More

    ರೈತಾಪಿ ವರ್ಗಕ್ಕೆ ಕಾರ ಹುಣ್ಣಿಮೆ ಸಂಭ್ರಮ ಮಾಯ

    ಬಾಗಲಕೋಟೆ: ಕಾರ ಹುಣ್ಣಿಮೆ ಅಂದ್ರೇ ಸಾಕು ರೈತಾಪಿ ವರ್ಗಕ್ಕೆ ಅದೇನೋ ಸಂಭ್ರಮ, ಸಡಗರ. ರೈತರು ಮುಂಗಾರು ಬಿತ್ತನೆ ಶುಭಾರಂಭ ಮಾಡುತ್ತಲೆ ತಮ್ಮ ಒಡನಾಡಿಗಳಾದ ಎತ್ತು, ದನಕರುಗಳನ್ನು ಹುಣ್ಣಿಮೆ ದಿನ ವಿಶೇಷವಾಗಿ ಶೃಂಗರಿಸುವುದು ವಾಡಿಕೆ. ಆದರೆ, ಕರೊನಾ ಮಹಾಮಾರಿ ಅದಕ್ಕೂ ಕೊಕ್ಕೆ ಹಾಕಿದೆ.

    ಜಿಲ್ಲೆಯ ಕೃಷಿಕರಲ್ಲಿ ಕಾರ ಹುಣ್ಣಿಮೆ ಹಬ್ಬದ ವಾತಾವರಣ ಸೃಷ್ಟಿ ಮಾಡುತ್ತದೆ. ಕೃಷಿಗೆ ಸಂಬಂಧಪಟ್ಟ ಅನೇಕ ವ್ಯಾಪಾರ, ವಹಿವಾಟು ಭರ್ಜರಿಯಾಗಿ ನಡೆಯುತ್ತಿತ್ತು. ಲಾಕ್‌ಡೌನ್ ಹೊಡೆತಕ್ಕೆ ನುಲುಗಿರುವ ರೈತರು ಹುಣ್ಣಿಮೆಯನ್ನು ಸಂಭ್ರಮದಿಂದ ಆಚರಿಸಲು ಹಿಂದೇಟು ಹಾಕಿದ್ದಾರೆ.

    ಕರಿ ಹರಿಯುವ ಸಂಪ್ರದಾಯಕ ಬ್ರೇಕ್
    ಪ್ರತಿ ವರ್ಷವು ಕಾರಹುಣ್ಣಿಮೆ ದಿನ ಮತ್ತು ಮರು ದಿನ ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಎತ್ತು, ಹೂರಿ ಕರಿ ಹರಿದು ಪ್ರಸಕ್ತ ವರ್ಷದ ಮುಂಗಾರು ಮಳೆ, ಬೆಳೆ ಬಗ್ಗೆ ಮುನ್ಸೂಚನೆ ಪಡೆಯುವುದು ವಾಡಿಕೆ. ಅಲ್ಲದೆ, ಎತ್ತು ಕರಿ ಹರಿಯುತ್ತಿದ್ದಂತೆ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಕೃಷಿಕರು ಸಂಭ್ರಮಿಸಿ ಕುಣಿದು ಕುಪ್ಪಳಿಸತ್ತ, ಬಾಜಾ ಭಜಂತ್ರಿಯೊಂದಿಗೆ ಎತ್ತಿನ ಮೆರವಣಿಗೆ ಮಾಡುತ್ತಾರೆ. ಕರೊನಾ ಹಿನ್ನೆಲೆಯಲ್ಲಿ ಕರಿ ಹರಿಯುವ ಸಂಪ್ರದಾಯಕ್ಕೆ ಬ್ರೇಕ್ ಹಾಕಲಾಗಿದೆ. ಹೀಗಾಗಿ ರೈತರು ತಮ್ಮ ಮನೆಯಲ್ಲಿ ದನಕರುಗಳಿಗೆ ಪೂಜೆ ಸಲ್ಲಿಸಿ ಸರಳವಾಗಿ ಹಬ್ಬ ಆಚರಿಸಿದರು.

    ಮಾರಾಟ ಕ್ಷೀಣ
    ಕಾರ ಹುಣ್ಣಮೆ ಅಂಗವಾಗಿ ದನಕರುಗಳಿಗೆ ಉಪಯೋಗಿಸುವ ಸಾಮಾನುಗಳ ಮಾರಾಟ ಮತ್ತು ಖರೀದಿ ಕೂಡ ಜೋರಾಗಿ ನಡೆಯುತ್ತದೆ. ಗೆಜ್ಜಿಪಟ್ಟಾ, ಮೂಗದಾನ, ಮಗಡಾ, ಹಿಡಿಹಗ್ಗ, ಹಿತ್ತಾಳೆ ಸವಣಿ, ಜತಿಗಿ ಸೇರಿ ವಿವಿಧ ವಸ್ತುಗಳ ಖರೀದಿ ಮಾಡಲು ರೈತರು ಮುಗಿಬೀಳುತ್ತಾರೆ. ಈ ಸಾರಿ ಅದಕ್ಕೂ ಕರೊನಾ ಕರಿ ನೆರಳು ಆವರಿಸಿದೆ. ನಿರೀಕ್ಷೆಗೆ ತಕ್ಕಂತೆ ವ್ಯಾಪಾರ ನಡೆದಿಲ್ಲ. ಹೀಗಾಗಿ ವ್ಯಾಪಾರಸ್ಥರಿಗೂ ಮಂಕು ಕವಿದಂತಾಗಿದೆ.

    ರೈತರು ಒಂದಿಲ್ಲೊಂದು ರೀತಿಯಲ್ಲಿ ಬಹಳ ನಷ್ಟ ಅನುಭವಿಸುತ್ತಿದ್ದಾರೆ. ಮಳೆ ಬಂದ್ರೇ ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ಇಲ್ಲ. ಬೆಲೆ ಇದ್ದರೆ ಉತ್ತಮ ಬೆಳೆ ಬಂದಿರುವುದಿಲ್ಲ. ಹೀಗಾಗಿ ರೈತರ ಬಳಿ ಹಣವಿಲ್ಲ. ಕರೊನಾ ಕಾರಣದಿಂದ ಕಾರ ಹುಣ್ಣಿಮೆ ಸರಳವಾಗಿ ಆಚರಣೆ ಮಾಡಿದ್ದಾರೆ. ಇದ್ದದ್ದರೊಳಗೆ ಜೀವನ ಸಾಗಿಸುವುದು ದೊಡ್ಡ ಸವಾಲು ಆಗಿದೆ. ಹೀಗಾಗಿ ದನಕರುಗಳಿಗೆ ಹಗ್ಗ, ಜತ್ತಿ ಯಾವುದೇ ವಸ್ತು ಖರೀದಿ ಮಾಡಲು ಸಾಧ್ಯವಾಗಿಲ್ಲ.
    ಈರಣ್ಣ ಯಳ್ಳಿಗುತ್ತಿ ಬಾಗಲಕೋಟೆ ರೈತ

    
    
    Community-verified icon

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts