More

    ಮುಸ್ಲಿಂ ಕುಟುಂಬದಿಂದ ‘ಶಿವ’ ಸೇವೆ

    ಸಂತೋಷ ದೇಶಪಾಂಡೆ
    ಬಾಗಲಕೋಟೆ: ಭುವಿಯಲ್ಲಿ ಜನಿಸಿದ ಪ್ರತಿಯೊಬ್ಬರೂ ಸಮಾನರು. ಜಾತಿ ಯಾವುದಾದರೂ ಪ್ರೀತಿ ಇದ್ದಾಗ ಎಂಬುದು ಪ್ರಜ್ಞರ ಮಾತು. ಇಲ್ಲೊಂದು ಮುಸ್ಲಿಂ ಕುಟುಂಬ ಲಿಂಗದೊಳಗಿನ ಪೀಠಕಾವನ್ನು ಸಿದ್ಧಪಡಿಸಿ, ಅದನ್ನು ದೇಶದ ನಾನಾ ಭಾಗಗಳಿಗೆ ಕಳಿಸುವ ಮೂಲಕ ಬದುಕು ಸಾಗಿಸುತ್ತಿದೆ.

    ಬೀಳಗಿ ತಾಲೂಕಿನ ಎಸ್.ಕೆ. ಕೊಪ್ಪ ಗ್ರಾಮದ ನೂರಪ್ಪನವರ ಎನ್ನುವ ಮುಸ್ಲಿಂ ಕುಟುಂಬದ ಸದಸ್ಯರು ತಲೆತಲೆಮಾರುಗಳಿಂದ ಲಿಂಗದೊಳಗಿನ ಪೀಠಕಾ ಸಿದ್ಧಗೊಳಿಸುವ ಕಾರ್ಯವನ್ನು ನಿರ್ವಹಿಸಿಕೊಂಡು ಬಂದಿದೆ. ಅದರಲ್ಲೂ ಶಿವರಾತ್ರಿ ಸಂದರ್ಭದಲ್ಲಿ ಬೇಡಿಕೆ ಹೆಚ್ಚಿದ್ದು, ಒಂದು ತಿಂಗಳಿಗೆ ಕನಿಷ್ಠ 20 ಸಾವಿರ ಪೀಠಕಾ ಸಿದ್ಧಪಡಿಸುತ್ತಾರೆ. ಮನೆಯ ಹೆಣ್ಣುಮಕ್ಕಳೂ ಪೀಠಕಾ ತಯಾರಿಕೆಯಲ್ಲಿ ಸಹಕರಿಸುವುದು ವಿಶೇಷ. ನಿತ್ಯ ದುಡಿಮೆ ಒಬ್ಬರದ್ದು 600 ರೂ. ವರ್ಷಕ್ಕೆ ಕನಿಷ್ಠ 1.75 ಲಕ್ಷದವರೆಗೆ ಗಳಿಕೆ ಮಾಡುತ್ತಾರೆ.

    ಏನಿದು ಪೀಠಕಾ
    ಕೊರಳಲ್ಲಿ ಲಿಂಗಧಾರಣೆ ಮಾಡುವ ಲಿಂಗದಲ್ಲಿ ಸಣ್ಣ ಪ್ರಮಾಣದ ಶಿವಲಿಂಗವು ಒಳಗಡೆ ಇರುತ್ತದೆ. ಇದನ್ನೇ ‘ಪೀಠಕಾ’ ಎಂದು ಕರೆಯುತ್ತಾರೆ. ಇದಿಲ್ಲದಿದ್ದರೆ ಲಿಂಗವು ಸಿದ್ಧವಾಗುವುದಿಲ್ಲ. ಇದರಲ್ಲಿ ಸಾದಾಲಿಂಗ, ಜ್ಯೋತಿಲಿಂಗ, ಪಂಚಸೂತ್ರ ಲಿಂಗಗಳು ಎಂದು ವಿವಿಧ ರೀತಿಗಳಿವೆ. ಈ ಪಂಚಸೂತ್ರ ಶಿವಲಿಂಗಗಳನ್ನು ದೇಶದ ಗಣ್ಯಾತಿಗಣ್ಯ ಮಠಗಳಲ್ಲಿ ನಡೆಯುವ ಹೋಮ, ಹವನಗಳಲ್ಲಿಯೂ ಬಳಸುತ್ತಾರೆ. ಶ್ರೀಮಠಗಳಲ್ಲಿ ಲಿಂಗದೀಕ್ಷೆಗೆ ಪ್ರಾಮುಖ್ಯತೆ ಪಡೆದಿವೆ.

    ಹೀಗೆ ಸಿದ್ಧಪಡಿಸುತ್ತಾರೆ
    ಪೀಠಕಾ ತಯಾರಿಸಲು ಕಟಕದ ಕಲ್ಲು ಅಥವಾ ಲಿಂಗದ ಕಲ್ಲು ಬಳಕೆ ಮಾಡುತ್ತಾರೆ. ಈ ಕಲ್ಲು ಮೃದುವಾಗಿದ್ದು, ಸರಳವಾಗಿ ಪದರಗಳನ್ನು ಬಿಚ್ಚುತ್ತದೆ. ಮುಧೋಳ ತಾಲೂಕಿನ ಲೋಕಾಪುರ ಬಳಿಯ ಉದಕಟ್ಟಿ ಗ್ರಾಮದಲ್ಲಿ ಹೆಚ್ಚು ಈ ಕಲ್ಲು ದೊರೆಯುತ್ತದೆ. ಕಲ್ಲನ್ನು ಮೊದಲು ಸಣ್ಣ ಕೋಲಿನ ತುಂಡುಗಳಂತೆ ಕೆತ್ತಿ, ಬಳಿಕ ಯಂತ್ರದ ಮೂಲಕ ಸಣ್ಣ ಲಿಂಗರೂಪ ನೀಡಲಾಗುತ್ತದೆ. ನಂತರ ಕಂತಿ ಲೇಪನ ಮಾಡಿ ಲಿಂಗದ ರೂಪ ಕೊಟ್ಟು ಕೊರಳಲ್ಲಿ ಧರಿಸುತ್ತಾರೆ. ಲಿಂಗಗಳು ದೇಶದ ನಾನಾ ಮೂಲೆಯಲ್ಲಿ ತಯಾರಾದರೂ ಈ ಪೀಠಕಾಗಳು ಮಾತ್ರ ಎಸ್.ಕೆ. ಕೊಪ್ಪ ಗ್ರಾಮದಲ್ಲಿ ಸಿದ್ಧವಾಗುತ್ತದೆ ಎಂಬುದೇ ವಿಶೇಷ.

    ಈ ಪೀಠಕಾಗಳು ದೇಶದ್ಯಂತ ಪೂರೈಕೆಯಾಗುತ್ತವೆ. ಪಂಚ ಪೀಠಗಳಾದ ಕಾಶಿ, ಉಜ್ಜಯಿನಿ, ರಂಭಾಪುರಿ, ಕೇದಾರ ಮತ್ತು ಶ್ರೀಶೈಲ ಸೇರಿದಂತೆ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳು, ಮಠಮಾನ್ಯಗಳಿಗೂ ಈ ಮುಸ್ಲಿಂ ಕುಟುಂಬ ಸಿದ್ಧಪಡಿಸುವ ಪೀಠಕಾಗಳೇ ರವಾನೆಯಾಗುತ್ತವೆ. ಜತೆಗೆ ವಿಶೇಷವಾಗಿ ಜರುಗುವ ಹೋಮ ಹವನಗಳು, ಲಿಂಗದೀಕ್ಷೆ ಕಾರ್ಯಕ್ರಮಗಳಿಗೂ ಇಲ್ಲಿನ ಪೀಠಕಾಗಳು ಬೇಕು. ಕಾಶ್ಮೀರದಿಂದ ಕನ್ಯಾಕುಮಾರಿ ವರೆಗಿನ ಎಲ್ಲ ಕ್ಷೇತ್ರಗಳಿಗೂ ಇಲ್ಲಿನ ಪೀಠಕಾಗಳು ರಫ್ತಾಗುತ್ತದೆ.

    ವಿಶ್ವದ ನಾನಾ ಭಾಗದ ಸ್ವಾಮೀಜಿ, ವೀರಶೈವ-ಲಿಂಗಾಯತರು ಸಹಿತ ಹಿಂದೂಗಳ ನಿತ್ಯ ಶ್ರದ್ಧಾ ಭಕ್ತಿಯಿಂದ ಪೂಜಿಸುವ ಲಿಂಗಕ್ಕೆ ತನ್ನದೇ ಆದ ಸಂಸ್ಕೃತಿ-ಪರಂಪರೆಯಿದೆ. ಲಿಂಗದೊಳಗಿನ ಪೀಠಕಾವನ್ನು ಮುಸ್ಲಿಂ ಕುಟುಂಬದವರು ತಯಾರಿಸುತ್ತಾರೆ ಎನ್ನುವುದು ವಿಶೇಷದಲ್ಲಿ ವಿಶೇಷ.

    ಮುತ್ತಜ್ಜನ ಕಾಲದಿಂದಲೂ ನಮ್ಮ ಕುಟುಂಬ ಪೀಠಕಾ ತಯಾರಿಕೆಯಲ್ಲಿ ತೊಡಗಿಕೊಂಡಿದೆ. ಇದು ಆತ್ಮತೃಪ್ತಿ ಕೊಡುವ ಕಾಯಕ ದೇವರು ಒಬ್ಬನೇ ನಾಮ ಹಲವು. ನಾವೆಲ್ಲರೂ ಒಂದೇ ಎನ್ನುವ ಭಾವನೆ ನಮ್ಮದು. ದೇಶಾದ್ಯಂತ ಪ್ರಮುಖ ಮಠಗಳು, ಸ್ವಾಮೀಜಿಗಳು, ಜನ ಸಾಮಾನ್ಯರು ಧರಿಸುವ ಲಿಂಗದೊಳಗಿನ ಶಿವ (ಪೀಠಕಾ) ಸಿದ್ಧಪಡಿಸುವ ಕಾಯಕ ನಮಗೆ ಸಿಕ್ಕಿರುವುದು ಪೂರ್ವ ಜನ್ಮದ ಪುಣ್ಯ.
    ಅಬ್ದುಲ್‌ರಜಾಕ ಖಾಸಿಂಸಾಬ ನೂರಪ್ಪನವರ ಪೀಠಕಾ ತಯಾರಿಸುವ ಶಿಲ್ಪಿ ಎಸ್.ಕೆ. ಕೊಪ್ಪ ಗ್ರಾಮ





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts