More

    ಎರಡು ದಿನಗಳಲ್ಲಿ ಅಂತಾರಾಜ್ಯ ಬಸ್ ಸಂಚಾರ

    ಬಾಗಲಕೋಟೆ: ಲಾಕ್ ಡೌನ್ ಬಳಿಕ ಬಂದ್ ಮಾಡಿದ್ದ ಅಂತಾರಾಜ್ಯ ಸಾರಿಗೆ ಬಸ್ಸುಗಳ ಸಂಚಾರವನ್ನು ಎರಡು ದಿನಗಳಲ್ಲಿ ಆರಂಭ ಮಾಡಲಾಗುತ್ತದೆ ಎಂದು ಸಾರಿಗೆ ಸಚಿವ, ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.

    ಬಾಗಲಕೋಟೆಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಇದಕ್ಕೆ ಸಂಬಂಧಿಸಿದಂತೆ ನಮ್ಮ ನೆರೆಯ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಗೋವಾ ರಾಜ್ಯಗಳಿಗೆ ಪತ್ರವನ್ನು ಬರೆದಿದ್ದೇನೆ. ಈಗಾಗಲೇ ಆಂಧ್ರ ಸರ್ಕಾರ ಒಪ್ಪಿಗೆ ನೀಡಿದ್ದು, ಎರಡು ದಿನಗಳಲ್ಲಿ ಆಂಧ್ರಕ್ಕೆ ರಾಜ್ಯದ ಬಸ್ ಸಂಚಾರ ಪುನಾರಂಭಗೊಳ್ಳಲಿದೆ ಎಂದರು.

    ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಮಹಾರಾಷ್ಟ್ರಕ್ಕೆ ಬಸ್ ಸಂಚಾರ ಆರಂಭವಾಗಲ್ಲ. ಈ ಬಗ್ಗೆ ಮಹಾ ಸರ್ಕಾರಕ್ಕೆ ಪತ್ರವನ್ನು ಬರೆದಿಲ್ಲ. ಹಸಿರು ವಲಯದ ರಾಜ್ಯಗಳಿಗೆ ಮಾತ್ರ ಸಂಚಾರ ಆರಂಭ ಮಾಡಲಾಗುವುದು ಎಂದು ತಿಳಿಸಿದರು.

    ಕರೊನಾ ಹಿನ್ನಲೆ ಅತಿ ಹೆಚ್ಚು ಹಾನಿಯನ್ನು ಸಾರಿಗೆ ಇಲಾಖೆ ಅನುಭವಿಸಿದೆ. 2300 ಕೋಟಿ ರೂ. ಲಾಸ್ ಆಗಿದೆ. ಇದೇ ವೇಳೆ ಸಂಕಷ್ಟದಲ್ಲಿ ಇರುವ ಇಲಾಖೆಗೆ ಎರಡು ತಿಂಗಳು ಸಿಬ್ಬಂದಿ ಸಂಬಳಕ್ಕಾಗಿ 651 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ನೀಡಿದೆ. ಮುಂದಿನ ತಿಂಗಳು ಸಹ ನಿಗಮದಿಂದ ಸಂಬಳ ನೀಡುವುದು ಕಷ್ಟವಾಗಿದ್ದು, ಈ ಬಗ್ಗೆ ಸಿಎಂ ಜೊತೆ ಚರ್ಚಿಸಿ ನೆರವು ಕೋರುವುದಾಗಿ ಹೇಳಿದರು.

    1.30 ಲಕ್ಷ ಸಿಬ್ಬಂದಿ ಇರುವ ಸಾರಿಗೆ ಸಂಸ್ಥೆಯಲ್ಲಿ ಇದೀಗ ಪ್ರಯಾಣಿಕರ ಸಂಖ್ಯೆ ಒಂದು ಕೋಟಿಯಿಂದ 15 ಲಕ್ಷಕ್ಕೆ ಬಂದಿದೆ. ಈ ಸವಾಲು ಮೆಟ್ಟಿನಿಲ್ಲಬೇಕಿದೆ. ಕರೊನಾ ಭೀತಿಯಿಂದ ಕೆಲವರು ಇನ್ನೂ ಕರ್ತವ್ಯಕ್ಕೆ ಹಾಜರಾಗಿಲ್ಲ. ಕೂಡಲೆ ಅವರು ಭೀತಿ ಬದಿಗೊತ್ತಿ ಕರೊನಾ ವಿರುದ್ಧ ನಡೆದಿರುವ ಹೋರಾಟದಲ್ಲಿ ಪಾಲ್ಗೊಂಡು ಜನಸೇವೆಗೆ ಮುಂದಾಗಬೇಕು. ಉಳಿದ ಇಲಾಖೆಗಳಂತೆ ಕರೊನಾದಿಂದ ಮೃತಪಟ್ಟ ಸಿಬ್ಬಂದಿ ಕುಟುಂಬಕ್ಕೆ ನಿಗಮದಿಂದ 30 ಲಕ್ಷ ರೂ. ಪರಿಹಾರ ನೀಡುವುದಾಗಿ ಸಚಿವರು ಘೋಷಿಸಿದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts