More

  ನಾಳೆ ಅಹೋರಾತ್ರಿ ಸಂಗೀತ ಕಾರ್ಯಕ್ರಮ

  ಬಾಗಲಕೋಟೆ: ನಗರದ ನಟರಾಜ ಸಂಗೀತ ವಿದ್ಯಾಲಯದ ಸುವರ್ಣ ಮಹೋತ್ಸವ ಕಾರ್ಯಕ್ರಮ ಹಾಗೂ ಪಂ.ರಾವ್‌ಸಾಹೇಬ್ ಎಚ್. ಮೋರೆಯವರ 80ನೇ ಜನ್ಮದಿನದ ನಿಮಿತ್ತ ಅಂತರಾಷ್ಟ್ರೀಯ ಕಲಾವಿದರಿಂದ ಅಹೋರಾತ್ರಿ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ. ಜ.18ರಂದು ಸಂಜೆ 5 ಗಂಟೆಯಿಂದ ನವನಗರದ ಕಲಾಭವನದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ವಿದ್ಯಾಲಯದ ಶಿಷ್ಯ ಕೇಶವ ಜೋಶಿ ಹೇಳಿದರು.

  ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುರನಾಳ ಮಳೆರಾಜೇಂದ್ರ ಮಠದ ಜಗನ್ನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶಾಸಕ ವೀರಣ್ಣ ಚರಂತಿಮಠ ಅಧ್ಯಕ್ಷತೆ, ಜಿಲ್ಲಾಧಿಕಾರಿ ಡಾ.ಕೆ.ರಾಜೇಂದ್ರ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ವೀರಣ್ಣ ಅರ್ಕಸಾಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜ ಶಿರೂರ, ಹಿರಿಯ ಪತ್ರಕರ್ತ ರಾಮ ಮನಗೂಳಿ ಅತಿಥಿಗಳಾಗಿ ಆಗಮಿಸಲಿದ್ದಾರೆ.

  ಮುಂಬೈನ ಹಿರಿಯ ತಬಲಾವಾದಕ ಸದಾನಂದ ನಾಯಂಪಲ್ಲಿಯವರಿಗೆ 2020 ಅನೋಖೆ ತಬಲಾ ವಾದಕ ಪ್ರಶಸ್ತಿಯನ್ನು ನೀಡಲಾಗುವುದು. 50 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಗುವುದು ಎಂದರು.

  ಅಂದು ನಡೆ ಯುವ ಅಹೋರಾತ್ರಿ ಸಂಗೀತ ಕಾರ್ಯಕ್ರಮದಲ್ಲಿ ಬೆಂಗಳೂರಿನ ತಬಲಾ ಸೋಲೊ ಸದಾನಂದ ನಾಯಂಪಲ್ಲಿ, ಧಾರವಾಡದ ಐಶ್ವರ್ಯ ದೇಸಾಯಿ, ಮಂಗಳೂರಿನ ಉಸ್ತಾದ ರಫೀಕ್ ಖಾನ್, ಧಾರವಾಡದ ಶಫೀಕ್ ಖಾನ್, ಗೋವಾದ ಉಸ್ತಾದ್ ಶ್ರೀ ಚೋಟೆ ರೇಹಮತ್ ಖಾನ್, ಬೆಳಗಾವಿಯ ವಿಧುಷಿ ಕಲಾಪಿನಿ ಕೊಮ್ಮಕಾಳಿ, ಪಂ. ಸುಧಾಂಶು ಕುಲಕರ್ಣಿ, ಬೆಂಗಳೂರಿನ ಶುಭ ಮಹಾರಾಜ,ರಂಜನ್ ಬೇವರಾ ಸೇರಿದಂತೆ ಇನ್ನಿತರರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

  ಸಂತೋಷ ಗದ್ದನಕೇರಿ ಮಾತನಾಡಿ, ರಾಷ್ಟ್ರೀಯ ಉತ್ಸವ ಮೀರಿಸುವ ಅಹೋರಾತ್ರಿ ಸಂಗೀತ ಕಾರ್ಯಕ್ರಮ ನಡಯಲಿದೆ. ನಟರಾಜ ಸಂಗೀತ ವಿದ್ಯಾಲಯಕ್ಕೆ ಸರ್ಕಾರದಿಂದ ಅನುದಾನ ಇದುವರೆಗೆ ಯಾವುದೂ ಬಂದಿಲ್ಲ. ನವನಗರದಲ್ಲಿ ನಟರಾಜ್ ಸಂಗೀತ ವಿದ್ಯಾಲಯಕ್ಕೆ ಜಾಗ ನೀಡಿದರೆ ಅಲ್ಲಿ ಸಂಗೀತ ವಿದ್ಯಾಲಯ ಕಟ್ಟುವ ಮೂಲಕ ಸಾಕಷ್ಟು ಪ್ರತಿಭೆಗಳನ್ನು ಹೊರತರಲು ನೆರವಾಗಲಿದೆ ಎಂದು ಹೇಳಿದರು. ಶಂಕರ ಜಾಧವ, ಶುಭದಾ ದೇಶಪಾಂಡೆ ಉಪಸ್ಥಿತರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts