More

    ತಡೆಗೋಡೆ ಕೈ ಬಿಡಿ ಭೂ ಸ್ವಾಧೀನ ಆರಂಭಿಸಿ

    ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆ ಯೋಜನೆ ಹಂತ ಮೂರಕ್ಕೆ ಸಂಬಂಧಿಸಿದಂತೆ ಸ್ಥಗಿತಗೊಂಡಿದ್ದ ಭೂ ಸ್ವಾಧೀನ ಪ್ರಕ್ರಿಯೆ ಪುನರಾರಂಭಿಸಿ ಕೂಡಲೇ ಅಧಿಸೂಚನೆಗೆ ಚಾಲನೆ ನೀಡಬೇಕು. ಮುಳಗಡೆಯಾಗುವ ಗ್ರಾಮಗಳಿಗೆ ತಡೆಗೋಡೆ ನಿರ್ಮಿಸುವ ಪ್ರಸ್ತಾಪ ಕೈಬಿಟ್ಟು, ಎಲ್ಲ 20 ಗ್ರಾಮಗಳಿಗೆ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕೈಗೊಳ್ಳಬೇಕು ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಯುಕೆಪಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಬುಧವಾರ ಕೃಷ್ಣಾ ಮೇಲ್ದಂಡೆ ಯೋಜನೆ ಪುನರ್ವಸತಿ, ಪುನರ್ ನಿರ್ಮಾಣ ಹಾಗೂ ಭೂ ಸ್ವಾಧೀನ ಹಾಗೂ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತಕ್ಕೆ ಮುಳುಗಡೆಯಾಗುವ 20 ಗ್ರಾಮಗಳನ್ನು ಸ್ಥಳಾಂತರ ಮಾಡಬೇಕಾಗುತ್ತದೆ. ಮಾ.31 ರೊಳಗಾಗಿ ಈ ಗ್ರಾಮಗಳ ಕಟ್ಟಡಗಳ ಜಂಟಿ ಸಮೀಕ್ಷೆ ಕೈಗೊಳ್ಳಬೇಕು. ಗ್ರಾಮಗಳ ಪುನರ್ವಸತಿ ಕೇಂದ್ರಗಳಿಗೆ ಅಗತ್ಯವಿರುವ ಭೂಮಿ ಸ್ವಾಧೀನ ಪಡಿಸಿಕೊಳ್ಳಲು ಅಧಿಸೂಚನೆ ಹೊರಡಿಸಬೇಕು ಎಂದರು.

    ಈಗಾಗಲೇ 20 ಗ್ರಾಮಗಳ ಪೈಕಿ 11 ಗ್ರಾಮಗಳಿಗೆ ತಡೆಗೋಡೆ ನಿರ್ಮಿಸಲು ಈ ಹಿಂದಿನ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಅದನ್ನು ಕೂಡಲೇ ವಾಪಸ್ ಪಡೆಯಬೇಕು. ಯುಕೆಪಿಯಲ್ಲಿ 855 ಹುದ್ದೆಗಳ ಪೈಕಿ 460 ವಿವಿಧ ಹುದ್ದೆ ಖಾಲಿ ಇದ್ದು, ಶೀಘ್ರದಲ್ಲಿ ಭರ್ತಿ ಮಾಡಲಾಗುವುದು ಎಂದರು.

    ಯುಕೆಪಿ ಇಂಜಿನಿಯರ್ ಹನುಮಂತಪ್ಪ ದಾಸರ ಮಾತನಾಡಿ, ಕುಂದರಗಿ ಗ್ರಾಮದಲ್ಲಿ ಕೈಗೊಳ್ಳಲಾದ ಜಂಟಿ ಸಮೀಕ್ಷೆಯಲ್ಲಿ ಹಲವು ನ್ಯೂನ್ಯತೆಗಳು ಕಂಡು ಬಂದಿವೆ. ಹಿನ್ನೀರಿನಿಂದ 184 ತೋಟದ ಮನೆಗಳು ಮುಳುಗಡೆಯಾಗುವುದಿಲ್ಲ. ಅವುಗಳನ್ನು ಕೂಡ ಮುಳುಗಡೆಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿದೆ. ಕೆಲವರು ಮುಳುಗಡೆಯಿಂದ ಹೆಚ್ಚಿನ ಪರಿಹಾರ ದೊರೆಯುತ್ತದೆ ಎನ್ನುವ ಕಾರಣಕ್ಕೆ ಮಣ್ಣಿನ ಗೋಡೆಗಳಿಗೆ ಸಿಮೆಂಟ್‌ನಿಂದ ಪ್ಯಾಚ್ ವರ್ಕ್ ಮಾಡಿದ್ದಾರೆ. ಇದರಿಂದ ಸರ್ಕಾರಕ್ಕೆ ನಷ್ಟವಾಗಲಿದೆ ಎಂದರು.

    ಈ ವೇಳೆ ಡಿಸಿಎಂ ಗೋವಿಂದ ಕಾರಜೋಳ ಪ್ರತಿಕ್ರಿಯೆ ನೀಡಿ, ಭೂಮಿ, ಕಟ್ಟಡಗಳ ಸ್ವಾಧೀನದಿಂದ ಸರ್ಕಾರಕ್ಕೆ, ಸಂತ್ರಸ್ತರಿಗೆ ನಷ್ಟವಾಗಬಾರದು. ಮತ್ತೊಮ್ಮೆ ಜಂಟಿ ಸಮೀಕ್ಷೆ ಕೈಗೊಂಡು ಅಂತಿಮ ವರದಿ ಸಲ್ಲಿಸಬೇಕು. ಉದಾರವಾಗಿ ನಡೆದುಕೊಳ್ಳಬೇಕು ಎಂದು ಸೂಚನೆ ನೀಡಿದರು.

    ಬಿಟಿಡಿಎ ನೀರಾವರಿ ಇಲಾಖೆಗೆ ಹಸ್ತಾಂತರ
    ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಟಿಡಿಎ) 577 ಕೋಟಿ ರೂ. ಕೆಬಿಜೆಎನ್‌ಎಲ್‌ನಿಂದ ಬಿಡುಗಡೆಯಾಗಿದೆ. ಈ ಪೈಕಿ 236 ಕೋಟಿ ರೂ. ಖರ್ಚಾಗಿದೆ. 96 ಕೋಟಿ ರೂ. ನವನಗರದ ಯೂನಿಟ್ 3 ಕಾಮಗಾರಿಗೆ ಮೀಸಲಿಡಲಾಗಿದೆ ಎಂದು ಬಿಟಿಡಿಎ ಮುಖ್ಯ ಇಂಜಿನಿಯರ್ ಅಶೋಕ ವಾಸನದ ತಿಳಿಸುತ್ತಿದ್ದಂತೆ ಡಿಸಿಎಂ ಗೋವಿಂದ ಕಾರಜೋಳ ಬಿಟಿಡಿಎ ಅಧಿಕಾರಿಗಳ ಕಾರ್ಯನಿರ್ವಹಣೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕೊಟ್ಟಿರುವ ಹಣ ಬಳಕೆ ಮಾಡುತ್ತಿಲ್ಲ ಅಂದರೇ ಏನರ್ಥ? ಎಂದು ಪ್ರಶ್ನಿಸಿದರು.

    ಈ ವೇಳೆ ಮುಖ್ಯ ಇಂಜಿನಿಯರ್ ಅಶೋಕ ಪ್ರಕ್ರಿಯೆ ನೀಡಿ, ನಾವು ಸಿದ್ಧಪಡಿಸಿದ ಕ್ರಿಯಾ ಯೋಜನೆಗೆ 10 ಲಕ್ಷ ರೂ. ವರೆಗೆ ಮಂಜೂರಾತಿ ನೀಡಲು ನಮಗೆ ಅಧಿಕಾರವಿದೆ. ಉಳಿದಿದ್ದು ಕೆಬಿಜೆಎನ್‌ಎಲ್ ವ್ಯವಸ್ಥಾಪಕರ ಅನುಮತಿ ಬೇಕಾಗುತ್ತದೆ. ಅಲ್ಲಿ ನಿಧಾನಗತಿ ಕೆಲಸ ಆಗುತ್ತಿರುವ ಕಾರಣ ಅನುದಾನ ಬಳಕೆಯಾಗುತ್ತಿಲ್ಲ. ಅಲ್ಲದೆ, ಯೂನಿಟ್ 3 ನಿರ್ಮಾಣಕ್ಕೆ ನಕ್ಷೆ ಸಿದ್ಧವಾಗಿದ್ದು, ಅನುಮತಿಗಾಗಿ ನಗರ ಯೋಜನಾ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಆದರೆ, ನಿಯಮವಾಳಿಯಂತೆ 12.22 ಕೋಟಿ ರೂ. ಪ್ರಾಧಿಕಾರಕ್ಕೆ ಪಾವತಿಸಬೇಕಿದೆ. ಸರ್ಕಾರದ ಮಟ್ಟದಲ್ಲಿ ಇದಕ್ಕೆ ವಿನಾಯಿತಿ ನೀಡಬೇಕು ಎಂದು ಮನವಿ ಮಾಡಿದರು.

    ಇದಕ್ಕೆ ಸಹಮತ ವ್ಯಕ್ತಪಡಿಸಿದ ಡಿಸಿಎಂ ಕಾರಜೋಳ, ತಮ್ಮ ಬೇಡಿಕೆಯಂತೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿ ತಕ್ಷಣವೇ ಸಂಬಂಧಪಟ್ಟ ಪೌರಾಡಳಿತ ಹಾಗೂ ಕೆಬಿಜೆಎನ್‌ಎಲ್ ಹಿರಿಯ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕ ಮಾಡಿ ಈ ಬಗ್ಗೆ ಗಮನ ಹರಿಸಲು ಖಡಕ್ ಸೂಚನೆ ನೀಡಿದರು. ಅಲ್ಲದೆ, ಕೆಬಿಜೆಎನ್‌ಎಲ್‌ನಿಂದ ಬಿಟಿಡಿಎ ನೀರಾವರಿ ಇಲಾಖೆ ಹಸ್ತಾಂತರ ಮಾಡಲು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಪ್ರಕಟಿಸಿದರು.

    ಅಲ್ಲದೆ, ಬಳಕೆ ಮಾಡದೆ ಉಳಿದ ಹಣವನ್ನು ಲ್ಯಾಪ್ಸ್ ಆಗದಂತೆ ನೋಡಿಕೊಳ್ಳಬೇಕು. ಭೂ ಸ್ವಾಧೀನಕ್ಕೆ ಪರಿಹಾರ ನೀಡಲು ಅಗತ್ಯವಿದೆ ಎಂದು ನಿರ್ಧರಿಸಿ ಬ್ಯಾಂಕ್‌ನಲ್ಲಿ ಠೇವಣಿ ಇಡಬೇಕು ಎಂದು ಮುಖ್ಯಲೆಕ್ಕಾಧಿಕಾರಿ ಶಾಂತಾ ಕಡಿ ಅವರಿಗೆ ಕಾರಜೋಳ ಸೂಚಿಸಿದರು.

    ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ರಾಜೇಂದ್ರ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಂಗೂಬಾಯಿ ಮಾನಕರ, ಅಪರ ಜಿಲ್ಲಾಕಾರಿ ಮಹಾದೇವ ಮುರಗಿ, ಉಪವಿಭಾಗಾಧಿಕಾರಿ ಎಂ.ಗಂಗಪ್ಪ ಸೇರಿದಂತೆ ಯುಕೆಪಿ, ಬಿಟಿಡಿಎ ಅಧಿಕಾರಿಗಳು ಹಾಗೂ ಅಭಿಯಂತರರು ಉಪಸ್ಥಿತರಿದ್ದರು.

    ಕೃಷ್ಣಾ ಮೇಲ್ದಂಡೆ ಯೋಜನೆ 1 ಮತ್ತು 2 ಹಂತದಲ್ಲಿ ನಿರ್ಮಾಣವಾಗಿರುವ 137 ಪುನರ್ವಸತಿ ಕೇಂದ್ರಗಳ ಪೈಕಿ 131 ಕೇಂದ್ರಗಳನ್ನು ಈವರೆಗೆ ಆಯಾ ಜಿಲ್ಲಾ ಪಂಚಾಯಿತಿಗೆ ಹಸ್ತಾಂತರ ಮಾಡಲಾಗಿದೆ. 6 ಕೇಂದ್ರಗಳು ಬಾಕಿ ಉಳಿದಿವೆ. ಈ ಪುನರ್ವಸತಿ ಕೇಂದ್ರಗಳ ಅಭಿವೃದ್ಧಿಗೆ ಬಾಗಲಕೋಟೆ ಜಿಪಂ 110 ಕೋಟಿ ರೂ. ನೀಡಲಾಗಿದೆ. ಉಳಿದ ಹಣವನ್ನು ವಿಜಯಪುರ, ಬೆಳಗಾವಿ ಜಿಪಂಗೆ ಜಮೆ ಮಾಡಲಾಗಿದೆ ಎಂದು ಯುಕೆಪಿ ಅಧಿಕಾರಿಗಳು ತಿಳಿಸಿದರು.

    ಈ ವೇಳೆ ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ಪುನರ್ವಸತಿ ಕೇಂದ್ರಗಳ ಪರಿಸ್ಥಿತಿ ಹದಗೆಟ್ಟು ಹೋಗಿವೆ. ಗ್ರಾಮ ಪಂಚಾಯಿತಿಯಿಂದ ಅವುಗಳ ನಿರ್ವಹಣೆ ಮಾಡಲು ಸಾಧ್ಯವಿಲ್ಲ. ಜಿಪಂಗಳಿಂದ ವಾಪಸ್ ಪಡೆದುಕೊಳ್ಳಬೇಕು. ನಗರ ಪ್ರದೇಶಗಳಿಗೆ ಹೊಂದಿಕೊಂಡು ಕೆಲವು ಪುನರ್ವಸತಿ ಕೇಂದ್ರಗಳು ನಿರ್ಮಾಣವಾಗಿವೆ. ಅವುಗಳಿಗೆ ಶಾಶ್ವತ ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.

    ಇದಕ್ಕೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಗೋವಿಂದ ಕಾರಜೋಳ ಒಳಚರಂಡಿ, ಕುಡಿಯುವ ನೀರು ಕಲ್ಪಿಸುವ ಬಗ್ಗೆ ಕ್ರಿಯಾ ಯೋಜನೆ ರೂಪಿಸಿ ಪ್ರಸ್ತಾವಣೆ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಪಂಚಾಯಿತಿಗಳಿಗೆ ಪುನರ್ ಕೇಂದ್ರಗಳು ಹಸ್ತಾಂತರವಾದ ಬಳಿಕ ಅಭಿವೃದ್ಧಿ ಮರೀಚಿಕೆಯಾಗಿದೆ. ಇನ್ನು ಕೆಲವು ಪಿಡಿಒಗಳು ವ್ಯಾಪಕ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಸಿ ಒಂದು ಪುನರ್ ವಸತಿ ಕೇಂದ್ರದಿಂದ ಇನ್ನೊಂದು ಕೇಂದ್ರಕ್ಕೆ ನಿವೇಶನ ಬದಲಾವಣೆ ಮಾಡುತ್ತಿದ್ದಾರೆ. ಈ ಬಗ್ಗೆ ತನಿಖೆ ನಡೆಸಬೇಕು. ಇಲ್ಲವಾದಲ್ಲಿ ಅನ್ಯಾಯವಾಗಲಿದೆ.
    ವೀರಣ್ಣ ಚರಂತಿಮಠ ಶಾಸಕ ಬಾಗಲಕೋಟೆ





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts