More

    ಸೋಂಕಿತರಿಗೆ ಜೀವನೋತ್ಸಾಹ ತುಂಬುವ ಆಯುಷ್ ಇಲಾಖೆ

    ಗಣೇಶ್ ಮಾವಂಜಿ, ಸುಳ್ಯ

    ನಮ್ಮವರೇ ನಮ್ಮನ್ನು ದೂರ ಮಾಡಿ ಕನಿಷ್ಠ ಒಂದು ಕರೆ ಮಾಡಿಯೂ ಆರೋಗ್ಯ ವಿಚಾರಿಸದೆ ಇದ್ದಾಗ ಈ ಜೀವನವೇ ಬೇಡ ಎಂಬ ಮನೋಸ್ಥಿತಿಗೆ ನಾವೆಲ್ಲಾ ತಲುಪಿದ್ದೆವು. ಡಿಸಿ ಕಚೇರಿಯಿಂದ ಕರೆ ಮಾಡಿ ನಮ್ಮನ್ನು ವಿಚಾರಿಸಿದಾಗ ಮೊದಲಿಗೆ ತುಸು ಕೋಪ ಬಂದು ಕರೆ ಕಟ್ ಮಾಡಿಬಿಡೋಣ ಎಂದು ಅನಿಸಿದ್ದು ಸುಳ್ಳಲ್ಲ. ಆದರೆ, ಕರೆ ಮಾಡಿದ ಮಹಿಳೆ ಆತ್ಮೀಯತೆಯಿಂದ ಮಾತನಾಡಿಸಿದಾಗ ನಮ್ಮವರು ಯಾರೂ ಮಾತಾಡಿಸಲಿಲ್ಲವಲ್ಲಾ ಎಂಬ ಕೊರಗು ದೂರವಾದಂತಾಯಿತು. ಇದು ಕೋವಿಡ್ ಸೋಂಕು ಪೀಡಿತ ವ್ಯಕ್ತಿಯ ಮಾತು.

    ಕೋವಿಡ್ ಗೆಲ್ಲಬಹುದು ಎಂಬ ಧೈರ್ಯ ಮನಸ್ಸಿನಲ್ಲಿ ಇದ್ದರೂ, ಹತ್ತಿರದವರು ಹಾಗೂ ಸಂಬಂಧಿಕರೇ ದೂರ ಮಾಡಿದಾಗ ಮನಸ್ಸಿನಲ್ಲಿ ಖಿನ್ನತೆ ಆವರಿಸಿತ್ತು. ಆದರೆ ಆಯುಷ್ ಇಲಾಖೆಯಿಂದ ಬಂದ ಒಂದು ಕರೆ ಹಾಗೂ ಅವರು ನೀಡಿದ ಸಲಹೆ, ಸೂಚನೆ, ಧೈರ್ಯದ ಮಾತುಗಳು ನಮ್ಮಲ್ಲಿದ್ದ ಅನಾಥಪ್ರಜ್ಞೆಯನ್ನು ದೂರ ಮಾಡುವುದರೊಂದಿಗೆ ಜೀವನದ ಯಾವ ಕಷ್ಟಗಳನ್ನೂ ಗೆಲ್ಲಬಹುದು ಎಂಬ ನಂಬಕೆ ಮನಸ್ಸಲ್ಲಿ ಮೂಡುವಂತೆ ಮಾಡಿದೆ ಎನ್ನತ್ತಾರೆ ಇನ್ನೋರ್ವ ಸೋಂಕಿತ ಮಹಿಳೆ.

    ಕೋವಿಡ್ ಸೋಂಕು ತಗುಲಿದ ವ್ಯಕ್ತಿಗಳ ಸಂಪರ್ಕಕ್ಕೆ ಬಂದರೆ, ಮಾತನಾಡಿಸಿದರೆ ತಮ್ಮ ಜೀವನವೇ ಮುಗಿದು ಹೋಯಿತು ಎಂಬ ಮಟ್ಟಿಗೆ ಜನರು ಕೋವಿಡ್ ಸೋಂಕಿತ ವ್ಯಕ್ತಿಗಳನ್ನು, ಅವರ ಕುಟುಂಬದವರನ್ನು ದೂರ ಮಾಡುತ್ತಾರೆ. ಆದರೆ, ಆಯುಷ್ ಇಲಾಖೆಯ ವತಿಯಿಂದ ಸ್ಥಾಪಿತಗೊಂಡ ಕೋವಿಡ್ ವಾರ್‌ರೂಂನ ಸಿಬ್ಬಂದಿಯ ಒಂದು ಕರೆ ಈ ಸೋಂಕಿತರ ಸೋತ ಮನಸ್ಸಿನಲ್ಲಿ ಗೆಲುವಿನ ಆಶಾಕಿರಣ ಮೂಡುವಂತೆ ಮಾಡುತ್ತದೆ.

    ಆಯುಷ್ ಆರೋಗ್ಯ ಇಲಾಖೆಯ ವತಿಯಿಂದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯುಷ್ ಕೋವಿಡ್ ನಿರ್ವಹಣಾ ಘಟಕವೊಂದು (ವಾರ್‌ರೂಂ) ಕಾರ್ಯವೆಸಗುತ್ತಿದ್ದು, ಇಲಾಖೆಯ ವೈದ್ಯರು, ಶುಶ್ರೂಷಕಿಯರು ಸೇರಿದಂತೆ ಒಟ್ಟು 12 ಜನರು ಇಲ್ಲಿದ್ದಾರೆ. ಪ್ರತಿದಿನ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಪಟ್ಟಿ ಈ ವಾರ್‌ರೂಂ ಸದಸ್ಯರ ಕೈಸೇರುತ್ತದೆ. ಸೋಂಕಿತರಿಗೆ ಫೋನಾಯಿಸಿ ಅವರ ಆರೋಗ್ಯ ವಿಚಾರಿಸಿ ಅವರಿಗೆ ಅಗತ್ಯ ಸಲಹೆ ಸೂಚನೆ ನೀಡುವುದರೊಂದಿಗೆ ನಿಮಗೆ ನಾವಿದ್ದೇವೆ. ಯಾವುದಕ್ಕೂ ಎದೆಗುಂದಬೇಡಿ. ಕೋವಿಡ್ ಸೋಂಕಿನ ಬಗ್ಗೆ ಆತಂಕ ಬೇಡ, ಜಾಗೃತಿ ಇದ್ದರೆ ಸಾಕು ಎಂದು ತಿಳಿಸಿದಾಗ ಸೋಂಕಿತರ ಮನಸ್ಸಿನಲ್ಲಿ ಹೊಸ ಹುರುಪು ಮೂಡುತ್ತದೆ.

    ತಾಳ್ಮೆಯೇ ಮೂಲ: ಸೋಂಕು ತಗುಲಿದ ವ್ಯಕ್ತಿ, ಅವರ ಕುಟುಂಬಿಕರು ದುಗುಡ ತುಂಬಿದ ಮನದಿಂದ ಕರೆ ಸ್ವೀಕರಿಸಿ ಆರೋಗ್ಯ ವಿಚಾರಿಸಿದವರ ಮೇಲೆಯೇ ರೇಗಾಡಲೂ ಸಾಕು. ಅಥವಾ ಯಾರೋ ಹಣ ಮಾಡಲು ಪೀಠಿಕೆ ಹಾಕುತ್ತಿದ್ದಾರೆ ಎಂದೆನಿಸಿ ಅನುಮಾನದಿಂದಲೇ ಮಾತನಾಡಿಸುವುದೂ ಇದೆ. ಆಗೆಲ್ಲಾ ಈ ವಾರ್‌ರೂಂ ಸದಸ್ಯರು ತುಂಬಾ ತಾಳ್ಮೆಯಿಂದ ಮಾತನಾಡಿಸಿ ಅವರಲ್ಲಿ ವಿಶ್ವಾಸ ಮೂಡಿಸಬೇಕು. ಬಳಿಕ ಸೋಂಕು ತಗುಲಿದ ವ್ಯಕ್ತಿ, ಅವರ ಕುಟುಂಬಿಕರು ಅನುಸರಿಸಬೇಕಾದ ಮುಂಜಾಗರೂಕ ಕ್ರಮಗಳೇನು? ಯಾರನ್ನು ಸಂಪರ್ಕಿಸಿ ಮೆಡಿಸಿನ್ ಪಡೆದುಕೊಳ್ಳಬೇಕು? ಮನೆಯಲ್ಲೇ ಕುಳಿತು ಸೋಂಕು ಹರಡದಂತೆ, ಉಲ್ಬಣಗೊಳ್ಳದಂತೆ ಮಾಡುವ ಮನೆಮದ್ದುಗಳೇನು ಎಂಬುದನ್ನು ಅವರು ತಿಳಿಸುತ್ತಾರೆ.

    ಕರೆ ಮಾಡಿ ಕರೋನಾ ಸೋಂಕಿತನ ಮನೆಯ ಸದಸ್ಯರ ಆರೋಗ್ಯ ವಿಚಾರಿಸಿದ ಬಳಿಕ ಅವರ ಮನದಲ್ಲಿ ಭರವಸೆಯ ಬೆಳಕು ಮೂಡಿದಾಗ ಯೂನಿಫಾರ್ಮ್ ಧರಿಸಿ ರೋಗಿಗಳ ಸೇವೆ ಮಾಡಿದಾಗ ಸಿಗುವ ಖುಷಿಗಿಂತಲೂ ದುಪ್ಪಟ್ಟು ಖುಷಿಯಾಗುತ್ತದೆ. ಗ್ರಾಮೀಣ ಭಾಗಗಳಲ್ಲಿ ಕೆಲವರು ತೀರಾ ಮುಗ್ಧರಾಗಿದ್ದು, ಕೋವಿಡ್ ಸೋಂಕು ತಗುಲಿದರೆ ಬದುಕೇ ಮುಗಿದು ಹೋಯಿತೇನೋ ಎಂದು ಭಯಪಡುವವರೂ ಇದ್ದಾರೆ. ಅಂತವರಿಗೆ ನಮ್ಮ ಫೋನ್ ಕರೆ ಬಳಲಿ ಬಾಯಾರಿದ ವ್ಯಕ್ತಿಯೊಬ್ಬನಿಗೆ ಜೀವಜಲ ನೀಡಿದಷ್ಟೇ ಪರಿಣಾಮಕಾರಿ ಎನಿಸುತ್ತದೆ.
    ಸುನಂದಾ ಡಿ.ಆರ್, ಶುಶ್ರೂಷಕ ಅಧಿಕಾರಿ, ಜಿಲ್ಲಾ ಆಯುಷ್ ಆಸ್ಪತ್ರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts