More

    ಖಾಸಗೀಕರಣಕ್ಕೆ ನೌಕರರ ತೀವ್ರ ವಿರೋಧ

    ಬಾಗಲಕೋಟೆ: ರಾಷ್ಟ್ರೀಕೃತ ಬ್ಯಾಂಕುಗಳ ಖಾಸಗೀಕರಣ ವಿರೋಧಿಸಿ ಬ್ಯಾಂಕ್ ಆಫ್ ಯೂನಿಯನ್ ಸಂಯುಕ್ತ ವೇದಿಕೆ ಮುಷ್ಕರಕ್ಕೆ ಕರೆ ನೀಡಿದ ಹಿನ್ನಲೆಯಲ್ಲಿ ಜಿಲ್ಲೆಯಾದ್ಯಂತ ಸೋಮವಾರ ರಾಷ್ಟ್ರೀಕೃತ ಬ್ಯಾಂಕ್‌ಗಳ ಸೇವೆ ಸ್ಥಗಿತಗೊಂಡಿತ್ತು. ಇದರ ಪರಿಣಾಮ ಬ್ಯಾಂಕ್ ಗ್ರಾಹಕರು ತೀವ್ರ ರೀತಿಯಲ್ಲಿ ಪರದಾಡಿದರು.

    ಬಾಗಲಕೋಟೆ ನಗರದ ಜಿಲ್ಲೆಯ ಮುಧೋಳ, ಜಮಖಂಡಿ, ಬೀಳಗಿ, ಬಾದಾಮಿ, ಹುನಗುಂದ, ಇಳಕಲ್ಲ, ಲೋಕಾಪುರ, ರಬಕವಿ-ಬನಹಟ್ಟಿ, ಮಹಾಲಿಂಗಪುರ, ಕಮತಗಿ, ಅಮೀನಗಡ, ತೇರದಾಳ ಸೇರಿದಂತೆ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿರುವ ರಾಷ್ಟ್ರೀಕೃತ ಬ್ಯಾಂಕ್‌ಗಳ ಶಾಖೆಗಳು ಸಂಪೂರ್ಣ ಬಂದ್ ಆಗಿದ್ದವು. ಬ್ಯಾಂಕ್ ನೌಕರರು ಸೇವೆಯಿಂದ ವಿಮುಖರಾಗಿ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

    ಮುಷ್ಕರದ ಬಗ್ಗೆ ಮೊದಲೆ ಮಾಹಿತಿ ನೀಡಿದ್ದರು ಸಹ ಅನೇಕ ಜನ ಬ್ಯಾಂಕ್‌ಗಳತ್ತ ಹೆಜ್ಜೆ ಹಾಕಿದರು. ಆದರೇ ಬ್ಯಾಂಕ್‌ಗಳ ಬಾಗಿಲು ತೆರೆಯದ ಹಿನ್ನಲೆಯಲ್ಲಿ ಕಾದು ಕಾದು ವಾಪಸ್ಸ ಮನೆಗೆ ತೇರಳಿದರು. ತುರ್ತು ಅಗತ್ಯಕ್ಕೆ ಹಣ ದೊರೆಯದ ಪರಿಣಾಮ ಕೆಲವರು ಬೇಸರಗೊಂಡರು. ಇನ್ನು ಎರಡನೇ ಶನಿವಾರ ಹಿನ್ನಲೆಯಲ್ಲಿ ಶನಿವಾರ, ಭಾನುವಾರ, ಸೋಮವಾರ ಬ್ಯಾಂಕ್ ಬಂದ್ ಆಗಿದ್ದರಿಂದ ಎಟಿಎಂಗಳಲ್ಲೂ ಹಣದ ಕೊರತೆ ಉಂಟಾಗಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳ ಎಟಿಎಂಗಳಲ್ಲಿ ನೋ ಕ್ಯಾಶ್ ಎನ್ನುವ ಟ್ಯಾಗ್ ಲೈನ್ ಸಾಮಾನ್ಯವಾಗಿದೆ. ಮಾರ್ಚ್ ತಿಂಗಳಲ್ಲಿ ಆರ್ಥಿಕ ವರ್ಷಾಂತ್ಯ ಇದ್ದ ಕಾರಣ ವ್ಯಾಪಾರಸ್ಥರು, ಖಾಸಗಿ ಕಂಪನಿಗಳ ವಹಿವಾಟುದಾರರು ಕೂಡಾ ತೀವ್ರ ಸಮಸ್ಯೆ ಅನುಭವಿಸಿದರು. ಮಂಗಳವಾರ ಕೂಡಾ ಮುಷ್ಕರ ಮುಂದು ವರೆಯುತ್ತಿರುವ ಹಿನ್ನಲೆಯಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ.

    ಬಾಗಲಕೋಟೆಯಲ್ಲಿ ಪ್ರತಿಭಟನೆ
    ನಗರದ ವಿದ್ಯಾಗಿರಿ ಬಡಾವಣೆಯಲ್ಲಿರುವ ಬ್ಯಾಂಕ್ ಆ್ ಇಂಡಿಯಾ ಶಾಖೆಯ ಎದುರು ರಾಷ್ಟ್ರೀಯ ಬ್ಯಾಂಕ್ ನೌಕರರು ಪ್ರತಿಭಟನೆ ನಡೆಸಿದರು. ರಾಷ್ಟ್ರೀಕೃತ ಬ್ಯಾಂಕುಗಳ ಖಾಸಗೀಕರಣ ಮಾಡಬಾರದು ಎಂದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಬ್ಯಾಂಕ್ ಆಫ್ ಯೂನಿಯನ್ ಸಂಯುಕ್ತ ವೇದಿಕೆ ವಿ.ಎ.ದೇಶಪಾಂಡೆ ಮಾತನಾಡಿ, ರಾಷ್ಟ್ರೀಕೃತ ಬ್ಯಾಂಕ್‌ಗಳು ದೇಶದ ಹಿತ ಕಾಪಾಡುತ್ತಾ ಬಂದಿವೆ. 1947 ರಿಂದ 1969 ಅವಧಿಯಲ್ಲಿ 550 ಖಾಸಗಿ ಬ್ಯಾಂಕ್‌ಗಳು ಮುಳಗಿದವು. ಗ್ರಾಹಕರು, ಠೇವಣಿದಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ಖಾಸಗಿ ಬ್ಯಾಂಕ್‌ಗಳನ್ನು ರಾಷ್ಟ್ರೀಕೃತ ಬ್ಯಾಂಕ್‌ಗಳು ತನ್ನ ತೆಕ್ಕೆಗೆ ತೆಗೆದುಕೊಂಡು ಗ್ರಾಹಕರ ರಕ್ಷಣೆ ಮಾಡಿದವು. ಆರ್ಥಿಕ ಮುಗ್ಗಟ್ಟು ಇದ್ದಾಗಲು ರಾಷ್ಟ್ರೀಕೃತ ಬ್ಯಾಂಕ್‌ಗಳು ಉತ್ತಮವಾಗಿ ಸೇವೆ ಸಲ್ಲಿಸಿವೆ. ಇದೀಗ ಖಾಸಗಿಕರಣಕ್ಕೆ ಮುಂದಾಗಿರುವುದು ಸಲ್ಲ ಎಂದು ಕಿಡಿಕಾರಿದರು.

    ಇನ್ನು 2008ರ ಜಾಗತಿಕ ಬ್ಯಾಂಕಿಂಗ್ ಕ್ಷೇತ್ರ ಕುಸಿತದ ಸಂದರ್ಭದಲ್ಲಿ ಭಾರತದ ಬ್ಯಾಂಕಿಂಗ್ ವಲಯವು ಯಾವುದೇ ಹಾನಿಗೆ ಗುರಿಯಾಗಲಿಲ್ಲ. ಬಲಾಡ್ಯ ಯೂರೋಪಿಯನ್ ಮತ್ತು ಅಮೇರಿಕದ ಖಾಸಗೀ ಬ್ಯಾಂಕುಗಳು ತರಗಲೆಯಂತೆ ಕುಸಿಯುತ್ತಿದ್ದಾಗ ಬೊಕ್ಕಸದಿಂದ ಅಪಾರ ಮೊತ್ತದ ಹಣ ನೀಡಿ ಸರ್ಕಾರಗಳೇ ಅವುಗಳನ್ನು ರಕ್ಷಿಸಿದ ಉದಾಹರಣೆ ಇದೆ. ಸರ್ಕಾರ ನಮ್ಮ ರಾಷ್ಟ್ರೀಕೃತ ಬ್ಯಾಂಕುಗಳನ್ನು ರಕ್ಷಿಸುವ ಜತೆಗೆ ಖಾಸಗೀಕರಣ ಮಾಡಬಾರದು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

    ಜಾಗತಿಕವಾಗಿ ಬ್ಯಾಂಕಿಂಗ್ ಕ್ಷೇತ್ರ ಕುಸಿತ ಕಂಡಾಗ ಬಲಾಡ್ಯ ಸರ್ಕಾರಗಳೇ ಬ್ಯಾಂಕುಗಳನ್ನು ರಕ್ಷಿಸಿವೆ. ವಿಜಯ ಮಲ್ಯಾ, ನೀರವ್ ಮೋದಿ ಇಂತಹ ದೊಡ್ಡ ಸಾಲಗಾರರ ಬಾಕಿ ವಸೂಲಿಗೆ ದಿಟ್ಟ ಪ್ರಯತ್ನವನ್ನು ಮಾಡುವುದರ ಬದಲಾಗಿ ಬ್ಯಾಂಕುಗಳನ್ನು ಮಾರಾಟ ಮಾಡಿ ಸಾರ್ವಜನಿಕ ಆಸ್ತಿಗಳ ಲೂಟಿಗೆ ಅವಕಾಶ ನೀಡಲಾಗುತ್ತಿದೆ. ಬ್ಯಾಂಕುಗಳ ಖಾಸಗೀಕರಣ ಎಂದರೆ ದೇಶದ ಹಣಕಾಸು ಕ್ಷೇತ್ರವನ್ನು ದೇಶಿ -ವಿದೇಶಿ ಬಂಡವಾಳಗಾರರಿಗೆ ಒಪ್ಪಿಸುವುದು. ಇದರಿಂದ ದೇಶದ ಜನರ ಉಳಿತಾಯ ಲೂಟಿಗೆ ಅವಕಾಶ, ಠೇವಣಿದಾರರ ಹಿತಾಸಕ್ತಿಗೆ ಧಕ್ಕೆ ತರುವುದು, ಉದ್ಯೋಗಾವಕಾಶಗಳು ಹಾಗೂ ಮೀಸಲಾತಿಯಂತಹ ಸಾಮಾಜಿಕ ನ್ಯಾಯಕ್ಕೆ ಧಕ್ಕೆಯಾಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ಜನಸಾಮಾನ್ಯರು ಬ್ಯಾಂಕಿಂಗ್ ಸೇವೆಗಳಿಂದ ವಂಚಿತರಾಗಲಿದ್ದಾರೆ ಎಂದು ತಿಳಿಸಿದರು.

    ಪ್ರತಿಭಟನೆಯಲ್ಲಿ ಪವನ್ ದೇಶಪಾಂಡೆ, ವಿ.ಎ.ದೇಶಪಾಂಡೆ, ಆರ್.ಎಸ್.ಪಾಪನಾಳ, ಎಸ್.ಕೆ.ಸಂಗಮ್, ಆನಂದ ಕುಲಕರ್ಣಿ, ಪವನ್ ದೇಶಪಾಂಡೆ, ಸುಚಿತ್ರಾ ದೇಶಪಾಂಡೆ ಸೇರಿದಂತೆ ರಾಷ್ಟ್ರೀಕೃತ ಬ್ಯಾಂಕಿನ ಸಿಬ್ಬಂದಿಗಳು ಭಾಗವಹಿಸಿದ್ದರು.



    ಖಾಸಗೀಕರಣಕ್ಕೆ ನೌಕರರ ತೀವ್ರ ವಿರೋಧ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts