More

    ಸಹಕಾರಿ ಅನುಭವಿ ಪ್ರಕಾಶ ತಪಶೆಟ್ಟಿ ಪ್ರಬಲ ಆಕಾಂಕ್ಷಿ

    ಬಾಗಲಕೋಟೆ: ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಸ್ಥಾನಕ್ಕೆ ಎರಡು ಪಕ್ಷಗಳಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದೆ. ಆಡಳಿತ ಪಕ್ಷ ಎನ್ನುವ ಕಾರಣಕ್ಕೆ ಬಿಜೆಪಿಗೆ ಹೆಚ್ಚಿನ ಅವಕಾಶ ಇದೆ ಎನ್ನಲಾಗುತ್ತಿದೆ.

    ಬಿಜೆಪಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮೂವರು ಪ್ರಬಲ ಆಕಾಂಕ್ಷಿಗಳು ಇದ್ದಾರೆ. ರನ್ನ ಸಕ್ಕರೆ ಕಾರ್ಖಾನೆ ಅಧ್ಯಕ್ಷ ರಾಮಣ್ಣ ತಳೇವಾಡ, ಪರಿಷತ್ ಸದಸ್ಯ ಹನಮಂತ ನಿರಾಣಿ ಹಾಗೂ ಸಹಕಾರಿ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ ಪ್ರಕಾಶ ತಪಶೆಟ್ಟಿ ಇದ್ದಾರೆ.

    ಪ್ರಕಾಶ ತಪಶೆಟ್ಟಿ ಅವರಿಗೆ ಅಧ್ಯಕ್ಷ ಸ್ಥಾನ ಪಡೆಯಲು ಪೂರಕ ಅಂಶಗಳು ಇದ್ದು, ಈಗಾಗಲೇ ಡಿಸಿಸಿ ಬ್ಯಾಂಕಿನಲ್ಲಿ 2005 ರಿಂದ 2010 ಹಾಗೂ 2010 ರಿಂದ 2015ರ ವರೆಗೆ ಎರಡು ಹತ್ತು ವರ್ಷ ನಿರ್ದೇಶಕರಾಗಿ ಅನುಭವ ಹೊಂದಿದ್ದು, ಇದೀಗ ಮೂರನೇ ಸಲ ನಿರ್ದೇಶಕರಾಗಿದ್ದಾರೆ. ಇದಕ್ಕಿಂತಲೂ ಮುಖ್ಯವಾಗಿ ಒಂದು ಹಣಕಾಸು ಸಂಸ್ಥೆಯಲ್ಲಿ ಆರ್ಥಿಕ ಶಿಸ್ತು ಕಾಯ್ದುಕೊಂಡು ಹೆಮ್ಮರವಾಗಿ ಬೆಳೆಸಬಹುದು ಎನ್ನುವುದಕ್ಕೆ ಬಸವೇಶ್ವರ ಬ್ಯಾಂಕ್ ಒಂದು ಅತ್ಯುತ್ತಮ ನಿದರ್ಶನವಾಗಿದೆ.

    ಪ್ರಕಾಶ ತಪಶೆಟ್ಟಿ ಅವರ ನೇತೃತ್ವದಲ್ಲಿ ಕಳೆದ ಮೂರೂವರೆ ದಶಕಗಳಲ್ಲಿ ಬಸವೇಶ್ವರ ಬ್ಯಾಂಕ್ ರಾಜ್ಯದ ಒಂದು ಮಾದರಿ ಸಹಕಾರಿ ಬ್ಯಾಂಕ್ ಆಗಿದೆ. ರಾಷ್ಟ್ರೀಯ ಬ್ಯಾಂಕ್‌ಗಳಲ್ಲಿ ಸಿಗುವ ಸೌಲಭ್ಯಗಳನ್ನು ತಮ್ಮ ಬ್ಯಾಂಕ್‌ನಲ್ಲಿ ಅಳವಡಿಸಿಕೊಂಡು ಆರ್ಥಿಕ ಶಿಸ್ತು ಕಾಯ್ದುಕೊಂಡು ಬಂದಿದ್ದಾರೆ.
    ಈ ಹಿಂದೆ ನಗರಸಭೆ ಅಧ್ಯಕ್ಷರಾಗಿ, ಬಿಟಿಡಿಎ ಅಧ್ಯಕ್ಷರಾಗಿಯೂ ಶಿಸ್ತುಬದ್ಧ ಆಡಳಿತಕ್ಕೆ ಅವರು ಹೆಸರುವಾಸಿ ಆಗಿದ್ದಾರೆ. ಇದೀಗ ಜಿಲ್ಲೆಯ ಸಹಕಾರಿ ಬ್ಯಾಂಕ್‌ಗಳ ಹಿರಿಯಣ್ಣನಾಗಿರುವ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸ್ಥಾನದ ಅವಕಾಶ ಸಿಕ್ಕಲ್ಲಿ ಸಂಸ್ಥೆಯನ್ನು ಹೆಮ್ಮರವಾಗಿ ಬೆಳೆಸುತ್ತಾರೆ ಎನ್ನುವುದನ್ನು ಎಲ್ಲರೂ ಒಪ್ಪುವಂತದ್ದು. ಇದೇ ಕಾರಣಕ್ಕೆ ಪಕ್ಷದ ವರಿಷ್ಠರು ತಮಗೆ ಅವಕಾಶ ಕಲ್ಪಿಸಬಹುದು ಎನ್ನುವ ವಿಶ್ವಾಸದಲ್ಲೂ ತಪಶೆಟ್ಟಿ ಅವರು ಇದ್ದಾರೆ.

    ಇದೇ ವಿಚಾರವಾಗಿ ಈಗಾಗಲೇ ಪ್ರಕಾಶ ತಪಶೆಟ್ಟಿ ಅವರು ಜಿಲ್ಲೆಯಲ್ಲಿ ಇರುವ ಪಕ್ಷದ ಶಾಸಕರು, ಹಿರಿಯ ಮುಖಂಡರನ್ನು ಭೇಟಿ ಮಾಡಿ ಅವಕಾಶ ಕೊಡಿ ಎಂದು ಮನವಿಯನ್ನು ಮಾಡಿಕೊಂಡಿದ್ದಾರೆ.

    ಸ್ಪಷ್ಟ ಬಹುಮತ ಯಾರಿಗೂ ಇಲ್ಲ
    ಪಕ್ಷದಲ್ಲಿ ಮೂವರು ಪ್ರಬಲ ಆಕಾಂಕ್ಷಿಗಳು ಇದ್ದಾರೆ. ಆದರೆ, ಸ್ವತಂತ್ರವಾಗಿ ಅಧಿಕಾರ ಗದ್ದುಗೆ ಹಿಡಿಯಲು ಸಂಪೂರ್ಣ ಬಹುಮತ ಇಲ್ಲವಾಗಿದೆ. ಇತ್ತ ಕಾಂಗ್ರೆಸ್ ಪಕ್ಷ ಶತಾಯಗತಾಯ ಅಧಿಕಾರ ಮತ್ತೆ ಉಳಿಸಿಕೊಳ್ಳಬೇಕು ಎಂದು ಎಲ್ಲ ತಂತ್ರಗಳನ್ನು ರೂಪಿಸುತ್ತಿದೆ. ಸ್ವತಂತ್ರವಾಗಿರುವ ಇಬ್ಬರು ನಿರ್ದೇಶಕರಾದ ಕುಮಾರ ಜನಾಲಿ, ಮುರುಗೇಶ ಕಡ್ಲಿಮಟ್ಟಿ ಅವರ ಬೆಂಬಲ ಬೇಕಿದೆ. ಬಿಜೆಪಿಗೆ ಇಬ್ಬರಲ್ಲಿ ಒಬ್ಬರು ಬೆಂಬಲ ನೀಡಿದರೂ ಅಧಿಕಾರ ಹಿಡಿಯಬಹುದಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರದ ಹಾದಿ ಅಷ್ಟು ಸುಲಭವಾಗಿಲ್ಲ. ಅಲ್ಲಿಯೂ ಘಟಾನುಘಟಿ ನಿರ್ದೇಶಕರು ಇದ್ದು, ಸಾಕಷ್ಟು ತಂತ್ರಗಳನ್ನು ರೂಪಿಸುತ್ತಿದ್ದಾರೆ. ಕೊನೆ ಗಳಿಗೆಯಲ್ಲಿ ಏನು ಬೇಕಾದರೂ ಆಗಬಹುದು. ಹೀಗಾಗಿ ಯಾವ ಪಕ್ಷದ ಹಿಡಿತಕ್ಕೆ ಡಿಸಿಸಿ ಬ್ಯಾಂಕ್ ಬರುತ್ತದೆ ಎನ್ನುವುದು ಒಂದು ಕುತೂಹಲವಾದರೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಯಾರಿಗೆ ಸಿಗಬಹುದು ಎನ್ನುವುದು ಮತ್ತೊಂದು ಕುತೂಹಲ.

    ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ನಾನು ಅಪೇಕ್ಷಿತನಿದ್ದೇನೆ. ಎಲ್ಲವನ್ನು ನಮ್ಮ ಹಿರಿಯರಿಗೆ ವಹಿಸಿದ್ದೇವೆ. ನಾನು ಸಹಕಾರಿ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಬಹುದು. ಡಿಸಿಸಿ ಬ್ಯಾಂಕ್ ಹಾಗೂ ಬಸವೇಶ್ವರ ಬ್ಯಾಂಕ್ ಸೇವೆಯನ್ನು ಗಣನೆಗೆ ತೆಗೆದುಕೊಂಡು ನನಗೆ ಅವಕಾಶ ಕಲ್ಪಿಸಬಹುದು ಎನ್ನುವ ವಿಶ್ವಾಸ ಇದೆ. ಅಂತಿಮವಾಗಿ ಪಕ್ಷದ ಮುಖಂಡರು ತೀರ್ಮಾನ ತೆಗೆದುಕೊಳ್ಳಲಿದ್ದಾರೆ.
    ಪ್ರಕಾಶ ತಪಶೆಟ್ಟಿ ಡಿಸಿಸಿ ಬ್ಯಾಂಕ್ ನಿರ್ದೇಶಕರು





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts