More

    ಹೋಳಿಯಲ್ಲಿ ಕೋವಿಡ್ ವ್ಯಾಕ್ಸಿನ್ ಕಳಕಳಿ!

    ಬಾಗಲಕೋಟೆ: ಕೋವಿಡ್ ಎರಡನೇ ಅಲೆ ಬಂದೈತರೀ… ಎಲ್ಲರೂ ವ್ಯಾಕ್ಸಿನ್ ಹಾಕೋಬೇಕು… ಅಯೋಧ್ಯ ಪತಿ ಪ್ರಭು ಶ್ರೀರಾಮ, ಸಹೋದರ ಲಕ್ಷ್ಮಣ, ನಾಗಾ ಸಾಧುಗಳ ಬಂದಾರ ಕೈ ಮುಗೀರಿ… ಯವ್ವಿ.. ಶಿವಾಜಿ ಮಹಾರಾಜ, ಸಂಗ್ಗೊಳ್ಳಿ ರಾಯಣ್ಣ ಏನ್ ಚಂದ ಅದಾರ…

    ಹೋಳಿ ಹಬ್ಬದ ಅಂಗವಾಗಿ ಬಾಗಲಕೋಟೆ ನಗರದಲ್ಲಿ ನಡೆದ ಸೋಗಿನ ಮೆರವಣಿಗೆಯಲ್ಲಿ ಕಂಡು ಬಂದ ದೃಶ್ಯಗಳಿವು. ಹಿರಿಯರು, ಯುವಕರು, ಮಕ್ಕಳು ವಿವಿಧ ವೇಷಧಾರಿ ಯುವಕರು ಮಾಡಿದ ಸೋಗಿನ ಬಂಡಿಗಳ ಮೆರವಣಿಗೆ ಹೋಳಿ ಉತ್ಸವಕ್ಕೆ ಮೆರುಗು ಹೆಚ್ಚಿಸುವಂತೆ ಮಾಡಿತು. ಹೋಳಿ ಹಬ್ಬದ ನಿಮಿತ್ತ 5 ದಿನ ಪ್ರತಿ ರಾತ್ರಿ ನಡೆಯುವ ಸೋಗಿನ ಮೆರವಣಿಗೆ ಕೂಡ ವಿಶೇಷತೆಯಿಂದ ನಡೆಯುತ್ತಿದೆ. ಬಣ್ಣದ ಬಂಡಿಗಳು ಇಲ್ಲದೆ ಸೊರಗಿದ ಕೋಟೆ ನಗರಿ ಹೋಳಿ ಹಬ್ಬಕ್ಕೆ ಸೋಗಿನ ಮೆರವಣಿಗೆ ಹಬ್ಬದ ಸಡಗರ ಇಮ್ಮಡಿಗೊಳಿಸಿದೆ.

    ‘ನಮ್ಮ ಸೋಗಿನ ಬಂಡಿ ನಮ್ಮ ಹೆಮ್ಮೆ’ ಎನ್ನುವ ಘೋಷಣೆ ಅಡಿಯಲ್ಲಿ ಹಳಪೇಟೆಯ(ಮಡು) ಸಾರ್ವಜನಿಕರು ಸಿದ್ಧಪಡಿಸಿದ್ದ ವಿವಿಧ ಪ್ರದರ್ಶನ ಭಕ್ತಿ, ಭಾವದಲ್ಲಿ ತೇಲುವಂತೆ ಮಾಡಿತು. ಕೋವಿಡ್ ವ್ಯಾಕ್ಸಿನ್ ಕುರಿತು ಸಾಮಾಜಿಕ ಕಳಕಳಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಗಂಗಾ ಪರಮೇಶ್ವರಿ ದೇವರ ಪಾತ್ರದಲ್ಲಿ ಸಾನಿಯಾ ಸುಗಂಧಿ ಮಿಂಚಿದರು. ಗಜಾನನ ಚೌಕ್ ಯುವಕ ಮಂಡಳಿಯ ಅಯೋಧ್ಯೆ ಪತಿ ಶ್ರೀರಾಮ ಪ್ರಭು ಪಾತ್ರದಲ್ಲಿ ಶ್ರೀಧರ ಪ್ರಧಾನಿ, ಲಕ್ಷ್ಮಣ ಪಾತ್ರದಲ್ಲಿ ಸಾಗರ ಮೀರಜಕರ, ಶಿವಾಜಿ ಮಹಾರಾಜ ವೇಷದಲ್ಲಿ ಶಿವರಾಜ ತಾಳಿಕೋಟಿ, ಸಂಗ್ಗೊಳ್ಳಿ ರಾಯಣ್ಣ ಪಾತ್ರದಲ್ಲಿ ಪ್ರವೀಣ ಪಲ್ಲೆದ ಕುದುರೆ ಮೇಲೆ ರಾಜ ಗಾಂಭೀರ್ಯದ ಹೆಜ್ಜೆ ಹಾಕಿದ್ದು ಆಕರ್ಷಿಸಿತು. ಇನ್ನು ಕಿಲ್ಲಾ ಓಣಿಯ ಯುವಕರು, ಮಕ್ಕಳು ಮೊದಲ ದಿನ ನಾಗಾ ಸಾಧುಗಳ ವೇಷದಲ್ಲಿ ಮಿಂಚಿದರು. ಸೋಗಿನ ಮೆರವಣಿಗೆ ದೇಶ ಭಕ್ತಿ, ಭಾವ- ಸಂದೇಶ ಸಾರುವಲ್ಲಿ ಯಶಸ್ವಿಯಾಯಿತು.

    ಈಚೆಗಿನ ದಿನಗಳಲ್ಲಿ ಕ್ಷೀಣಿಸಿದ್ದ ಸೋಗಿನ ಮೆರವಣಿಗೆ ಕೆಲವು ವರ್ಷದಿಂದ ಮರಳಿ ತನ್ನ ವೈಭವ ಪಡೆಯುತ್ತಿರುವುದು ನಗರ ಜನತೆಯಲ್ಲಿ ಹರ್ಷ ತಂದಿದೆ. ಮುಂದಿನ ವರ್ಷದಿಂದ ಹೋಳಿ ಉತ್ಸವಕ್ಕೆ ಸರ್ಕಾರ ಪ್ರೋತ್ಸಾಹ ನೀಡಲಿ ಎಂಬುದು ಸಾರ್ವಜನಿಕರ ಆಶಯವಾಗಿದೆ.

    ಐದು ದಿನ ಸೋಗು!
    ಬಣ್ಣದೋಕುಳಿ ಆಡುವ ಗಲ್ಲಿಯವರು ತಮ್ಮ ಬಣ್ಣದಾಟದ ಹಿಂದಿನ ರಾತ್ರಿ ಸೋಗಿನ ಮೆರವಣಿಗೆ ನಡೆಸುತ್ತಾರೆ. ತುರಾಯಿ ಹಲಗೆಯ ನಿನಾದ ಜತೆಗೆ, ನಿಶಾನೆಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸೋಗಿನ ಮೆರವಣಿಗೆ ಸಂಚರಿಸುತ್ತದೆ. ಬಹು ವರ್ಷಗಳ ಹಿಂದೆಯೇ ಬಣ್ಣದಾಟ ಮೂರು ದಿನಕ್ಕೆ ಸೀಮಿತಗೊಳಿಸಲಾಗಿದೆ. ಆದರೆ, ಸೋಗಿನ ಮೆರವಣಿಗೆ ಯಥಾಪ್ರಕಾರ ಮೊದಲಿನ ಪದ್ಧತಿಯಂತೆ ಜರುಗುತ್ತದೆ. ಕಿಲ್ಲಾ, ಹಳಪೇಟೆ, ಹೊಸಪೇಟೆ, ಜೈನಪೇಟೆ, ವೆಂಕಟಪೇಟೆ ಗಲ್ಲಿಯ ಜನರು ಸೋಗಿನ ಮೆರವಣಿಗೆ ಮಾಡುತ್ತಾರೆ. ಸೋಗಿನ ಮೆರವಣಿಗೆ ಸಾಮಾಜಿಕ ಹೋರಾಟ, ದೇಶ ಭಕ್ತಿ, ಧಾರ್ಮಿಕತೆ, ಭಾವೈಕ್ಯತೆ, ಪೌರಾಣಿಕ ಪರಂಪರೆಗಳನ್ನು ಸಾಕ್ಷಿಕರಿಸುತ್ತದೆ. ಮೆರವಣಿಗೆ ನೋಡಲು ಮಕ್ಕಳು, ಮಹಿಳೆ, ವೃದ್ಧರು ಮುಗಿಬಿಳುತ್ತಾರೆ.

    ಬಾಗಲಕೋಟೆ ಹೋಳಿ ಕೇವಲ ಬಣ್ಣದಾಟಕ್ಕೆ ಸೀಮಿತವಾಗಿಲ್ಲ. ಸೋಗಿನ ಮೆರವಣಿಗೆ ಮೂಲಕ ಸಾಮಾಜಿಕ, ಧಾರ್ಮಿಕ, ದೇಶ ಪ್ರೇಮದ ಸಂದೇಶ ಸಾರುತ್ತದೆ. ಮುಂದಿನ ವರ್ಷದಿಂದ ಸರ್ಕಾರದ ಪ್ರೋತ್ಸಾಹ ಸಿಗಬೇಕು. ಬಣ್ಣದಾಟ, ಸೋಗಿನ ಬಂಡಿಗಳ ಮೆರವಣಿಗೆ ವೈಭವ ಮತ್ತಷ್ಟು ಹೆಚ್ಚಿಸಬೇಕು.
    ಸಂಜೀವ ವಾಡ್ಕರ್ ಹೋಳಿ ಆಚರಣೆ ಸಮಿತಿ ಮುಖಂಡ



    ಹೋಳಿಯಲ್ಲಿ ಕೋವಿಡ್ ವ್ಯಾಕ್ಸಿನ್ ಕಳಕಳಿ!



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts