More

    ಗರ್ಭಪಾತ ಪ್ರಕರಣಕ್ಕೆ ರಾಜಕೀಯ ತಿರುವು

    ಅಶೋಕ ಶೆಟ್ಟರ,
    ಬಾಗಲಕೋಟೆ: ಮಹಾಲಿಂಗಪುರ ಪುರಸಭೆಯಲ್ಲಿ ಅಧಿಕಾರದ ಹಪಾಹಪಿಗಾಗಿ ಮಹಿಳೆಯರು ಎಂದೂ ನೋಡದೆ ತಳ್ಳಾಟ, ನೂಕಾಟ ಮಾಡಿರುವ ಪ್ರಕರಣ ಈಗ ದಿನದಿಂದ ದಿನಕ್ಕೆ ರಾಜಕೀಕರಣಗೊಳ್ಳುತ್ತಿದೆ.

    ಅನ್ಯಾಯಕ್ಕೆ ಒಳಗಾದ ಮಹಿಳೆಯರು ನೆಪ ಮಾತ್ರವಾಗಿದ್ದು ಇದೀಗ ಇಡೀ ಪ್ರಕರಣ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ರಾಜಕೀಯ ಕಾಳಗಕ್ಕೆ ಸಾಕ್ಷಿಯಾಗಿ ನಿಂತಿದೆ.

    ಈ ರಾಜಕೀಕರಣದ ಮುಂದುವರಿದ ಭಾಗವಾಗಿಯೇ ಡಿ. 5ರಂದು ಮಹಾಲಿಂಗಪುರದಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆ ಒಂದು ಕಡೆಯಾಗಿದ್ದರೆ, ಮತ್ತೊಂದು ಕಡೆಗೆ ತಪ್ಪು ಎಂದು ಗೊತ್ತಿದ್ದರೂ ಅದನ್ನು ಸಮರ್ಥಿಸಿಕೊಂಡು ಬ್ಯಾಟಿಂಗ್ ಮಾಡುತ್ತಿರುವ ಬಿಜೆಪಿ. ಈ ಎರಡು ಪಕ್ಷಗಳ ಹಾವು-ಏಣಿ ಆಟಕ್ಕೆ ಪ್ರಕರಣ ಕಾಯಿಗಳಂತೆ ಬಳಕೆ ಆಗುತ್ತಿದೆಯಾ? ಎನ್ನುವ ಅನುಮಾನಗಳು ಕಾಡತೊಡಗಿವೆ.

    ಇಂದು ನಡೆಯುತ್ತಿರುವ ಪ್ರತಿಭಟನೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ, ಮಾಜಿ ಸಿಎಂ ಸಿದ್ದರಾಮಯ್ಯ, ಪರಿಷತ್ ವಿಪಕ್ಷ ನಾಯಕ ಎಸ್.ಆರ್. ಪಾಟೀಲ, ಸತೀಶ ಜಾರಕಿಹೊಳಿ ಹಾಗೂ ಹಿರಿಯ ಮುಖಂಡರು, ಜಿಲ್ಲಾ ನಾಯಕರು ಭಾಗವಹಿಸುತ್ತಿರುವುದು ಪ್ರಕರಣಕ್ಕೆ ಮತ್ತಷ್ಟು ತೀವ್ರತೆ ಬಂದಿದೆ.

    ನವಂಬರ್ 9 ರಂದು ಮಹಾಲಿಂಗಪುರ ಅಧ್ಯಕ್ಷ- ಉಪಾಧ್ಯಕ್ಷ ಆಯ್ಕೆ ಚುನಾವಣೆ ವೇಳೆ ನಡೆದ ಮಹಿಳೆಯ ತಳ್ಳಾಟ, ನೂಕಾಟ ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂಥದ್ದು ಎನ್ನುವುದರಲ್ಲಿ ಎರಡು ಮಾತಿಲ್ಲ. ತಳ್ಳಾಟ, ನೂಕಾಟದಲ್ಲಿ ಸ್ವತಃ ತೇರದಾಳ ಕ್ಷೇತ್ರದ ಶಾಸಕ ಸಿದ್ದು ಸವದಿ ಪಾಲ್ಗೊಂಡಿದ್ದರು ಎನ್ನುವುದಕ್ಕೆ ವಿಡಿಯೋಗಳು ಸಾಕ್ಷಿಯಾಗಿವೆ.
    ಕ್ಷೇತ್ರ ಹಾಗೂ ಸಾರ್ವಜನಿಕರ ಬದುಕಿಗೆ ಮಾದರಿ ಆಗಬೇಕಿದ್ದ ಶಾಸಕರೇ ಹೀಗೆ ಮಹಿಳೆ ಎಂದು ನೋಡದೆ ತಳ್ಳಾಟ ಮಾಡಿರುವುದಕ್ಕೆ ಅವರು ಯಾವುದೇ ಕಾರಣ ನೀಡಿದರೂ ಅದು ಒಪ್ಪುವಂಥದ್ದಲ್ಲ. ಹಾಗೆಂದು ಇಡೀ ತಳ್ಳಾಟ ಮತ್ತು ನೂಕಾಟ ಮಾಡಿದ್ದು ಬರೀ ಶಾಸಕರೊಬ್ಬರೇನಾ? ಅದು ಸಹ ಖಂಡಿತ ಅಲ್ಲ. ಹೀಗಾಗಿ ಒಟ್ಟಾರೆ ಪ್ರಕರಣ ನೋಡಬೇಕೇ ವಿನಃ ಇದು ಬಿಜೆಪಿ, ಕಾಂಗ್ರೆಸ್ ಎನ್ನುವುದಲ್ಲ ಎಂದು ಕ್ಷೇತ್ರದ ರಾಜಕೀಯೇತರ ಜನರು ಹೇಳುತ್ತಿದ್ದಾರೆ.

    ನೊಂದ ಮಹಿಳೆ ಚಾಂದನಿ ನಾಯಕ ಅವರಿಗೆ ಗರ್ಭಪಾತ ಆಗಿರುವುದು ಇದೀಗ ಪ್ರಕರಣಕ್ಕೆ ಹೊಸ ತಿರುವು ಬಂದಿದೆ. ಆರೋಪ, ಪ್ರತ್ಯಾರೋಪಗಳು ಬಿರುಸುಗೊಂಡಿವೆ. ಈ ಘಟನೆಗೆ ಸಂಬಂಧಿಸಿದಂತೆ ಚಾಂದನಿ ನಾಯಕ ಅವರು ಈವರೆಗೂ ಬಹಿರಂಗವಾಗಿ ಯಾವುದೇ ಹೇಳಿಕೆ ನೀಡಿಲ್ಲ.

    ಸದಸ್ಯೆ ಪತಿಯ ವಿಭಿನ್ನ ಹೇಳಿಕೆಗಳು
    ತಳ್ಳಾಟದಲ್ಲಿ ಸಿಕ್ಕಿದ್ದ ಚಾಂದನಿ ನಾಯಕ ಅವರ ಗರ್ಭಪಾತಕ್ಕೆ ಸಂಬಂಧಿಸಿದಂತೆ ಅವರ ಪತಿ ನಾಗೇಶ ನಾಯಕ ಅವರು ನೀಡುತ್ತಿರುವ ಹೇಳಿಕೆಗಳು ಸಾರ್ವಜನಿಕರಲ್ಲಿ ತೀವ್ರ ಗೊಂದಲ ಮತ್ತು ಅನುಮಾನಗಳನ್ನು ಹುಟ್ಟು ಹಾಕುತ್ತಿವೆ.

    ಗರ್ಭಪಾತದ ವಿಚಾರ ಮಾಧ್ಯಮಗಳಲ್ಲಿ ಬಿತ್ತರವಾದ ಬಳಿಕ ನಾಗೇಶ ನಾಯಕ ಅವರು ಮೊದಲ ಸಲ ಪುರಸಭೆ ಚುನಾವಣೆ ವೇಳೆ ಸ್ವತಃ ಶಾಸಕರು ಹಾಗೂ ಬೆಂಬಲಿಗರು ತಳ್ಳಾಡಿ, ನೂಕಾಡಿ ಕೆಳಕ್ಕೆ ಬೀಳಿಸಿದ್ದರು. ಚಾಂದನಿ ಗರ್ಭಿಣಿ ಇದ್ದರು. ಈಗ ಗರ್ಭಪಾತವಾಗಿದ್ದು, ಈ ಬಗ್ಗೆ ಕಾನೂನು ಹೋರಾಟ ಮಾಡುವೆ ಎಂದಿದ್ದರು.

    ಇದಾದ ಬಳಿಕ ಡಿ. 3ರಂದು ಪತ್ನಿಗೆ ಗರ್ಭಪಾತ ಆಗಿದ್ದು ನಿಜ. ಆದರೆ, ಇದಕ್ಕೆ ನಿಖರವಾಗಿ ಪುರಸಭೆ ಚುನಾವಣೆ ವೇಳೆ ನಡೆದ ತಳ್ಳಾಟದಿಂದ ಆಗಿದೆ ಎಂದು ನಾನು ಆರೋಪಿಸಲ್ಲ. ಹೀಗಾಗಿ ನಾನು ಯಾರ ವಿರುದ್ಧವೂ ಆರೋಪ ಮಾಡಿಲ್ಲ.

    ಇದನ್ನು ರಾಜಕೀಯ ಮಾಡಬೇಡಿ ಎಂದಿದ್ದರು. ಇದರ ಬೆನ್ನಲ್ಲೇ ಲಿಖಿತ ಹೇಳಿಕೆ ಬಿಡುಗಡೆ ಮಾಡಿ ಮತ್ತೊಂದು ವಿಭಿನ್ನ ಹೇಳಿಕೆ ನೀಡಿದ್ದರು. ಈ ಮೊದಲು ಕೆಲವು ಸಲ ಪತ್ನಿಗೆ ಗರ್ಭಪಾತವಾಗಿತ್ತು ಎನ್ನುವ ಅಂಶ ಅದರಲ್ಲಿ ಉಲ್ಲೇಖಿಸಲಾಗಿತ್ತು.
    ಡಿ.4 ರಂದು ಮತ್ತೆ ಭಿನ್ನ ಹೇಳಿಕೆ ನೀಡಿರುವ ನಾಗೇಶ, ನಾನು ಆ ರೀತಿ ಹೇಳಿಲ್ಲ. ಲಿಖಿತ ಹೇಳಿಕೆ ಕೊಟ್ಟಿಲ್ಲ.

    ಬಿಜೆಪಿಯವರು ನಕಲಿ ಸಹಿ ಮಾಡಿ ಪ್ರಚಾರ ಪಡಿಸಿದ್ದಾರೆ. ಬಣ್ಣ ಹಚ್ಚಿದ್ದಾರೆ. ಈಗಾಗಲೇ ನನ್ನ ಧರ್ಮ ಪತ್ನಿಗೆ ಮಾನಸಿಕ ಕಿರುಕುಳ ದೌರ್ಜನ್ಯ ಕೊಟ್ಟಿದ್ದಾರೆ ಎಂದು ಮಗದೊಂದು ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಹೀಗೆ ದಿನಕ್ಕೊಂದು ಹೇಳಿಕೆ ನೀಡುತ್ತಿರುವುದು ಅವರಿಗೆ ರಾಜಕೀಯ ಒತ್ತಡ ಇದೆಯಾ? ಅಥವಾ ಪ್ರಕರಣದ ದಿಕ್ಕು ತಪ್ಪಿಸುತ್ತಿದ್ದಾರಾ? ಎನ್ನುವ ಅನುಮಾನ ಕಾಡತೊಡಗಿದೆ.

    ನಿಖರ ಮಾಹಿತಿ ನೀಡದ ನೊಂದ ಮಹಿಳೆ ?
    ಘಟನೆ ಬಗ್ಗೆ ನಂತರದಲ್ಲಿ ನಡೆದ ಬೆಳವಣಿಗೆ ಹಾಗೂ ಗರ್ಭಪಾತ ವಿಚಾರವಾಗಿ ಸದಸ್ಯೆಗೆ ದೂರು ದಾಖಲಿಸುವ ಬಗ್ಗೆ ಸ್ವತಃ ಪೊಲೀಸರು ಅನೇಕ ಸಲ ಮನವಿ ಮಾಡಿಕೊಂಡಿದ್ದಾರೆ. ನೀವು ಸ್ವತಃ ಬಂದು ಲಿಖಿತ ದೂರು ಕೊಡಬಹುದು. ಇಲ್ಲವೇ ನಾವೇ ನೀವು ಹೇಳಿದ ಜಾಗಕ್ಕೆ ಬಂದು ಹೇಳಿಕೆ ದಾಖಿಸಿಕೊಳ್ಳುತ್ತೇವೆ. ಅದು ಬಿಟ್ಟು ತಾವು ಸ್ವತಃ ಕೋರ್ಟ್‌ಗೆ ಬಂದು ಹೇಳಿಕೆ ನೀಡಬಹುದು ಎಂದು ಪೊಲೀಸರು ಚಾಂದನಿ ಅವರಿಗೆ ಕೋರಿದ್ದು, ಈವರೆಗೂ ಅದಕ್ಕೆ ಚಾಂದನಿ ಅವರು ಇನ್ನು ಕೆಲವು ದಿನಗಳ ಕಾಲಾವಕಾಶ ಕೊಡಿ, ವಿಚಾರ ಮಾಡಿ ಹೇಳುತ್ತೇನೆ ಎಂದಿದ್ದಾರೆ ಎಂದು ತಿಳಿದು ಬಂದಿದೆ.

    ಮಹಾಲಿಂಗಪುರ ಘಟನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ ಪ್ರತಿಭಟನೆ ರಾಜಕೀಯಕ್ಕಾಗಿ ಅಲ್ಲ. ಒಬ್ಬ ದಲಿತ ಗರ್ಭಿಣಿಗೆ ಆಗಿರುವ ಅನ್ಯಾಯದ ವಿರುದ್ಧವಾಗಿ, ಅವರಿಗೆ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದೇವೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ನೊಂದ ಮಹಿಳೆಗೆ ಬೆಂಬಲವಾಗಿ ಈ ಹೋರಾಟ.
    ನಾಗರಾಜ ಹದ್ಲಿ, ಪ್ರಧಾನ ಕಾರ್ಯದರ್ಶಿ, ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್

    ಉಮಾಶ್ರೀ ಸಚಿವೆಯಾಗಿದ್ದಾಗ ಮಹಿಳೆಯರಿಗೆ ಅನ್ಯಾಯವಾದಾಗ ನ್ಯಾಯ ಕೊಡಿಸಲು ಹೋಗಲಿಲ್ಲ. ಈಗ ಮಹಾಲಿಂಗಪುರದಲ್ಲಿ ರಾಜಕೀಯ ಲಾಭಕ್ಕಾಗಿ ಪ್ರಕರಣವನ್ನು ತಿರುಚುತ್ತಿದ್ದಾರೆ. ಈ ಪ್ರತಿಭಟನೆಯಲ್ಲಿ ಕೈ ಮುಖಂಡರು ಭಾಗವಹಿಸುತ್ತಿರುವುದು ವಿಪರ್ಯಾಸ. ಈ ಬಗ್ಗೆ ಬಿಜೆಪಿ ಸೂಕ್ತ ಸಮಯದಲ್ಲಿ ಘಟನೆ ಹಿಂದೆ ಏನೆಲ್ಲ ಆಗಿದೆ, ಹೇಗೆ ರಾಜಕೀಯ ನಡೆದಿದೆ ಎಂದು ದಾಖಲೆ ಸಮೇತ ಬಿಡುಗಡೆ ಮಾಡುತ್ತೇವೆ.
    ರಾಜು ನಾಯ್ಕರ್, ಪ್ರಧಾನ ಕಾರ್ಯದರ್ಶಿ, ಬಿಜೆಪಿ ಜಿಲ್ಲಾ ಘಟಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts