More

    ಸೂರಿಲ್ಲದೆ ಬಾಣಂತಿ, ವೃದ್ಧೆ ಪರದಾಟ..!

    ಬಾಗಲಕೋಟೆ: ನೆರೆ ಹಾಗೂ ಅತಿವೃಷ್ಟಿಯಿಂದ ಈ ವರ್ಷವೂ ಬಾಗಲಕೋಟೆ ಜಿಲ್ಲೆ ನಲುಗಿ ಹೋಗಿದೆ. ಸಾವಿರಾರು ಮನೆಗಳು ನೆಲಕ್ಕುರಳಿವೆ. ಆದರೆ, ಫಲಾನುಭವಿಗಳ ಆಯ್ಕೆಯಲ್ಲಿ ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿ ಬರುತ್ತಲೇ ಇವೆ. ಇದೀಗ ಬಾಗಲಕೋಟೆ ತಾಲೂಕಿನ ಚಿಕ್ಕಸಂಶಿ ಗ್ರಾಮದಲ್ಲಿ ಅಂತದ್ದೇ ಕೂಗು ದಟ್ಟವಾಗಿದೆ.

    ಬೀಳಗಿ ವಿಧಾನಸಭಾ ಕ್ಷೇತ್ರದ ಚಿಕ್ಕಸಂಶಿ ಗ್ರಾಮದಲ್ಲಿ ಮಳೆಯಿಂದ ಬಿದ್ದ ಮನೆಗಳನ್ನು ಆಯ್ಕೆ ಮಾಡುವಲ್ಲಿ ಅಧಿಕಾರಿಗಳು ಲೋಪ ಮಾಡುತ್ತಿದ್ದಾರೆ. ಕಳೆದ ಆಗಸ್ಟ್ ತಿಂಗಳಲ್ಲಿ ಸುರಿದ ಮಳೆಗೆ ಮನೆಗಳು ಬಿದ್ದಿದ್ದು ಸತ್ಯ. ಆದರೆ, ಅಧಿಕಾರಿಗಳು ಸರ್ವೇಗೆ ಬಂದಾಗ ನಾವು ಆ ಮನೆಯಲ್ಲಿ ವಾಸ ಇಲ್ಲ ಎಂದು ಪರಿಹಾರ ಕೊಡಲು ಆಗಲ್ಲ ಅಂತಿದ್ದಾರೆ. ಬಿದ್ದ ಮನೆಗಳಲ್ಲಿ ಇರುವುದು ಹೇಗೆ ಎನ್ನುವುದು ಇದೀಗ ಸಂತ್ರಸ್ತರು ಎತ್ತಿರುವ ಪ್ರಶ್ನೆ.

    ಚಿಕ್ಕಸಂಶಿ ಗ್ರಾಮದಲ್ಲಿ ಆಗಸ್ಟ್, ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ಸುರಿದ ಮಳೆಗೆ 28 ಮನೆಗಳು ಬಿದ್ದಿದ್ದವು. ಅಧಿಕಾರಿಗಳು ಆ ಪಟ್ಟಿಯನ್ನು ಸಹ ಮಾಡಿದ್ದರು. ಆದರೆ, ನಂತರ ನಡೆದ ಬೆಳೆವಣಿಗೆಯಲ್ಲಿ ಪಟ್ಟಿ ಚಿಕ್ಕದಾಗಿತ್ತು. ಅಂತಿಮವಾಗಿ ನಾಲ್ಕು ಮನೆಗಳಿಗೆ ಪರಿಹಾರ ಕೊಟ್ಟಿದ್ದಾರೆ. ಉಳಿದವುಗಳನ್ನು ಕೈಬಿಟ್ಟಿದ್ದಾರೆ. ಆ ನಾಲ್ಕರಲ್ಲಿ ಎರಡು ಮನೆಗಳು ಬಿದ್ದು ಎಂಟತ್ತು ವರ್ಷಗಳಾಗಿವೆ. ಅವರಿಗೆ ಪರಿಹಾರ ಕೊಟ್ಟಿದ್ದಾರೆ. ಆದರೆ, ವಾಸ್ತವವಾಗಿ ಮನೆ ಬಿದ್ದಿದ್ದರೂ ಅವರಿಗೆ ಪರಿಹಾರ ಸಿಕ್ಕಿಲ್ಲ ಎಂದು ಗ್ರಾಮಸ್ಥರು ಒಕ್ಕೂರಲಿನಿಂದ ಹೇಳುತ್ತಿದ್ದಾರೆ.

    ಇದಕ್ಕೆ ಸಾಕ್ಷಿ ಎನ್ನುವಂತೆ ರೇಣುಕಾ ಎನ್ನುವ ಬಾಣಂತಿ ತನ್ನ ಕಣ್ಣೀರ ಕತೆಯನ್ನು ಹೇಳುತ್ತಾರೆ. ಆಗಸ್ಟ್ ತಿಂಗಳಲ್ಲಿ ಮಳೆ ಬಂದಾಗ ನಮ್ಮ ಮನೆ ಕುಸಿಯಿತು. ಕುಸಿದ ಮನೆಯಲ್ಲಿ ಐದು ದಿನ ಹಸಿಗೂಸು ಕಟ್ಟಿಕೊಂಡು ನಾನು, ನನ್ನ ತಾಯಿ ಇದ್ದೆವು. ಒಂದೆಡೆ ಮಳೆ ಮತ್ತೊಂದೆಡೆ ಬಿದ್ದ ಮನೆ ಹಸಿಗೂಸಿಗೆ ಏನಾಗಬೇಡ? ನಮ್ಮ ಪರಿಸ್ಥಿತಿ ನೋಡಿ ಊರ ಹಿರಿಯರು ಸೇರಿ ಅಲ್ಲಿಂದ ಬೇರೆ ಮನೆಗೆ ಸ್ಥಳಾಂತರ ಆಗಿದ್ದೇವೆ. ಆ ಮನೆಗೆ ಇದೀಗ ಬಾಡಿಗೆ ಕೊಡುತ್ತಿದ್ದೇವೆ. ಆದರೆ, ಅಧಿಕಾರಿಗಳು ಸರ್ವೇಗೆ ಬಂದಾಗ ಮನೆಯಲ್ಲಿ ಯಾರೂ ಇರಲಿಲ್ಲ ಅಂತ ಪರಿಹಾರದಲ್ಲಿ ನಮ್ಮನ್ನು ಕೈಬಿಟ್ಟಿದ್ದಾರೆ. ಬಿದ್ದ ಮನೆಯಲ್ಲಿ ಯಾರಾದರೂ ಇರುತ್ತಾರಾ? ಅಧಿಕಾರಿಗಳು ಕಿಂಚಿತ್ತು ಮನುಷ್ಯತ್ವವಾದರೂ ಬೇಡವಾ? ಎಂದು ಪ್ರಶ್ನೆ ಮಾಡುತ್ತಾರೆ.

    ಇದಕ್ಕೆ ಧ್ವನಿಗೂಡಿಸಿದ ಬಾಣಂತಿ ತಾಯಿ ಮಲ್ಲಮ್ಮ, ನೀವು ಮನೆಯಲ್ಲಿ ವಾಸ ಇಲ್ಲ ಅಂತಿದ್ದಾರಲ್ಲ, ಆ ಅಧಿಕಾರಿಗಳು ತಮ್ಮ ಕುಟುಂಬ ಕರೆದುಕೊಂಡು ಬಂದು ಒಂದೆರಡು ದಿನ ಆ ಮನೆಯಲ್ಲಿ ಇರಲಿ. ಆಗ ಬಡವರ ಕಷ್ಟ ಏನು ಅಂತ ಗೊತ್ತಾಗುತ್ತದೆ. ಇದು ಒಬ್ಬಿಬ್ಬರಿಗೆ ಆಗಿರುವ ತಾರತಮ್ಯ ಅಲ್ಲ, ನಮ್ಮ ಗ್ರಾಮದಲ್ಲಿ ಅನೇಕ ಮನೆಗಳನ್ನು ಇದೇ ಕಾರಣ ನೀಡಿ ಕೈಬಿಟ್ಟಿದ್ದಾರೆ. ವೋಟು ಕೇಳುವಾಗಿ ಕೈಮುಗಿದು ಬರುವ ಶಾಸಕರು, ಸಂಸದರು ಈಗ ಎಲ್ಲಿ ಇದ್ದಾರೆ? ಬಡವರಿಗೆ ಅನ್ಯಾಯ ಆಗಿದ್ದು ಕಾಣುತ್ತಿಲ್ಲವಾ ಎಂದು ಆಕ್ರೋಶ ವ್ಯಕ್ತಪಡಿಸುತ್ತಲೇ ಕಣ್ಣೀರು ಹಾಕಿದರು.

    ಗ್ರಾಮದಲ್ಲಿ ಇಂತದ್ದೆ ಸ್ಥಿತಿಯಲ್ಲಿ ಇರುವ ಹತ್ತಾರು ಮನೆಗಳು ಕಣ್ಣಿಗೆ ಕಾಣಿಸುತ್ತವೆ. ಅವರ‌್ಯಾರಿಗೂ ಪರಿಹಾರ ಸಿಕ್ಕಿಲ್ಲ. ಈ ಬಗ್ಗೆ ತಹಸೀಲ್ದಾರ್ ಗುರುಸಿದ್ದಯ್ಯ ಹಿರೇಮಠ ಅವರನ್ನು ಸಂಪರ್ಕಿಸಿದರೆ ಚಿಕ್ಕಸಂಶಿ ಗ್ರಾಮದಲ್ಲಿ ಫಲಾನುಭವಿಗಳ ಆಯ್ಕೆ ವಿಚಾರದಲ್ಲಿ ತಾರತಮ್ಯದ ಆರೋಪ ಕೇಳಿ ಬಂದಿತ್ತು. ಹೀಗಾಗಿಯೇ ಅಲ್ಲಿ ಎರಡು ಸಲ ಜಂಟಿ ಸಮೀಕ್ಷೆ ನಡೆಸಲಾಗಿದೆ. ಆ ಮನೆಗಳು ಯಾವತ್ತೋ ಬಿದ್ದು ಹೋಗಿವೆ. ಈಗ ಪರಿಹಾರ ಕೊಡಿ ಅಂತಿದ್ದಾರೆ. ಅದಕ್ಕೆ ಅವಕಾಶ ಇಲ್ಲ ಎನ್ನುತ್ತಾರೆ.

    ನಿರಾಣಿ ಅವರು ಸ್ಪಂದಿಸಲೇ ಇಲ್ಲ
    ಇನ್ನು ಗ್ರಾಮದ ಕೃಷ್ಣಾ ಪತ್ತಾರ ಅವರು, ಬಿದ್ದ ಮನೆಗಳ ಆಯ್ಕೆಯಲ್ಲಿ ಭಾರಿ ಅನ್ಯಾಯ ಮಾಡಲಾಗಿದೆ. ಈ ಬಗ್ಗೆ ಕ್ಷೇತ್ರದ ಶಾಸಕ ಮುರುಗೇಶ ನಿರಾಣಿ ಅವರ ಗಮನಕ್ಕೆ ತಂದರೂ ಅವರು ಸ್ಪಂದಿಸಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಮಾಜಿ ಶಾಸಕ ಜೆ.ಟಿ.ಪಾಟೀಲ, ಪರಿಷತ್ ವಿಪಕ್ಷ ನಾಯಕ ಎಸ್.ಆರ್. ಪಾಟೀಲ ಅಧಿಕಾರಿಗಳಿಗೆ ಲೋಪ ಸರಿಪಡಿಸಿ ಎಂದರೂ ಅದಕ್ಕೆ ಅಧಿಕಾರಿಗಳು ಕಿವಿಗೊಡುತ್ತಿಲ್ಲ. ಬಿದ್ದ ಮನೆಯಲ್ಲಿ ಯಾರಾದರೂ ಇರಲು ಸಾಧ್ಯವೆ? ನೀವು ಇಲ್ಲಿ ವಾಸ ಇಲ್ಲ ಎಂದು ಪರಿಹಾರ ನಿರಾಕರಿಸುತ್ತಿದ್ದಾರೆ. ಆಗಿರುವ ಲೋಪವನ್ನು ಇದನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.

    ಚಿಕ್ಕಸಂಶಿ ಗ್ರಾಮದಲ್ಲಿ ಬಿದ್ದ ಮನೆಗಳಿಗೆ ಪರಿಹಾರ ವಿತರಣೆಯಲ್ಲಿ ಯಾವುದೇ ತಾರತಮ್ಯ ಆಗಿಲ್ಲ. ಈ ವರ್ಷ ಬಿದ್ದಿರುವ ಮನೆಗಳಿಗೆ ನೈಜವಾಗಿ ಸರ್ವೇ ಮಾಡಿ ಪರಿಹಾರ ಕೊಟ್ಟಿದ್ದೇವೆ. ಈ ಬಗ್ಗೆ ಎರಡು ಸಲ ಜಂಟಿ ಸಮೀಕ್ಷೆ ಮಾಡಿಸಲಾಗಿದೆ. ಆರೋಪ ಮಾಡುತ್ತಿರುವವರ ಮನೆಗಳು ಈಗ ಬಿದ್ದಿಲ್ಲ, ಯಾವಾಗಲೋ ಬಿದ್ದಿವೆ ಅವರು ಬೇರೆ ಕಡೆಗೆ ವಾಸ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
    – ಗುರುಸಿದ್ದಯ್ಯ ಹಿರೇಮಠ ತಹಸೀಲ್ದಾರ್, ಬಾಗಲಕೋಟೆ





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts