More

    ಕಾರ್ಮಿಕರಿಗೆ ಸರ್ಕಾರ ಪ್ಯಾಕೇಜ್ ನೀಡಿಲ್ಲ

    ಬಾದಾಮಿ: ಕೋವಿಡ್ ಕಾರಣ ಎಲ್ಲರಿಗೂ ತೊಂದರೆಯಾಗಿದೆ. ಸರ್ಕಾರ ಕಾರ್ಮಿಕ ಕಲ್ಯಾಣ ನಿಧಿಯ ಹಣದಲ್ಲಿ ಕಾರ್ಮಿಕರಿಗೆ ಕಿಟ್ ಕೊಟ್ಟಿದೆ. ಇದು ಕಾರ್ಮಿಕರ ವಂತಿಗೆಯ ಹಣ, ಇದಕ್ಕೆ ಸರ್ಕಾರದಿಂದ ಹಣ ಕೊಟ್ಟಿಲ್ಲ ಎಂದು ಶಾಸಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.

    ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ತಾಲೂಕು ಆಡಳಿತ ಮತ್ತು ಕಾರ್ಮಿಕ ಇಲಾಖೆ ಸಹಯೋಗದಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಆಹಾರ ಕಿಟ್ ಮತ್ತು ಸುರಕ್ಷತಾ ಕಿಟ್ ಮಂಗಳವಾರ ವಿತರಿಸಿ ಅವರು ಮಾತನಾಡಿದರು.

    ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಸರ್ಕಾರ ಇದೆ. ಆದರೆ, ಮಂತ್ರಿಗಳು ದುಡ್ಡಿಲ್ಲ ಎನ್ನುತ್ತಿದ್ದಾರೆ. ಸಮ್ಮಿಶ್ರ ಸರ್ಕಾರ ಇದ್ದಾಗ ಯೋಜನೆಗೆ ಅನುಮೋದನೆ ಮಾಡಿದ್ದು, ಈಗ ಅನುದಾನ ಕೊಟ್ಟಿದ್ದಾರೆ. ಮಿನಿವಿಧಾನಸೌಧ ಕಟ್ಟಲು ಜಾಗ ಕೊಡಿಸಲು ಭಾರಿ ಹರಸಾಹಸ ಪಡಬೇಕಾಯಿತು. ತ್ರಿಸ್ಟಾರ್ ಹೋಟೆಲ್, ಪಾರ್ಕಿಂಗ್ ಪ್ಲಾಜಾ ಮಂಜೂರು ಮಾಡಿಸಲಾಗಿದೆ ಎಂದರು.

    ಸರ್ಕಾರ ಮೆಕ್ಕೆಜೋಳ ಬೆಳೆದವರಿಗೆ ಹಣ ಕೊಟ್ಟಿಲ್ಲ. ಅನುಗ್ರಹ ಯೋಜನೆ ನಿಲ್ಲಿಸಿದ್ದಾರೆ. ನಮ್ಮ ಸರ್ಕಾರವಿದ್ದಾಗ ಪ್ರಾರಂಭಿಸಿದ ಅಕ್ಕಿಯನ್ನು ಕಡಿಮೆ ಮಾಡಿದ್ದಾರೆ. ಇಂದಿರಾ ಕ್ಯಾಂಟೀನ್‌ಗೆ ಅನುದಾನ ಕೊಡುತ್ತಿಲ್ಲ. ನಮ್ಮ ಸರ್ಕಾರದ ಯೋಜನೆಗಳಾದ ಕೃಷಿಭಾಗ್ಯ, ಶಾದಿಭಾಗ್ಯ ಸೇರಿ ಜನಪ್ರಿಯ ಯೋಜನೆಗಳನ್ನು ನಿಲ್ಲಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಜಿಪಂ ಮಾಜಿ ಅಧ್ಯಕ್ಷೆ ಬಾಯಕ್ಕ ಮೇಟಿ, ಮಾಜಿ ಸಚಿವ ಎಚ್.ವೈ.ಮೇಟಿ, ಪುರಸಭೆ ಅಧ್ಯಕ್ಷ ಮಂಜುನಾಥ ಹೊಸಮನಿ, ಉಪಾಧ್ಯಕ್ಷೆ ರಾಮವ್ವ ಮಾದರ, ಡಾ.ಎಂ.ಜಿ.ಕಿತ್ತಲಿ, ಎಸ್.ಡಿ.ಜೋಗಿನ, ಹೊಳೆಬಸು ಶೆಟ್ಟರ, ಭೀಮಸೇನ ಚಿಮ್ಮನಕಟ್ಟಿ, ಎಂ.ಬಿ.ಹಂಗರಗಿ, ಶೈಲಾ ಪಾಟೀಲ, ಜಿಲ್ಲಾ ಕಾರ್ಮಿಕ ಅಧಿಕಾರಿ ಬಿ.ಆರ್.ಜಾಧವ, ತಾಲೂಕು ಕಾರ್ಮಿಕ ನಿರೀಕ್ಷಕ ರಾಜಶೇಖರ ಕುರಡಿಕೆರೆ ಹಾಜರಿದ್ದರು.

    ಬೆಳಗಾವಿ ಪ್ರಾದೇಶಿಕ ಉಪಾಯುಕ್ತ ವೆಂಕಟೇಶ ಸಿಂದಿಹಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಹಸೀಲ್ದಾರ್ ಸುಹಾಸ ಇಂಗಳೆ ಸ್ವಾಗತಿಸಿದರು. ರವಿ ಕಂಗಳ ನಿರೂಪಿಸಿದರು. ತಾಲೂಕಿನ 20,165 ಲಾನುಭವಿಗಳಿಗೆ ಆಹಾರ ಕಿಟ್ ಮಂಜೂರಾಗಿದ್ದು, ಇದರಲ್ಲಿ ಸಾಂಕೇತಿಕವಾಗಿ 5 ಜನರಿಗೆ ಆಹಾರ ಕಿಟ್ ಮತ್ತು ಸುರಕ್ಷತಾ ಕಿಟ್ ವಿತರಿಸಿದರು.

    
    
    Community-verified icon

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts