More

    ಪೊಲೀಸರ ವಿರುದ್ಧ ಕಾನೂನು ಕ್ರಮ ಜರುಗಿಸಿ

    ಬಾಗಲಕೋಟೆ: ಅಕ್ರಮ ಗಣಿಗಾರಿಕೆ ವಾಹನಗಳನ್ನು ತಡೆಯಲು ಹೋದ ರೈತರ ಮೇಲೆ ಹಲ್ಲೆ ನಡೆಸಿದ ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆ ಅಧಿಕಾರಿಗಳ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಬೇವಿನಮಟ್ಟಿ, ಗುಂಡನಪಲ್ಲೆ ಗ್ರಾಮದ ರೈತರು ಜಿಲ್ಲಾಡಳಿತ ಭವನ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

    ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ರೈತರು, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರಿಗೆ ಮನವಿ ಸಲ್ಲಿಸಿದರು.

    ಬಾಗಲಕೋಟೆ ತಾಲೂಕಿನ ಶಿರೂರ ಗ್ರಾಮ ವ್ಯಾಪ್ತಿಯ ಸರ್ವೇ ನಂಬರ್ 282, 277, 276 ರಲ್ಲಿ ಒಟ್ಟು 13.89 ಹೆಕ್ಟೇರ್ ಪ್ರದೇಶದಲ್ಲಿ ಕವಿತಾ ಮೆಳ್ಳಿಗೇರಿ ಅವರ ಒಡೆತನದ ಸೋನಾ ಮಿನರಲ್ಸ್ ಕಂಪನಿ ಡೋಲೊಮೆಟ್ ಗಣಿಗಾರಿಕೆ ಮಾಡುತ್ತಿದೆ. ಇದು ಸಂಪೂರ್ಣ ಕಾನೂನು ಬಾಹಿರವಾಗಿ ನಡೆಯುತ್ತಿದೆ. ಸಿಡಿಮದ್ದುಗಳ ಸ್ಫೋಟಕಗಳಿಂದ ದೊಡ್ಡ ಪ್ರಮಾಣದಲ್ಲಿ ಕಂಪನ ಉಂಟಾಗುತ್ತಿದೆ. ಅಲ್ಲದೆ, ಮಲ್ಲಾಪುರ ಪುನರ್ವಸತಿ ಕೇಂದ್ರ, ಗುಂಡನಪಲ್ಲೆ ಪುನರ್ವಸತಿ ಕೇಂದ್ರ ಗ್ರಾಮಗಳ ಮುಖಾಂತರ ಗಣಿಗಾರಿಕೆ ವಾಹನಗಳು ಸಂಚರಿಸುತ್ತಿವೆ. ಈ ಗ್ರಾಮಗಳಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ರಸ್ತೆಗಳನ್ನು ಮಾಡಲಾಗಿದ್ದು, ಸರ್ಕಾರದ ನಿಯಮದಂತೆ 10 ಟನ್‌ಗಿಂತ ಹೆಚ್ಚು ತೂಕದ ವಾಹನಗಳು ಸಂಚಾರಿಸುವಂತಿಲ್ಲ. ಇದೀಗ ಗಣಿಗಾರಿಕೆ ವಾಹನಗಳು 20 ರಿಂದ 25 ಟನ್ ಡೋಲೊಮೆಟ್ ಕಲ್ಲುಗಳನ್ನು ತುಂಬಿಕೊಂಡು ಸಂಚಾರ ಮಾಡುತ್ತಿದ್ದರು ಸಹ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ದೂರಿದರು.

    ಇನ್ನು ಗ್ರಾಮದ ರಸ್ತೆಗಳು ಹಾಳು ಆಗಬಾರದು ಎನ್ನುವ ಉದ್ದೇಶದಿಂದ ಡಿ.13 ರಂದು ಗ್ರಾಮಗಳಲ್ಲಿ ಸಂಚರಿಸುತ್ತಿರುವ ಗಣಿಗಾರಿಕೆ ವಾಹನಗಳ ತಡೆದು ನಿಲ್ಲಿಸಲು ಗ್ರಾಮಸ್ಥರು ಮುಂದಾದಾಗ ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆ ಅಧಿಕಾರಿಗಳು, ಸಿಬ್ಬಂದಿ ಗ್ರಾಮಸ್ಥರ ಮೇಲೆಯೇ ಹಲ್ಲೆ ಮಾಡಿದ್ದಾರೆ. ಅಧಿಕಾರ ದುರಪಯೋಗ ಮಾಡಿಕೊಂಡ ಪಿಎಸ್‌ಐ ಹಾಗೂ ಸಿಬ್ಬಂದಿ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

    ಪ್ರವೀಣ ಪಾಟೀಲ, ಹಸನಪ್ಪ ಮಾದರ, ರಾಮಣ್ಣ ದೊಡ್ಡಮನಿ, ಅಶೋಕ ಪೂಜಾರಿ, ಶಿವಪ್ಪ ಮೇಲಿನಮನಿ, ಬಸವರಾಜ ಧರ್ಮಂತಿ, ಕೃಷ್ಣಪ್ಪ ಪೂಜಾರಿ, ಸಿದ್ದಪ್ಪ ದೊಡ್ಡಮನಿ ಸೇರಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts