More

    ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಲ್ಲಿ ವೃತ್ತಿ ಶಿಕ್ಷಣಕ್ಕೆ ಚಿಂತನೆ

    ಬಾಗಲಕೋಟೆ: ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಲ್ಲಿ ವೃತ್ತಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಸ್ವಯಂ ಉದ್ಯೋಗಕ್ಕೆ ಪ್ರಾಮುಖ್ಯತೆ ನೀಡುವ ಉದ್ದೇಶ ಹೊಂದಲಾಗಿದೆ. ಹೀಗಾಗಿ ರಾಜ್ಯದ ಪ್ರತಿ ಜಿಲ್ಲೆಗೊಂದು ವೃತ್ತಿ ಶಿಕ್ಷಣ ಪ್ರಾರಂಭಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಕೈಮಗ್ಗ, ಜವಳಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಶ್ರೀಮಂತ ಬಾಳಾಸಾಹೇಬ ಪಾಟೀಲ ಹೇಳಿದರು.

    ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬುಧವಾರ ಜರುಗಿದ ಕೈಮಗ್ಗ ಮತ್ತು ಜವಳಿ, ಅಲ್ಪಸಂಖ್ಯಾತರ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಲ್ಪಸಂಖ್ಯಾತರನ್ನು ಶಿಕ್ಷಣದ ಮೂಲಕವೇ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಮದರಸಾಗಳ ಶಿಕ್ಷಣ ಪದ್ಧತಿಯೊಂದಿಗೆ ಇತರ ನಿಗದಿತ ಪಠ್ಯಕ್ರಮಗಳನ್ನು ವಯಸ್ಸಿಗನುಗುಣವಾಗಿ ಬೋಧಿಸುವುದು ಅಗತ್ಯವಾಗಿದೆ. ಇದಕ್ಕಾಗಿ ಇಲಾಖೆಯು ಕಾರ್ಯಕ್ರಮ ರೂಪಿಸಲಿದೆ ಎಂದರು.

    ಅಲ್ಪಸಂಖ್ಯಾತರ ಇಲಾಖೆ ಅಡಿಯಲ್ಲಿ ಬರುವು ಸರ್ಕಾರದ ಶಾಲಾ, ಕಾಲೇಜುಗಳಿಗೆ ಮೂಲ ಸೌಕರ್ಯ ಒದಗಿಸಲಾಗಿದ್ದು, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಉತ್ತಮ ಲಿತಾಂಶ ಬರುವಂತೆ ಮಾಡಬೇಕು. ಕರ್ತವ್ಯ ನಿರತ ಶಿಕ್ಷಕರಿಗೆ ಜವಾಬ್ದಾರಿ ವಹಿಸಬೇಕು. ಎಸ್ಸೆಸ್ಸೆಲ್ಸಿ ನಂತರ ಮುಂದಿನ ಶಿಕ್ಷಣ ಮತ್ತು ಉದ್ಯೋಗ ಬಗ್ಗೆ ಮಾಹಿತಿ ಕಲೆ ಹಾಕಬೇಕು. ಇಲಾಖೆಯಡಿ ನಿರ್ಮಿಸಲಾಗುತ್ತಿರುವ ವಸತಿ ಶಾಲೆ, ಕಾಲೇಜುಗಳ ಕಟ್ಟಡ ಗುಣಮಟ್ಟ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.ನೇಕಾರರ ಅಭಿವೃದ್ಧಿಗೆೆ ಹೊಸ ಜವಳಿ ನೀತಿ ಕೈಮಗ್ಗ ನೇಕಾರರನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಹೊಸ ಜವಳಿ ನೀತಿ ಯೋಜನೆಯಡಿ ಟೆಕ್ಸ್‌ಟೈಲ್ ಪಾರ್ಕ್ ನಿರ್ಮಾಣ ಮಾಡಲಾಗುತ್ತಿದೆ. ಹೆಚ್ಚಾಗಿ ತಮಿಳುನಾಡಿನಲ್ಲಿ ಜವಳಿ ಪಾರ್ಕ್‌ಗಳು ಕಂಡುಬರುತ್ತಿದ್ದು, ರಾಜ್ಯದಲ್ಲಿಯೂ ಸಹ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಹೆಚ್ಚಿನ ಉದ್ಯೋಗ ದೊರಕಲಿವೆ. ಕೋವಿಡ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಒಳಗಾದ ನೇಕಾರರಿಗೆ ಸಮ್ಮಾನ್ ಯೋಜನೆಯಡಿ ವಾರ್ಷಿಕವಾಗಿ 2 ಸಾವಿರ ನೀಡಲಾಗುತ್ತಿದ್ದು, 54 ಸಾವಿರ ಅರ್ಜಿ ಸಲ್ಲಿಸಿದವರ ಪೈಕಿ 41 ಸಾವಿರ ಅರ್ಜಿಗಳನ್ನು ಪರಿಶೀಲಿಸಲಾಗಿ ಅದರಲ್ಲಿ 33 ಸಾವಿರ ನೇಕಾರರಿಗೆ 661 ಲಕ್ಷ ರೂ.ಗಳ ಸಹಾಯ ಧನವನ್ನು ನೇರವಾಗಿ ಅವರ ಖಾತೆಗಳಿಗೆ ಜಮಾ ಮಾಡಲಾಗಿದೆ ಎಂದು ತಿಳಿಸಿದರು.

    ವಿದ್ಯುತ್ ಮಗ್ಗಗಳ ನೇಕಾರರಿಗೆ ಸಹ ಈ ಯೋಜನೆಯಡಿ ಪರಿಗಣಿಸಲಾಗಿದ್ದು, ಸರ್ವೇ ಕಾರ್ಯ ಮಾಡಲಾಗಿದೆ. ರಾಜ್ಯದ 46 ಸಾವಿರ ವಿದ್ಯುತ್ ಮಗ್ಗಗಳ ನೇಕಾರರ ಪೈಕಿ 24800 ಲಾನುಭವಿಗಳಿಗೆ 490 ಲಕ್ಷ ರೂ.ಗಳ ಸಹಾಯ ಧನ ಜಮಾ ಮಾಡಲಾಗಿದೆ. ಇನ್ನು ನೇಕಾರರರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೋವಿಡ್‌ನಲ್ಲಿ ವಾರಿಯರ್ಸ್‌ಗಳಾಗಿ ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತೆಯರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ ನೇಕಾರರ ಸೀರೆಗಳನ್ನು ನೀಡಲು ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗಿದ್ದು, ಒಪ್ಪಿಗೆ ನೀಡಿದ್ದು, ಇದಕ್ಕಾಗಿ 6 ಲಕ್ಷ ಸೀರೆಗಳನ್ನು ಖರೀದಿಸಲಾಗುತ್ತಿದೆ ಎಂದು ತಿಳಿಸಿದರು.

    ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕ ಎಂ.ಜಿ. ಕೊಣ್ಣೂರ ಮಾತನಾಡಿ, ಜಿಲ್ಲೆಯಲ್ಲಿ 6514 ಕೈಮಗ್ಗ, 71 ಕೈಮಗ್ಗ ನೇಕಾರರ ಸಂಘಗಳು, 23 ಕೆ.ಎಚ್.ಡಿ.ಸಿ ಉಪ ಕೇಂದ್ರಗಳು, 40 ಸಹಕಾರ ಸಂಘಗಳು, 17829 ವಿದ್ಯುತ್ ಮಗ್ಗಗಳು ಇವೆ. ಜಿಲ್ಲೆಯಲ್ಲಿ ನೇಕಾರ ಸಮ್ಮಾನ್ ಯೋಜನೆಯಡಿ 7950 ಕೈಮಗ್ಗ ನೇಕಾರರಿಗೆ ಸಹಾಯಧ ಬಿಡುಗಡೆ ಮಾಡಲಾಗಿದೆ. 1425 ವಿದ್ಯುತ್ ಮಗ್ಗಗಳ ನೇಕಾರರಿಗೆ ಹಣ ಬಿಡುಗಡೆ ಮಾಡಲಾಗಿದೆ. ನೇಕಾರರ ಸಾಲ ಮನ್ನಾ ಯೋಜನೆಯಡಿ 7731 ಲಾನುಭವಿಗಳ 2931.94 ಲಕ್ಷ ಸಾಲ ಮತ್ತು ಬಡ್ಡಿ ಮನ್ನಾ ಮಾಡಲಾಗಿದೆ ಎಂದು ತಿಳಿಸಿದರು.

    ಸಭೆಯಲ್ಲಿ ಸಂಸದ ಪಿ.ಸಿ. ಗದ್ದಿಗೌಡರ, ಶಾಸಕ ವೀರಣ್ಣ ಚರಂತಿಮಠ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಕ್ತಾರ ಪಠಾಣ, ಅಲ್ಪಸಂಖ್ಯಾತರ ಇಲಾಖೆಯ ನಿರ್ದೇಶಕ ಮಹಬೂಬ ಪಾಷಾ, ಜಿಲ್ಲಾಧಿಕಾರಿ ಕೆ. ರಾಜೇಂದ್ರ, ಜಿ.ಪಂ. ಸಿಇಒ ಟಿ. ಭೂಬಾಲನ, ಸಚಿವರ ಆಪ್ತ ಕಾರ್ಯದರ್ಶಿ ರಾಜಕುಮಾರ ತೋರಗಲ್ಲ, ವಿಶೇಷ ಕರ್ತವ್ಯಾಧಿಕಾರಿ ರಾಜಕುಮಾರ ಟಕಾಳೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

    ನೇಕಾರರು ಆತ್ಮಹತ್ಯೆ ಮಾಡಿಕೊಳ್ಳುವುದು ದುರ್ದೈವ ಸಂಗತಿ. ಯಾರೂ ಆತ್ಮಹತ್ಯೆ ಮಾಡಿಕೊಳ್ಳಬಾರದು. ಆತ್ಮಹತ್ಯೆ ಮಾಡಿಕೊಂಡ ನೇಕಾರರಿಗೆ 2 ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ. ನೇಕಾರರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಇನ್ನು ನೇಕಾರರಿಗೆ ಸುಲಭವಾಗಿ ಸಾಲ ನೀಡುವಂತೆ ಬ್ಯಾಂಕರ್ಸ್‌ಗಳಿಗೆ ಸೂಚನೆ ನೀಡಲಾಗಿದೆ. ಇನ್ನು ನೇಕಾರ ಸಮ್ಮಾನ ಯೋಜನೆಯಲ್ಲಿ ಮಧ್ಯವರ್ತಿಗಳಿಗೆ ಅವಕಾಶವಿಲ್ಲ. ನೇರವಾಗಿ ಖಾತೆಗೆ ಹಣ ಜಮೆಯಾಗುತ್ತದೆ. ಅರ್ಜಿ ಸಲ್ಲಿಸಲು ಯಾವುದೇ ಅಡೆತಡೆ, ನಿಯಮ ಇಟ್ಟಿಲ್ಲ.
    ಶ್ರೀಮಂತ ಪಾಟೀಲ ಕೈ ಮಗ್ಗ ಮತ್ತು ಜವಳಿ ಖಾತೆ ಸಚಿವ



    ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಲ್ಲಿ ವೃತ್ತಿ ಶಿಕ್ಷಣಕ್ಕೆ ಚಿಂತನೆ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts