More

    ಮಾಜಿ ಶಾಸಕನ ಮೇಲೆ ಎಫ್‌ಐಆರ್

    ಬಾಗಲಕೋಟೆ: ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವುದು, ಅಧಿಕಾರಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ಹಾಗೂ ಪ್ರಕರಣ ತನಿಖೆಗೆ ಅಡಚಣೆ ಮಾಡಿರುವ ಆರೋಪದ ಮೇಲೆ ಹುನಗುಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ವಿರುದ್ಧ ಇಳಕಲ್ಲ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

    ಆದರೆ, ತಮ್ಮ ಮೇಲೆ ದಾಖಲಾಗಿರುವ ಪ್ರಕರಣದ ಹಿಂದೆ ಶಾಸಕ ದೊಡ್ಡನಗೌಡ ಪಾಟೀಲ ಅವರ ಕುತಂತ್ರ ಇದೆ. ಗ್ರಾಮ ಪಂಚಾಯಿತಿ ಚುನಾವಣೆ ನಾನು ಮಾಡಬಾರದು ಎಂದು ಈ ರೀತಿ ಸುಳ್ಳು ಕೇಸ್ ಹಾಕುತ್ತಿದ್ದಾರೆ. ಇದಕ್ಕೆ ಚುನಾವಣೆಯಲ್ಲಿ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಕಾಶಪ್ಪನವರ ಪ್ರಕರಣದ ಬಗ್ಗೆ ತಿರುಗೇಟು ನೀಡಿದ್ದಾರೆ.

    ಇತ್ತೀಚಿಗೆ ಸಂಭವಿಸಿದ್ದ ಕೊಲೆ ಶಂಕೆಯ ಪ್ರಕರಣದಲ್ಲಿ ಆರೋಪಿಗಳಿಗೆ ಜಾಮೀನು ಸಿಕ್ಕಿದ್ದರೂ ಪೊಲೀಸರು ವಿಚಾರಣೆ ನೆಪದಲ್ಲಿ ತೊಂದರೆ ಕೊಡುತ್ತಿದ್ದಾರೆ ಎಂದು ಕಾಶಪ್ಪನವರ ಆರೋಪಿಸಿದ್ದರು. ಮುಂದುವರಿದು ಗುರುವಾರ ಇಳಕಲ್ಲ ಪೊಲೀಸ್ ಠಾಣೆಗೆ ತೆರಳಿದ್ದ ಅವರು ಪೊಲೀಸರ ಜತೆ ವಾಗ್ವಾದ ನಡೆಸಿದ್ದರು.

    ಈ ವೇಳೆ ಕಾಶಪ್ಪನವರ ಸಿಪಿಐ ವಿರುದ್ಧ ಏಕವಚನದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ, ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಹಾಗೂ ಪ್ರಕರಣ ತನಿಖೆಗೆ ಅಡಚಣೆ ಮಾಡಿದ್ದಾರೆ ಎಂದು ಸಿಪಿಐ ಅಯ್ಯನಗೌಡ ಪಾಟೀಲ ದೂರು ದಾಖಲಿಸಿದ್ದಾರೆ.

    ಇತ್ತೀಚಿಗೆ ಇಳಕಲ್ಲ ನಗರದಲ್ಲಿ ಡಿಸಿಸಿ ಬ್ಯಾಂಕ್ ಪಿಗ್ಮಿ ಏಜೆಂಟ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಅದು ಕೊಲೆ ಎಂದು ಸಹ ಆರೋಪಿಸಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಕೆಲವರ ವಿರುದ್ಧ ಪ್ರಕರಣ ಸಹ ದಾಖಲಾಗಿ ವಿಚಾರಣೆ ನಡೆದಿತ್ತು. ಆರೋಪಿಗಳು ಜಾಮೀನು ಪಡೆದಿದ್ದರೂ ಅವರನ್ನು ಬಿಡುಗಡೆ ಮಾಡದೆ ಅನಗತ್ಯವಾಗಿ ವಿಚಾರಣೆ ಹೆಸರಲ್ಲಿ ಕಿರುಕುಳ ಕೊಡುತ್ತಿದ್ದಾರೆ ಎಂದು ಕಾಶಪ್ಪನವರ ಆಕ್ರೋಶಗೊಂಡಿದ್ದರು. ಇದೇ ಕಾರಣಕ್ಕೆ ಗುರುವಾರ ಸಂಜೆ ಪೊಲೀಸ್ ಠಾಣೆಗೂ ತೆರಳಿದ ವೇಳೆ ಪೊಲೀಸರು ಮತ್ತು ಕಾಶಪ್ಪನವರ ವಿರುದ್ಧ ತೀವ್ರ ವಾಗ್ವಾದ ನಡೆದಿದೆ. ಅಲ್ಲದೆ, ಆರೋಪಿತರನ್ನು ಅಲ್ಲಿಂದ ಕರೆದುಕೊಂಡು ಹೋಗಿದ್ದಾರೆ ಎಂದು ಮಾಜಿ ಶಾಸಕರ ಮೇಲೆ ಪೊಲೀಸರ ಆರೋಪವಾಗಿದೆ.

    ಇನ್ನು ಶುಕ್ರವಾರ ಬೆಳಗ್ಗೆ ತಮ್ಮ ವಿರುದ್ಧ ಎಫ್‌ಐಆರ್ ದಾಖಲಾಗಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದ ವಿಜಯಾನಂದ ಕಾಶಪ್ಪನವರ, ಸಂಜೆಗೆ ಇಳಕಲ್ಲ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ, ಸಿಪಿಐ ಅಯ್ಯನಗೌಡ ಪಾಟೀಲ, ಡಿಎಸ್ಪಿ ಚಂದ್ರಕಾಂತ ನಂದರೆಡ್ಡಿ ಹಾಗೂ ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

    ಎಸ್ಪಿ ಹೇಳೋದೇನು?
    ಇನ್ನು ಘಟನೆ ಬಗ್ಗೆ ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್, ಇಳಕಲ್ಲ ನಗರದಲ್ಲಿ ನಡೆದಿದ್ದ ಕೊಲೆ ಪ್ರಕರಣದ ಪ್ರತ್ಯಕ್ಷ ಸಾಕ್ಷಿಗಳಿಗೆ ನೋಟಿಸ್ ಕೊಟ್ಟು ತನಿಖೆ ಸಹಕರಿಸುವಂತೆ ಹೇಳಲಾಗಿತ್ತು. ಅವರು ನಮ್ಮ ಹಿಂಬಾಲಕರು ಇದ್ದು, ನೋಟಿಸ್ ಕೊಡಬಾರದು, ತನಿಖೆ ಮಾಡಬಾರದೆಂದು ಕಾಶಪ್ಪನವರ ಪೊಲೀಸ್ ಠಾಣೆಗೆ ನುಗ್ಗಿ ತನಿಖಾಧಿಕಾರಿ ಹುನಗುಂದ ಸಿಪಿಐ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಧಮಕಿ ಹಾಕಿದ್ದಾರೆ. ಈ ಸಂಬಂಧ ಇಳಕಲ್ಲ ನಗರ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ದೂರುದಾರರು ಸಿಪಿಐ ಅವರೇ ಆಗಿದ್ದರಿಂದ ತನಿಖೆಯ ಹೊಣೆಯನ್ನು ಗ್ರಾಮೀಣ ಸಿಪಿಐ ಅವರಿಗೆ ವಹಿಸಲಾಗಿದೆ. ನಿಷ್ಪಕ್ಷಪಾತ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.

    ಕಾಶಪ್ಪನವರ ಆರೋಪವೇನು?
    ನನ್ನ ವಿರುದ್ಧ ಪ್ರಕರಣ ದಾಖಲಿಸಿರುವುದು ನನಗೇನು ಹೊಸದಲ್ಲ. ಅದನ್ನು ಎದುರಿಸುವ ಶಕ್ತಿ ನನಗೆ ಇದೆ. ಆದರೆ, ಶಾಸಕ ದೊಡ್ಡನಗೌಡ ಪಾಟೀಲ ಅವರು ಅಧಿಕಾರ ಬಂದಾಗೆಲ್ಲ ಈ ರೀತಿ ಸುಳ್ಳು ಕೇಸ್ ಹಾಕಿಸುತ್ತಾರೆ. ಶಾಸಕರಿಗೆ ನೇರವಾಗಿ ಹೇಳುತ್ತೇನೆ. ಅಧಿಕಾರ, ಅಧಿಕಾರಿಗಳು ಶಾಶ್ವತವಲ್ಲ. ನಮಗೂ ಪಕ್ಷ ಇದೆ, ಕಾರ್ಯಕರ್ತರು ಇದ್ದಾರೆ. ನಾವು ಹೋರಾಟ ಮಾಡುತ್ತಿದ್ದೇವೆ. ಶಾಸಕ ದೊಡ್ಡನಗೌಡ ಪಾಟೀಲ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸೋಲುವ ಭೀತಿಯಲ್ಲಿ ಇದ್ದಾರೆ. ಈ ಚುನಾವಣೆಯಲ್ಲಿ ನಾನು ಪ್ರಚಾರಕ್ಕೆ ಹೋಗಬಾರದು, ನಾವು ಗೆಲ್ಲಬಾರದು ಎಂದು ಈ ರೀತಿ ಕೇಸ್ ಹಾಕಿಸಿದ್ದಾರೆ. ಇದಕ್ಕೆ ನಾನು ಬಗ್ಗುವವನು ಅಲ್ಲ, ಜಗ್ಗುವವನು ಅಲ್ಲ. ಸಿಪಿಐ ಅಯ್ಯನಗೌಡ ಪಾಟೀಲ ಅವರಂತ ನೂರು ಜನ ಸಿಪಿಐ, ಚಂದ್ರಕಾಂತ ನಂದರೆಡ್ಡಿ ಅಂತ ನೂರು ಜನ ಡಿಎಸ್ಪಿಗಳನ್ನು ನನ್ನ ಹಿಂದೆ ಬಿಟ್ಟು ಕೇಸ್ ಮಾಡಿಸಿದರೂ ನಾನು ಹೆದರುವ ಪ್ರಶ್ನೆಯೇ ಇಲ್ಲ. ನನ್ನ ಮೇಲಿನ ಎಲ್ಲ ಆರೋಪಗಳು ರಾಜಕೀಯ ಪ್ರೇರಿತವಾಗಿವೆ. ನಮ್ಮ ಕಾರ್ಯಕರ್ತರಿಗೆ ಸುಮ್ಮನೆ ಪೊಲೀಸರು ಕಿರುಕುಳ ಕೊಡುತ್ತಿದ್ದಾರೆ ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

    ಹುನಗುಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಪೊಲೀಸ್ ಠಾಣೆಗೆ ನುಗ್ಗಿ ಸಿಪಿಐ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕರ್ತವ್ಯಕ್ಕೆ ಅಡ್ಡಿ ಪಡಿಸಿ, ತನಿಖೆಗೆ ಅಡಚಣೆ ಮಾಡಿದ್ದಾರೆ. ಹೀಗಾಗಿ ಅವರ ವಿರುದ್ಧ 353, 504, 506 ರ ಅಡಿಯಲ್ಲಿ ಕೇಸ್‌ಗಳು ದಾಖಲಾಗಿದ್ದು, ನಿಷ್ಪಕ್ಷಪಾತ ತನಿಖೆ ನಡೆಸಲಾಗುವುದು.
    ಲೋಕೇಶ ಜಗಲಾಸರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಬಾಗಲಕೋಟೆ





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts