More

    ಅಕಾಲಿಕ ಮಳೆ ತಂದ ಆಪತ್ತು !

    ಬಾಗಲಕೋಟೆ: ಪ್ರವಾಹ, ಅತಿವೃಷ್ಟಿಯಂತಹ ಪ್ರಾಕೃತಿಕ ವಿಕೋಪ, ಕಳೆದ ವರ್ಷ ಲಾಕ್‌ಡೌನ್ ಸಂದರ್ಭದಲ್ಲಿ ಅನುಭವಿಸಿದ ಸಂಕಷ್ಟದಿಂದ ಹೊರಬರುವ ಕನಸು ಕಾಣುತ್ತಿದ್ದ ಜಿಲ್ಲೆಯ ರೈತರಿಗೆ ಮತ್ತೆ ಕಾರ್ಮೋಡ ಆವರಿಸಿದೆ. ನಾಲ್ಕು ದಿನಗಳಲ್ಲಿ ಉಂಟಾಗಿರುವ ಪ್ರಕೃತಿಯಲ್ಲಿನ ಬದಲಾವಣೆ ರೈತರಿಗೆ ದಿಕ್ಕು ತೋಚದಂತಹ ಸ್ಥಿತಿ ನಿರ್ಮಾಣ ಮಾಡಿದೆ.

    ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಕಂಡು ಬಂದ ಮೋಡ ಕವಿದ ವಾತಾವರಣ, ಶುಕ್ರವಾರ ಸಂಜೆ ವಿವಿಧೆಡೆ ಸುರಿದ ಅಕಾಲಿಕ ಮಳೆಯಿಂದಾಗಿ ಅನ್ನದಾತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದರಲ್ಲೂ ತೋಟಗಾರಿಕೆ ಬೆಳೆಗಾರರು ಬೆಳೆಗಳನ್ನು ಉಳಿಸಿಕೊಳ್ಳಲು ಹರಸಾಹಸ ಪಡುವುದು ಅನಿವಾರ್ಯವಾಗಿದೆ.

    ದ್ರಾಕ್ಷಿ, ಮಾವು ಬೆಳೆಗೆ ಹೊಡೆತ
    ಜಿಲ್ಲೆಯಲ್ಲಿ 650 ಹೆಕ್ಟೇರ್ ಪ್ರದೇಶದಲ್ಲಿರುವ ಮಾವು ಬೆಳೆ ಹೂ ಬಿಡುವ ಹಂತದಲ್ಲಿದೆ. ಮೋಡ ಕವಿದ ವಾತಾವರಣ, ಅಕಾಲಿಕ ಮಳೆಯಿಂದ ಹೂ ಕಪ್ಪಾಗುವ ರೋಗ ಹಾಗೂ ಬೂದಿ ರೋಗ ಅಂಟಿಕೊಳ್ಳಲು ಆರಂಭಿಸಿದೆ. ಇದರಿಂದ ಬೆಳೆಗಾರರು ಏನು ಮಾಡಬೇಕು ಎಂದು ಚಿಂತೆಗೆ ಜಾರಿದ್ದಾರೆ. ಇನ್ನು ಜಿಲ್ಲೆಯ ನಾನಾ ಭಾಗದ 3500 ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತದೆ. ಮಳೆಯಿಂದಾಗಿ ಡೌನಿ ರೋಗ, ಬೂದು ರೋಗ್, ಮಿಲಿಭಾಗ್ ರೋಗ ತಗುಲುವ ಸಾಧ್ಯತೆಗಳಿವೆ. ಈಗಾಗಲೇ ಮಳೆಗೆ ದ್ರಾಕ್ಷಿ ಕಾಯಿಗಳು ಸೀಳುತ್ತಿರುವ ಕಾರಣ ಬೆಳೆಗಾರರು ಕಂಗಾಲಾಗಿದ್ದಾರೆ. ಸಾವಿರಾರು ರೂಪಾಯಿ ಖರ್ಚು ಮಾಡಿಯಾದರೂ ಫಸಲು ಪಡೆಯುವುದು ಅನಿವಾರ್ಯವಾಗಿದೆ. ಹೀಗಾಗಿ ಬೆಳೆಗಳ ರಕ್ಷಣೆಗೆ ಇಲಾಖೆ, ವಿಜ್ಞಾನಿಗಳ ಮೊರೆ ಹೋಗಿದ್ದಾರೆ.

    ಕಳೆದ ವರ್ಷ ಉತ್ತಮ ಫಸಲು ಬಂದರೂ ಮಾವು ಬೆಳೆಗಾರರು ಲಾಕ್‌ಡೌನ್‌ನಿಂದಾಗಿ ಬೆಳೆ ಮಾರಾಟವಾಗದೆ ಆರ್ಥಿಕವಾಗಿ ದೊಡ್ಡಮಟ್ಟದ ನಷ್ಟ ಅನುಭವಿಸಿದ್ದರು. ಈ ವರ್ಷ ಗುಣಮಟ್ಟದ ಫಸಲು ನಿರೀಕ್ಷೆಯಲ್ಲಿದ್ದರೂ ಪ್ರಕೃತಿ ವಿಕೋಪ ಚೆಲ್ಲಾಟವಾಡತೊಡಗಿದೆ. ವರುಣನ ಆರ್ಭಟ, ಮೋಡ ಕವಿದ ವಾತಾವರಣ ಇನ್ನು ಕೆಲವು ದಿನ ಮುಂದುವರಿದಲ್ಲಿ ಅಪಾರ ನಷ್ಟ ಅನುಭವಿಸುವುದು ನಿಶ್ಚಿತ. ಕೈಗೆ ಬಂದ ತುತ್ತು ಬಾಯಿಗೆ ಬರುವಂತೆ ಮಾಡಪ್ಪ ಎಂದು ದೇವರಲ್ಲಿ ಅನ್ನದಾತರು ಮೊರೆ ಇಡುತ್ತಿದ್ದಾರೆ.

    ಹಿಂಗಾರು ಬೆಳೆಗಳಿಗೂ ಆತಂಕ
    ಹಿಂಗಾರು ಬೆಳೆಗಳಾದ ಬಿಳಿ ಜೋಳ, ಕಡಲೆ, ಸೂರ್ಯಕಾಂತಿ ಬೆಳೆಗಳಿಗೂ ಸಮಸ್ಯೆ ಉಂಟಾಗುತ್ತಿದೆ. ಜೋಳ ಕಪ್ಪು ಬಣ್ಣಕ್ಕೆ ತಿರುಗುವ ಸಾಧ್ಯತೆ ಹೆಚ್ಚಾಗಿದೆ. ಕಾಯಿ ಕಟ್ಟುವ ಹಂತದಲ್ಲಿರುವ ಕಡಲೆಯೂ ಉತ್ತಮವಾಗಿ ಫಸಲು ಬರಲು ಸಾಧ್ಯವಾಗುವುದಿಲ್ಲ. ಇದರಿಂದ ಹಿಂಗಾರು ಬೆಳೆಗಾರರು ಕೂಡ ಬೆಳೆಗಳಿಗೆ ರಾಸಾಯನಿಕ ಗೊಬ್ಬರ ಸಿಂಪಡಣೆಗೆ ಚಿಂತನೆ ನಡೆಸಿದ್ದಾರೆ.

    ಮಳೆಯಿಂದ ಮಾವು, ದ್ರಾಕ್ಷಿ ಬೆಳೆಗಳಿಗೆ ತೀವ್ರ ಸಮಸ್ಯೆಯಾಗಲಿದೆ. ಕೂಡಲೇ ಬೆಳೆಗಾರರು ಇಲಾಖೆಯ ಕಚೇರಿಗೆ ಭೇಟಿ ನೀಡಿ ವಿಜ್ಞಾನಿಗಳಿಂದ ಸಲಹೆ, ಸೂಚನೆ ಪಡೆದುಕೊಳ್ಳಬೇಕು. ಸದ್ಯಕ್ಕೆ ಆತಂಕ ಪಡಬೇಡಿ. ರೋಗ ನಿಯಂತ್ರಣಕ್ಕೆ ವೈಜ್ಞಾನಿಕ ಮಾದರಿ ಅನುಸರಿಸಿ.
    ರಾಹುಲ್‌ಕುಮಾರ ತೋಟಗಾರಿಕೆ ಇಲಾಖೆ ಉಪನಿರ್ದೇಶಕ

    ಮಳೆಯಿಂದ ಯಾವ ಭಾಗದಲ್ಲಿ ಎಷ್ಟು ಬೆಳೆಗಳಿಗೆ ತೊಂದರೆಯಾಗಿದೆ ಎನ್ನುವ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ. ಜೋಳ, ಕಡಲೆ ಬೆಳೆದ ರೈತರ ಭೂಮಿಗೆ ಭೇಟಿ ನೀಡಿದ ಬಳಿಕ ವಾಸ್ತವ ಸಮಸ್ಯೆ ತಿಳಿಯಲಿದೆ. ಈ ಬಗ್ಗೆ ಇಲಾಖೆ ಸಿಬ್ಬಂದಿ, ಅಧಿಕಾರಿಗಳಿಂದ ಮಾಹಿತಿ ಕೇಳಿದ್ದೇನೆ.
    ಚೇತನಾ ಪಾಟೀಲ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts