More

    ಶ್ರೀಗಂಧ ಗಿಡದ ತುಂಡುಗಳು ಪತ್ತೆ…!

    ಅಶೋಕ ಶೆಟ್ಟರ
    ಬಾಗಲಕೋಟೆ:
    ಅಣ್ಣ ಬಸವಣ್ಣನ ಐಕ್ಯ ಮಂಟಪ ಇರುವ ಕೂಡಲ ಸಂಗಮದಲ್ಲಿ ಕಳ್ಳಕಾಕರ ಪಾಲಾಗಿವೆ ಎನ್ನಲಾದ ಶ್ರೀಗಂಧದ ಮರಗಳನ್ನು ಕತ್ತರಿಸಿದ ಕಾಂಡದ ತುಂಡುಗಳು ಅದೇ ಪೂಜಾವನದಲ್ಲಿ ಕಂಡು ಬಂದಿವೆ.

    ಕಳೆದ ವಾರವಷ್ಟೆ ಏಳು ಶ್ರೀಗಂಧದ ಮರಗಳನ್ನು ಯಾರೋ ದುಷ್ಕರ್ಮಿಗಳು ಯಂತ್ರಗಳ ಸಹಾಯದಿಂದ ತುಂಡರಿಸಿಕೊಂಡು ಹೋಗಿದ್ದರು. ಈ ಬಗ್ಗೆ ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರದ ಸಿಬ್ಬಂದಿ ಕ್ಯಾರೇ ಅಂದಿರಲಿಲ್ಲ.

    ಇದೀಗ 22 ಎಕರೆ ಇರುವ ಪೂಜಾವನದಲ್ಲಿ ಒಂದು ಕಡೆಗೆ ಶ್ರೀಗಂಧದ ಗಿಡಗಳ ತುಂಡುಗಳನ್ನು ತಪ್ಪಲಿನಲ್ಲಿ ಮುಚ್ಚಿಟ್ಟಿರುವುದನ್ನು ಸ್ಥಳೀಯರೇ ಕಂಡಿದ್ದಾಗಿ ಹೇಳುತ್ತಿದ್ದಾರೆ. ಸದ್ಯ ಒಂದು ಕಡೆಗೆ 11 ಗಿಡಗಳ ತುಂಡುಗಳು ಕಂಡಿದ್ದು, ಅವುಗಳ ಮೇಲೆ ಗಿಡದ ತಪ್ಪಲನ್ನು ಮುಚ್ಚಿದ್ದರು. ಸ್ಥಳೀಯರು ತಪ್ಪಲಿನ ಗುಂಪೆಯನ್ನು ಎಳೆದಾಗ ಕೆಳಗಡೆ ಶ್ರೀಗಂಧದ ತುಂಡುಗಳು ಇರುವುದು ಕಂಡು ಬಂದಿದೆ ಎಂದು ತಿಳಿದು ಬಂದಿದೆ.

    ಕೂಡಲಸಂಗಮದ ಪೂಜಾವನ ಸೇರಿ ಪ್ರಾಧಿಕಾರದ ವ್ಯಾಪ್ತಿಗೆ ಬರುವ ಪ್ರದೇಶದಲ್ಲಿ ಅಂದಾಜು 1200ಕ್ಕೂ ಅಧಿಕ ಶ್ರೀಗಂಧದ ಗಿಡಗಳು ಇನ್ನೂ ಉಳಿದುಕೊಂಡಿವೆ. ಕಳೆದ ವಾರ ಏಳು ಗಿಡಗಳನ್ನು ರಾತ್ರಿ ವೇಳೆ ಐದಾರು ಜನರ ಗುಂಪು ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬಂದು ಗಿಡಗಳನ್ನು ಯಂತ್ರಗಳ ಸಹಾಯದಿಂದ ಕತ್ತರಿಸಿಕೊಂಡು ಹೋಗಿದ್ದಾರೆ ಎಂದು ಹೇಳಲಾಗಿತ್ತು.

    ಆದರೆ, ಇದೀಗ ಅದೇ ಪೂಜಾವನದಲ್ಲಿ ಜನರು ಅಲೆದಾಡುತ್ತಿದ್ದಾಗ ಒಂದು ಕಡೆಗೆ 11 ಗಿಡಗಳ ತುಂಡುಗಳನ್ನು ಮುಚ್ಚಿಟ್ಟಿರುವುದು ಬೆಳಕಿಗೆ ಬಂದಿದೆ. ಆದರೆ, ಇದಕ್ಕೆ ಸಂಬಂಧಪಟ್ಟ ಪ್ರಾಧಿಕಾರದ ಸಿಬ್ಬಂದಿ ಮಾತ್ರ ಶ್ರೀಗಂಧದ ಗಿಡಗಳನ್ನು ಕತ್ತರಿಸಿಕೊಂಡು ಹೋಗಿರುವ ಬಗ್ಗೆಯಾಗಲಿ, ಇದೀಗ ದೂರದಲ್ಲಿ ಅವುಗಳನ್ನು ಬಚ್ಚಿಟ್ಟಿರುವ ಬಗ್ಗೆಯಾಗಲಿ ಯಾವುದೇ ಮಾಹಿತಿ ನೀಡಿಲ್ಲ.

    ಸಾರ್ವಜನಿಕರೇ ಅವುಗಳನ್ನು ಕಂಡಿದ್ದು, ಪ್ರಾಧಿಕಾರದ ಸಿಬ್ಬಂದಿ ಕನಿಷ್ಠ ಪಕ್ಷ ಅಲ್ಲಿ ಮುಚ್ಚಿಟ್ಟಿದ್ದ ಶ್ರೀಗಂಧದ ತುಂಡುಗಳನ್ನು ತಮ್ಮ ಸುಪರ್ಧಿಗೆ ತೆಗೆದುಕೊಳ್ಳುವ ಕೆಲಸವನ್ನು ಮಾಡಿಲ್ಲ ಎನ್ನುವುದು ಮಾತ್ರ ಅವರ ದಿವ್ಯ ನಿರ್ಲಕ್ಷ್ಯಕ್ಕೆ ಜೀವಂತ ಸಾಕ್ಷಿಯಾಗಿದೆ.

    ‘ವಿಜಯವಾಣಿ’ಯಲ್ಲಿ ಸಮಗ್ರ ವರದಿ
    ಕೂಡಲಸಂಗಮದಲ್ಲಿ ಇರುವ ಪೂಜಾವನ, ಗೆಸ್ಟ್ ಹೌಸ್, ಮೇನ್ ರೋಡ್, ದಾಸೋಹ ಭವನ, ಯಾತ್ರಿ ನಿವಾಸ ಸೇರಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಇರುವ 11385 ಗಿಡಮರಗಳು ಇದ್ದು, ಈ ಪೈಕಿ 1273 ಗಂಧದ ಗಿಡಗಳು ಉಳಿದುಕೊಂಡಿವೆ. ಈಗಾಗಲೇ ಅಂದಾಜು 500ಕ್ಕೂ ಹೆಚ್ಚು ಗಂಧದ ಗಿಡಗಳನ್ನು ಕಳ್ಳರು ಕಳುವು ಮಾಡಿದ್ದು, ಕಳೆದ ವಾರವಷ್ಟೆ ಏಳು ಗಿಡಗಳನ್ನು ಕತ್ತರಿಸಿಕೊಂಡು ಹೋಗಿದ್ದರೂ ಈ ಬಗ್ಗೆ ಪ್ರಾಧಿಕಾರ ದೂರು ಕೊಡುವ ಸೌಜನ್ಯಕ್ಕೂ ಹೋಗದೆ ಕುಂಭಕರ್ಣ ನಿದ್ದೆಗೆ ಜಾರಿದೆ ಎನ್ನುವ ಬಗ್ಗೆ ‘ವಿಜಯವಾಣಿ’ ಪತ್ರಿಕೆ ಅಕ್ಟೋಬರ್ 9ರಂದು ಸದ್ದಿಲ್ಲದೆ ‘ಶ್ರೀಗಂಧದ ಗಿಡ ನಾಪತ್ತೆ !’ ಶೀರ್ಷಿಕೆ ಅಡಿಯಲ್ಲಿ ಸಮಗ್ರ ವರದಿ ಬಿತ್ತರಿಸಿತ್ತು.

    ಅದರ ಬೆನ್ನಲ್ಲೇ ಇದೀಗ ಎಚ್ಚೆತ್ತುಕೊಂಡಿರುವ ಪ್ರಾಧಿಕಾರವೂ ಶ್ರೀಗಂಧದ ಗಿಡಗಳನ್ನು ಕತ್ತರಿಸಿಕೊಂಡು ಹೋಗಿರುವ ಬಗ್ಗೆ ಸಂಬಂಧಪಟ್ಟ ಪೊಲೀಸ್ ಠಾಣೆಗೆ ದೂರು ಕೊಡಲು ಮುಂದಾಗಿದೆ. ಇದರ ಜತೆಗೆ ಪೂಜಾವನದ ಒಂದು ಭಾಗದಲ್ಲಿ ಕತ್ತರಿಸಿರುವ ಕೆಲವು ಶ್ರೀಗಂಧ ಗಿಡದ ತುಂಡುಗಳು ಪತ್ತೆ ಆಗಿರುವುದು ಮತ್ತಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ.
    ಕಳ್ಳರು ಹೊರಗಿನವರೋ ಅಥವಾ ಒಳಗಿನವರೋ? ಪ್ರಾಧಿಕಾರದ ಯಾರಾದರೂ ಸಿಬ್ಬಂದಿ ಇದರಲ್ಲಿ ಭಾಗಿಯಾಗಿದ್ದಾರಾ? ಕತ್ತರಿಸಿರುವ ಶ್ರೀಗಂಧ ಗಿಡಗಳ ತುಂಡುಗಳನ್ನು ಬಚ್ಚಿಟ್ಟಿದ್ದಾೃರು? ಬಗ್ಗೆ ತನಿಖೆ ನಡೆಸಿದಾಗಲೇ ಸತ್ಯ ಬಹಿರಂಗವಾಗಲಿದೆ.

    ಕೂಡಲ ಸಂಗಮದಲ್ಲಿ ಶ್ರೀಗಂಧದ ಗಿಡಗಳನ್ನು ಕಳುವು ಮಾಡಿರುವುದು ಗಮನಕ್ಕೆ ಬಂದಿದೆ. ನಾನು ಆಯುಕ್ತರ ಹುದ್ದೆಗೆ ಇನ್ ಚಾರ್ಜ್ ಇದ್ದೇನೆ. ಗಂಧದ ಗಿಡಗಳ ಬಗ್ಗೆ ಮಾಹಿತಿ ಪಡೆದು, ಕಳ್ಳತನ ಮಾಡಿರುವ ಬಗ್ಗೆ ಪೊಲೀಸ್ ಠಾಣೆಗೆ ದೂರು ಕೊಡಲು ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ. ಕಳ್ಳರು ಯಾರು ಎನ್ನುವ ಬಗ್ಗೆ ಪತ್ತೆ ಮಾಡಲಾಗುವುದು. ಜತೆಗೆ ಅಲ್ಲಿ ರಾತ್ರಿ ಕಾವಲು ಬಿಗಿಗೊಳಿಸಲಾಗುವುದು. ಆರೋಪಿಗಳು ಹೊರಗಿನವರು, ಸ್ಥಳೀಯರು ಹಾಗೂ ಕೆಲವರು ಆರೋಪಿಸುವಂತೆ ಒಳಗಿನವರು ಇದ್ದರೂ ಸಹ ಆ ಬಗ್ಗೆ ಪತ್ತೆ ಮಾಡಿ ಅವರು ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಇದನ್ನು ಸಡಿಲು ಬಿಡುವ ಪ್ರಶ್ನೆಯೇ ಇಲ್ಲ.
    ಗಂಗಪ್ಪ ಪ್ರಭಾರ ಆಯುಕ್ತರು, ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts