More

    ಕ್ವಿಂಟಾಲ್ ಮೆಣಸಿನಕಾಯಿಗೆ 45111 ರೂ.

    ಬ್ಯಾಡಗಿ: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಮಂಗಳವಾರ ಡಬ್ಬಿ ತಳಿ ಕ್ವಿಂಟಾಲ್​ಗೆ 45111 ರೂ. ಮಾರಾಟವಾಗುವ ಮೂಲಕ ದೇಶದಲ್ಲಿಯೇ ಅತಿ ಹೆಚ್ಚಿನ ದರಕ್ಕೆ ಮಾರಾಟವಾದ ದಾಖಲೆಯಾಗಿದೆ.

    ಆಂಧ್ರದ ಗುಂಟೂರು ಹೊರತುಪಡಿಸಿ ದೇಶದಲ್ಲಿ ಎರಡನೇ ಅತಿದೊಡ್ಡ ಮಾರುಕಟ್ಟೆ ಬ್ಯಾಡಗಿ. 10 ವರ್ಷಗಳಿಂದ ಇಲ್ಲಿ ವಹಿವಾಟು ಏರಿಕೆಯಾಗಿದ್ದು, ಹಿಂದಿನ ವರ್ಷ ಒಂದೇ ದಿನದಲ್ಲಿ 3 ಲಕ್ಷ ಚೀಲಗಳ ಆವಕವಾಗಿ ಐತಿಹಾಸಿಕ ದಾಖಲೆಯಾಗಿತ್ತು. ಡಿ. 17ರಂದು ಡಬ್ಬಿ ತಳಿ ಕ್ವಿಂಟಾಲ್​ಗೆ 36999 ರೂ. ದರದಲ್ಲಿ ಮಾರಾಟವಾಗಿ ದಾಖಲೆಯೆನಿಸಿತ್ತು. ಆದರೆ, ಡಿ. 22ರ ಟೆಂಡರ್​ನಲ್ಲಿ ಸಿ.ಕೆ. ಮೇಲ್ಮುರಿ ದಲಾಲರ ಅಂಗಡಿಯಲ್ಲಿ ರೋಣ ತಾಲೂಕಿನ ಸವಡಿ ಗ್ರಾಮದ ರೈತ ಬಸವರೆಡ್ಡಿ ಬೂಸರೆಡ್ಡಿ ಅವರ 3 ಚೀಲಗಳ ಮೆಣಸಿನಕಾಯಿ ಕ್ವಿಂಟಾಲ್​ಗೆ 45111 ರೂ. ದರದಲ್ಲಿ ಮಾರಾಟವಾಗಿದ್ದು, ದೇಶದಲ್ಲಿ ಅತಿ ಹೆಚ್ಚು ದರದ ಖರೀದಿ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಸ್ಥಳೀಯ ಎಪಿಎಂಸಿಯಿಂದ ಸನ್ಮಾನಿಸಲಾಯಿತು. ಈ ಹಿಂದೆ ಹುಬ್ಬಳ್ಳಿ ಮಾರುಕಟ್ಟೆಯಲ್ಲಿ ಒಣಮೆಣಸಿನಕಾಯಿ ಕ್ವಿಂಟಾಲ್​ಗೆ 40 ಸಾವಿರ ರೂ.ಗೆ ಮಾರಾಟವಾದ ದಾಖಲೆಯಿತ್ತು. ಈಗ ಬ್ಯಾಡಗಿ ಮಾರುಕಟ್ಟೆಯಲ್ಲಿ ಈ ದಾಖಲೆ ಮೀರಿದ ಖರೀದಿ ನಡೆದಿದೆ.

    ಉತ್ತಮ ದರಕ್ಕೆ ಮಾರಾಟ: ಮಂಗಳವಾರ ಟೆಂಡರ್​ನಲ್ಲಿ ಒಟ್ಟು 47333 ಮೆಣಸಿನಕಾಯಿ ಚೀಲಗಳು ಆವಕವಾಗಿದ್ದವು. ಕಡ್ಡಿ ತಳಿ ಕ್ವಿಂಟಾಲ್​ಗೆ 36509 ರೂ. ದರದಲ್ಲಿ ಮಾರಾಟವಾಗಿದೆ. ಡಬ್ಬಿ ತಳಿ ಪ್ರಸಕ್ತ ಸಾಲಿನಲ್ಲಿ ನಿರಂತರವಾಗಿ ಸ್ಥಿರತೆ ಕಾಯ್ದುಕೊಂಡಿದೆ. ಶಂಭು ಟ್ರೇಡರ್ಸ್​ನ ಜಯಣ್ಣ ಚಿಲ್ಲೂರುಮಠ ದಲಾಲರ ಅಂಗಡಿಯಲ್ಲಿ ಅನಂತಪುರ ಜಿಲ್ಲೆ ರಾಯದುರ್ಗ ಸೀಮೆಯ ರೈತ ಅಶೋಕ ಅವರ 16 ಚೀಲಗಳ ಮೆಣಸಿನಕಾಯಿ ಕ್ವಿಂಟಾಲ್​ಗೆ 45009 ರೂ. ಗೆ ಖರೀದಿಯಾಗಿದ್ದು, ಬೆಳೆಗಾರರಲ್ಲಿ ಖುಷಿ ತಂದಿದೆ. ಎಪಿಎಂಸಿ ಕಾಯ್ದೆ ತಿದ್ದುಪಡಿ, ಕರೊನಾ, ಅತಿವೃಷ್ಟಿ ದರ ಪೈಪೋಟಿಗೆ ಅಡ್ಡಿಯಾಗಿಲ್ಲ. ಹೀಗಾಗಿ ಮೆಣಸಿನಕಾಯಿ ಖರೀದಿ ಮೌಲ್ಯ ದ್ವಿಗುಣಗೊಂಡಿದೆ.

    ಇಂದಿನ ದರ (ಕ್ವಿಂಟಾಲ್​ಗೆ ರೂ. ಗಳಲ್ಲಿ): ಕಡ್ಡಿ 1909ರಿಂದ 36509 ಸರಾಸರಿ 13809, ಡಬ್ಬಿ 3109ರಿಂದ 45111 ಸರಾಸರಿ 18610, ಗುಂಟೂರು 809ರಿಂದ 13209 ಸರಾಸರಿ 6189 ದರದಲ್ಲಿ ಮಾರಾಟವಾಗಿವೆ. ಒಟ್ಟು 228 ದಲಾಲರ ಅಂಗಡಿಗಳಲ್ಲಿ 8939 ಲಾಟ್​ಗಳನ್ನು ಹಾಕಲಾಗಿತ್ತು. ಈ ಪೈಕಿ 180 ಲಾಟ್​ಗಳು ತಿರಸ್ಕೃತವಾಗಿವೆ. 307 ಖರೀದಿದಾರರು ಪಾಲ್ಗೊಂಡಿದ್ದರು. ಮಂಗಳವಾರ ಮಾರುಕಟ್ಟೆಗೆ ಒಟ್ಟು 47333 ಚೀಲಗಳು ಆವಕವಾಗಿವೆ ಎಂದು ಲೆಕ್ಕಪರಿಶೋಧಕ ಪ್ರಭಣ್ಣ ದೊಡ್ಡಮನಿ ತಿಳಿಸಿದರು.

    ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಆನ್​ಲೈನ್ ಟೆಂಡರ್ ಮೂಲಕ ರೈತರಿಗೆ ಉತ್ತಮ ದರ, ತಕ್ಷಣ ಹಣ ಜಮೆಯಾಗುತ್ತಿದೆ. ದೇಶದ ಬೃಹತ್ ಸಾಂಬಾರ ಪುಡಿ, ಮಸಾಲೆ ಕಂಪನಿಗಳಿಗೆ ಇಲ್ಲಿನ ಮೆಣಸಿನಕಾಯಿ ರಫ್ತಾಗುತ್ತಿದೆ. ರಾಯಲಸೀಮೆ, ಆಂಧ್ರಪ್ರದೇಶ, ಬಳ್ಳಾರಿ ಭಾಗದಿಂದ ಬರುವ ರೈತರಿಗೆ ಎಪಿಎಂಸಿಯಲ್ಲಿ ಕುಡಿಯಲು ಶುದ್ಧೀಕರಿಸಿದ ನೀರು, ವಿಶ್ರಾಂತಿ ಕೊಠಡಿ ಒದಗಿಸಲಾಗಿದೆ. ಮಾರುಕಟ್ಟೆ ಸ್ವಚ್ಛತೆಗೆ ಆದ್ಯತೆ ನೀಡಿದ್ದು, ಅತಿ ಹೆಚ್ಚು ದರಕ್ಕೆ ಮೆಣಸಿನಕಾಯಿ ಮಾರಾಟ ಮಾಡಿದ ರೈತರನ್ನು ಸನ್ಮಾನಿಸುವ ಚಿಂತನೆ ನಡೆದಿದೆ. ಡಿ. 22ರಂದು ಡಬ್ಬಿ ತಳಿಗೆ 45111 ರೂ. ಮಾರಾಟವಾಗಿರುವುದು ಮಾರುಕಟ್ಟೆಯ ಐತಿಹಾಸಿಕ ದಿನವಾಗಿದೆ.

    |ವೀರಭದ್ರಪ್ಪ ಗೊಡಚಿ ಬ್ಯಾಡಗಿ ಎಪಿಎಂಸಿ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts