More

    ಕೋಟೆನಾಡಲ್ಲಿ ಪ್ರವಾಸೋದ್ಯಮ ಚೇತರಿಕೆ !

    ಬಾಗಲಕೋಟೆ: ಪ್ರವಾಹ, ಕೋವಿಡ್ ಸೋಂಕಿನ ಆರ್ಭಟಕ್ಕೆ ನಲುಗಿದ್ದ ಪ್ರವಾಸೋದ್ಯಮ ಇದೀಗ ಚೇತರಿಕೆಯತ್ತ ಸಾಗಿದ್ದು, ಕೋಟೆನಾಡಿನ ಐತಿಹಾಸಿಕ ಪ್ರವಾಸಿ ತಾಣಗಳಿಗೆ ನಿತ್ಯವು ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ.

    ಜಿಲ್ಲೆಯ ಬಾದಾಮಿ ಮೇಣಬಸದಿ, ಮಹಾಕೂಟ, ಐಹೊಳೆ, ಪಟ್ಟದಕಲ್ಲು, ಶಿವಯೋಗ ಮಂದಿರ, ಬನಶಂಕರಿ, ಕೂಡಲಸಂಗಮದಲ್ಲಿ ಬೆಳಗ್ಗೆಯಿಂದ ಸಂಜೆವರೆಗೂ ಪ್ರವಾಸಿಗರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ಭಣಭಣ ಎನ್ನುತ್ತಿದ್ದ ತಾಣಗಳಲ್ಲಿ ಸಂಭ್ರಮ ಮನೆ ಮಾಡಿದೆ.

    ತೀವ್ರ ಸಂಕಷ್ಟ
    2019ರ ಭೀಕರ ಪ್ರವಾಹದಿಂದ ಕೂಡಲಸಂಗಮ, ಐಹೊಳೆ, ಪಟ್ಟದಕಲ್ಲು, ಶಿವಯೋಗಮಂದಿರ ನೀರಿನಲ್ಲಿ ಮುಳುಗಿದ್ದವು. ಅಲ್ಲದೆ, ನೀರಿನ ರಭಸಕ್ಕೆ ಪ್ರವಾಸಿ ತಾಣಗಳನ್ನು ಸಂಪರ್ಕಿಸುವ ರಸ್ತೆಗಳು, ಮೂಲ ಸೌಕರ್ಯಗಳು ಸಂಪೂರ್ಣ ಡ್ಯಾಮೇಜ್ ಆಗಿದ್ದವು. ಇದರಿಂದ ಸಂಚಾರಕ್ಕೆ ತೀವ್ರ ಸಮಸ್ಯೆಯಾಗಿತ್ತು. 2020ರಲ್ಲಿ ಮಹಾಮಾರಿ ಕೋವಿಡ್ ಸೋಂಕಿಗೆ ಪ್ರವಾಸಿ ತಾಣಗಳ ಪ್ರವೇಶ ಸಂಪೂರ್ಣ ಬಂದ್ ಮಾಡಲಾಗಿತ್ತು. ಮಾರ್ಚ್ ಕೊನೆಯ ವಾರದಿಂದ ಅಕ್ಟೋಬರ್‌ವರೆಗೂ ಪ್ರವಾಸಿಗರು ಇಲ್ಲದೆ ತಾಣಗಳು ಬಿಕೋ ಎನ್ನುತ್ತಿದ್ದವು. ಬಾದಾಮಿ ಕಪಿಗಳಂತೂ ಆಹಾರವಿಲ್ಲದೆ ಪರದಾಡಿದ್ದವು. ಅಲ್ಲದೆ, ಪ್ರವಾಸಿ, ಮಾರ್ಗದರ್ಶಿಗಳು, ಟ್ಯಾಕ್ಸಿ ಚಾಲಕರು, ಮಾಲೀಕರು, ಸ್ಥಳೀಯ ವ್ಯಾಪಾರಸ್ಥರು ವಹಿವಾಟು ಇಲ್ಲದೆ ತೀವ್ರ ಸಂಕಷ್ಟ ಅನುಭವಿಸಿದ್ದರು.

    ಆರ್ಥಿಕ ಪ್ರಮಾಣ ಏರಿಕೆ
    ಅಕ್ಟೋಬರ್ ತಿಂಗಳಿನಲ್ಲಿ ಪ್ರವಾಸಿ ತಾಣಗಳ ಭೇಟಿಗೆ ಅವಕಾಶ ನೀಡಿದ್ದರು ಸಹ 2020 ನವೆಂಬರ್‌ದಿಂದ ಪ್ರವಾಸಿಗರ ಸಂಖ್ಯೆ ಏರತೊಡಗಿತು. ಡಿಸೆಂಬರ್‌ನಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದರಿಂದ ಆರ್ಥಿಕ ಚಟುವಟಿಕೆ ಚೇತರಿಕೆ ಕಂಡಿದೆ. ಎಳನೀರು ಮಾರಾಟ, ಜವಾರಿ ಊಟದ ಖಾನಾವಳಿ ಇತರ ಸ್ಥಳೀಯ ವ್ಯಾಪಾರ ವೃದ್ಧಿಯಾಗಿದೆ. ನಿತ್ಯವು ಸಾವಿರಾರು ರೂ. ವ್ಯಾಪಾರ ನಡೆಯುತ್ತಿದೆ.

    ಆರೋಗ್ಯ ತಪಾಸಣೆ
    ಕೋವಿಡ್ ಹಿನ್ನೆಲೆಯಲ್ಲಿ ಪ್ರವಾಸಿ ತಾಣಗಳಲ್ಲಿ ಪ್ರಾಚ್ಯವಸ್ತು ಇಲಾಖೆ, ಪ್ರವಾಸೋದ್ಯಮ ಇಲಾಖೆ ಅತ್ಯಂತ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿವೆ. ತಾಣ ಪ್ರವೇಶಿಸುವ ಮುನ್ನ ಥರ್ಮಲ್ ಸ್ಕ್ರೀನಿಂಗ್ ಮೂಲಕ ಪ್ರತಿಯೊಬ್ಬ ಪ್ರವಾಸಿಗನ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಮಾಸ್ಕ್ ಕಡ್ಡಾಯಗೊಳಿಸಲಾಗಿದ್ದು, ಪರಸ್ಪರ ಅಂತರ ಕಾಯ್ದುಕೊಳ್ಳಲು ಸೂಚನೆ ನೀಡಲಾಗಿದೆ.

    ಜಿಲ್ಲೆಯ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಆಗಮನದ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ದೇಶದ ವಿವಿಧ ರಾಜ್ಯದಿಂದ ಭೇಟಿ ನೀಡುತ್ತಿದ್ದಾರೆ. ಕಳೆದ 2 ವರ್ಷದಲ್ಲಿ ಹೋಲಿಕೆ ಮಾಡಿದಲ್ಲಿ 2020 ನವೆಂಬರ್, ಡಿಸೆಂಬರ್‌ನಲ್ಲಿ ಪ್ರವಾಸಿಗರ ಸಂಖ್ಯೆ ಗಣನೀಯ ಏರಿಕೆ ಕಂಡಿದೆ. ಎಲ್ಲೆಡೆ ಕೋವಿಡ್ ಮುಂಜಾಗ್ರತೆ ತೆಗೆದುಕೊಳ್ಳಲಾಗಿದೆ.
    ಮಂಜುನಾಥ ಡೊಂಬರ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts