More

    ಹೊಸ ಹಾಸ್ಟೆಲ್ ಕಟ್ಟಡ ನಿರ್ಮಾಣಕ್ಕೆ ಅನುದಾನ

    ಬಾಗಲಕೋಟೆ: ರಾಜ್ಯದಲ್ಲಿ 100 ಹೊಸ ಹಾಸ್ಟೆಲ್ ಕಟ್ಟಡ ನಿರ್ಮಾಣಕ್ಕೆ ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯಿಂದ 500 ಕೋಟಿ ರೂ. ಬಿಡುಗಡೆಯಾಗಲಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

    ನವನಗರದ ಸೆಕ್ಟರ್ ನಂ 44 ರಲ್ಲಿ ನಿರ್ಮಿಸಲಾದ ಮುರಾರ್ಜಿ ದೇಸಾಯಿ ವಸತಿ ವಿಜ್ಞಾನ ಪದವಿ ಪೂರ್ವ ಕಾಲೇಜು ಹಾಗೂ ಪರಿಶಿಷ್ಟ ಪಂಗಡದ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ನೂತನ ಕಟ್ಟಡವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ಈ ಬಗ್ಗೆ ಕೇಂದ್ರದ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಇಲಾಖೆ ಸಚಿವರ ಜತೆ ಚರ್ಚೆ ಮಾಡಲಾಗಿದ್ದು, ವಾರದಲ್ಲಿಯೇ ಅನುದಾನ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ ಎಂದರು.

    ರಾಜ್ಯದಲ್ಲಿ ಒಟ್ಟು 824 ವಸತಿ ನಿಲಯಗಳಲ್ಲಿ ಒಟ್ಟು 3,693 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಒಟ್ಟು 48 ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗಿದೆ. ಅಲ್ಲದೆ, ಓದಿನಲ್ಲಿ ಉತ್ತಮ ಸಾಧನೆ ಮತ್ತು ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಸಹ ನೀಡಲಾಗುತ್ತಿದೆ ಎಂದು ತಿಳಿಸಿದರು.

    ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ ಮಾತನಾಡಿದರು. ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ತಾಪಂ ಅಧ್ಯಕ್ಷ ಚನ್ನನಗೌಡ ಪರನಗೌಡರ, ನಗರಸಭೆ ಸದಸ್ಯೆ ನಾಗರತ್ನಾ ಹೆಬ್ಬಳ್ಳಿ, ಜಿಲ್ಲಾಧಿಕಾರಿ ಕೆ.ರಾಜೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್, ಜಿಪಂ ಸಿಇಒ ಗಂಗೂಬಾಯಿ ಮಾನಕರ, ಪ್ರೊಬೇಷನರಿ ಐಎಎಸ್ ಅಧಿಕಾರಿ ಗರಿಮಾ ಪವ್ವಾರ, ಜಿಪಂ ಉಪ ಕಾರ್ಯದರ್ಶಿ ಎ.ಜಿ. ತೋಟದ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಜಗದೀಶ ಹೆಬ್ಬಳ್ಳಿ ಇತರರು ಉಪಸ್ಥಿತರಿದ್ದರು.

    ಸರ್ಕಾರ ಬಹಳಷ್ಟು ಖರ್ಚು ಮಾಡಿ ವಸತಿ ಶಾಲೆ, ನಿಲಯಗಳನ್ನು ನಿರ್ಮಿಸುತ್ತಿದೆ. ಇಂತಹ ಶಾಲೆ, ನಿಲಯಗಳನ್ನು ಎಲ್ಲ ವರ್ಗದವರು ಪ್ರಯೋಜನ ಪಡೆದು ಸಮಾನತೆಯಿಂದ ಬದುಕುವಂತಾಗಬೇಕು. ಇಲಾಖೆ ಕಾರ್ಯವೈಖರಿಗಳು ಬದಲಾವಣೆಗೊಳ್ಳಬೇಕು. ವಸತಿ ನಿಲಯಗಳಲ್ಲಿ ಗುಣಮಟ್ಟದ ಊಟ ನೀಡಬೇಕು.
    – ಡಾ.ವೀರಣ್ಣ ಚರಂತಿಮಠ ಶಾಸಕ

    ಅಡಗಿ ಚೂಲ ಮಾಡಲ್ಲರೀ
    ಸರ್ ಹಾಸ್ಟೆಲ್‌ದಾಗ ಅಡುಗೆ ಸರಿಯಾಗಿ ಮಾಡುವುದಿಲ್ಲರಿ. ಚಪಾಯಿ, ಕಾಳು ಪಲ್ಲೆ ಸರಿಯಾಗಿ ಮಾಡುವುದಿಲ್ಲ. ಇದರಿಂದ ಆರೋಗ್ಯ ಸಮಸ್ಯೆ ಆಗುತ್ತಿದೆ ಎಂದು ವಿದ್ಯಾರ್ಥಿನಿಯರು ಡಿಸಿಎಂ ಗೋವಿಂದ ಕಾರಜೋಳ ಎದುರು ಅಳಲು ತೋಡಿಕೊಂಡರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಕಾರಜೋಳ, ಗುಣಮಟ್ಟ ಆಹಾರ ನೀಡದ, ಸರಿಯಾಗಿ ಸ್ಪಂದಿಸಿದ ವಸತಿ ನಿಲಯದ ಸಿಬ್ಬಂದಿಯನ್ನು ತಕ್ಷಣಕ್ಕೆ ಅಮಾನತುಗೊಳಿಸಬೇಕು ಎಂದು ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts