More

    ಬಬ್ಬುಸ್ವಾಮಿ ದೈವದ ಕಾಣಿಕೆ ಹುಂಡಿ ಅಪವಿತ್ರ

    ಮಂಗಳೂರು: ನಗರದಲ್ಲಿ ಸಾಮಾಜಿಕ ಶಾಂತಿ ಕದಡುವ ಹುನ್ನಾರ ಮತ್ತೆ ಮುಂದುವರಿದಿದೆ. ಉರ್ವ ಪೊಲೀಸ್ ಠಾಣೆ ವ್ಯಾಪ್ತಿಯ ದಡ್ಡಲ್‌ಕಾಡ್‌ನಲ್ಲಿ ರಸ್ತೆ ಬದಿ ಇರುವ ಕೋಟೆದ ಬಬ್ಬುಸ್ವಾಮಿ ದೈವಸ್ಥಾನದ ಕಾಣಿಕೆ ಹುಂಡಿ ಒಡೆದ ದುಷ್ಕರ್ಮಿಗಳು ಅದರಲ್ಲಿ ಹಿಂದು ದೇವರನ್ನು ನಿಂದಿಸಿ ಬರೆದ ಪತ್ರ ಮತ್ತು ಕಾಂಡೋಮ್ ಹಾಕಿ ಅಪವಿತ್ರಗೊಳಿಸಿರುವುದು ಗುರುವಾರ ಬೆಳಗ್ಗೆ ಬೆಳಕಿಗೆ ಬಂದಿದೆ.

    ಕಾಣಿಕೆ ಹುಂಡಿಯಿಂದ ಹಣ ದೋಚಿದ ದುಷ್ಕರ್ಮಿಗಳು ಅದರಲ್ಲಿ ವಿಚಿತ್ರ ಬರಹಗಳನ್ನು ಹಾಕಿ ಭಕ್ತರ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ. ವಿಗ್ರಹಾರಾಧನೆ, ದೈವಿಕ ಶಕ್ತಿಯನ್ನು ನಿಂದಿಸಿ ಬರೆಯಲಾಗಿದೆ. ಈ ಹಿಂದೆ ಮಂಗಳೂರಿನಲ್ಲಿ ನಡೆದ ಪ್ರಕರಣಗಳ ಆರೋಪಿಗಳೇ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎನ್ನಲಾಗಿದ್ದು, ದುಷ್ಕರ್ಮಿಗಳನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಹಾಗೂ ಹಿಂದು ಸಂಘಟನೆ ಮುಖಂಡರು ಪೊಲೀಸರನ್ನು ಆಗ್ರಹಿಸಿದ್ದಾರೆ. ಘಟನೆಯ ಮಾಹಿತಿ ಪಡೆದ ಉರ್ವ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

    ಸಾಮೂಹಿಕ ಪ್ರಾರ್ಥನೆ: ಬಬ್ಬುಸ್ವಾಮಿ ದೈವಸ್ಥಾನದ ಎದುರು ಸ್ಥಳೀಯ ಫ್ರೆಂಡ್ಸ್ ಸರ್ಕಲ್ ಸದಸ್ಯರು ಹಾಗೂ ಭಕ್ತರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದಾರೆ. ದುಷ್ಕೃತ್ಯ ನಡೆಸಿದವರು ಯಾರೆಂದು ಬಬ್ಬುಸ್ವಾಮಿ ಪತ್ತೆ ಹಚ್ಚಿ ಅವರಿಗೆ ತಕ್ಕ ಶಾಸ್ತಿ ಮಾಡಬೇಕು ಎಂದು ಪ್ರಾರ್ಥಿಸಿದ್ದಾರೆ.

    ನಾಲ್ಕನೇ ಪ್ರಕರಣ: ಮಂಗಳೂರು ವ್ಯಾಪ್ತಿಯಲ್ಲಿ ನಡೆದ ನಾಲ್ಕನೆಯ ಪ್ರಕರಣವಿದು. ತಿಂಗಳ ಹಿಂದೆ ಕೊಟ್ಟಾರದ ಬಬ್ಬುಸ್ವಾಮಿ ಮತ್ತು ಅತ್ತಾವರದ ಕೊರಗಜ್ಜನ ಕಟ್ಟೆಯ ಕಾಣಿಕೆ ಹುಂಡಿಯನ್ನು ಅಪವಿತ್ರಗೊಳಿಸಿ, ಹಿಂದು ಧರ್ಮವನ್ನು ಟೀಕಿಸಿ ಬರೆಯಲಾಗಿತ್ತು. ಇತ್ತೀಚೆಗೆ ಉಳ್ಳಾಲದ ಕೊರಗಜ್ಜನ ಕಟ್ಟೆಗೆ ಕಾಂಡೋಮ್ ಹಾಕಿ ಅಪವಿತ್ರಗೊಳಿಸಲಾಗಿತ್ತು. ಈ ರೀತಿಯ ಘಟನೆಗಳು ಮಂಗಳೂರಿನ ಜನತೆಯ ನೆಮ್ಮದಿ ಹಾಳು ಮಾಡಿದೆ. ಈ ಪ್ರಕರಣಗಳಲ್ಲಿ ನೈಜ ಆರೋಪಿಗಳನ್ನು ಬಂಧಿಸಿಲ್ಲ ಎಂದು ಹಿಂದು ಸಂಘಟನೆಗಳು ಆರೋಪಿಸಿವೆ. ರಾತ್ರಿ ವೇಳೆ ಇಂತಹ ದುಷ್ಕೃತ್ಯಗಳು ನಡೆಯುತ್ತಿದೆ. ನಗರದ ಹೆಚ್ಚಿನ ಕಡೆ ಪೊಲೀಸ್ ಗಸ್ತು ಕೆಲವು ಸಮಯಗಳಿಂದ ಕಡಿಮೆಯಾಗಿದ್ದು, ದುಷ್ಕರ್ಮಿಗಳು ಅದರ ಲಾಭ ಪಡೆಯುತ್ತಿದ್ದಾರೆ. ನಗರದ ಒಳ ರಸ್ತೆಗಳಲ್ಲೂ ರಾತ್ರಿ ಗಸ್ತು ಹೆಚ್ಚಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

    ದಡ್ಡಲ್‌ಕಾಡ್ ಶ್ರೀ ಕೋಟೆದ ಬಬ್ಬುಸ್ವಾಮಿ ದೈವಸ್ಥಾನದ ಕಾಣಿಕೆ ಹುಂಡಿಯನ್ನು ಅಪವಿತ್ರಗೊಳಿಸಿದ ವಿಚಾರ ತಿಳಿದು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದೇನೆ. ಆರೋಪಿಗಳನ್ನು ಶೀಘ್ರ ಪತ್ತೆ ಮಾಡಿ, ಕಾನೂನು ಕ್ರಮ ಜರುಗಿಸಲು ಪೊಲೀಸರನ್ನು ಒತ್ತಾಯಿಸಿದ್ದೇನೆ.
    – ವೇದವ್ಯಾಸ ಕಾಮತ್, ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts