More

    ಆತ್ಮ ಯೋಜನೆಗಳ ಲಾಭ ರೈತರಿಗೆ ತಲುಪಿಸಿ

    ಬಾಗಲಕೋಟೆ: ಕೇಂದ್ರ ಸರ್ಕಾರದ ಮಹತ್ವದ ಆತ್ಮಾ ಯೋಜನೆಯ ಬಗ್ಗೆ ರೈತರಿಗೆ ತಿಳುವಳಿಕೆ ಮೂಡಿಸುವ ಮೂಲಕ ಅದರ ಸದುಪಯೋಗ ಪಡೆದುಕೊಳ್ಳುವಂತೆ ಮಾಡಬೇಕು ಎಂದು ಸಂಸದ ಪಿ.ಸಿ.ಗದ್ದಿಗೌಡರ ಅಧಿಕಾರಿಗಳಿಗೆ ಸೂಚಿಸಿದರು.

    ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಗಳ ಯೋಜನಾ ಅನುಷ್ಠಾನ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆತ್ಮಾ ಯೋಜನೆಗಳ ಮುಖಾಂತರ ಇಲಾಖೆಗಳು ಒಗ್ಗೂಡಿ ರೈತರನ್ನು ಭೇಟಿ ಮಾಡಿ ಪ್ರೋತ್ಸಾಹ ಹಾಗೂ ತಿಳುವಳಿಕೆ ನೀಡುವ ಕೆಲಸವಾಗಬೇಕು. ಕೃಷಿ ಒಂದನ್ನೇ ಅವಲಂಬಿಸದೆ ಕೃಷಿಯೇತರ ಚಟುವಟಿಕೆ ಕೈಗೊಳ್ಳುವುದರಿಂದ ಆಗುವ ಲಾಭದ ಬಗ್ಗೆ ಮಾಹಿತಿ ನೀಡಬೇಕು. ಇಲಾಖೆಯ ವಿವಿಧ ಯೋಜನೆಗಳೊಂದಿಗೆ ಸಮನ್ವಯಗೊಳಿಸಿ ಹೆಚ್ಚು ಆದಾಯ ಬರುವಂತೆ ಅನ್ನದಾತರಿಗೆ ಮಾಹಿತಿ ಒದಗಿಸಬೇಕು ಎಂದು ತಿಳಿಸಿದರು.

    ರೈತರಿಗೆ ಸಮರ್ಪಕವಾಗಿ ಒಳ್ಳೆಯ ಗುಣಮಟ್ಟದ ಬಿತ್ತನೆ ಬೀಜ ಪೂರೈಕೆಯಾಗಬೇಕು. ಕೇಂದ್ರ ಸರ್ಕಾರವು ಸಮರ್ಪಪಕ ರಸಗೊಬ್ಬರ ವಿತರಣೆಗಾಗಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದು, ಅಧಿಕಾರಿಗಳು ಮಣ್ಣಿನ ಲವತ್ತತೆ ಕಾಪಾಡುವ ನಿಟ್ಟಿನಲ್ಲಿ ಸಾವಯವಕ್ಕೆ ಹೆಚ್ಚು ಒತ್ತು ಕೊಟ್ಟು ರೈತರಲ್ಲಿ ಅರಿವು ಮೂಡಿಸಬೇಕು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹೊಸ ವಿನ್ಯಾಸ/ಅವಕಾಶಗಳನ್ನು ಅಳವಡಿಸಿಕೊಂಡು ಜಿಲ್ಲಾ ಕ್ರಿಯಾ ಯೋಜನೆ ಮಾಡಿ ಹೆಚ್ಚು ಅನುದಾನ ವಿನಿಯೋಗಿಸಿಕೊಳ್ಳಬೇಕು. ರೇಷ್ಮೆ ಹಾಗೂ ತೋಟಗಾರಿಕೆ ಇಲಾಖೆ ಸಿಬ್ಬಂದಿಗಳು ಕ್ಷೇತ್ರ ವಿಸ್ತರಣೆಯಲ್ಲಿ ಹೆಚ್ಚು ಸಾಧನೆ ಮಾಡಬೇಕು ಎಂದರು.

    ಜಿಲ್ಲಾಧಿಕಾರಿ ಕೆ.ರಾಜೇಂದ್ರ ಮಾತನಾಡಿ, ಕೇಂದ್ರ ಸರ್ಕಾರವು ಜಿಲ್ಲೆಗೆ ಪಿಒಎಸ್ ಯಂತ್ರದಲ್ಲಿ ಇರುವ ರಸಗೊಬ್ಬರದ ಪ್ರಮಾಣವನ್ನು ಆಧರಿಸಿ ಬೇಡಿಕೆ ಅನುಗುಣವಾಗಿ ಹಂಚಿಕೆ ಮಾಡುತ್ತಿದ್ದು, ಎಲ್ಲ ವಿತರಕರು ದಾಸ್ತಾನು ಹಾಗೂ ಪಿಒಎಸ್ ಯಂತ್ರದ ದಾಸ್ತಾನು ಹೋಲಿಕೆಯಲ್ಲಿರುವಂತೆ ಅಧಿಕಾರಿಗಳು ನೋಡಿಕೊಳ್ಳಬೇಕು. ಬೆಳೆ ವಿಮೆ ಯೋಜನೆಯಡಿ ಪರಿಹಾರ ಬಾಕಿ ಇರುವ ರೈತರ ಪಟ್ಟಿಯನ್ನು ತಾಲೂಕಾವಾರು ತಹಸೀಲ್ದಾರರಿಗೆ ನೀಡಿ, ಗ್ರಾಮ ಲೆಕ್ಕಾಧಿಕಾರಿಗಳ ಮೂಲಕ ಪಾವತಿಗೆ ಬಾಕಿಗೆ ಸಂಬಂಧಪಟ್ಟ ಬ್ಯಾಂಕ್‌ಗಳಿಗೆ ಆಧಾರ ಲಿಂಕ್‌ಗಾಗಿ ಕ್ರಮವಹಿಸಬೇಕು ಸೂಚಿಸಿದರು.

    ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿ.ಭೂಬಾಲನ್ ಮಾತನಾಡಿ, ಉದ್ಯೂಗ ಖಾತ್ರಿ ಯೋಜನೆಯಡಿ ಹಾಗೂ ಇಲಾಖೆಯ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ರೈತರಿಗೆ ತಲುಪಿಸಬೇಕು ಎಂದು ಹೇಳಿದರು.

    ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ಡಾ.ಚೇತನಾ ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 5,17,350 ಹೆಕ್ಟೇರ್ ಕ್ಷೇತ್ರ ಸಾಗುವಳಿಗೆ ಯೋಗ್ಯವಾಗಿದ್ದು, ಮುಂಗಾರು ಹಂಗಾಮಿನಲ್ಲಿ 2,65,000 ಹೆಕ್ಟೇರ್ ವಿವಿಧ ಬೆಳೆಗಳನ್ನು ಬೆಳೆಯುವ ಗುರಿಯನ್ನು ಹೊಂದಲಾಗಿದೆ. ಮುಂಗಾರು ಹಂಗಾಮಿನಲ್ಲಿ ಈ ವರೆಗೆ ಒಟ್ಟು 102.9 ಮಿ.ಮೀ ಸಾಮಾನ್ಯ ಮಳೆ ಇದ್ದು, ವಾಸ್ತವವಾಗಿ 123 ಮಿ.ಮೀ ಮಳೆಯಾಗಿರುತ್ತದೆ. ಒಟ್ಟು 67,653 ಹೆಕ್ಟೇರ್ ಕ್ಷೇತ್ರದಲ್ಲಿ ಬಿತ್ತನೆಯಾಗಿದೆ. ಕಳದೆರಡು ದಿನಗಳಿಂದ ಸುರಿದ ಮಳೆಯಿಂದಾಗಿ ಜಿಲ್ಲೆಯಲ್ಲಿ ಬಿತ್ತನೆ ಕಾರ್ಯ ಚುರುಕುಗೊಂಡಿದೆ ಎಂದರು.

    ಜಿಲ್ಲೆಯಲ್ಲಿ ಒಟ್ಟು 18 ರೈತ ಸಂಪರ್ಕ ಕೇಂದ್ರ ಹಾಗೂ 9 ಹೆಚ್ಚುವರಿ ಬೀಜ ವಿತರಣಾ ಕೇಂದ್ರಗಳ ಮೂಲಕ ರೈತರಿಗೆ ಸಮರ್ಪಕವಾಗಿ ಬಿತ್ತನೆ ಬೀಜಗಳನ್ನು ವಿತರಿಸಲಾಗುತ್ತಿದೆ. ಒಟ್ಟು 3,181 ಕ್ವಿಂಟಲ್, ನಷ್ಟು ಬಿತ್ತನೆ ಬೀಜಗಳನ್ನು ದಾಸ್ತಾನು ಪಡೆದಿದ್ದು, 1431 ಕ್ವಿಂಟಲ್. ನಷ್ಟು ಮಾರಾಟವಾಗಿ 1750 ಕ್ವಿಂಟಲ್ ನಷ್ಟು ವಿವಿಧ ಬಿತ್ತನೆ ಬೀಜಗಳು ಲಭ್ಯವಿದೆ. ಸೂರ್ಯಕಾಂತಿ ಬಿತ್ತನೆ ಬೀಜಗಳು ಸರಬರಾಜಿನಲ್ಲಿ ಸ್ವಲ್ಪ ವ್ಯತ್ಯಯ ಉಂಟಾಗಲಿದ್ದು, ಈ ಬಗ್ಗೆ ಕೇಂದ್ರ ಕಚೇರಿಯ ಗಮನಕ್ಕೆ ತರಲಾಗಿದೆ. ಇನ್ನು 4-5 ದಿನಗಳಲ್ಲಿ ಬೇಡಿಕೆಯನ್ವಯ ಸರಬರಾಜು ಪಡೆದುಕೊಂಡು ರೈತರಿಗೆ ವಿತರಿಸಲಾಗುವುದು ಎಂದು ತಿಳಿಸಿದರು.

    ಮುಂಗಾರು ಹಂಗಾಮಿಗೆ ಜೂನ್ ತಿಂಗಳಿನಲ್ಲಿ ಯೂರಿಯಾ 9745 ಮೇ.ಟನ್ ಹಂಚಿಕೆಯಾಗಿದ್ದು, ಸದ್ಯಕ್ಕೆ 10,000 ಮೇ.ಟನ್ ನಷ್ಟು ದಾಸ್ತಾನು ಇದೆ. ಡಿಎಪಿ 3190 ಮೇ.ಟನ್ ಹಂಚಿಕೆಗೆ 4221 ಮೇ.ಟನ್, ಕಾಂಪ್ಲೆಕ್ಸ 4152 ಮೇ.ಟನ್ ಹಂಚಿಕೆಗೆ 8698 ಮೇ.ಟನ್ ನಷ್ಟು, ಎಂಒಪಿ 2014 ಮೇ.ಟನ್ ಹಂಚಿಕೆಗೆ 4899 ಮೇ.ಟನ್ ಹಾಗೂ ಎಸ್.ಎಸ್.ಪಿ 247 ಮೇ.ಟನ್ ಹಂಚಿಕೆಗೆ 936 ಮೇ.ಟನ್ ದಾಸ್ತಾನು ಇದ್ದು, ರಸಗೊಬ್ಬರದ ಕೊರತೆ ಸದ್ಯ ಇರುವುದಿಲ್ಲ ಎಂದರು.

    ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ರಾಹುಲ್‌ಕುಮಾರ ಬಾವಿದಡ್ಡಿ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ನೀಡಿರುವ ಗುರಿಯನ್ವಯ ಕಾರ್ಯನಿರ್ವಹಿಸುತ್ತಿದ್ದು, ಲಾಕಡೌನ್ ಸಂದರ್ಭದಲ್ಲಿ ತೋಟಗಾರಿಕಾ ಬೆಳೆಗಳ ಮಾರಾಟದಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸಲಾಗಿದೆ ಎಂದರು.

    ಸಭೆಯಲ್ಲಿ ಕೃಷಿ ಇಲಾಖೆಯ ಉಪ ನಿರ್ದೇಶಕ ಎಸ್.ಬಿ.ಕೊಂಗವಾಡ ಸೇರಿದಂತೆ ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆಯ ತಾಲೂಕಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

    
    
    Community-verified icon

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts