕಾರಿ ಸಂಘಗಳ ಮತಕ್ಷೇತ್ರ ಮಲ್ಲಿಕಾರ್ಜುನ ಕುರಿ(ಕಾಂಗ್ರೆಸ್), ಹಾಲಿ ನಿರ್ದೇಶಕ ವಿ.ಪ. ಸದಸ್ಯ ಹನುಮಂತ ರುದ್ರಪ್ಪ ನಿರಾಣಿ(ಬಿಜೆಪಿ), ಮುಧೋಳ ಪಿಕೆಪಿಎಸ್ ಜಿಪಂ ಸದಸ್ಯ ಮಹಾಂತೇಶ ಉದಪುಡಿ(ಕಾಂಗ್ರೆಸ್), ಹಾಲಿ ನಿರ್ದೇಶಕ ರಾಮಪ್ಪ ಸಿದ್ದಪ್ಪ ತಳೇವಾಡ (ಬಿಜೆಪಿ), ಬೀಳಗಿ ಪಿಕೆಪಿಎಸ್ ಈರಣ್ಣ ಯಮನಪ್ಪ ಗಿಡಪ್ಪಗೋಳ(ಬಿಜೆಪಿ), ಹಾಲಿ ನಿರ್ದೇಶಕ ವಿಪಕ್ಷ ನಾಯಕ ಎಸ್.ಆರ್.ಪಾಟೀಲ(ಕಾಂಗ್ರೆಸ್), ಜಮಖಂಡಿ ಪಿಕೆಪಿಎಸ್‌ಗೆ ಶಾಸಕ ಆನಂದ ನ್ಯಾಮಗೌಡ(ಕಾಂಗ್ರೆಸ್), ಶಾಸಕ ಸಿದ್ದು ಸವದಿ ಸಹೋದರ ಯೋಗಪ್ಪ ಸವದಿ(ಬಿಜೆಪಿ), ಇಳಕಲ್ಲ ಪಿಕೆಪಿಎಸ್ ಮಹಾಂತೇಶ ಸಂಗಪ್ಪ ನರಗುಂದ (ಕಾಂಗ್ರೆಸ್), ಶಿವನಗೌಡ ಶರಣಪ್ಪಗೌಡ ಅಗಸಿ ಮುಂದಿನ( ಬಿಜೆಪಿ), ಹುನಗುಂದ ಪಿಕೆಪಿಎಸ್‌ಗೆ ಮಾಜಿ ಶಾಸಕ ಹಾಲಿ ನಿರ್ದೇಶಕ ವಿಜಯಾನಂದ ಕಾಶಪ್ಪನವರ(ಕಾಂಗ್ರೆಸ್), ಜಿಪಂ ಸದಸ್ಯ ವಿರೇಶ ಉಂಡೋಡಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾರೆ.

    ಮೂರು ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ?
    ಡಿಸಿಸಿ ಬ್ಯಾಂಕ್‌ನ ಮೂರು ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ ನಡೆಯುವುದು ಸ್ಪಷ್ಟಗೊಂಡಿದೆ. ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಬಂಡಾಯ ಬಿಸಿ ಜೋರಾಗಿ ತಟ್ಟಿದೆ. ಎಲ್ಲ ನೇಕಾರ ಸಹಕಾರ ಸಂಘಗಳ ಮತಕ್ಷೇತ್ರಕ್ಕೆ ಮಲ್ಲಿಕಾರ್ಜುನ ಬಣಕಾರ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾರೆ.

    ಎಂ.ಎಸ್.ದಡ್ಡೇನವರ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾರೆ. ಹಿರಿಯ ನಾಯಕರು ಮನವಿ ಮಾಡಿದರು ಸಹ ಮುರುಗೇಶ ಈರಪ್ಪ ಕಡ್ಲಿಮಟ್ಟಿ ನಾಮಪತ್ರ ಹಿಂಪಡೆಯಲಿಲ್ಲ. ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾರೆ.

    ಇನ್ನು ರಬಕವಿ-ಬನಹಟ್ಟಿ ಪಿಕೆಪಿಎಸ್ ಕ್ಷೇತ್ರಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಬಸವರಾಜ ಪಾಟೀಲ ಸ್ಪರ್ಧೆ ಮಾಡಿದ್ದರೆ ಶಾಸಕ ಸಿದ್ದು ಸವದಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಇದೇ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಹಾಲಿ ನಿರ್ದೇಶಕ ಭೀಮಸಿ ಮಗದುಮ ಬಿಜೆಪಿ ಬೆಂಬಲ ದೊರೆಯದ ಪರಿಣಾಮ ಬಂಡಾಯ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿದಿದ್ದಾರೆ. ಅಲ್ಲದೆ, ಬಾದಾಮಿ ಪಿಕೆಪಿಎಸ್‌ಗೆ ಹಾಲಿ ನಿರ್ದೇಶಕ ಕುಮಾರಗೌಡ ಜನಾಲಿ ಬಿಜೆಪಿ ಅವಕಾಶ ನೀಡದ ಪರಿಣಾಮ ಬಂಡಾಯ ಅಭ್ಯರ್ಥಿಯಾಗಿ ಪಕ್ಷದ ನಾಯಕರಿಗೆ ಸೆಡ್ಡು ಹೊಡೆದಿದ್ದು, ಬಂಡಾಯದ ಕಹಳೆ ಮೊಳಗಿಸಿದ್ದಾರೆ. ಇದೇ ಕ್ಷೇತ್ರಕ್ಕೆ ಡಾ.ಎಂ.ಜಿ.ಕಿತ್ತಲಿ(ಕಾಂಗ್ರೆಸ್), ಹನುಮಂತಗೌಡ ಗೌಡ್ರ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾರೆ.

    ಉಮೇದುವಾರಿಕೆ ಹಿಂಪಡೆದವರು
    ಪಟ್ಟಣ ಬ್ಯಾಂಕ್ ಹಾಗೂ ಕೃಷಿಯೇತರ ಪತ್ತಿನ ಸಹಕಾರಿ ಸಂಘಗಳ ಕ್ಷೇತ್ರಕ್ಕೆ -ಅಶೋಕ ಲಾಗಲೋಟಿ, ಜಮಖಂಡಿ ಪಿಕೆಪಿಎಸ್-ಕಲ್ಲಪ್ಪ ಗಿರಡ್ಡಿ, ಇತರ ಸಹಕಾರಿ ಸಂಘ-ಕಾಶಿರಾಯ ಜನಗೊಂಡ, ವಿಠ್ಠಲ ಬಿಜ್ಜಿಗಾರ, ಮಹಾದೇವ ಮಾರಾಪುರ, ರೇಖಾ ಶೇಷಗಿರಿ, ಬನಹಟ್ಟಿ ಪಿಕೆಪಿಎಸ್-ಸಾಗರ ಚವಜ, ಇಳಕಲ್ಲ ಪಿಕೆಪಿಎಸ್- ಮದಕಪ್ಪ ಸಾಂತಗೇರಿ, ಮುಧೋಳ ಪಿಕೆಪಿಎಸ್ ಹನುಮಂತ ಪಾಟೀಲ, ಸಂಗಮೇಶ ಕಾತರಕಿ, ಬೀಳಗಿ ಪಿಕೆಪಿಎಸ್‌ಗೆ ಸ್ಪರ್ಧೆ ಮಾಡಿದ್ದ ಮಲ್ಲಪ್ಪ ಪೂಜಾರಿ ಸೇರಿದಂತೆ ಒಟ್ಟು 11 ಜನ ನಾಮಪತ್ರ ಹಿಂಪಡೆದಿದ್ದಾರೆ.

    ಡಿಸಿಸಿ ಬ್ಯಾಂಕ್‌ನ ಚುನಾವಣೆ ನಾಮಪತ್ರ ಹಿಂಪಡೆದುಕೊಳ್ಳುವ ಅವಧಿ ಶುಕ್ರವಾರ ಮುಕ್ತಾಯಗೊಂಡಿದೆ. ಶನಿವಾರ ಪಕ್ಷದ ನಾಯಕರು ಚರ್ಚೆ, ಸಭೆ ನಡೆಸಲಿದ್ದೇವೆ. ನಂತರ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗುವುದು.
    ಎಸ್.ಜಿ.ನಂಜಯ್ಯನಮಠ ಕಾಂಗ್ರೆಸ್ ಜಿಲ್ಲಾಧ್ಯಕ್ಷ

    ಸಹಕಾರ ಕ್ಷೇತ್ರದಲ್ಲಿ ಇನ್ನಷ್ಟು ಸೇವೆ ಮಾಡಬೇಕು ಎನ್ನುವ ಬಯಕೆಯಿಂದ ಇತರ ಸಹಕಾರಿ ಸಂಘಗಳ ಮತಕ್ಷೇತ್ರಕ್ಕೆ ಸ್ಪರ್ಧೆ ಮಾಡಿದ್ದೇನೆ. ಮತದಾರರು ಬೆಂಬಲಿಸುವ ವಿಶ್ವಾಸವಿದೆ.
    ಹನುಮಂತ ರುದ್ರಪ್ಪ ನಿರಾಣಿ, ವಿ.ಪ. ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts