More

    ತೋಟಗಾರಿಕಾ ಪ್ರದೇಶ ವಿಸ್ತರಣೆ ಆದ್ಯತೆ

    ಬಾಗಲಕೋಟೆ: ರಾಜ್ಯದಲ್ಲಿ ತೋಟಗಾರಿಕಾ ಪ್ರದೇಶ ವಿಸ್ತರಣೆಗೆ ಆದ್ಯತೆ ನೀಡಲಾಗುವುದು. ತನ್ಮೂಲಕ ಕೃಷಿ ಕ್ಷೇತ್ರದ ಸಮಗ್ರ ಅಭಿವೃದ್ಧಿ ಹಾಗೂ ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಒತ್ತು ನೀಡಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

    ನವನಗರದ ತೋಟಗಾರಿಕಾ ವಿಜ್ಞಾನಗಳ ವಿಶ್ವ ವಿದ್ಯಾಲಯದ ಆವರಣದಲ್ಲಿ ಶನಿವಾರದಿಂದ ಆರಂಭಗೊಂಡ 2021 ಸಾಲಿನ ತೋಟಗಾರಿಕಾ ಮೇಳಕ್ಕೆ ಆನ್‌ಲೈನ್ ಮೂಲಕ ವಿದ್ಯುಕ್ ಚಾಲನೆ ನೀಡಿ ಅವರು ಮಾತನಾಡಿದರು.

    ದೇಶದಲ್ಲಿಯೇ ರಾಜ್ಯವು ತೋಟಗಾರಿಕಾ ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ 185.20 ಲಕ್ಷ ಮೆ.ಟನ್ ತೋಟಗಾರಿಕೆ ಉತ್ಪನ್ನವಿದೆ. ಈ ಸಾಧನೆಯಿಂದ ಭಾರತದ ತೋಟಗಾರಿಕಾ ರಾಜ್ಯ ಕರ್ನಾಟಕ ಹೆಗ್ಗಳಿಕೆಗೆ ರಾಜ್ಯ ಪಾತ್ರವಾಗಿದೆ. ರಾಜ್ಯಕ್ಕೆ 44879 ಕೋಟಿ ರೂ.ಗಳ ಆದಾಯ ತೋಟಗಾರಿಕಾ ಕ್ಷೇತ್ರ ನೀಡುತ್ತಿದೆ. ಇನ್ನು ಹೆಚ್ಚಿನ ಸಾಧನೆ ಮಾಡಲು ಪೂರಕ ಸಂಶೋಧನೆ, ವಿಸ್ತರಣೆ ಹಾಗೂ ಇತರ ಮೂಲ ಸೌಕರ್ಯ ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದರು.

    ರೈತರಿಗೆ ಅನುಕೂಲಕರವಾಗುವ ರೀತಿಯಲ್ಲಿ ತೋವಿವಿಯ ವಿಜ್ಞಾನಿಗಳು ಸಂಶೋಧನೆಗಳು ಕೈಗೊಳ್ಳಬೇಕು. ಅಲ್ಲದೆ ಕೋಯಿಲೋತ್ತರ ತಂತ್ರಜ್ಞಾನ, ಆಹಾರ ಸಂಸ್ಕೃರಣೆ, ದಾಸ್ತಾನು ಹೊಸ ತಂತ್ರಜ್ಞಾನ ಬಗ್ಗೆಯೂ ಗಮನ ಹರಿಸಬೇಕು. ಪ್ರಧಾನಿ ಮೋದಿ ರೈತರ ಆದಾಯ ಹೆಚ್ಚಿಸುವ ಉದ್ದೇಶದಿಂದ ಹಲವಾರು ಯೋಜನೆ ಜಾರಿಗೆ ತಂದಿದ್ದಾರೆ. ಅದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಶ್ರಮಿಸಲಿದೆ. ತೋಟಗಾರಿಕೆಯನ್ನು ಉದ್ದಿಮೆಯಾಗಿ ಪರಿಗಣಿಸಲು ಅಗತ್ಯವಿರುವ ಎಲ್ಲ ಕ್ರಮ ತೆಗೆದುಕೊಳ್ಳಲಾಗುವುದು. ಲಾಕ್‌ಡೌನ್ ಸಂದರ್ಭದಲ್ಲಿ ರೈತರ ತೋಟಗಾರಿಕೆ ಬೆಳೆಗಳಿಗೆ ಹಾಫಾಕಾಮ್ಸ್ ನೆರವಿಗೆ ನಿಂತಿತು. ಇದೇ ರೀತಿ ಮುಂದಿನ ದಿನಗಳಲ್ಲಿ ಹೊಸ ಮಾದರಿಯ ಯೋಜನೆಗಳನ್ನು ಜಾರಿಗೊಳಿಸಲಾಗವುದು ಎಂದರು.

    ಇನ್ನು ಪ್ರಧಾನಿ ನರೇಂದ್ರ ಮೋದಿ 100ನೇ ಕಿಸಾನ್ ರೈಲಿಗೆ ಈಚೆಗೆ ನೀಡಿದ್ದಾರೆ. ರಾಜ್ಯದಲ್ಲಿ ಕಳೆದ ಮೂರು ತಿಂಗಳ ಅವಧಿಯಲ್ಲಿ ಕಿಸಾನ್ ರೈಲುಗಳ ಮೂಲಕ 27 ಸಾವಿರ ಟನ್ ಕೃಷಿ ಉತ್ಪನ್ನಗಳನ್ನು ಬೇರೆ ರಾಜ್ಯ, ದೇಶಗಳಿಗೆ ರಫ್ತು ಮಾಡಲಾಗಿದೆ. ಶೀಘ್ರದಲ್ಲಿ ಕೊಳೆತು ಹೋಗುವ ದಾಳಿಂಬೆ, ಕಿತ್ತಳೆ ಸೇರಿದಂತೆ ಇತರೆ ತೋಟಗಾರಿಕಾ ಬೆಳೆಗಳನ್ನು ಬೇರೆಡೆ ಸಾಗಿಸಲು ಕಿಸಾನ್ ರೈಲು ಯೋಜನೆ ಸಾಕಷ್ಟು ಸಹಕಾರಿಯಾಗಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

    ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಮಾತನಾಡಿ, ತೋವಿವಿಯಿಂದ ಬಾಗಲಕೋಟೆ, ವಿಜಯಪುರ ಜಿಲ್ಲೆಗಳ ತೋಟಗಾರಿಕಾ ಬೆಳೆಗಳ ವಿಸ್ತರಣೆ, ಸಂಶೋಧನೆ, ತರಬೇತಿಗೆ ಸಾಕಷ್ಟು ಅನುಕೂಲವಾಗಿದೆ. ಇದಕ್ಕೆ ಸಿಎಂ ಯಡಿಯೂರಪ್ಪ ಅವರೇ ಕಾರಣ. ಅವರು 2008 ಮುಖ್ಯಮಂತ್ರಿಗಳಾಗಿದ್ದ ವೇಳೆ ಬಾಗಲಕೋಟೆಗೆ ತೋವಿವಿ ಸ್ಥಾಪಿಸಿದರು. ರೈತರ ಶ್ರೇಯೋಭಿವೃದ್ಧ್ದಿಗಾಗಿ ಶ್ರಮಿಸುತ್ತಿದ್ದಾರೆ ಎಂದ ಅವರು, ವಿಜ್ಞಾನಿಗಳು ರೈತರಿಗೆ ಇನ್ನೂ ಹೆಚ್ಚು ಹೆಚ್ಚು ಲಾಭ ತರುವ ತಳಿಗಳನ್ನು ಸಂಶೋಧನೆ ಮಾಡಿ ಅನ್ನದಾತರ ಬದುಕು ಹಸನಗೊಳಿಸಬೇಕು ಎಂದು ಸಲಹೆ ನೀಡಿದರು.

    ತೋಟಗಾರಿಕಾ ಸಚಿವ ಡಾ.ಕೆ.ಸಿ.ನಾರಾಯಣಗೌಡ ಮಾತನಾಡಿ, ತೋಟಗಾರಿಕೆ ಉತ್ತೇಜನಕ್ಕೆ ಸರ್ಕಾರ ಅಗತ್ಯ ಕ್ರಮ ತೆಗೆದುಕೊಂಡಿದೆ. ತೋಟಗಾರಿಕೆ ಉತ್ಪನ್ನಗಳ ರ್ತು ಪ್ರಮಾಣ ಶೇ.2.5 ರಿಂದ ಶೇ. 5ಕ್ಕೆ ಹೆಚ್ಚಿಸಲಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ಇನ್ನಷ್ಟು ಹೆಚ್ಚಿಸಲು ರೈತರಿಗೆ ಅಗತ್ಯ ಬೆಂಬಲ ನೀಡಲಾಗುವುದು ಎಂದು ತಿಳಿಸಿದರು.

    ಜಿ.ಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ತಾ.ಪಂ ಅಧ್ಯಕ್ಷ ಚನ್ನನಗೌಡರ ಪರನಗೌಡರ, ರಾಜ್ಯ ನಿಂಬೆ ಅಭಿವೃದ್ಧ್ದಿ ಮಂಡಳಿಯ ಅಧ್ಯಕ್ಷ ಅಶೋಕ ಸೋಲಾಪುರ, ತೋವಿವಿಯ ಕುಲಪತಿ ಡಾ.ಕೆ.ಎಂ.ಇಂದಿರೇಶ, ರಾಯಚೂರಿನ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಎನ್.ಕಟ್ಟಿಮನಿ. ತೋವಿವಿಯ ವಿಸ್ತರಣಾ ನಿರ್ದೇಶಕ ವೈ.ಕೆ.ಕೋಟಿಕಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

    ತೋವಿವಿ ಅನೇಕ ಜ್ವಲಂತ ಸಮಸ್ಯೆಗಳನ್ನು ಎದುರಿಸುತ್ತಿದೆ. ವಿವಿಗಳಿಗೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ. ಅನುದಾನ ಹಾಗೂ ತೋವಿವಿಗೆ ಅಗತ್ಯವಿರುವ ಭೂಮಿ ನೀಡುವ ನಿಟ್ಟಿನಲ್ಲಿ ಸರ್ಕಾರ ಗಮನ ಹರಿಸಬೇಕು. ಶಿಕ್ಷಕ, ಶಿಕ್ಷಕೇತರ ಕೊರತೆ ಇದ್ದು, ಹುದ್ದೆ ಭರ್ತಿಗೆ ಸಿಎಂ ಯಡಿಯೂರಪ್ಪ ಅವಕಾಶ ಮಾಡಿಕೊಡಬೇಕು. ಇನ್ನು ತೋವಿವಿ ವಿಜ್ಞಾನಿಗಳು, ವಿದ್ಯಾರ್ಥಿಗಳು ಸಂಶೋಧನೆಗೆ ಹೆಚ್ಚಿನ ಒತ್ತು ನೀಡಬೇಕು.
    ವೀರಣ್ಣ ಚರಂತಿಮಠ ಶಾಸಕ ಬಾಗಲಕೋಟೆ

    ತೋಟಗಾರಿಕಾ ಕ್ಷೇತ್ರವು ಇಂದು ಜಾಗತಿಕ ಮಟ್ಟದ ಮಾರುಕಟ್ಟೆಗೆ ಪೈಪೋಟಿ ನೀಡವ ನಿಟ್ಟಿನಲ್ಲಿ ಗಮನ ಹರಿಸಬೇಕು. ಇಸ್ರೇಲ್ ದೇಶದ ಮಾದರಿ ಅನುಸರಿಸುವುದು ಅಗತ್ಯವಾಗಿದೆ. ತೋಟಗಾರಿಕಾ ಬೆಳೆಗಳ ಕೋಯಿಲೋತ್ತರ ತಂತ್ರಜ್ಞಾನ, ಸಂಸ್ಕೃರಣೆ, ಗುಣಮಟ್ಟ ಕಾಯ್ದುಕೊಳ್ಳುವ ವಿಜ್ಞಾನಿಗಳು ಒತ್ತು ನೀಡಬೇಕು. ತೋವಿವಿ ಬಾಗಲಕೋಟೆ ಜಿಲ್ಲೆಯ ಕೆಲವು ಗ್ರಾಮಗಳನ್ನು ದತ್ತು ಪಡೆದು ಹೊಸ ಪ್ರಯೋಗ ನಡೆಸಬೇಕು. ಈರುಳ್ಳಿ ಈ ಭಾಗದಲ್ಲಿ ಹೆಚ್ಚಿನ ರೈತರು ಬೆಳೆಯುತ್ತಾರೆ. ಬೀಜೋತ್ಪಾದನೆಯಲ್ಲಿ ವಿವಿ ಮಹತ್ತರ ಪಾತ್ರ ವಹಿಸಬೇಕು. ಕಡಿಮೆ ದರದಲ್ಲಿ ರೈತರಿಗೆ ಬೀಜ ದೊರೆಯುವಂತೆ ಮಾಡಬೇಕು.
    – ಎಸ್.ಆರ್.ಪಾಟೀಲ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts