More

  ಕೋಟೆನಾಡಿನಲ್ಲಿ ಮಕ್ಕಳ ಲಸಿಕಾ ಅಭಿಯಾನಕ್ಕೆ ಚಾಲನೆ

  ಬಾಗಲಕೋಟೆ: ಜಿಲ್ಲೆಯಲ್ಲಿ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವಿಡ್-19 ಲಸಿಕೆ ನೀಡುವ ಲಸಿಕಾಕರಣ ಕೋಟೆನಾಡಿನಲ್ಲಿ ಸೋಮವಾರ ಆರಂಭಗೊಂಡಿತು.

  ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಲಸಿಕಾಕರಣ ಅಭಿಯಾನಕ್ಕೆ ಶಾಸಕ ವೀರಣ್ಣ ಚರಂತಿಮಠ ಚಾಲನೆ ನೀಡಿದರು.

  ನಂತರ ಮಾತನಾಡಿ, ದೇಶಾದ್ಯಂತ ಸೋಮವಾರದಿಂದ ಲಸಿಕಾ ಅಭಿಯಾನ ಪ್ರಾರಂಭವಾಗಿದ್ದು, ಬಾಗಲಕೋಟೆ ಜಿಲ್ಲೆಯಲ್ಲಿ 15 ರಿಂದ 18 ವರ್ಷದ 1 ಲಕ್ಷಕ್ಕೂ ಹೆಚ್ಚು ಮಕ್ಕಳು ಇದ್ದಾರೆ. ಅವರೆಲ್ಲರಿಗೂ ಲಸಿಕೆ ನೀಡಲು ಜಿಲ್ಲಾದ್ಯಂತ ಒಟ್ಟು 250 ತಂಡಗಳು ಏಕಕಾಲದಲ್ಲಿ ಕಾರ್ಯನಿರ್ವಹಿಸಲಿವೆ. ಈಗಾಗಲೇ ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಮೊದಲ ಡೋಸ್ ಶೇ.100 ರಷ್ಟು, ಎರಡನೇ ಡೋಸ್ ಶೇ.82 ರಷ್ಟು ಗುರಿ ಸಾಧನೆ ಮಾಡಲಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ದೂರದೃಷ್ಟಿ ಉಳ್ಳ ನಾಯಕ ಎಂಬುದು ಇದರಿಂದ ತಿಳಿಯುತ್ತದೆ ಎಂದು ಬಣ್ಣಿಸಿದರು.

  ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿ ವರ್ಗದ ಮುತುವರ್ಜಿಯಿಂದಾಗಿ ಜಿಲ್ಲೆಯಲ್ಲಿ ಕೋವಿಡ್ ಶೂನ್ಯ ಪ್ರಮಾಣದಲ್ಲಿದೆ. ಜಾಗತಿಕ ಮಟ್ಟದಲ್ಲಿ ಅತೀ ದೊಡ್ಡ ಪ್ರಮಾಣದಲ್ಲಿ ಕೋವಿಡ್ ಲಸಿಕೆಯನ್ನು ಉಚಿತವಾಗಿ ನೀಡಿದ ದೇಶ ಭಾರತ. ಕೋವಿಡ್ ಮೂರನೇ ಅಲೆ ಮಹಾರಾಷ್ಟ್ರ, ಪಶ್ವಿಮ ಬಂಗಾಲ, ದೆಹಲಿಗಳಲ್ಲಿ ಹೆಚ್ಚಾಗುತ್ತಿದ್ದು, ಜಾಗೃತಿ ವಹಿಸಿದರೆ ರಾಜ್ಯದಲ್ಲಿ ಲಾಕ್‌ಡೌನ್ ಮಾಡುವ ಪ್ರಸಂಗ ಬರುವದಿಲ್ಲ. ಆದ್ದರಿಂದ ಸಾರ್ವಜನಿಕರು ಸರ್ಕಾರ ಕಾಲಕಾಲಕ್ಕೆ ಹೊರಡಿಸುವ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಮನವಿ ಮಾಡಿದರು.

  ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಮಾತನಾಡಿ, ಕೋವಿಡ್ ಮಹಾಮಾರಿಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಂತ ಹಂತವಾಗಿ ಕೋವಿಡ್ ಲಸಿಕೆ ನೀಡುವ ಅಭಿಯಾನವನ್ನು ಹಮ್ಮಿಕೊಳ್ಳುತ್ತಿದೆ. ಇದರಲ್ಲಿ ಎಲ್ಲರೂ ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು. ಆರೋಗ್ಯವೇ ಭಾಗ್ಯ, ಇದನ್ನು ಸದಾಕಾಲ ಉಳಿಸಿಕೊಳ್ಳಬೇಕು. ಅಂದಾಗ ಸದೃಢವಾಗಿ ಜೀವಿಸಲು ಸಾಧ್ಯವಾಗುತ್ತದೆ ಎಂದರು.

  ಜಿಲ್ಲಾಧಿಕಾರಿ ಕೆ.ರಾಜೇಂದ್ರ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ಎಲ್ಲರ ಸಹಕಾರದಿಂದ ಲಸಿಕಾಕರಣದಲ್ಲಿ ಶೇ.101 ರಷ್ಟು ಪ್ರಗತಿ ಸಾಧಿಸಲು ಸಾಧ್ಯವಾಗಿದೆ. ಮಕ್ಕಳು ಸಹ ಸಹಕಾರ ನೀಡಿದ್ದಾರೆ. ತಮ್ಮ ಮನೆಯ ಎಲ್ಲ ಸದಸ್ಯರು ಲಸಿಕೆ ಹಾಕಿಸುವಲ್ಲಿ ಮಕ್ಕಳ ಪಾತ್ರ ಹಿರಿದಾಗಿದೆ. ಇದರಿಂದ ಲಸಿಕೆಯಲ್ಲಿ ಗುರಿ ತಲುಪಲು ಸಾಧ್ಯವಾಗಿದೆ. ಕೋವಿಡ್ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತಿದೆ. ದೇಶದಲ್ಲಿಯೂ ಸಹ ಕಾಲಿಟ್ಟಿದ್ದು, ಎಲ್ಲರೂ ಮುನ್ನಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು. ಮುಖ್ಯವಾಗಿ ಮಾಸ್ಕ ಧರಿಸುವುದು, ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಪರಸ್ಪರ ಅಂತರ್ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

  ಲಾಕ್‌ಡೌನ್ ಕೀ ಜನರ ಕೈಯಲ್ಲಿದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೇಳಿಕೆಯಲ್ಲಿ ಸತ್ಯವಿದೆ. ಎಲ್ಲವು ನಮ್ಮ ಕೈಯಲ್ಲಿದೆ. ಎಚ್ಚರ ತಪ್ಪಿದರೇ ಲಾಕ್‌ಡೌನ್ ಅನಿವಾರ್ಯ ಆಗಲಿದೆ. ಜಾತ್ರೆ, ಜನದಟ್ಟನೆ ಆಗದಂತೆ ನೋಡಿಕೊಳ್ಳಬೇಕು. ಮಾಸ್ಕ, ಪರಸ್ಪರ ಅಂತರ್ ಕಡ್ಡಾಯವಾಗಿ ಪಾಲನೆ ಮಾಡಬೇಕು.
  – ವೀರಣ್ಣ ಚರಂತಿಮಠ ಶಾಸಕ

  ಕೋವಿಡ್ ಸೋಂಕಿನಿಂದ ರಕ್ಷಣೆ ಪಡೆಯಲು ಎಲ್ಲರು ಲಸಿಕೆ ಹಾಕಿಸಿಕೊಳ್ಳುವುದು ಉತ್ತಮ. ಜಿಲ್ಲೆಯಲ್ಲಿ ಪ್ರಥಮವಾಗಿ ನಾವು ಲಸಿಕೆ ಪಡೆದುಕೊಂಡಿದ್ದೇವೆ ಎನ್ನುವ ಸಂತೋಷವಿದೆ. ಲಸಿಕೆ ಬಗ್ಗೆ ಯಾವುದೇ ಆತಂಕ ಬೇಡ. ಭಯ ಇಲ್ಲದೆ ಹಾಕಿಸಿಕೊಳ್ಳಬೇಕು. ಕೋವಿಡ್ ಮುಕ್ತ ಭಾರತ ನಿರ್ಮಿಸೋಣ.
  – ಭಾಗ್ಯಶ್ರೀ ಪ್ರಥಮ ವ್ಯಾಕ್ಸಿನ್ ಪಡೆದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ
  ಪಲ್ಲವಿ ಹೈಸ್ಕೋಲ್ ವಿಭಾಗದಲ್ಲಿ ಪ್ರಥಮ ಲಸಿಕೆ ಪಡೆದ ವಿದ್ಯಾರ್ಥಿನಿ (ಬಾಗಲಕೋಟೆ)

  
  
  ಕೋಟೆನಾಡಿನಲ್ಲಿ ಮಕ್ಕಳ ಲಸಿಕಾ ಅಭಿಯಾನಕ್ಕೆ ಚಾಲನೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts