More

    ಕಾಯಕ ನಿಷ್ಠೆಗೆ ಒಲಿದ ಕಾಯಕಲ್ಪ

    ಬಾಗಲಕೋಟೆ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡುವ ಕಾಯಕಲ್ಪ ಪ್ರಶಸ್ತಿಗೆ ಇಲ್ಲಿನ ಜಿಲ್ಲಾ ಆಸ್ಪತ್ರೆಯು ಭಾಜನವಾಗಿದ್ದು, ಆಸ್ಪತ್ರೆಯ ಕೋವಿಡ್ ವಾರಿಯರ್ಸ್‌ಗಳಿಗೆ ಸಂತಸ ಮೂಡಿದೆ..!!

    ಸ್ವಚ್ಛತೆ, ವೈದ್ಯಕೀಯ ಸೇವೆಯಲ್ಲಿನ ಗುಣಮಟ್ಟ ಸೇರಿದಂತೆ ಅನೇಕ ಮಾನದಂಡಗಳನ್ನು ಆಧರಿಸಿ ಆರೋಗ್ಯ ಇಲಾಖೆ ಪ್ರತಿ ವರ್ಷ ಕಾಯಕಲ್ಪ ಪ್ರಶಸ್ತಿ ನೀಡಿ ಪ್ರೋತ್ಸಾಹ ನೀಡುತ್ತದೆ. ಬಾಗಲಕೋಟೆ ಜಿಲ್ಲಾ ಆಸ್ಪತ್ರೆಯು 2017-18, 2018-19 ಸಾಲಿನಲ್ಲಿ ಸಮಾಧಾನಕರ ಬಹುಮಾನ ಪಡೆದುಕೊಂಡಿತ್ತು. 2019-2020 ಸಾಲಿನಲ್ಲಿಯೂ ಮತ್ತೊಮ್ಮೆ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ತನ್ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ.

    ಕಾಯಕಲ್ಪ ಪ್ರಶಸ್ತಿಯ ಮಾನದಂಡಗಳೇನು ?
    ಕಾಯಕಲ್ಪ ಪ್ರಶಸ್ತಿಗಾಗಿ ರಾಜ್ಯದ 30 ಜಿಲ್ಲೆಗಳ ಜಿಲ್ಲಾ ಆಸ್ಪತ್ರೆಗಳಲ್ಲಿನ ವೈದ್ಯಕೀಯ ಸೌಲಭ್ಯ, ಮೂಲ ಸೌಕರ್ಯ, ಸ್ವಚ್ಛತೆ, ಸಿಬ್ಬಂದಿಗಳ ಕಾರ್ಯತತ್ವರತೆ, ತ್ಯಾಜ್ಯ ವಿಲೇವಾರಿ, ಆಸ್ಪತ್ರೆ ಮತ್ತು ದಾಖಲಾತಿಗಳ ನಿರ್ವಹಣೆ ಬಗ್ಗೆ ಆರೋಗ್ಯ ಇಲಾಖೆಯ ಮೇಲಾಧಿಕಾರಿಗಳು ಪರಿಶೀಲನೆ ನಡೆಸುತ್ತಾರೆ. ಅಲ್ಲದೆ ವೈದ್ಯಕೀಯ ದೊರೆಯುವ ಬಗ್ಗೆ ರೋಗಿಗಳಿಂದ ಪೀಲ್ಡ್ ಬ್ಯಾಕ್ ಪಡೆದು ಅಂಕಗಳನ್ನು ನೀಡುತ್ತಾರೆ. ಇದರಲ್ಲಿ ಉತ್ತಮ ಅಂಕ ಪಡೆದ ಜಿಲ್ಲಾ ಆಸ್ಪತ್ರೆಗಳಿಗೆ ಪ್ರಶಸ್ತಿ ನೀಡಲಾಗುತ್ತದೆ. ಬಾಗಲಕೋಟೆ ಜಿಲ್ಲಾ ಆಸ್ಪತ್ರೆಯು ಸಮಾಧಾನಕರ ಪ್ರಶಸ್ತಿ ಪಡೆದುಕೊಂಡಿದ್ದು, 3 ಲಕ್ಷ ರೂ.ನಗದು, ಪ್ರಶಸ್ತಿ ಪತ್ರ ವಿತರಿಸಲಾಗುತ್ತದೆ.

    ಆದ ಬದಲಾವಣೆಗಳೇನು?
    ಜಿಲ್ಲಾ ಆಸ್ಪತ್ರೆಯಲ್ಲಿನ ಸೇವೆ, ಗಲೀಜಿನ ಬಗ್ಗೆ ಮೊದಲು ಸಾರ್ವಜನಿಕರಿಂದ ದೂರುಗಳ ಸುರಿಮಳೆಯಾಗುತ್ತಿತ್ತು. ಜಿ.ಪಂ ಸಭೆಗಳಲ್ಲಿಯೂ ಈ ಬಗ್ಗೆ ಪ್ರತಿಧ್ವನಿಸುತ್ತಿತ್ತು. ಆದರೇ ಕಳೆದ ಮೂರು ವರ್ಷಗಳಿಂದ ಜಿಲ್ಲಾ ಆಸ್ಪತ್ರೆಗಳ ಚಿತ್ರಣ ಬದಲಾಗಿ ಹೋಗಿದೆ. ಆಸ್ಪತ್ರೆ ಒಳ ಹಾಗೂ ಹೊರ ಆವರಣ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಹಸಿರೀಕರಣಕ್ಕೆ ಒತ್ತು ನೀಡಲಾಗಿದೆ. ವಾಹನಗಳ ಪಾರ್ಕಿಂಗ್‌ಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ವೈದ್ಯರು ಹಾಗೂ ಇತರೆ ಸಿಬ್ಬಂದಿಗಳಿಗೆ ಸೇವೆ ಸಮರ್ಪಕವಾಗಿ ಕೈಗೊಳ್ಳಲು ಕ್ರಮ ತೆಗೆದುಕೊಳ್ಳಲಾಗಿದೆ. ಮಕ್ಕಳಿಗಾಗಿ ಪ್ಲೇ ಹೋಮ್ ಸ್ಥಾಪಿಸಲಾಗಿದೆ. ಅಲ್ಲದೆ ಕೋವಿಡ್ ಸೋಂಕು ಚಿಕಿತ್ಸೆ ಆರಂಭವಾದ ಬಳಿಕ ಜಿಲ್ಲಾ ಆಸ್ಪತ್ರೆಯನ್ನು ಹೈಟೆಕ್ ಮಾದರಿಯಲ್ಲಿ ಸಿದ್ಧಗೊಳಿಸಲಾಗಿದೆ. ವಾರಿಯರ್ಸ್‌ಗಳ ಸುರಕ್ಷತೆಗೆ ಕ್ರಮ ತೆಗೆದುಕೊಳ್ಳಲಾಗಿದೆ. ಒಟ್ಟಾರೆ ಜಿಲ್ಲಾ ಆಸ್ಪತ್ರೆಯು ಖಾಸಗಿ ಆಸ್ಪತ್ರೆಗಳಿಗೆ ಪೈಪೋಟಿ ನೀಡುವಷ್ಟು ಸ್ಥಿತಿ ಬದಲಾಗಿದೆ.

    ಇನ್ನು ಪ್ರಶಸ್ತಿಯ ಮೊತ್ತದ ಶೇ. 20 ರಷ್ಟು ಹಣವ ಸಿಬ್ಬಂದಿಗೆ ಮೀಸಲಿಡಲಾಗುತ್ತದೆ. ಉಳಿದ ಹಣದಲ್ಲಿ ಹಾಗೂ ಸರ್ಕಾರದಿಂದ ಹೆಚ್ಚುವರಿ ಅನುದಾನದಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ವಿವಿಧ ರೀತಿಯಲ್ಲಿ ಸೌಲಭ್ಯ ಅತ್ಯಾಧುನಿಕರಣಗೊಳಿಸಲು ಸಿದ್ಧತೆ ಕೈಗೊಳ್ಳಲಾಗಿದೆ. ಹೈಟೆಕ್ ಮರಣೋತ್ತರ ಪರೀಕ್ಷೆ ಕೋಣೆ, 5 ಶವಗಳನ್ನು ಇಡಬಹುದಾದ ಕೋಲ್ಡ್ ಸ್ಟೋರೇಜ್, ಎಲ್ಲ ವಾರ್ಡ್‌ಗಳಲ್ಲಿ ಡಿಜಿಟಲ್ ಎಕ್ಷರೇ ಮಶೀನ್, ಆಯುವೇದ ಸಸ್ಯಗಳ ಉದ್ಯಾನವನ ಸೇರಿದಂತೆ ನಾನಾ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾ ಆಸ್ಪತ್ರೆ ಸರ್ಜನ್ ಡಾ.ಪ್ರಕಾಶ ಬಿರಾದಾರ ತಿಳಿಸಿದ್ದಾರೆ.

    ಕಾಯಕಲ್ಪ ಪ್ರಶಸ್ತಿ ಪಡೆಯಲು ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳು, ಕಾರ್ಮಿಕರ ಶ್ರಮ ಅಪಾರವಾಗಿದೆ. ಸತತವಾಗಿ ಮೂರನೇ ವರ್ಷ ಪ್ರಶಸ್ತಿ ಪಡೆದುಕೊಂಡಿದ್ದು ಖುಷಿ ತಂದಿದೆ. ಮುಂದಿನ ಸಾರಿ ರಾಜ್ಯದಲ್ಲಿಯೇ ಮೊದಲ ಸ್ಥಾನ ಪಡೆಯಬೇಕು ಎನ್ನುವುದು ನಮ್ಮ ಆಶಯ. ಈ ನಿಟ್ಟಿನಲ್ಲಿ ಗಮನ ಹರಿಸಲಾಗುವುದು.
    ಡಾ.ಪ್ರಕಾಶ, ಬಿರಾದಾರ ಜಿಲ್ಲಾ ಆಸ್ಪತ್ರೆ ಸರ್ಜನ್





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts