More

    ಗ್ರಾಮೀಣ ಅಭಿವೃದ್ಧಿಗೆ ಆದ್ಯತೆ

    ಬಾದಾಮಿ: ಮುಂಬರುವ ತಾ.ಪಂ, ಜಿ.ಪಂ, ವಿಧಾನಸಭೆ, ಲೋಕಸಭೆ ಚುನಾವಣೆಗಳಿಗೆ ಡಿ.27 ರಂದು ನಡೆಯಲಿರುವ ಗ್ರಾಮ ಪಂಚಾಯಿತಿ ಚುನಾವಣೆ ತಳಪಾಯವಾಗಿದ್ದು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಒಗ್ಗಟ್ಟಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು ಎಂದು ಸಂಸದ ಪಿ.ಸಿ. ಗದ್ದಿಗೌಡರ ಹೇಳಿದರು.

    ನಗರದ ಅಕ್ಕಮಹಾದೇವಿ ಅನುಭಾವ ಮಂಟಪದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಗ್ರಾ.ಪಂ. ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

    ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛ ಭಾರತ ಅಭಿಯಾನಕ್ಕೆ ಕಾಯಕಲ್ಪ ರೂಪಿಸಿ ಹೆಚ್ಚಿನ ಒತ್ತು ನೀಡಿದವರು. ಶೌಚಗೃಹ ನಿರ್ಮಾಣ ಮಾಡಲು ಒತ್ತು ನೀಡಿ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಆರೋಗ್ಯಕ್ಕಾಗಿ ಆಯುಷ್ಮಾನ್ ಭಾರತ ಯೋಜನೆಯಡಿ ಕಡಿಮೆ ವೆಚ್ಚದ ಜನೌಷಧ ಮಳಿಗೆ, ರೈತರಿಗೆ ಕಿಸಾನ್ ಸಮ್ಮಾನ್, ಜನಧನ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಜನಪ್ರಿಯ ಯೋಜನೆಗಳನ್ನು ಜನರಿಗೆ ತಿಳಿಸಿ ಈ ಬಾರಿ ಗ್ರಾ.ಪಂ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲ್ಲುವಂತೆ ಎಲ್ಲರೂ ಶ್ರಮವಹಿಸಬೇಕು ಎಂದು ಹೇಳಿದರು.

    ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ ಮಾತನಾಡಿ, ಕಾರ್ಯಕರ್ತರು ಭಿನ್ನಾಭಿಪ್ರಾಯಗಳನ್ನು ಮರೆತು ಹೊಂದಾಣಿಕೆಯಿಂದ ಸ್ಪರ್ಧೆ ಮಾಡಿ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಜಯಶಾಲಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಎಂದರು.

    ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಟಿ. ಪಾಟೀಲ ಮಾತನಾಡಿ, ಮಹಾತ್ಮ ಗಾಂಧೀಜಿ ಅವರ ಗ್ರಾಮ ಸ್ವರಾಜ್ಯ ಕಲ್ಪನೆಯನ್ನು ಮೋದಿಯವರು ಸಾಕಾರಗೊಳಿಸುತ್ತಿದ್ದಾರೆ. ರೈತರಿಗೆ ಕೇಂದ್ರದ 6 ಸಾವಿರ ರೂ. ರಾಜ್ಯದ 2 ಸಾವಿರ ರೂ. ಹಣ ರೈತರ ಖಾತೆಗೆ ನೇರವಾಗಿ ಜಮೆ ಮಾಡಿಸಿದ್ದು ನಮ್ಮ ಪಕ್ಷ ರೈತರಿಗೆ ನೆರವಾಗಿದೆ ಎಂದರು.

    ಮಾಜಿ ಶಾಸಕ ರಾಜಶೇಖರ ಶೀಲವಂತ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಮಹಾಂತೇಶ ಮಮದಾಪುರ, ಬಿಜೆಪಿ ತಾಲೂಕಾಧ್ಯಕ್ಷ ಶಿವನಗೌಡ ಸುಂಕದ ಮಾತನಾಡಿ, ಕಾರ್ಯಕರ್ತರಿಗೆ ಯಾವುದೇ ತಾಂತ್ರಿಕ ಸಮಸ್ಯೆಗಳಿದ್ದರೆ ಪಕ್ಷದ ನಾಯಕರನ್ನು ಸಂಪರ್ಕಿಸಿ ಪರಿಹರಿಸಿಕೊಳ್ಳಬೇಕೆಂದರು.

    ಬಿಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ, ನಿರ್ದೇಶಕ ಸಿದ್ಧನಗೌಡ ಪಾಟೀಲ, ಪುರಸಭೆ ಸದಸ್ಯ ನಾಗರಾಜ ಕಾಚಟ್ಟಿ, ಬಸವರಾಜ ತೀರ್ಥಪ್ಪನವರ, ತಾ.ಪಂ ಸದಸ್ಯ ನಿಂಗಪ್ಪ ಹೊಸಮನಿ, ಮುತ್ತು ಉಳ್ಳಾಗಡ್ಡಿ, ಬಸವರಾಜ ಬೂತಾಳಿ, ಹರೀಶ ಕೆರಿಹೊಲದ, ಚಂದ್ರಶೇಖರಯ್ಯ ಹಿರೇಮಠ, ಹುಚ್ಚಪ್ಪ ಬೆಳ್ಳಿಗುಂಡಿ, ಸುನೀಲ ಬಂಗಾರಶೆಟ್ಟಿ, ಮಲ್ಲಯ್ಯ ಮುಪ್ಪಿನವರ ಹಾಜರಿದ್ದರು. ಚೇತನ ಟೆಂಗಿನಕಾಯಿ ನಿರೂಪಿಸಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts