More

    ಜನರ ದಿಕ್ಕು ತಪ್ಪಿಸಬೇಡಿ

    ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಪೂರ್ಣಗೊಳಿಸಲಾಗುತ್ತದೆ, ರಾಷ್ಟ್ರೀಯ ಯೋಜನೆಯಾಗಿ ಘೋಷಣೆ ಮಾಡಬೇಕು ಎನ್ನುವ ಹೇಳಿಕೆಯನ್ನು ಜನಪ್ರತಿನಿಧಿಗಳು ನೀಡಿ ಜನರ ದಾರಿ ತಪ್ಪಿಸಬಾರದು ಎಂದು ಕೃಷ್ಣಾ ಮೇಲ್ದಂಡೆ ಯೋಜನೆ ಬಾಧಿತ ಸಂತ್ರಸ್ತರ ಹೋರಾಟ ಸಮಿತಿ ಮುಖಂಡ ಪ್ರಕಾಶ ಅಂತರಗೊಂಡ ಆಗ್ರಹಿಸಿದರು.

    ಕೃಷ್ಣಾ ಮೇಲ್ದಂಡೆ ಯೋಜನೆ ಈಗಾಗಲೇ ಶೇ.80 ರಷ್ಟು ಪೂರ್ಣಗೊಂಡಿದೆ. ಶೇ.20 ರಷ್ಟು ಮಾತ್ರ ಬಾಕಿ ಉಳಿದಿದೆ. ರಾಷ್ಟ್ರೀಯ ಯೋಜನೆಯಾಗಿ ಘೋಷಣೆ ಮಾಡಿ ನಮ್ಮ ಪಾಲಿನ ನೀರಿನ ಹಕ್ಕು ಕೇಂದ್ರಕ್ಕೆ ಬಿಟ್ಟುಕೊಡುವುದು ಸಮಂಜಸವಲ್ಲ. ಇದನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಿದರೆ ಬೃಹತ್ ಹೋರಾಟ ಮಾಡಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.

    1 ನೇ ಹಂತದ ನಾರಾಯಣಪುರದ ಬಸವಸಾಗರ ಜಲಾಶಯ, 2 ನೇ ಹಂತದ 519.6 ಮೀಟರ್ ಆಲಮಟ್ಟಿ ಜಲಾಶಯ, 3 ನೇ ಹಂತದಲ್ಲಿ 9 ಏತ ನೀರಾವರಿ ಯೋಜನೆಗಳು ಭಾಗಶಃ ಪೂರ್ಣಗೊಂಡಿವೆ. ಇದೆಲ್ಲ ಗಮನಿಸಿದರೆ ಶೇ.80 ರಷ್ಟು ಕೃ.ಮೇ.ಯೋ ಪೂರ್ಣಗೊಂಡಿದೆ. ಹೀಗಿರುವಾಗ ಇದನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಣೆ ಮಾಡುವುದು ಯಾವುದೇ ಅರ್ಥವಿಲ್ಲ. 1ಮತ್ತು 2 ನೇ ಹಂತದಲ್ಲಿ ಮುಳುಗಡೆಯಾದ 3.76 ಲಕ್ಷ ಎಕರೆಗೆ ಪರಿಹಾರ ನೀಡಿ 176 ಗ್ರಾಮಗಳ ಸ್ಥಳಾಂತರ ಮಾಡಿ ಪುನರ್ವಸತಿ ಕಲ್ಪಿಸಲಾಗಿದೆ. 3 ನೇ ಹಂತಕ್ಕೆ ಕೇವಲ 1 ಲಕ್ಷ 23 ಸಾವಿರ ಎಕರೆ ಸ್ವಾಧೀನಪಡಿಸಿಕೊಂಡು ಪರಿಹಾರ ನೀಡಬೇಕಾಗಿದೆ. ನೋಂದಣಿ ಕಚೇರಿ ಬೆಲೆ ಆಧಾರ ಮೇಲೆ ಪರಿಹಾರ ನೀಡಿದಲ್ಲಿ 12 ಸಾವಿರ ಕೋಟಿ ರೂ. ಖರ್ಚು ಆಗುತ್ತದೆ. ವಾಸ್ತವ ಮಾರುಕಟ್ಟೆ ಬೆಲೆ ಮೇಲೆ ಪರಿಹಾರ ನೀಡಿದಲ್ಲಿ 30 ಸಾವಿರ ಕೋಟಿ ರೂ. ಬೇಕಾಗುತ್ತದೆ. ರೈತರ ಬೇಡಿಕೆ ಪ್ರಕಾರ 40 ಸಾವಿರ ಕೋಟಿ ರೂ. ಬೇಕಾಗುತ್ತದೆ. ಅಪಾರ ಪ್ರಮಾಣದ ಹಣ ಬೇಕು ಎಂದು ಅಪಪ್ರಚಾರ ಮಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    2010 ರಲ್ಲಿ ಬಚಾವತ್ ಆಯೋಗ ತೀರ್ಪು ಬಂದಿತು. 10 ವರ್ಷ ಗತಿಸಿದರೂ ಯಾವ ಸರ್ಕಾರಗಳು ಈ ಬಗ್ಗೆ ಗಮನ ಹರಿಸಿಲ್ಲ. ಅವಳಿ ಜಿಲ್ಲೆಯ ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳು ಹೋರಾಟ ಸಮಿತಿ ಮುಖಂಡರು ಸಹ ಕೂಲಂಕುಷವಾಗಿ ಅವಲೋಕನ ಮಾಡುತ್ತಿಲ್ಲ. ತಪ್ಪು ಸಂದೇಶ ನೀಡಿ ಯೋಜನೆ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸಲಾಗುತ್ತಿದೆ. ಸರ್ಕಾರ ನೇರವಾಗಿ ಸಂತ್ರಸ್ತರೊಂದಿಗೆ ಚರ್ಚೆ ನಡೆಸಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

    ಮುಖಂಡರಾದ ಸಿದ್ದು ಗಿರಗಾಂವಿ, ಹನುಮಂತಗೌಡ ಪಾಟೀಲ, ಟಿ.ಆರ್.ಪಾಟೀಲ, ಗೋವಿಂದ ಪಾಟೀಲ ಸುದ್ದಿಗೋಷ್ಠಿಯಲ್ಲಿ ಇದ್ದರು.

    ಮೆಟ್ರೋಗೆ ಹಣ ಕೊಡ್ತೀರಾ ಇದಕ್ಕೆ ಯಾಕೆ ನಿರ್ಲಕ್ಷೃ ?
    ಬೆಂಗಳೂರು ಮೆಟ್ರೋಗೆ ಸಾವಿರಾರು ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಆದರೆ, ಕೃಷ್ಣಾ ಮೇಲ್ದಂಡೆ ಯೋಜನೆಗೆ ಹಣ ನೀಡಲು ಯಾಕೆ ಮಲತಾಯಿ ಧೋರಣೆ? ಬಜೆಟ್‌ನ ಶೇ.10 ರಷ್ಟು ಹಣವನ್ನು ಪ್ರತಿವರ್ಷ ಕೃಷ್ಣಾ ಮೇಲ್ದಂಡೆ ಯೋಜನೆಗೆ ಮೀಸಲಿಟ್ಟು ಕಾಲಮಿತಿಯೊಳಗೆ ಯೋಜನೆ ಪೂರ್ಣಗೊಳಿಸಬೇಕು ಎಂದು ಮುಖಂಡ ಕಿರಣ ಬಾಳಾಗೋಳ ಒತ್ತಾಯಿಸಿದರು.

    ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಂಡಲ್ಲಿ 3 ಕೋಟಿ ಜನರ ಭವಿಷ್ಯ ಉಜ್ವಲವಾಗುತ್ತದೆ. ಸರ್ಕಾರ ಉತ್ತರ ಕರ್ನಾಟಕ ಜನರನ್ನು 2ನೇ ದರ್ಜೆ ಪ್ರಜೆಯಾಗಿ ನೋಡದೆ ಈ ಭಾಗದ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ನೀರಿನ ಗೆಜೆಟ್ ಜಾರಿ ಮಾಡಿ ಯೋಜನೆ ಪೂರ್ಣಗೊಳಿಸಬೇಕು.
    ಪ್ರಕಾಶ ಅಂತರಗೊಂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts