More

    15 ದಿನದಲ್ಲಿ ಸೋಂಕು ಹೆಚ್ಚಾಗುವ ಸಾಧ್ಯತೆ

    ಬಾಗಲಕೋಟೆ: ಜಿಲ್ಲೆಯಲ್ಲಿ ಸರ್ಕಾರಿ, ಖಾಸಗಿ ಆಸ್ಪತ್ರೆಗಳಿಗೆ ಅಗತ್ಯವಾಗಿರುವ ಆಕ್ಸಿಜನ್, ರೆಮ್‌ಡೆಸಿವಿರ್, ಲಸಿಕೆ ಸೇರಿ ಇನ್ನಿತರ ಔಷಧಗಳ ಪೂರೈಕೆಗೆ ಕ್ರಮ ತೆಗೆದುಕೊಳ್ಳಲಾಗುವುದು. ಅಧಿಕಾರಿಗಳು ಎಚ್ಚರದಿಂದ ಕಾರ್ಯನಿರ್ವಹಿಸಿ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಹೇಳಿದರು.

    ಬುಧವಾರ ನಗರದ ನೂತನ ಸಭಾ ಭವನದಲ್ಲಿ ಕೋವಿಡ್ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಕುರಿತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆಕ್ಸಿಜನ್, ರೆಮ್‌ಡೆಸಿವಿರ್ ಸಮರ್ಪಕವಾಗಿ ಎಲ್ಲ ಆಸ್ಪತ್ರೆಗೆ ಹಂಚಿಕೆ ಮಾಡಬೇಕು. 15 ದಿನಗಳಲ್ಲಿ ಕೋವಿಡ್ ಎರಡನೇ ಅಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ. ನಿರ್ಲಕ್ಷೃ ಧೋರಣೆ ಅನುಸರಿಸಬಾರದು. ಸಾರ್ವಜನಿಕರಲ್ಲಿ ಕೋವಿಡ್ ಬಗ್ಗೆ ಜಾಗೃತಿ ಮೂಡಿಸಬೇಕು. ಸೋಂಕು ನಿಯಂತ್ರಣದಲ್ಲಿ ಆಡಳಿತದೊಂದಿಗೆ ಜನರ ಸಹಕಾರವು ಮುಖ್ಯವಾಗಿದೆ ಎಂದರು.

    ನಿತ್ಯ ಜಿಲ್ಲೆಗೆ 17 ಕೆ.ಎಲ್. ಆಕ್ಸಿಜನ್ ಪೂರೈಸಲು ಕ್ರಮ ತೆಗೆದುಕೊಳ್ಳಲಾಗುವುದು. ಸೋಂಕಿತರ ಬೆಡ್‌ಗಳು ಇಲ್ಲದೆ ಅಲೆದಾಡುವಂತಾಗಬಾರದು. ಎಲ್ಲರಿಗೂ ಸಮರ್ಪಕವಾಗಿ ಚಿಕಿತ್ಸೆ ಒದಗಿಸಬೇಕು. ಕೋವಿಡ್ ಪರೀಕ್ಷೆ ಹೆಚ್ಚಿಸಿ ಕಾಲಕಾಲಕ್ಕೆ ವರದಿ ನೀಡಬೇಕು. ಜಿಲ್ಲೆಯ ಸರ್ಕಾರಿ, ಖಾಸಗಿ ಆಸ್ಪತ್ರೆಯಲ್ಲಿ ಇರುವ ಬೆಡ್‌ಗಳ ಮಾಹಿತಿ ಜನರಿಗೆ ತಿಳಿಸಬೇಕು. ನಿತ್ಯವು ಸರ್ಕಾರಕ್ಕೆ ವರದಿ ನೀಡಬೇಕು ಎಂದು ತಿಳಿಸಿದರು.

    ಜಿಲ್ಲಾಧಿಕಾರಿ ಕೆ.ರಾಜೇಂದ್ರ ಮಾತನಾಡಿ, ಜಿಲ್ಲೆಯಲ್ಲಿ ಈವರೆಗೆ ಒಟ್ಟು 56,7376 ಸ್ಯಾಂಪಲ್‌ಗಳನ್ನು ಸಂಗ್ರಹಿಸಲಾಗಿದ್ದು, ಈ ಪೈಕಿ 53,6545 ನೆಗೆಟಿವ್ ಹಾಗೂ 19,540 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. 16,087 ಸೋಂಕಿತರು ಬಿಡುಗಡೆಯಾಗಿದ್ದಾರೆ. ಆಸ್ಪತ್ರೆಗಳಲ್ಲಿನ ಬೆಡ್‌ಗಳ ಮಾಹಿತಿ ವೆಬ್‌ಸೈಟ್ ಮೂಲಕ ಒದಗಿಸಲಾಗುವುದು. 5,418 ರೆಮ್‌ಡೆಸಿವಿರ್ ಪೈಕಿ 5,216 ಬಳಕೆ ಮಾಡಲಾಗಿದೆ. ದುರ್ಬಳಕೆ ತಡೆಗಟ್ಟಲಾಗಿದೆ. ರೆಮ್‌ಡೆಸಿವಿರ್ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವವರನ್ನು ಬಂಧಿಸಲಾಗಿದೆ. ನಿತ್ಯವು 17 ಕೆ.ಎಲ್. ಆಕ್ಸಿಜನ್ ಅವಶ್ಯಕತೆ ಇದೆ. ಆದರೆ, 7.5 ಕೆ.ಎಲ್. ಮಾತ್ರ ಸರಬರಾಜು ಆಗುತ್ತಿದೆ. ಲಸಿಕೆ ಕೂಡ ಕಡಿಮೆ ಪ್ರಮಾಣದಲ್ಲಿ ಸರಬರಾಜು ಆಗಿದ್ದು, ಎರಡನೇ ಡೋಸ್ ಸಮಸ್ಯೆಯಾಗಿದೆ. ಕೂಡಲೇ ಆಕ್ಸಿಜನ್, ಲಸಿಕೆ ಪೂರೈಸಬೇಕು ಎಂದು ಮನವಿ ಮಾಡಿದರು.

    ಕರ್ಫ್ಯೂ ಹಿನ್ನೆಲೆಯಲ್ಲಿ 4,501 ಜನರು ವಲಸಿಗರು ಆಗಮಿಸಿದ್ದಾರೆ. 2,093 ಜನರನ್ನು ತಪಾಸಣೆ ಮಾಡಲಾಗಿದ್ದು, 89 ಜನರಿಗೆ ಸೋಂಕು ತಗುಲಿದೆ. ಹೋಂ ಐಸೋಲೇಷನ್ ಮೂಲಕ ಅವರ ಆರೋಗ್ಯದ ನಿಗಾವಹಿಸಲಾಗಿದೆ. ಬಾಗಲಕೋಟೆ ಉಪವಿಭಾಗದಲ್ಲಿ 589 ಹಾಗೂ ಜಮಖಂಡಿ ಉಪವಿಭಾಗದಲ್ಲಿ 221 ಮದುವೆ ಕಾರ್ಯಕ್ರಮಗಳನ್ನು ಪಾಸ್ ವಿತರಿಸಿ ನಿಯಮಗಳನ್ನು ಪಾಲಿಸಲು ಸೂಚಿಸಲಾಗಿದೆ. ನಿಯಮ ಉಲ್ಲಂಘನೆ ಮಾಡಿದವರ ಮೇಲೆ ಪ್ರಕರಣ ದಾಖಲಾಗಿದೆ. ಜಿಲ್ಲೆಯಲ್ಲಿ ಈವರೆಗೆ ಮಾಸ್ಕ್, ಪರಸ್ಪರ ಅಂತರ ಕಾಯ್ದುಕೊಳ್ಳದೆ ನಿಯಮ ಉಲ್ಲಂಸಿದ 70,299 ಜನರಿಗೆ 67,39,389 ರೂ. ದಂಡ ವಿಧಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

    ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ, ಜಿಪಂ ಉಪಾಧ್ಯಕ್ಷೃ ಮುತ್ತಪ್ಪ ಕೋಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್, ಜಿಪಂ ಸಿಇಒ ಟಿ.ಭೂಬಾಲನ್, ಡಿಎಚ್‌ಒ ಡಾ.ಅನಂತ ದೇಸಾಯಿ, ಜಿಲ್ಲಾ ಆಸ್ಪತ್ರೆ ಸರ್ಜನ್ ಡಾ.ಪ್ರಕಾಶ ಬಿರಾದಾರ ಇತರರು ಇದ್ದರು.

    ಪಾಸಿಟಿವ್ ಪ್ರಕರಣಗಳ ದರ 21.07ಕ್ಕೆ ಏರಿಕೆ
    ಡಿಎಚ್‌ಒ ಡಾ.ಅನಂತ ದೇಸಾಯಿ ಮಾತನಾಡಿ, ಜಿಲ್ಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ 3 ಕೆ.ಎಲ್., ಖಾಸಗಿ ಆಸ್ಪತ್ರೆಗಳಿಗೆ 14 ಕೆ.ಎಲ್., ಸೇರಿ 17 ಕೆ.ಎಲ್. ಆಕ್ಸಿಜನ್ ಅವಶ್ಯಕತೆ ಇದೆ. ಆದರೆ, ಕೇವಲ 7.5 ಕೆ.ಎಲ್. ಮಾತ್ರ ಪೂರೈಕೆಯಾಗುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ 348, ಖಾಸಗಿ ಆಸ್ಪತ್ರೆಗಳಲ್ಲಿ 578 ಸೇರಿ ಒಟ್ಟು 926 ಜನ ಆಕ್ಸಿಜನ್ ಮೂಲಕ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಾಸಿಟಿವ್ ಪ್ರಕರಣಗಳ ದರ (ರೆಟ್)ಕಳೆದ 10 ದಿನಗಳಿಂದ 11.92, ಏಳು ದಿನಗಳಿಂದ 12.69 ಇದ್ದರೆ, ಎರಡು ದಿನಗಳಲ್ಲಿ 21.07 ಕ್ಕೆ ಏರಿಕೆಯಾಗಿದೆ. ಇದು ಆತಂಕ ಮೂಡಿಸಿದೆ. ಈವರೆಗೆ ಚಿಕಿತ್ಸೆ ಫಲಕಾರಿಯಾಗದೆ 166 ಜನ ಮೃತಪಟ್ಟಿದ್ದಾರೆ. 3,287 ಸಕ್ರಿಯ ಪ್ರಕರಣಗಳು ಇವೆ. ಕೋವಿಶೀಲ್ಡ್ 590, ಕೋವ್ಯಾಕ್ಸಿನ್ 30 ಸೇರಿ 620 ಲಸಿಕೆ ಮಾತ್ರ ಲಭ್ಯವಿದೆ ಎಂದು ಸಭೆಗೆ ಮಾಹಿತಿ ನೀಡಿದರು.

    ವಾಸ್ತವ್ಯ ತೆರೆದಿಟ್ಟ ಜನಪ್ರತಿನಿಧಿಗಳು
    ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಕರಾಳ ಮುಖ, ಆಸ್ಪತ್ರೆಗಳಲ್ಲಿ ಬೆಡ್‌ಗಳ ಸಿಗದೆ ಆಗಿರುವ ಸಮಸ್ಯೆ, ರೋಗಿಗಳ ಪರದಾಟ. ರೆಮ್‌ಡೆಸಿವಿರ್ ಆಗಿರುವ ಸಮಸ್ಯೆ, ಖಾಸಗಿ ಆಸ್ಪತ್ರೆಗಳ ಲಾಬಿ ಬಗ್ಗೆ ಉಸ್ತುವಾರಿ ಸಚಿವ ಉಮೇಶ ಕತ್ತಿ ಎದುರು ಜಿಲ್ಲೆಯ ಜನಪ್ರತಿನಿಧಿಗಳು ತೆರೆದಿಟ್ಟರು. ಯಾರು ಏನಂದರು ಇಲ್ಲಿದೆ ನೋಡಿ.

    ಜಿಲ್ಲೆಯಲ್ಲಿ ಪರಿಸ್ಥಿತಿ ಚಿಂತಾಜನಕವಾಗಿದೆ. ಅನೇಕರು ಬೆಡ್‌ಗಳಿಗಾಗಿ ಪರದಾಡುತ್ತಿದ್ದಾರೆ. ರೆಮ್‌ಡೆಸಿವಿರ್ ಸರಿಯಾಗಿ ವಿತರಣೆಯಾಗುತ್ತಿಲ್ಲ. 1 ಸಾವಿರ್ ವಯಲ್‌ಗಳು ಬೇಡಿಕೆ ಇದ್ದರೆ 150 ವಯಲ್‌ಗಳು ಮಾತ್ರ ಪೂರೈಕೆಯಾಗುತ್ತಿವೆ. ಖಾಸಗಿ ಆಸ್ಪತ್ರೆಗಳನ್ನು ಸರ್ಕಾರದ ಸುವರ್ಣ ಟ್ರಸ್ಟ್ ಅಡಿ ನೋಂದಣಿ ಮಾಡಿ ಚಿಕಿತ್ಸೆ ಒದಗಿಸಬೇಕು. ಆಕ್ಸಿಜನ್ ಪೂರೈಕೆಗೆ ಹೆಚ್ಚಿನ ಒತ್ತು ನೀಡಬೇಕು.
    ಎಸ್.ಆರ್. ಪಾಟೀಲ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ

    ಆಕ್ಸಿಜನ್ ಸಮಸ್ಯೆಯಾಗದಂತೆ ಜಾಗೃತಿ ವಹಿಸಬೇಕು. ಈ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರೊಂದಿಗೆ ಚರ್ಚೆ ನಡೆಸಲಾಗಿದೆ. ಕೇಂದ್ರ ಸರ್ಕಾರಕ್ಕೆ ಸೂಕ್ತ ಮಾಹಿತಿ ನೀಡಿದಲ್ಲಿ ಆಕ್ಸಿಜನ್ ಪೂರೈಕೆಯಾಗಲಿದೆ.
    ಪಿ.ಸಿ. ಗದ್ದಿಗೌಡರ ಸಂಸದ ಬಾಗಲಕೋಟೆ

    ಜಿಲ್ಲೆಯಲ್ಲಿ ಸಮಸ್ಯೆ ತೀವ್ರವಾಗಿದ್ದು ಸಾರ್ವಜನಿಕರು ನಿರ್ಲಕ್ಷೃ ಮಾಡಬಾರದು. ಖಾಸಗಿ ಆಸ್ಪತ್ರೆಗಳು ರೆಮ್‌ಡೆಸಿವಿರ್, ಆಕ್ಸಿಜನ್ ಬಗ್ಗೆ ಕೃತಕ ಅಭಾವ ಸೃಷ್ಟಿಸಬಾರದು. ಜಿಲ್ಲೆಗೆ ಅಗತ್ಯವಿರುವ ಆಕ್ಸಿಜನ್ ಪೂರೈಸಲು ಕ್ರಮ ತೆಗೆದುಕೊಳ್ಳಬೇಕು. ಬಿವಿವಿ ಸಂಘದ ಕುಮಾರೇಶ್ವರ ಆಸ್ಪತ್ರೆಗೆ ಸರಬರಾಜಾಗುತ್ತಿರುವ ಆಕ್ಸಿಜನ್ ಅಗತ್ಯವಿರುವಷ್ಟು ಲೋಡ್ ಮಾಡಿಕೊಂಡು, ಉಳಿದ ಆಕ್ಸಿಜನ್ ಜಿಲ್ಲಾ ಆಸ್ಪತ್ರೆಗೆ ಪೂರೈಸಲಾಗುತ್ತಿದೆ. ವೈದ್ಯರ ಕೊರತೆ ಇದೆ. ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಿದರೂ ಯಾರು ಬರುತ್ತಿಲ್ಲ. ನಿಜಕ್ಕೂ ಈ ವಿಷಯ ಬೇಸರ ಮೂಡಿಸಿದೆ.
    ವೀರಣ್ಣ ಚರಂತಿಮಠ ಶಾಸಕ ಬಾಗಲಕೋಟೆ

    ಜಿಲ್ಲೆಯಲ್ಲಿ ಆಸ್ಪತ್ರೆಗಳಲ್ಲಿನ ಬೆಡ್‌ಗಳು, ಆಕ್ಸಿಜನ್, ವೆಂಟಿಲೇಟರ್, ಔಷಧ ಬಗ್ಗೆ ಶಾಸಕರಿಗೆ ಮಾಹಿತಿ ನೀಡಬೇಕು. ಇಲ್ಲವಾದಲ್ಲಿ ಜನರಿಗೆ ಉತ್ತರಿಸುವುದು ದೊಡ್ಡ ಕಷ್ಟವಾಗುತ್ತಿದೆ. ಸೋಂಕು ಬಂದವರಿಗೆ ಹೋಮ್ ಐಸೋಲೇಷನ್ ಒಳಪಡಿಸದೆ ಕಳೆದ ವರ್ಷದಂತೆ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಬೇಕು. ವಲಸಿಗರ ಆರೋಗ್ಯ ತಪಾಸಣೆ ಮಾಡಬೇಕು. ಇನ್ನು ಖಾಸಗಿ ಆಸ್ಪತ್ರೆಗಳು ಬೆಂಗಳೂರು ಮಾದರಿ ಬಿಲ್ ಮಾಡುತ್ತಿವೆ. ಇದು ಜಿಲ್ಲೆಯ ಜನರಿಗೆ ಹೊರೆಯಾಗುತ್ತಿದೆ. ಕೂಡಲೇ ಇದಕ್ಕೆ ಕಡಿವಾಣ ಹಾಕಬೇಕು.
    ಸಿದ್ದು ಸವದಿ ತೇರದಾಳ ಶಾಸಕ

    ಜಿಲ್ಲೆಯ ಜಮಖಂಡಿ ಉಪವಿಭಾಗ ವ್ಯಾಪ್ತಿಯ ಜನರಿಗೆ ತೀವ್ರ ಸಮಸ್ಯೆಯಾಗಿದೆ. ಆದ್ದರಿಂದ ಜಮಖಂಡಿಯಲ್ಲಿ ಕೋವಿಡ್ ಪರೀಕ್ಷೆ ಕೇಂದ್ರ ಹಾಗೂ ವಿಶೇಷ ಆಸ್ಪತ್ರೆ ಆರಂಭಿಸಬೇಕು. ಗರ್ಭಿಣಿಯರು ಕೋವಿಡ್ ಪರೀಕ್ಷೆಗಾಗಿ ಅಲೆದಾಡುವ ಸ್ಥಿತಿ ಇದೆ.
    ಆನಂದ ನ್ಯಾಮಗೌಡ ಜಮಖಂಡಿ ಶಾಸಕ

    ಅಸಹಾಯಕತೆ ಹೊರ ಹಾಕಿದ ಖಾಸಗಿ ವೈದ್ಯ
    ಖಾಸಗಿ ಆಸ್ಪತ್ರೆ ವೈದ್ಯ ಪ್ರಭುಯ್ಯನಮಠ ಮಾತನಾಡಿ, ನಮ್ಮ ಆಸ್ಪತ್ರೆಯಲ್ಲಿ ಆಕ್ಸಿಜನ್ ಮೇಲೆ 20 ರೋಗಿಗಳು ಇದ್ದಾರೆ. ಇದೀಗ ಆಕ್ಸಿಜನ್ ಖಾಲಿಯಾಗುತ್ತಿದೆ. ಬೇರೆ ಆಸ್ಪತ್ರೆಗೆ ಹೋಗಲು ತಿಳಿಸಿದ್ದೇನೆ. ಎಲ್ಲ ಆಸ್ಪತ್ರೆಗಳಲ್ಲಿ ಬೆಡ್‌ಗಳು ಖಾಲಿ ಇಲ್ಲ. ಆಕ್ಸಿಜನ್ ಏಜೆನ್ಸಿಯವರು ಬಳಿ ಸೀಮೆ ಎಣ್ಣೆ ರೀತಿ ಕ್ಯೂ ಇರುತ್ತದೆ. ಏನು ಮಾಡಬೇಕು ಹೇಳಿ ಎಂದು ಅಸಹಾಯಕತೆ ಹೊರ ಹಾಕಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಉಮೇಶ ಕತ್ತಿ, ಈ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

    
    
    Community-verified icon

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts