More

    ಕೃಷ್ಣಾ ಮೇಲ್ದಂಡೆ ಯೋಜನೆ ಅನಾಥ ಶಿಶು..!

    ಅಶೋಕ ಶೆಟ್ಟರ
    ಬಾಗಲಕೋಟೆ: ಸರ್ಕಾರ ಬದಲಾದರೂ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ಕ್ಕೆ ಹಿಡಿದಿರುವ ಗ್ರಹಣದಿಂದ ಮೋಕ್ಷ ಸಿಗದಾಗಿದೆ. ಆ ಪಕ್ಷ ಅಧಿಕಾರದಲ್ಲಿ ಇದ್ದಾಗ ಇವರು, ಈ ಪಕ್ಷ ಚುಕ್ಕಾಣಿ ಹಿಡಿದಾಗ ಅವರು ಬರೀ ಸರ್ಕಾರದ ಕಡೆಗೆ ಬೊಟ್ಟು ತೋರಿಸುವ ವೀರಶೂರರಿಂದಾಗಿ ಕೃಷ್ಣೆಗೆ ಶಾಪವಿಮೋಚನೆ ದೊರೆಯದಾಗಿದೆ. ವಿಪಕ್ಷ ನಾಯಕರಿಗೆ ಪ್ರಚಾರದ ಸರಕಾಗುತ್ತಿದೆ ಅಷ್ಟೆ !

    ಆರು ದಶಕ ಗತಿಸಿದರೂ ಈ ವರೆಗೂ ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳ್ಳುತ್ತಿಲ್ಲ ಎನ್ನುವುದೇ ದೊಡ್ಡ ವಿಪರ್ಯಾಸ. ನಮ್ಮನ್ನಾಳುವ ಸರ್ಕಾರದ ಇಚ್ಛಾಶಕ್ತಿ ಎಂತದ್ದು ಎನ್ನುವುದಕ್ಕೆ ಜೀವಂತ ಸಾಕ್ಷಿಯಾಗಿದೆ.

    ಇದಿಗ ಯೋಜನೆಯ 3ನೇ ಹಂತದ ಯೋಜನೆಗೆ 2012ರಲ್ಲಿ ಆಡಳಿತಾತ್ಮಾಕ ಅನುಮೋದನೆ ಸಿಕ್ಕು ಐದು ವರ್ಷಗಳಲ್ಲಿ ಯೋಜನೆ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದ್ದರೂ ಈ ವರೆಗೂ ಕಾಮಗಾರಿ ಪ್ರಗತಿ ಮುಕ್ತಾಯ ಆಗಿಲ್ಲ. ಬ್ರಜೇಶಕುಮಾರ್ ಆಯೋಗದ ತೀರ್ಪಿನಂತೆ ಕೇಂದ್ರ ಸರ್ಕಾರದಿಂದ ಗೆಜೆಟ್ ಹೊರಡಿಸಲಾಗಿಲ್ಲ.

    2012ರಲ್ಲಿ 3ನೇ ಹಂತದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ಪಡೆದ ನಂತರದಲ್ಲಿ ಈ ವರೆಗೂ ರಾಜ್ಯದಲ್ಲಿ ಮೂರು ಸರ್ಕಾರ ಬದಲಾಗಿ ನಾಲ್ಕನೇ ಸರ್ಕಾರ ಅಧಿಕಾರ ಹಿಡಿದು ಆರು ತಿಂಗಳು ಗತಿಸಿದೆ. ಆದರೆ, ಈ ವರೆಗೂ ಕೃಷ್ಣಾ ಯೋಜನೆ ಕರಿನೆರಳು ಮಾತ್ರ ಸರಿದಿಲ್ಲ.

    2012ರಲ್ಲಿ ಜನೆವರಿ ತಿಂಗಳಲ್ಲಿ ಜಗದೀಶ ಶೆಟ್ಟರ್ ಸರ್ಕಾರ ಯೋಜನೆಗೆ 17,207 ಕೋಟಿ ರೂ. ವೆಚ್ಚಕ್ಕೆ ಆಡಳಿತಾತ್ಮಾಕ ಅನುಮೋದನೆ ಕೊಟ್ಟಿತ್ತು. ಕೆಲವೆ ದಿನಗಳಲ್ಲಿ ಸರ್ಕಾರ ಬದಲಾಗಿ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂತು. ಗಮನಾರ್ಹ ವಿಷಯ ಅಂದರೆ ಸಿದ್ದರಾಮಯ್ಯ ಇದೇ ಕೃಷ್ಣಾ ಯೋಜನೆ ಪೂರ್ಣಗೊಳಿಸುತ್ತೇನೆಂದು ಪಾದಯಾತ್ರೆ ಮಾಡಿ ಅಧಿಕಾರ ಗದ್ದುಗೆ ಹಿಡಿದರು. ಐದು ವರ್ಷವಾದರೂ ಯೋಜನೆ ಪೂರ್ಣಗೊಳ್ಳಲಿಲ್ಲ. ಅಷ್ಟೊತ್ತಿಗಾಗಲೆ ಹೊಸ ಭೂಸ್ವಾಧೀನ ಕಾಯ್ದೆ ಜಾರಿಗೆ ಬಂದು, ಯೋಜನಾ ವೆಚ್ಚವೂ ಹೆಚ್ಚಳವಾಯಿತು. 51,148 ಕೋಟಿ ರೂ. ಪರಿಷ್ಕೃತ ದರ ನಿಗದಿ ಪಡಿಸಿದರು. 2018ರಲ್ಲಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಬಂತು. 14 ತಿಂಗಳು ಯೋಜನೆ ಬಗ್ಗೆ ಗಮನವನ್ನು ಹರಿಸಲಿಲ್ಲ. ಇದೀಗ ಯಡಿಯೂರಪ್ಪ ಸಿಎಂ ಆಗಿದ್ದಾರೆ. ಮುಂದಿನ ಬಜೆಟ್‌ನಲ್ಲಿ ಕೃಷ್ಣಾ ಯೋಜನೆಗೆ 20 ಸಾವಿರ ಕೋಟಿ ರೂ. ತೆಗೆದಿಡುವ ಅಭಯ ನೀಡಿದ್ದಾರೆ.

    ದುಡ್ಡಿಟ್ಟರೂ ದುಡಿಯೋರ‌್ಯಾರು…?
    ಮುಂದಿನ ಮಾರ್ಚ್ ತಿಂಗಳಲ್ಲಿ ಯಡಿಯೂರಪ್ಪ ಅವರು ಮಂಡಿಸುವ ಬಜೆಟ್‌ನಲ್ಲಿ 20 ಸಾವಿರ ಕೋಟಿ ರೂ. ಭರವಸೆಯೇನೋ ನೀಡಿದ್ದಾರೆ. ಆದರೆ, ಇದೀಗ ಸರ್ಕಾರ ಅನುದಾನ ಕೊಟ್ಟರೂ ಅದನ್ನು ಬಳಕೆ ಮಾಡಿಕೊಂಡು ಕಾಮಗಾರಿ ಪೂರ್ಣಗೊಳಿಸಲು ಅಗತ್ಯ ಸಿಬ್ಬಂದಿ ಇಲ್ಲದೆ ಇಲಾಖೆ ಬಳಲುತ್ತಿದೆ.

    ಬಾಗಲಕೋಟೆಯಲ್ಲಿ ಇರುವ ಭೂಸ್ವಾಧೀನ, ಪುನರ್ ವಸತಿ ಮತ್ತು ಪುನರ್ ನಿರ್ಮಾಣ ಕಚೇರಿಯ ಅಧಿಕಾರಿ ಮತ್ತು ಸಿಬ್ಬಂದಿ ಕೊರತೆಯಿಂದ ಬಳಲುತ್ತಿದೆ. ಅರ್ಧಕ್ಕಿಂತ ಹೆಚ್ಚು ಹುದ್ದೆಗಳು ಖಾಲಿ ಉಳಿದಿವೆ. ಎಲ್ಲಕ್ಕಿಂತ ಮುಖ್ಯವಾಗಿ ಮುಖ್ಯಸ್ಥರಿಲ್ಲದೆ ಆಯುಕ್ತರ ಕಚೇರಿ ಅನಾಥ ಶಿಶುವಿನಂತಾಗಿದೆ. ಆಯುಕ್ತರು, ಮಹಾ ವ್ಯವಸ್ಥಾಪಕರು, ಉಪ ಮಹಾವ್ಯವಸ್ಥಾಪಕರು, ವಿಶೇಷ ಜಿಲ್ಲಾಧಿಕಾರಿಗಳು ಭೂಸ್ವಾಧೀನ ಹುದ್ದೆಗಳು ಪ್ರಭಾರದಲ್ಲಿ ನಡೆದಿವೆ.

    ಇನ್ನೂ 3ನೇ ಹಂತದ ಯೋಜನೆಗೆ ಒಟ್ಟು 1.30 ಲಕ್ಷ ಎಕರೆ ಜಮೀನು ಸ್ವಾಧೀನ ಮಾಡಿಕೊಳ್ಳಬೇಕಿದೆ. ಇದಕ್ಕೆ ಅಗತ್ಯ ಇರುವ ಭೂಸ್ವಾಧೀನ ಅಧಿಕಾರಿಗಳೇ ಇಲ್ಲವಾಗಿದ್ದಾರೆ. 12 ಹುದ್ದೆಗಳಲ್ಲಿ ಮೂವರು ಮಾತ್ರ ಇದ್ದಾರೆ. ಪುನರ್ ವಸತಿ ಅಧಿಕಾರಿಗಳ ಸ್ಥಿತಿ ಇದಕ್ಕಿಂತ ಭಿನ್ನವೇನಿಲ್ಲ. ಸದ್ಯ ಬಾಗಲಕೋಟೆ ನಗರದಲ್ಲಿ ಭೂಸ್ವಾಧೀನ, ಪುನರ್ ವಸತಿ ಮತ್ತು ಪುನರ್ ನಿರ್ಮಾಣ ಆಯುಕ್ತರ ಕಚೇರಿ ಇದೆ ಎಂದು ಹೇಳಿಕೊಳ್ಳಲಷ್ಟೆ ಇದ್ದಂತಿದೆ. ಅಧಿಕಾರಿ ಮತ್ತು ಸಿಬ್ಬಂದಿ ಇಲ್ಲದೆ ಅಸ್ತಿಪಂಜರದಂತಿರುವ ಆಯುಕ್ತರ ಕಚೇರಿಯಿಂದ ಏನೆಲ್ಲ ಕೆಲಸ ಮಾಡಿಸಲು ಸಾಧ್ಯ? ಮಾತುಮಾತಿಗೂ ಕೃಷ್ಣೆಯ ಜಪ ಮಾಡುವ ಆಡಳಿತ ಸರ್ಕಾರದ ಶಾಸಕರು, ಸಚಿವರು ಅಧಿಕಾರಕ್ಕೆ ಬಂದು ಆರು ತಿಂಗಳಾದರೂ ಆಯುಕ್ತರ ಕಚೇರಿ ಖಾಲಿ ಹುದ್ದೆ ಭರ್ತಿ ಮಾಡಲು ಆಗಿಲ್ಲ.

    ಬೆಲೆ ನಿಗದಿ ಪಡಿಸಲ್ಲ
    ಆಲಮಟ್ಟಿ ಜಲಾಶಯ ಎತ್ತರವನ್ನು 519.6 ಮೀಟರ್‌ನಿಂದ 524.256 ಮೀಟರ್‌ಗೆ ಎತ್ತರಿಸಿದಾಗ 188 ಗ್ರಾಮಗಳು ಬಾಧಿತವಾಗಲಿವೆ. ಇದರಲ್ಲಿ 20 ಗ್ರಾಮಗಳು ಸಂಪೂರ್ಣ ಮುಳುಗಿ, ಸ್ಥಳಾಂತರ ಮಾಡಬೇಕಿದೆ. ಯೋಜನೆಗೆ ಮುಳುಗಡೆ, ಸಿವಿಲ್ ಕಾಮಗಾರಿ ಹಾಗೂ ಪುನರ್ ವಸತಿ ಮತ್ತು ಪುನರ್ ನಿರ್ಮಾಣ ಸೇರಿ ಒಟ್ಟು 1.30 ಲಕ್ಷ ಎಕರೆ ಜಮೀನು ಸ್ವಾಧೀನ ಪಡಿಸಿಕೊಳ್ಳಬೇಕು. ಇದರಲ್ಲಿ ಬಹುತೇಕ ನಷ್ಟ ಅನುಭವಿಸುವುದು ಬಾಗಲಕೋಟೆ ಜಿಲ್ಲೆ.

    ಯೋಜನೆಗೆ ಜಮೀನು ಕಳೆದುಕೊಳ್ಳುವ ರೈತರಿಗೆ ಇಂದಿನ ಮಾರುಕಟ್ಟೆ ಬೆಲೆಗೆ ಅನುಗುಣವಾಗಿ ಪರಿಹಾರ ಕೊಡಬೇಕು. ಯೋಗ್ಯ ಏಕರೂಪ ಬೆಲೆ ನಿಗದಿಪಡಿಸಬೇಕು ಎನ್ನುವುದು ರೈತರ ಆಗ್ರಹ ಮತ್ತು ಹೋರಾಟ ಮಾಡುತ್ತ ಬಂದಿದ್ದಾರೆ. ಆದರೆ, ಕಳೆದ ಏಳು ವರ್ಷಗಳಲ್ಲಿ ಸರ್ಕಾರದಿಂದ ಬೆಲೆ ನಿಗದಿಪಡಿಸಲು ಸಾಧ್ಯವಾಗಿಲ್ಲ. ಇದಕ್ಕಾಗಿ ಸಿದ್ದರಾಮಯ್ಯ ಸರ್ಕಾರ ಇದ್ದಾಗ ಕಾಗೋಡ ತಿಮ್ಮಪ್ಪ ನೇತೃತ್ವದ ಸಂಪುಟ ಉಪಸಮಿತಿ ನೇಮಕ ಮಾಡಿದ್ದರು. ಎರಡು ಸಲ ಸಭೆ ನಡೆಸಿದ್ದೆ ದೊಡ್ಡ ಸಾಧನೆ. ಯಾವುದೇ ತೀರ್ಮಾನಕ್ಕೆ ಬರಲಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಡಾ. ಜಿ. ಪರಮೇಶ್ವರ ನೇತೃತ್ವದ ಸಮಿತಿ ಒಂದು ಸಭೆ ನಡೆಸಿರಬಹುದಷ್ಟೆ. ಇನ್ನೂ ಹಾಲಿ ಸರ್ಕಾರದಲ್ಲೂ ಈ ಬಗ್ಗೆ ಯಾವುದೇ ಸ್ಪಂದನೆ ಈ ಆರು ತಿಂಗಳಲ್ಲಿ ಸಿಕ್ಕಿಲ್ಲ.

    ವಿಪಕ್ಷದಲ್ಲಿ ಇದ್ದಾಗ ಇದೇ ಬಿಜೆಪಿಯವರು ಆರು ವರ್ಷ ಎಕರೆ ಒಣ ಬೇಸಾಯಕ್ಕೆ 30 ಲಕ್ಷ ಹಾಗೂ ನೀರಾವರಿಗೆ 40 ಲಕ್ಷ ರೂ. ಕೊಡಬೇಕು ಎಂದು ಒತ್ತಾಯ ಮಾಡುತ್ತಿದ್ದರು. ಇದೀಗ ಆ ಬಗ್ಗೆ ಇದೆ ಜಿಲ್ಲೆಯ ಜನಪ್ರತಿನಿಧಿಗಳು ತಾವೆ ಹೇಳುತ್ತಿದ್ದ ಮಾತು ಮರೆತಂತೆ ಕಾಣುತ್ತಿದೆ. ಇತ್ತೀಚೆಗೆ ಡಿಸಿಎಂ ಕಾರಜೋಳ ಅವರು ಕಾನೂನು ಪ್ರಕಾರ ಪರಿಹಾರ ಎಂದಿರುವುದು ಸಂತ್ರಸ್ತರ ರೈತರಲ್ಲಿ ಆತಂಕ ಉಂಟು ಮಾಡಿದೆ.

    ಹೋರಾಟ ಸಮಿತಿಗಳು ಮೌನ
    ಇನ್ನು ಕಳೆದ ಮೂರು ವರ್ಷಗಳ ಹಿಂದೆ ಕೃಷ್ಣಾ ಮೇಲ್ದಂಡೆ ಯೋಜನೆ ಸಂತ್ರಸ್ತರ ಹೋರಾಟ ಇಬ್ಭಾಗವಾಗಿ ಎರಡು ಸಮಿತಿಗಳು ರಚನೆ ಆದವು. ಬಿಜೆಪಿ ಬೆಂಬಲಿತ ಹಾಗೂ ಕಾಂಗ್ರೆಸ್ ಬೆಂಬಲಿತ ಎಂದು ಜನರು ಮಾತನಾಡಿಕೊಳ್ಳುವಂತಾಗಿದೆ. 2019ರ ವಿಧಾನಸಭೆ ಚುನಾವಣೆಗೂ ಮುನ್ನ ಜೀವಂತಿಕೆ ತೋರಿಸಿದ್ದ ಸಮಿತಿಗಳು ಬಳಿಕ ದಿವ್ಯಮೌನಕ್ಕೆ ಶರಣಾದಂತಿವೆ.

    ಮತ್ತೊಂದು ಕಡೆಗೆ ಅಲ್ಲಲ್ಲಿ ರೈತರು ಆಗೊಮ್ಮೆ ಹೀಗೊಮ್ಮೆ ಜಿಲ್ಲಾಡಳಿತ ಭವನದ ಎದುರು ಘೋಷಣೆ ಕೂಗಿ ಮನವಿ ಕೊಟ್ಟು ಹೋಗುತ್ತಿದ್ದಾರೆ. ಹೋರಾಟವನ್ನು ತಾರ್ಕಿಕವಾಗಿ ತೆಗೆದುಕೊಂಡು ಹೋಗುವ ಪಕ್ಷಾತೀತ ನಾಯಕತ್ವದ ಅವಶ್ಯಕತೆಯೂ ಜಾಸ್ತಿ ಇದೆ. ಆದರೆ, ಸದ್ಯದ ಸ್ಥಿತಿಯಲ್ಲಿ ಸಾಧ್ಯವೆ ಎನ್ನುವ ಅನುಮಾನಗಳು ಕಾಡುತ್ತಿವೆ.

    ಕುಗ್ಗಿದ ಧ್ವನಿಯ ಸಂತ್ರಸ್ತರು, ಕಣ್ಣಿದ್ದು ಕುರುಡಂತಾಗಿರುವ ವಿಪಕ್ಷಗಳು, ಕಿವಿ ಇದ್ದು ಕಿವುಡರಂತಾಗಿರುವ ಆಳುವ ಸರ್ಕಾರಗಳಿಂದಾಗಿ ಕೃಷ್ಣಾ ಮೇಲ್ದಂಡೆ ಯೋಜನೆ ಅನಾಥ ಶಿಶುವಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

    ಕೃಷ್ಣಾ ಮೇಲ್ದಂಡೆ ಯೋಜನೆ ವಿಷಯವಾಗಿ ಸರ್ಕಾರಗಳು ಮೂಗಿಗೆ ತುಪ್ಪ ಸವರುವ ಕೆಲಸ ನಿಲ್ಲಿಸಬೇಕು. ಜಮೀನು ಕಳೆದುಕೊಳ್ಳುವ ರೈತರಿಗೆ ವೈಜ್ಞಾನಿಕವಾಗಿ ಇಂದಿನ ಮಾರುಕಟ್ಟೆ ಬೆಲೆಯ ಜೊತೆಗೆ ಪರಿಹಾರ ಸೇರಿಸಿ ಬೆಲೆ ನಿರ್ಧರಿಸಬೇಕು. ಯೋಜನೆಯ ಭೂಸ್ವಾಧೀನ ಮತ್ತು ಪುನರ್ ವಸತಿ, ಪುನರ್ ನಿರ್ಮಾಣಕ್ಕೆ ಸರ್ಕಾರ ಬಜೆಟ್‌ನಲ್ಲಿ ಪ್ರತ್ಯೇಕ ಅನುದಾನ ಇಡಬೇಕು. ಕ್ರಿಯಾಯೋಜನೆ ಪ್ರಕಟಿಸಿ, ಅನುಷ್ಠಾನಕ್ಕೆ ತರಬೇಕು.
    ಪ್ರಕಾಶ ಅಂತರಗೊಂಡ, ಯೋಜನಾ ಸಂತ್ರಸ್ತರು.


    ಆಲಮಟ್ಟಿ ಜಲಾಶಯದ ಫೋಟೋ ಬಳಕೆ ಮಾಡಿರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts