More

  ಬಂದ್ ಪ್ರತಿಭಟನೆಗೆ ಸೀಮಿತ !

  ಬಾಗಲಕೋಟೆ: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಬುಧವಾರ ಕರೆ ನೀಡಿದ್ದ ಭಾರತ್ ಬಂದ್‌ಗೆ ಬಾಗಲಕೋಟೆ ಜಿಲ್ಲೆಯಲ್ಲಿ ಬೆಂಬಲ ವ್ಯಕ್ತವಾಗಲಿಲ್ಲ. ಕೇವಲ ಪ್ರತಿಭಟನೆಗೆ ಸೀಮಿತವಾಯಿತು.

  ಬಾಗಲಕೋಟೆ ನಗರ ಸೇರಿ ಜಿಲ್ಲೆಯ ಮುಧೋಳ, ಲೋಕಾಪುರ, ಜಮಖಂಡಿ, ಬೀಳಗಿ, ಬಾದಾಮಿ, ಹುನಗುಂದ ಭಾಗದಲ್ಲಿ ಸಾಂಕೇತಿಕ ಪ್ರತಿಭಟನೆಗಳು ಜರುಗಿದವು. ಜಿಲ್ಲೆಯಲ್ಲಿ ಬೆಳಗ್ಗೆಯಿಂದಲೇ ಸರ್ಕಾರಿ ಬಸ್‌ಗಳು, ಖಾಸಗಿ ವಾಹನಗಳು ರಸ್ತೆಗೆ ಇಳಿದು ದಿನ ನಿತ್ಯದಂತೆ ಸೇವೆ ನೀಡಿದವು. ಕೆಲವು ಬ್ಯಾಂಕ್‌ಗಳ ನೌಕರರು ಬಂದ್‌ಗೆ ಬೆಂಬಲಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರಿಂದ ಗ್ರಾಹಕರು ಪರದಾಡಬೇಕಾಯಿತು. ಉಳಿದಂತೆ ಸರ್ಕಾರಿ ಕಚೇರಿ, ಸಂಘ-ಸಂಸ್ಥೆಗಳು, ಶಾಲೆ, ಕಾಲೇಜುಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಅಂಗಡಿ, ಮುಂಗಟ್ಟುಗಳ ವ್ಯಾಪಾರ ಸಾಂಗವಾಗಿ ನಡೆಯಿತು.

  ಇನ್ನು ಅಂಗನವಾಡಿ ಕಾರ್ಯಕರ್ತರು, ಹಮಾಲರ ಸಂಘ, ಕರ್ನಾಟಕ ರಾಜ್ಯ ಔಷಧ ಮತ್ತು ಮಾರಾಟ ಪ್ರತಿನಿಧಿಗಳ ಸಂಘ, ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್ ಸಂಘಟನೆ, ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್, ಕೆಎಸ್‌ಆರ್‌ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್‌ ಯೂನಿಯನ್ ಸೇರಿ ಹತ್ತಕ್ಕೂ ಹೆಚ್ಚು ಸಂಘಟನೆಗಳು ವಿವಿಧ ಭಾಗದಲ್ಲಿ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದವು.

  ಬ್ಯಾಂಕ್ ನೌಕರರ ಪ್ರತಿಭಟನೆ
  ನವನಗರದ ವಿಜಯ ಬ್ಯಾಂಕ್ ಶಾಖೆ ಎದುರು ನಾನಾ ಬ್ಯಾಂಕ್‌ಗಳ ನೌಕರರು ಅಖಿಲ ಭಾರತೀಯ ಬ್ಯಾಂಕ್ ನೌಕರರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರ ಬೆಲೆ ಏರಿಕೆ ತಡೆಗಟ್ಟಬೇಕು. ಚಿಲ್ಲರೆ ವ್ಯಾಪಾರದ ಮೇಲೆ ವಿದೇಶಿ ಬಂಡವಾಳ ಹೂಡಲು ಅವಕಾಶ ನೀಡಬಾರದು. ಸಾಮಾಜಿಕ ಉದ್ಯಮ ವಲಯಗಳನ್ನು ಕಾಪಾಡಬೇಕು. ಡಾ.ಸ್ವಾಮಿನಾಥನ್ ವರದಿ ಅನುಷ್ಠಾನಕ್ಕೆ ತರಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.
  ಎ.ಎಚ್.ಬಾದಾಮಿ, ಆರ್.ವಿ.ಮುರನಾಳ, ಪ್ರಭು ಬೆಣ್ಣೂರ, ಆರ್.ಜಿ.ಬೀಳಗಿ, ಎಂ.ಎಂ.ಬಾದೋಡಗಿ ಸೇರಿ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

  ರಾಜ್ಯ ಔಷಧ ಮತ್ತು ಮಾರಾಟ ಪ್ರತಿನಿಧಿಗಳ ಸಂಘ
  ಕರ್ನಾಟಕ ರಾಜ್ಯ ಔಷಧ ಮತ್ತು ಮಾರಾಟ ಪ್ರತಿನಿಧಿಗಳ ಸಂಘದ ನೇತೃತ್ವದಲ್ಲಿ ಜಿಲ್ಲಾಡಳಿತ ಭವನ ಎದುರು ಪ್ರತಿಭಟನೆ ನಡೆಸಿದ ಔಷಧ ಮಾರಾಟ ಪ್ರತಿನಿಧಿಗಳು ಕೇಂದ್ರ ಸರ್ಕಾರವು 44 ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡಲು ಹೊರಟಿರುವುದನ್ನು ಕೂಡಲೇ ಕೈಬಿಡಬೇಕು. ಔಷಧಗಳ ಆನ್‌ಲೈನ್ ಮಾರಾಟಕ್ಕೆ ಬ್ರೇಕ್ ಹಾಕಬೇಕು. ಔಷಧಗಳು ಮತ್ತು ವೈದ್ಯಕೀಯ ಸಲಕರಣೆಗಳ ಮೇಲೆ ವಿಧಿಸಲಾಗಿರುವ ಜಿಎಸ್‌ಟಿ ಹಿಂಪಡೆಯಬೇಕು. ಕನಿಷ್ಠ 21 ಸಾವಿರ ರೂ. ವೇತನ ನೀಡಬೇಕು. ಕಾರ್ಮಿಕರಿಗೆ ಸಾರ್ವತ್ರಿಕ ಸಾಮಾಜಿಕ ಭದ್ರತೆ ಒದಗಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.

  ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಗಣೇಶ ಶಹಾಪುರ, ಸಂಗಮೇಶ ಅಬ್ಜಲಪುರ್, ವಿನಾಯಕ ದೇಸಾಯಿ, ರಾಘವೇಂದ್ರ ಗುಮಾಸ್ತೆ, ಶ್ರೀನಿವಾಸ ಕುಲಕರ್ಣಿ, ಅಕ್ಷಯ ಕವರದ ಸೇರಿ ಇತರರು ಇದ್ದರು.

  ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್ ಸಂಘಟನೆ ಕಾರ್ಯಕರ್ತರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು. ನಂತರ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು. ಸಂಘಟನೆ ಮುಖಂಡರಾದ ಆದಿನಾಥ ಸಾಕಳೆ, ಎಚ್.ಎಸ್.ಭಜಂತ್ರಿ, ಕೆ.ಕೆ.ಕದಂ, ಶ್ರೀನಾಥ್ ಪಾರ್ಥನಳ್ಳಿ, ಅಮಿತ್ ಸೋರಗೊಂಡ ಇದ್ದರು.

  ಕೆಎಸ್‌ಆರ್‌ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್ ಯೂನಿಯನ್
  ನವನಗರದ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಕಚೇರಿ ಎದುರು ದಿನವಿಡಿ ಧರಣಿ ಮಾಡಿದ ಕೆಎಸ್‌ಆರ್‌ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್ ಯೂನಿಯನ್ ಕಾರ್ಯಕರ್ತರು ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಕಾರ್ಮಿಕ ತಿದ್ದುಪಡಿ ಕಾನೂನು ಕೈಬಿಡಬೇಕು. ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ನೀಡಬೇಕು. ರಾಷ್ಟ್ರೀಯ ಬ್ಯಾಂಕ್‌ಗಳನ್ನು ವಿಲೀನ ಮಾಡಬಾರದು. ಹೊರಗುತ್ತಿಗೆ ಪದ್ಧತಿ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

  ಯೂನಿಯನ್ ಜಿಲ್ಲಾ ಘಟಕದ ಅಧ್ಯಕ್ಷ ಸಿ.ವಿ.ಶಿಕ್ಕೇರಿ, ಪ್ರಧಾನ ಕಾರ್ಯದರ್ಶಿ ಬಿ.ವಿ.ಕುಲಕರ್ಣಿ, ಉಪಪ್ರಧಾನ ಕಾರ್ಯದರ್ಶಿ ಸಿ.ಜಿ.ಸಿಂಗದ, ಎಸ್.ಎಸ್.ಬಡ್ಡಿ ಸೇರಿ ಸಾರಿಗೆ ಸಂಸ್ಥೆಯ ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

  ಕೆಲಸ ಸ್ಥಗಿತಗೊಳಿಸಿ ಹಮಾಲರ ಪ್ರತಿಭಟನೆ
  ಭಾರತ್ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿ ಬಾಗಲಕೋಟೆ ಹಮಾಲರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಹಮಾಲರು ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಹೀಗಾಗಿ ಲೋಡಿಂಗ್, ಅನ್‌ಲೋಡಿಂಗ್ ನಡೆಯದೆ ಬಾಗಲಕೋಟೆ ಎಪಿಎಂಸಿ ಸಂಪೂರ್ಣ ಸ್ತಬ್ಧವಾಗಿತ್ತು.
  ವಸತಿ ರಹಿತ ಹಮಾಲರಿಗೆ ಸೂಕ್ತ ವಸತಿ ಯೋಜನೆ ರೂಪಿಸಬೇಕು. ಅಸಂಘಟಿತ ಕಾರ್ಮಿಕರ ಭವಿಷ್ಯ ನಿಧಿ ಯೋಜನೆ ಜಾರಿ ಮಾಡಬೇಕು. ಎಪಿಎಂಸಿ ಕಾಯಕ ನಿಧಿಯಡಿ ಹಮಾಲಿ ಕಾರ್ಮಿಕರಿಗೆ 60 ವರ್ಷದ ನಂತರ ಒಂದು ಬಾರಿ 50 ಸಾವಿರ ರೂ. ನಿವೃತ್ತಿ ಪರಿಹಾರ, ಪ್ರತಿ ವರ್ಷ ಎರಡು ಜತೆ ಸಮವಸ ಹಾಗೂ ಸೂಕ್ತ ಪಿಂಚಣಿ ವ್ಯವಸ್ಥೆ ಜಾರಿ ಮಾಡಬೇಕು ಎಂದು ಆಗ್ರಹಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
  ಸಂಘದ ಅಧ್ಯಕ್ಷ ಸಿದ್ದಪ್ಪ ಜೇಗರಕಲ್ಲ, ಕಾರ್ಯದರ್ಶಿ ಭೀಮರಾಯ ಪರಸಾಪೂರ, ನಾಗೇಶ ಅಂಬಿಗೇರ, ಮುದಿಯಪ್ಪ ನಾಯಕ, ಶ್ರೀಶೈಲ ಅಂಬಿಗೇರ ಪ್ರತಿಭಟನೆ ನೇತೃತ್ವ ವಹಿಸಿದ್ದರು.

  ಕೇಂದ್ರ ವಿರುದ್ಧ ಗುಲಾಬಿ ಗ್ಯಾಂಗ್ ಆಕ್ರೋಶ
  ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಆಶಾ ಕಾರ್ಯಕರ್ತೆಯರು ಎಐಯುಟಿಯುಸಿ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

  ನವನಗರದ ಎಲ್‌ಐಸಿ ವೃತ್ತದಿಂದ ಪ್ರತಿಭಟನಾ ರ‌್ಯಾಲಿ ಮೂಲಕ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ಆಶಾ ಕಾರ್ಯಕರ್ತೆಯರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

  ಸರ್ಕಾರ ಗುತ್ತಿಗೆ ಪದ್ಧತಿಯನ್ನು ರದ್ದು ಮಾಡಿ ಸೇವೆಯನ್ನು ಕಾಯಂಗೊಳಿಸಬೇಕು. ಅಸಂಘಟಿತ ಕಾರ್ಮಿಕರಿಗೆ ಶಾಸನಬದ್ಧ ಭವಿಷ್ಯನಿಧಿ ಸ್ಥಾಪಿಸಬೇಕು. ಪಿಂಚಣಿ, ಸಾಮಾಜಿಕ ಭದ್ರತಾ ನಿಧಿ ಕಲ್ಪಿಸಬೇಕು. ಆಶಾ, ಅಂಗನವಾಡಿ, ಬಿಸಿಯೂಟ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.

  ಎಐಯುಟಿಯುಸಿ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಟಿ., ಸಹ ಸಂಚಾಲಕಿ ಅಂಜನಾ ಕುಂಬಾರ, ಸುರೇಖಾ ಕಾಳೆ, ಕಮಲಾ ತೇಲಿ, ಕಸ್ತೂರಿ ಅಂಗಡಿ, ಭಾರತಿ ಬಿರಾದಾರ, ಛಾಯಾ ಲಗಳಿ, ಸಿ.ಎಸ್.ನ್ಯಾಮಗೌಡ ಪ್ರತಿಭಟನೆ ನೇತೃತ್ವ ವಹಿಸಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts