More

    ಡಿ.23ರಿಂದ ಸಂಗಮದಿಂದ ಪಾದಯಾತ್ರೆ

    ಬಾಗಲಕೋಟೆ: ರಾಜ್ಯದಲ್ಲಿ ಮೀಸಲಾತಿ ವಿಚಾರ ತಾರಕಕ್ಕೆ ಏರಿದ್ದು, ಇದೀಗ ಲಿಂಗಾಯತ ಪಂಚಾಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸಬೇಕು ಹಾಗೂ ಕೇಂದ್ರದಲ್ಲಿ ಲಿಂಗಾಯತ ಉಪ ಪಂಗಡಗಳನ್ನು ಒಬಿಸಿ ವರ್ಗಕ್ಕೆ ಸೇರ್ಪಡೆಗೊಳಿಸಬೇಕು ಎಂದು ಆಗ್ರಹಿಸಿ ಹೋರಾಟದ ರಣ ಕಹಳೆ ಮೊಳಗಿದೆ.

    ಮೀಸಲಾತಿ ವಿಚಾರ ಕುರಿತಂತೆ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ರಾಷ್ಟ್ರೀಯ ಕಾರ್ಯಕಾರಣಿ ಸಭೆಗೂ ಮುನ್ನ ಬಾಗಲಕೋಟೆ ನಗರದ ಖಾಸಗಿ ಹೋಟೆಲ್‌ನಲ್ಲಿ ಮಹಸಭಾ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಹಾಗೂ ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಜಂಟಿ ಸುದ್ದಿಗೋಷ್ಠಿ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಗುಡುಗಿದರು.

    1994ರಿಂದ ಮೀಸಲಾತಿಗಾಗಿ ಹೋರಾಟ ನಡೆಯುತ್ತಲೇ ಬಂದಿದೆ. ಎಲ್ಲ ಸರ್ಕಾರಗಳು ನಿರ್ಲಕ್ಷೃ ಧೋರಣೆ ಅನುರಿಸುತ್ತಲೇ ಇವೆ. ಹೀಗಾಗಿ ಬೆಳಗಾವಿಯಲ್ಲಿ ಅ. 28 ರಂದು ಸತ್ಯಾಗ್ರಹ ಮೂಲಕ ಹೋರಾಟ ಹಮ್ಮಿಕೊಳ್ಳಲಾಗಿತ್ತು. ಒಂದು ತಿಂಗಳು ಒಳಗಾಗಿ ತಮ್ಮ ಬೇಡಿಕೆ ಈಡೇರಿಸಲಾಗುತ್ತದೆ. ಉಪವಾಸ ಸತ್ಯಾಗ್ರಹ ಕೈಬಿಡುವಂತೆ ಸಿಎಂ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದ್ದರು. ಇದೀಗ ಗಡುವು ಮುಗಿದು ಹೋಗಿದೆ. ಸಿಎಂ ಬಿ.ಎಸ್.ಯಡಿಯೂರಪ್ಪ ವಚನ ಭ್ರಷ್ಟರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಕೇವಲ ಸಚಿವ ಸ್ಥಾನ, ನಿಗಮ ಮಂಡಳಿಯಲ್ಲಿ ಸಮಾಜಕ್ಕೆ ಅವಕಾಶ ನೀಡಿದರೆ ಪ್ರಯೋಜನವಿಲ್ಲ. ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಅಭಿವೃದ್ಧಿ ಹೊಂದಬೇಕಾದರೆ ಮೀಸಲಾತಿ ಅವಶ್ಯವಾಗಿಬೇಕು. ಮುಖ್ಯಮಂತ್ರಿಗಳ ಡೆಡ್‌ಲೈನ್ ಮುಗಿದು ಹೋಗಿದ್ದರಿಂದ ಹೋರಾಟ ಒಂದೇ ಉಳಿದಿರುವ ಮಾರ್ಗವಾಗಿದ್ದು, ಡಿ.23 ರಿಂದ ಕೂಡಲಸಂಗಮದಿಂದ ಪಾದಯಾತ್ರೆ ಮೂಲಕ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಕಲಾಗುವುದು. ರಾಜ್ಯ, ರಾಷ್ಟ್ರದಿಂದ 10 ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

    ವಿಜಯಾನಂದ ಕಾಶಪ್ಪನವರ ಮಾತನಾಡಿ, ಲಿಂಗಾಯತ ಸಮಾಜದಲ್ಲಿ 104 ಉಪ ಪಂಗಡಗಳು ಇವೆ. ಇದರಲ್ಲಿ ಕೆಲವು ಸಮಾಜಗಳಿಗೆ 2 ಎ ಮೀಸಲಾತಿ ಕಲ್ಪಿಸಲಾಗಿದೆ. ಲಿಂಗಾಯತ ಪಂಚಮಸಾಲಿ ಸಮುದಾಯ 2 ಎ ಮೀಸಲಾತಿಯಿಂದ ವಂಚಿತವಾಗಿದೆ. ಅಲ್ಲದೆ, ಎಲ್ಲ ಉಪ ಪಂಗಡಗಳನ್ನು ಕೇಂದ್ರದಲ್ಲಿ ಒಬಿಸಿ ಮೀಸಲಾತಿಯಲ್ಲಿ ಸೇರ್ಪಡೆಗೊಳಿಸಬೇಕು ಎನ್ನುವುದು ಅನೇಕ ವರ್ಷಗಳಿಂದ ನಡೆಯುತ್ತಿರುವ ಹೋರಾಟ. ಸಿಎಂ ಬಿ.ಎಸ್.ಯಡಿಯೂರಪ್ಪ ಲಿಂಗಾಯತ ಸಮುದಾಯದ ಅಗ್ರಗಣ್ಯ ನಾಯಕ. ಅವರು ಮಾತುಕೊಟ್ಟರೆ ಎಂದಿಗೂ ತಪ್ಪುವುದಿಲ್ಲ ಎನ್ನುವ ಭರವಸೆ ಸಮುದಾಯದಲ್ಲಿದೆ. ಈಗಲೂ ಕಾಲ ಮಿಂಚಿಲ್ಲ. ತಕ್ಷಣವೇ ಈ ಮೀಸಲಾತಿ ಕುರಿತು ದೃಢ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಅವರು, ಯಡಿಯೂರಪ್ಪ ಅವರನ್ನು ಹತ್ತಿಕ್ಕುವ ಪ್ರಯತ್ನ ನಡೆದರೆ ಬಿಜೆಪಿ ರಾಜ್ಯದಲ್ಲಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳಲಿದೆ ಎಂದು ಹೇಳಿದರು.

    ಸಮುದಾದ ಮುಖಂಡರಾದ ಮಲ್ಲಿಕಾರ್ಜುನ ಹಿರೇಕೊಪ್ಪ, ವಿಜಯ ಪೂಜಾರಿ, ಡಾ.ಶಿವಕುಮಾರ ಗಂಗಲ್, ಅಮರೇಶ ನಾಗೂರ, ಚನ್ನವೀರ ಅಂಗಡಿ, ಮಂಜುನಾಥ ಪುರತಗೇರಿ, ಸೋಮಶೇಖರ ಅಲ್ಯಾಳ ಸುದ್ದಿಗೋಷ್ಠಿಯಲ್ಲಿ ಇದ್ದರು.

    ಮೀಸಲಾತಿ ಕುರಿತು ಮಾಜಿ ಸಚಿವ ದಿ.ಎಸ್.ಆರ್.ಕಾಶಪ್ಪನವರ ಹೋರಾಟ ಕೈಗೊಂಡು ಅಂದಿನ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರಿಗೆ ಮನವಿ ಕೂಡ ಸಲ್ಲಸಿದ್ದರು. ಅಲ್ಲಿಂದ ಇಲ್ಲಿವರೆಗೂ ಬೇಡಿಕೆ ಈಡೇರಿಲ್ಲ. ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಅವಧಿಯಲ್ಲಿ ಬೇಡಿಕೆ ಈಡೇರುವ ಭರವಸೆ ಇದೆ.
    ಬಸವಜಯ ಮೃತ್ಯುಂಜಯ ಸ್ವಾಮೀಜಿ ಲಿಂಗಾಯತ ಪಂಚಮಸಾಲಿ ಪೀಠ ಕೂಡಲಸಂಗಮ





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts