More

    21 ಕಿಡಿಗೇಡಿಗಳ ಬಂಧನ

    ಬಾಗಲಕೋಟೆ/ಜಮಖಂಡಿ: ಜಮಖಂಡಿ ನಗರದಲ್ಲಿ ಶುಕ್ರವಾರ ರಂಜಾನ್ ವೇಳೆ ಒಂದೆಡೆ ಗುಂಪು ಸೇರಿದ್ದ ಜನರಿಗೆ ಲಾಕ್‌ಡೌನ್‌ನಲ್ಲಿ ಗುಂಪು ಸೇರಬೇಡಿ, ಮಾಸ್ಕ್ ಹಾಕಿಕೊಳ್ಳಿ, ಮನೆಗೆ ಹೋಗಿ ಎಂದು ತಿಳಿ ಹೇಳಿದ ಪೊಲೀಸ್ ಕಾನ್ಸ್‌ಟೆಬಲ್ ಮೇಲೆ ದಾಳಿ ನಡೆಸಿ, ಹಲ್ಲೆ ಮಾಡಲಾಗಿದೆ.

    ನಗರದ ಹನುಮಾನ್ ಚೌಕ್‌ನಲ್ಲಿ ರಂಜಾನ್ ಪ್ರಾರ್ಥನೆಗಾಗಿ ಕೋವಿಡ್ ನಿಯಮ ಮೀರಿ ಜನರು ಗುಂಪು ಸೇರಿದ್ದರು. ಅಲ್ಲಿ ಕರ್ತವ್ಯಕ್ಕಿದ್ದ ಪೊಲೀಸ್ ಪೇದೆ ಮಲ್ಲು ನಿಂಗವ್ವಗೋಳ ಕೋವಿಡ್ ನಿಯಮ ಉಲ್ಲಂಘಿಸಬೇಡಿ ಎಂದು ಜನರಿಗೆ ತಿಳಿಹೇಳಿದ್ದಾರೆ. ಆಗ ಕೆಲವರು ಪೊಲೀಸ್ ಜತೆ ವಾಗ್ವಾದ ಆರಂಭಿಸಿದ್ದಾರೆ. ಈ ವೇಳೆ ಕಾನ್ಸ್‌ಟೆಬಲ್ ತನ್ನ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿಕೊಳ್ಳುತ್ತಿರುವುದನ್ನು ಕಂಡು ಒಂದು ಗುಂಪು ಅವರ ಮೇಲೆಯೇ ಎರಗಿಹೋಗಲು ಮುಂದಾಗಿದೆ.

    ಗುಂಪು ಸೇರಿ ಆವಾಜ್ ಹಾಕುತ್ತ ಮುಂದೆ ಬರುವುದನ್ನು ಕಂಡ ಮಲ್ಲು ಅವರು ಅಲ್ಲಿಂದ ಓಡಲು ಆರಂಭಿಸಿದ್ದಾರೆ. ಆಗ ಕಾನ್ಸ್‌ಟೆಬಲ್‌ನನ್ನು ಬೆನ್ನಟ್ಟಿ, ಕೂಗಾಡುತ್ತ, ಚೀರುತ್ತ ಅವರ ಮೇಲೆ ದಾಳಿ ಮಾಡಿದ್ದಾರೆ. ಕೆಲ ಕಿಡಿಗೇಡಿಗಳು ಪೊಲೀಸ್ ಸಮವಸ್ತ್ರದ ಮೇಲೆ, ಕರ್ತವ್ಯದಲ್ಲಿ ಇದ್ದಾರೆ ಎನ್ನುವುದನ್ನು ಮರೆತು ಗುಂಡಾಗಳಂತೆ ಹಲ್ಲೆ ನಡೆಸಿದ್ದಾರೆ.

    ವಿಷಯ ತಿಳಿಯುತ್ತಿದ್ದಂತೆ ಜಮಖಂಡಿ ಪೊಲೀಸರು, ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ್, ಡಿವೈಎಸ್‌ಪಿ ಎಂ. ಪಾಂಡುರಂಗಯ್ಯ ಸಹ ಸ್ಥಳಕ್ಕೆ ದೌಡಾಯಿಸಿ ಸ್ಥಳ ಪರಿಶೀಲಿಸಿದ್ದಾರೆ.

    ಇನ್ನು ಕರೊನಾ ವಾರಿಯರ್, ಕರ್ತವ್ಯದ ಮೇಲೆ ಇದ್ದಾಗ ದಾಳಿ, ಹಲ್ಲೆ ನಡೆಸಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದು, ದಾಳಿಯ ವಿಡಿಯೋ ವೀಕ್ಷಿಸಿ ಆರೋಪಿಗಳನ್ನು ಹೆಡಮುರಿ ಕಟ್ಟಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಜೆವರೆಗೂ 21 ಜನ ಅರೋಪಿಗಳನ್ನು ಬಂಧಿಸಿದ್ದು, ಇನ್ನು ಕೆಲವರು ಅಡಗಿಸಿಕೊಂಡಿದ್ದು, ಅವರನ್ನು ಜಾಲಾಡುತ್ತಿದ್ದಾರೆ.
    ಇದೀಗ ಸ್ಥಳದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಕಲ್ಪಿಸಿದ್ದು, ಪರಿಸ್ಥಿತಿ ಸಂಪೂರ್ಣ ಶಾಂತವಾಗಿದೆ. ಆರೋಪಿಗಳ ವಿರುದ್ಧ ಕೋವಿಡ್, ಲಾಕ್‌ಡೌನ್ ನಿಯಮ ಉಲ್ಲಂಘನೆ, ಕರ್ತವ್ಯನಿರತ ಪೊಲೀಸ್ ಕಾನ್ಸ್‌ಟೆಬಲ್ ಮೇಲೆ ಹಲ್ಲೆ, ಕರ್ತವ್ಯಕ್ಕೆ ಅಡ್ಡಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಎಸ್ಪಿ ಲೋಕೇಶ್ ಜಗಲಾಸರ್ ತಿಳಿಸಿದ್ದಾರೆ.

    ಸಿಪಿಐ ಐ.ಎಂ.ಮಠಪತಿ, ನಗರ ಠಾಣೆಯ ಪಿಎಸ್‌ಐ ಗೋವಿಂದಗೌಡ ಪಾಟೀಲ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ಒದಗಿಸಿದ್ದಾರೆ.

    ಕರ್ತವ್ಯನಿತರ ಪೊಲೀಸ್ ಕಾನ್ಸ್‌ಟೆಬಲ್ ಮೇಲೆ ಹಲ್ಲೆ ನಡೆಸಿರುವುದನ್ನು ಸಹಿಸಲು ಸಾಧ್ಯವಿಲ್ಲ. ಇಂತಹ ಪುಂಡರ ಬಗ್ಗೆ ತಾಳ್ಮೆ, ಸಿಂಪಥಿ ವಹಿಸಲು ಆಗಲ್ಲ. ಆರೋಪಿಗಳನ್ನು ಬಂಧಿಸಿದ್ದು, ಇನ್ನಷ್ಟು ಜನರು ಎಲ್ಲೆ ಅಡಗಿದ್ದರೂ ಅವರನ್ನು ಸಹ ಬಂಧಿಸಲಾಗುವುದು. ಸಾರ್ವಜನಿಕರ ಜೀವ ರಕ್ಷಣೆಗಾಗಿ ಹಗಲಿರಳು ಕೆಲಸ ಮಾಡುವ ಕರೊನಾ ವಾರಿಯರ್ ಮೇಲೆ ಹಲ್ಲೆ, ದಾಳಿ ನಡೆಸುವುದನ್ನು ಗಂಭೀರವಾಗಿ ಪರಿಗಣಿಸಿ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು.
    ಲೋಕೇಶ್ ಜಗಲಾಸರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಬಾಗಲಕೋಟೆ

    ಮಾಜಿ ಶಾಸಕರಿಂದ ಖಂಡನೆ
    ದಿನದಿಂದ ದಿನಕ್ಕೆ ವ್ಯಾಪಕವಾಗಿ ಕರೊನಾ ಸೋಂಕು ಹರಡುತ್ತಿರುವ ಹಿನ್ನ್ನೆಲೆಯಲ್ಲಿ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿ ಪರಸ್ಪರ ಅಂತರ ಕಾಯ್ದುಕೊಳ್ಳುವಲ್ಲಿ ಸರ್ಕಾರ ಈ ಲಾಕ್‌ಡೌನನ್ನು ಘೋಷಿಸಿದಾಗ ಪೊಲೀಸ್ ಇಲಾಖೆ ಹಗಲು ರಾತ್ರಿ ಎನ್ನದೆ ಕರ್ತವ್ಯ ನಿರ್ವಹಿಸುತ್ತಿರುವಾಗ ಕೆಲ ಯುವಕರು ಪೇದೆ ಮೇಲೆ ಹಲ್ಲೆ ಮಾಡಿರುವ ಘಟನೆ ಖಂಡನೀಯ. ಇಂತಹ ಗುಂಡಾಗಿರಿ ಪ್ರವೃತ್ತಿಯನ್ನು ಸರ್ಕಾರ ಸಹಿಸದೆ ಅಗತ್ಯ ಕ್ರಮ ಕೈಗೊಂಡು ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಆಗ್ರಹಿಸಿದ್ದಾರೆ

    
    
    Community-verified icon

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts