More

    ಅಂತರ್ಜಲ ಶೋಷಣೆ ಸಲ್ಲ

    ಬಾಗಲಕೋಟೆ: ನಮ್ಮ ಮಕ್ಕಳಿಗೆ ಬೆಳ್ಳಿ, ಬಂಗಾರ, ಆಸ್ತಿ ಮಾಡಿದರೆ ಸಾಲದು. ಅದರಿಂದ ಉಪಯೋಗವಿಲ್ಲ. ಜೀವ ಜಲ ಸಂರಕ್ಷಣೆ ಮಾಡಿ ಮುಂದಿನ ಪೀಳಿಗೆ ಜನರಿಗೆ ನೀಡದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ಈಚೆಗೆ ಅಂತರ್ಜಲ ಅಧಿಕವಾಗಿ ಶೋಷಣೆಗೆ ಒಳಗಾಗುತ್ತಿರುವುದು ಸಲ್ಲ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

    ನಗರದ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಣ್ಣ ನೀರಾವರಿ ಇಲಾಖೆ, ಅಂತರ್ಜಲ ಇಲಾಖೆ, ಅಟಲ್ ಭೂ ಜಲ ಯೋಜನೆ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ತೋಟಗಾರಿಕೆ ಬೆಳೆಗಳಲ್ಲಿ ನೀರಿನ ಮಿತವ್ಯಯ ಬಳಕೆ ಮತ್ತು ಅಂತರ್ಜಲ ಜನ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

    ಕಳೆದ ಎರಡು ವರ್ಷಗಳಿಂದ ಸರಾಸರಿಗಿಂತ ಹೆಚ್ಚು ಮಳೆಯಾಗುತ್ತಿದೆ. ಭೂಮಿಯಲ್ಲಿ ಶೇ.80 ಮಳೆ ನೀರು ಇಂಗಬೇಕು. ಆದರೆ, ಆಗುತ್ತಿಲ್ಲ. ವಾಡಿಕೆಗಿಂತ 270 ಪಟ್ಟು ಬಳಕೆಯಾಗುತ್ತಿದೆ. ನೈಸರ್ಗಿಕ ಸಂಪನ್ಮೂಲವಾದ ಅಂತರ್ಜಲ ಸಂರಕ್ಷಣೆಯಾಗುತ್ತಿಲ್ಲ. ಬದಲಾಗಿ ಮನುಕುಲ ಶೋಷಣೆಗೆ ಒಳಪಡಿಸುತ್ತಿದೆ. ಇದು ಭವಿಷ್ಯಕ್ಕೆ ಮಾರಕವಾಗಿದೆ. ಪರಿಣಾಮ 700 ರಿಂದ 800 ಅಡಿ ಕೊಳವೆಬಾವಿ ತೋಡಿದರೂ ಹನಿ ನೀರು ಸಿಗುತ್ತಿಲ್ಲ. ಈ ಬಗ್ಗೆ ಎಚ್ಚರಗೊಳ್ಳದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದರು.

    ಮನುಷ್ಯನ ದುರಾಸೆಗೆ ಕೆರೆ, ಕಟ್ಟೆಗಳು ಒತ್ತುವರಿಯಾಗಿವೆ. ಅಧಿಕ ಪ್ರಮಾಣದ ನದಿ ನೀರು ಸಮುದ್ರ ಸೇರುತ್ತಿದೆ. ಬ್ಯಾರೇಜ್, ಕೆರೆಗಳು ನಿರ್ಮಿಸಿದರೂ ಸರಿಯಾಗಿ ನಿರ್ವಹಣೆಯಾಗುತ್ತಿಲ್ಲ. ಹೀಗಾಗಿ ಅನೇಕ ಭಾಗದಲ್ಲಿ ಕುಡಿಯುವ ನೀರಿಗೂ ಪರದಾಡುವ ಕೆಟ್ಟ ಪರಿಸ್ಥಿತಿ ಇದೆ. ನೀರು ಸದ್ಬಳಕೆಯಾಗಬೇಕು. ಮಿತ ಬಳಕೆ ಮಾಡಬೇಕು ಎನ್ನುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಜಲ ಜೀವನ್ ಮಿಷನ್, ನಲ್ ಸೆ ಜಲ್ ಯೋಜನೆ ಜಾರಿಗೆ ತಂದಿದ್ದಾರೆ. ಸಮರ್ಪಕ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಮುತುವರ್ಜಿ ವಹಿಸಿದೆ. ಪ್ರತಿ ತಾಲೂಕಿನಲ್ಲಿ ಈ ಯೋಜನೆ ಅನುಷ್ಠಾನಕ್ಕೆ 40, 50 ಕೋಟಿ ರೂ. ವ್ಯಯ ಮಾಡಲಾಗುತ್ತಿದೆ ಎಂದರು.

    ಈ ಮಹತ್ವಕಾಂಕ್ಷಿ ಯೋಜನೆ ಜಾರಿಗೊಳಿಸಲು ರಾಜ್ಯದಲ್ಲಿ 1200 ಗ್ರಾಪಂಗಳನ್ನು ಆಯ್ಕೆ ಮಾಡಿಕೊಂಡಿದೆ. ಕೇಂದ್ರ ಸರ್ಕಾರ 1201 ಕೋಟಿ ರೂ. ಅನುದಾನ ನೀಡಲಿದೆ. ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡಲಿದೆ. ಬೃಹತ್ ನೀರಾವರಿ ಯೋಜನೆಯಾದ ಕೃಷ್ಣಾ ಮೇಲ್ದಂಡೆ ಯೋಜನೆ 1964 ರಲ್ಲಿ ಆರಂಭಗೊಂಡು 56 ಪೂರ್ಣಗೊಂಡಿಲ್ಲ. ನಮ್ಮ ಪಾಲಿನ ನೀರು ಸದ್ಬಳಕೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಜಲ ಸಂರಕ್ಷಣೆ, ಸದ್ಬಳಕೆಗೆ ದೂರದೃಷ್ಟಿ ಇಲ್ಲ ಎನ್ನುವುದಕ್ಕೆ ಇದು ಉದಾಹರಣೆ ಎಂದು ತಿಳಿಸಿದರು.

    ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಅಂತರ್ಜಲ ಕುಸಿತದ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕಿದೆ. ಹರಿಯುವ ನೀರು ನಿಲ್ಲಿಸಬೇಕು. ನಿಲ್ಲಿಸಿದ ನೀರು ಇಂಗಿಸಬೇಕು. ಕೇವಲ ಘೋಷಣೆ ಕೂಗಿದರೆ ಜಲ ಜಾಗೃತಿಯಾಗುವುದಿಲ್ಲ. ತಾಂತ್ರಿಕವಾಗಿ ಕೆಲಸವಾಗಬೇಕು. ನೀರಿನ ಬಳಕೆ ಬಗ್ಗೆ ಎಚ್ಚರ ವಹಿಸಬೇಕು. ಬೇಕಾಬಿಟ್ಟಿಯಾಗಿ ನೀರು ಬಳಕೆಯಾದಲ್ಲಿ ಸಾವಿರಾರು ಎಕರೆ ಭೂಮಿ ಸವಳು, ಜವಳು ಆಗಿ ವ್ಯವಸ್ಥೆ ಅಯೋಮಯವಾಗಲಿದೆ. ಹನಿ ನೀರಾವರಿ, ನೀರು ಶೇಖರಣೆ, ಅರಣ್ಯೀಕರಣಕ್ಕೆ ಒತ್ತು ನೀಡಬೇಕು ಎಂದರು.

    ಸದ್ಯಕ್ಕೆ ಜಾಗೃತಿ ಅಭಿಯಾನಕ್ಕೆ 14 ಜಿಲ್ಲೆಯ 41 ತಾಲೂಕು ಆಯ್ಕೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಬಾಗಲಕೋಟೆ ತಾಲೂಕಿನಲ್ಲಿ 18, ಬಾದಾಮಿ ತಾಲೂಕಿನಲ್ಲಿ 18 ಗ್ರಾಮ ಪಂಚಾಯಿತಿ ಆಯ್ಕೆ ಮಾಡಲಾಗಿದ್ದು, ಗ್ರಾಮ ಸಭೆ ನಡೆಸಿ ತಿಳಿವಳಿಕೆ ಮೂಡಿಸಿ ಕ್ರಿಯಾ ಯೋಜನೆ ರೂಪಿಸಲಾಗುತ್ತದೆ. ಕೃಷಿ, ಗ್ರಾಮೀಣ ಜನರ ಬದುಕು ಸುಸ್ಥಿರಗೊಳ್ಳಬೇಕು. ಇಲ್ಲವಾದಲ್ಲಿ ವಲಸೆ ಹೆಚ್ಚಾಗಿ ಆಹಾರ, ನೀರಿಗಾಗಿ ಅಲೆದಾಡುವ ಪರಿಸ್ಥಿತಿ ಬರಲಿದೆ. ಈ ವಿಷಯದಲ್ಲಿ ರಾಜಕಾರಣ ಮಾಡುವುದು ಬೇಡ. ವಿವಿಗಳಲ್ಲಿನ ಸಂಶೋಧನೆಗಳು ಲ್ಯಾಬ್ ಟೂ ಲ್ಯಾಂಡ್ ಆಗಬೇಕು. ಅನ್ನದಾತರು, ಪ್ರಕೃತಿ ಗಮನದಲ್ಲಿ ಇರಿಸಿ ವಿಜ್ಞಾನಿಗಳು ಸಂಶೋಧನೆ ಕೈಗೊಳ್ಳಬೇಕು ಎಂದರು.

    ಶಾಸಕ ವೀರಣ್ಣ ಚರಂತಿಮಠ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ತಾಪಂ ಅಧ್ಯಕ್ಷ ಚನ್ನನಗೌಡ ಪರನಗೌಡರ, ಜಿಪಂ ಸದಸ್ಯರಾದ ಹೂವಪ್ಪ ರಾಠೋಡ, ಹನುಮವ್ವ ಕರಿಹೊಳಿ, ತೋವಿವಿ ಕುಲಪತಿ ಕೆ.ಎಂ.ಇಂದಿರೇಶ, ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿ ಮೃತ್ಯುಂಜಯ ಸ್ವಾಮಿ ಇದ್ದರು.

    ತೋವಿವಿ ಕಟ್ಟಡ ಕಟ್ಟು ಏಜೆನ್ಸಿಗಳಲ್ಲ
    ಈ ಹಿಂದೆ ಸಣ್ಣ ನೀರಾವರಿ ಇಲಾಖೆ ಸಚಿವನಿದ್ದಾಗ ಸರ್ವೇ ಮಾಡಿದಾಗ ಉತ್ತರ ಕರ್ನಾಟಕ ಭಾಗದಲ್ಲಿ 2700 ಸ್ಥಳಗಳಲ್ಲಿ ಕೆರೆ, ಬಾಂದಾರ ನಿರ್ಮಿಸಲು ಅವಕಾಶವಿದೆ ಎನ್ನುವ ವಿಚಾರ ಬಹಿರಂಗಗೊಂಡಿತ್ತು. ಈ ಬಗ್ಗೆ ಸಚಿವ ಮಾಧುಸ್ವಾಮಿ ಗಮನ ಹರಿಸಬೇಕು ಎಂದು ಮನವಿ ಮಾಡಿದ ಅವರು, ತೋವಿವಿ ವಿಜ್ಞಾನಿಗಳು ರೈತರಿಗೆ ಉಪಯೋಗವಾಗುವ ಹಾಗೆ ಸಂಶೋಧನೆ ಕೈಗೊಳ್ಳಬೇಕು. ಕಡಿಮೆ ನೀರಿನಲ್ಲಿ ಜಾಸ್ತಿ ಇಳುವರಿ ನೀಡುವ ಹೊಸ ತಳಿಗಳನ್ನು ಪರಿಚಯಿಸಬೇಕು. ವಿವಿಗಳು ಕಟ್ಟಡ ಕಟ್ಟುವ ಏಜೆನ್ಸಿಗಳಲ್ಲ ಎಂದು ಕಾರಜೋಳ ಮಾರ್ಮಿಕವಾಗಿ ನುಡಿದರು.

    ಜಲ ಸಂರಕ್ಷಣೆ, ಅನ್ನದಾತರ ಹಿತ ಕಾಯುವ ಮಹತ್ತರ ಜವಾಬ್ದಾರಿ ವಿಜ್ಞಾನಿಗಳ ಮೇಲಿದೆ. ತೋಟಗಾರಿಕೆ ವಿವಿಗೆ ಅಗತ್ಯ ಸೌಕರ್ಯ, ಅನುದಾನ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ. ವಿಜ್ಞಾನಿಗಳು, ಸಿಬ್ಬಂದಿ ವರ್ಗ ಪ್ರಾಮಾಣಿಕವಾಗಿ ಸೇವೆ ಮಾಡಬೇಕು. ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಆದ್ಯತೆ ನೀಡಬೇಕು.
    ಆರ್.ಶಂಕರ ತೋಟಗಾರಿಕೆ ಸಚಿವ

    ಅಂತರ್ಜಲ ಶೋಷಣೆ ಸಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts