More

    ಚೆಕ್‌ಪೋಸ್ಟ್ ಮುಖಾಂತರವೇ ಪ್ರವೇಶ-ನಿರ್ಗಮನ

    ಬಾಗಲಕೋಟೆ: ಕರೊನಾ ಸೋಂಕು ಹರಡದಂತೆ ಜಿಲ್ಲೆಯ ಗಡಿಭಾಗಗಳಲ್ಲಿ ನಾಕಾಬಂದಿ ಮಾಡಲಾಗಿದ್ದು, ಯಾವುದೇ ಖಾಸಗಿ ವಾಹನಗಳು ಕಡ್ಡಾಯವಾಗಿ ಚೆಕ್‌ಪೋಸ್ಟ್‌ನಲ್ಲೇ ಸಾಗಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಜೇಂದ್ರ ಸೂಚಿಸಿದ್ದಾರೆ.

    ಈ ಕುರಿತು ಪ್ರಕಟಣೆ ನೀಡಿದ ಅವರು, ಈಗಾಗಲೇ ಬೆಳಗಾವಿ, ವಿಜಯಪುರ, ಬೆಂಗಳೂರು, ಹುಬ್ಬಳ್ಳಿ ಹಾಗೂ ರಾಯಚೂರು ಮಾರ್ಗಗಳಲ್ಲಿ ಚೆಕ್‌ಪೋಸ್ಟ್ ಹಾಕಲಾಗಿದೆ. ಜಿಲ್ಲೆಯ ಮುಧೋಳ ತಾಲೂಕಿನ ಲೋಕಾಪುರ, ಬಾದಾಮಿ ತಾಲೂಕಿನ ಕುಳಗೇರಿ ಕ್ರಾಸ್, ಇಳಕಲ್ಲ ತಾಲೂಕಿನ ಹನಮನಾಳ, ಹುನಗುಂದ ತಾಲೂಕಿನ ನಂದವಾಡಗಿ, ಬಾಗಲಕೋಟೆ ಮತ್ತು ಬಾದಾಮಿ ರೈಲ್ವೆ ಸ್ಟೇಷನ್‌ಲ್ಲಿ ತಲಾ ಒಂದರಂತೆ ಒಟ್ಟು 6 ಚೆಕ್‌ಪೋಸ್ಟ್‌ಗಳ ಮೂಲಕ ವಿದೇಶದಿಂದ ಹಾಗೂ ಬೇರೆ ರಾಜ್ಯಗಳಿಂದ ಬರುವವರ ಮೇಲೆ ನಿಗಾ ವಹಿಸಲಾಗುತ್ತಿದೆ. ತುರ್ತು ಮತ್ತು ಅನಿವಾರ್ಯ ಸಂದರ್ಭದಲ್ಲಿ ಮಾತ್ರವೇ ಜನರು ಪ್ರಯಾಣಿಸಬೇಕು. ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತಮ್ಮ ವ್ಯಾಪ್ತಿಯ ವಾಹನಗಳ ಮೇಲೆ, ಟ್ರಾವೆಲ್ ಏಜೆನ್ಸಿಗಳ ಮೇಲೆ ನಿಗಾ ವಹಿಸಿ ಮಾಹಿತಿ ನೀಡುವಂತೆ ಸೂಚಿಸಲಾಗಿದೆ. ಜಿಲ್ಲೆಯಿಂದ ಹೊರ ಜಿಲ್ಲೆಗಳಿಗೆ ಸಂಪೂರ್ಣ ನಾಕಾಬಂದಿ ಹೇರಲಾಗಿದೆ. ಸಾರ್ವಜನಿಕರು ಎಚ್ಚರಿಕೆಯಿಂದಿರಬೇಕು. ಈಗಾಗಲೇ ಜಿಲ್ಲಾದ್ಯಂತ ಮಾ.31 ವರೆಗೆ ಸಿಆರ್‌ಪಿಸಿ 144 ಕಲಂ ಜಾರಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

    ಜಿಲ್ಲೆಯಲ್ಲಿ ಈಗಾಗಲೇ ಹೋಮ್ ಕ್ವಾರಂಟೈನ್‌ನಲ್ಲಿರುವವರ ಕೈಗಳ ಮೇಲೆ ಸೀಲ್ ಒತ್ತಲಾಗುತ್ತಿದೆ. ಹೊರ ಜಿಲ್ಲೆಗಳಿಂದ ಪ್ರಯಾಣಿಸುವ ಜಿಲ್ಲೆಯ ಸರ್ಕಾರಿ ಮತ್ತು ಸಿಬ್ಬಂದಿ ಕಡ್ಡಾಯವಾಗಿ ಜಿಲ್ಲೆಯಲ್ಲಿಯೇ ಉಳಿಯಬೇಕು. ಜನ ಸೇರದಂತೆ ಎಚ್ಚರಿಕೆಯಿಂದ ಮನೆಯಲ್ಲಿಯೇ ಯುಗಾದಿ ಹಬ್ಬವನ್ನು ಸರಳ-ಸುರಕ್ಷಿತವಾಗಿ ಆಚರಣೆ ಮಾಡಬೇಕು. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಪಂ ಸಿಇಒ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಪ್ರತಿದಿನ ಸಿಟಿ ರೌಂಡ್ಸ್ ಮೂಲಕ ಪರಿಸ್ಥಿತಿ ಅವಲೋಕಿಸುತ್ತಿರುತ್ತಾರೆ ಎಂದು ತಿಳಿಸಿದ್ದಾರೆ.

    ಅಕ್ರಮ ದಾಸ್ತಾನುಗಳ ತಪಾಸಣೆ
    ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿರ್ದೇಶನದಂತೆ ಸಾರ್ವಜನಿಕರಿಗೆ ಅಗತ್ಯವಿರುವ 2 ಪ್ಲೈ ಹಾಗೂ 3 ಪ್ಲೈ ಸರ್ಜಿಕಲ್ ಮಾಸ್ಕ್ ಹಾಗೂ ಸ್ಯಾನಿಟೈಸರ್‌ಗಳನ್ನು ಹೆಚ್ಚಿನ ದರಕ್ಕೆ ಮಾರಾಟವಾಗದಂತೆ ಅನಧಿಕೃತ ದಾಸ್ತಾನು ತಡೆಯುವ ನಿಟ್ಟಿನಲ್ಲಿ ಸದರಿ ವಸ್ತುಗಳನ್ನು ಅಗತ್ಯ ವಸ್ತುಗಳ ಕಾಯ್ದೆಯಡಿಯಲ್ಲಿ ತರಲಾಗಿದೆ. ಜತೆಗೆ ಕಾನೂನು ಮಾಪನಶಾಸ, ಆಹಾರ ಇಲಾಖೆ ಮತ್ತು ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳನ್ನೊಳಗೊಂಡಂತೆ 6 ತಂಡಗಳನ್ನು ರಚಿಸಿ ಅಕ್ರಮ ದಾಸ್ತಾನುಗಳ ತಪಾಸಣೆ ಜರುಗಿಸುವಂತೆ ಆದೇಶಿಸಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ 130 ಸ್ಥಳಗಳಲ್ಲಿ ಔಷಧ ಅಂಗಡಿಗಳ ತಪಾಸಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

    ಕೋವಿಡ್-19 ಹರಡುವಿಕೆ ಹಿನ್ನೆಲೆ ಸರ್ಕಾರದ ಆದೇಶದನ್ವಯ ಜಿಲ್ಲೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲಾಗುತ್ತಿರುವ ತೊಗರಿ, ಕಡಲೆ ಹಾಗೂ ಶೇಂಗಾ ಖರೀದಿ ಪ್ರಕ್ರಿಯೆಯನ್ನು ಮಾ.31 ವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
    – ಕೆ.ರಾಜೇಂದ್ರ ಜಿಲ್ಲಾಧಿಕಾರಿ ಬಾಗಲಕೋಟೆ





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts