More

    ನೈಋತ್ಯ ರೈಲ್ವೆಯಿಂದ ಅಯೋಧ್ಯೆಗೆ ರೈಲು

    ಹುಬ್ಬಳ್ಳಿ : ಅಯೋಧ್ಯೆಯಲ್ಲಿ ಶ್ರೀರಾಮ ಮೂರ್ತಿಯ ಪ್ರಾಣಪ್ರತಿಷ್ಠಾಪನೆ ಸಮಯ ಸನಿಹಗೊಳ್ಳುತ್ತಿದ್ದಂತೆಯೇ ರೈಲು ಪ್ರಯಾಣಿಕರಿಗೆ ನೈಋತ್ಯ ರೈಲ್ವೆ ವಲಯ ಸಿಹಿ ಸುದ್ದಿ ನೀಡಲು ಮುಂದಾಗಿದೆ.

    ಕರ್ನಾಟಕದಿಂದ ಅಯೋಧ್ಯೆಗೆ ಭಕ್ತರು ತಲುಪುವುದಕ್ಕಾಗಿ 12 ರೈಲುಗಳನ್ನು ಸಂಚರಿಸುವ ಬಗ್ಗೆ ಯೋಚನೆಯನ್ನು ನೈಋತ್ಯ ರೈಲ್ವೆ ವಲಯದ ಅಧಿಕಾರಿಗಳು ನಡೆಸಿದ್ದಾರೆ. ಅಯೋಧ್ಯೆಗೆ ರೈಲು ಸಂಚಾರ ಪ್ರಾರಂಭಿಸಲು ನೈಋತ್ಯ ರೈಲ್ವೆ ಇದುವರೆಗೆ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ, ಮೂಲಗಳ ಪ್ರಕಾರ ಸಧ್ಯಕ್ಕೆ ಬೆಂಗಳೂರಿನಿಂದ 3, ಮೈಸೂರಿನಿಂದ 2, ತುಮಕೂರಿನಿಂದ 2, ಚಿತ್ರದುರ್ಗದಿಂದ 2 ಹಾಗೂ ವಾಸ್ಕೋದಿಂದ 2 ರೈಲುಗಳ ನೇರ ಸಂಚಾರ ಪ್ರಾರಂಭಿಸಲಾಗುತ್ತಿದೆ. ಬೆಳಗಾವಿಯಿಂದಲೂ ಹುಬ್ಬಳ್ಳಿ ಮಾರ್ಗದ ಮೂಲಕ ಮತ್ತೊಂದು ರೈಲು ಸಂಚಾರ ಪ್ರಾರಂಭಿಸುವ ಯೋಚನೆಯೂ ಅಧಿಕಾರಿಗಳಲ್ಲಿ ಇದೆ ಎಂದು ತಿಳಿದುಬಂದಿದೆ.

    ಆದರೆ, ಈ ಎಲ್ಲ ರೈಲುಗಳ ಸಂಚಾರ ಜ. 31 ರಿಂದ ಮಾರ್ಚ್ 5ರವರೆಗೆ ನಡೆಯಲಿದೆ. ಪ್ರಯಾಣಿಕರ ಬೇಡಿಕೆ ಆಧರಿಸಿ ರೈಲುಗಳ ಸಂಖ್ಯೆ ಹೆಚ್ಚಿಸುವ ಹಾಗೂ ಅವಧಿ ವಿಸ್ತರಿಸುವ ತೀರ್ಮಾನವನ್ನು ಅಧಿಕಾರಿಗಳು ಮಾಡಲಿದ್ದಾರೆ.

    ಭದ್ರತೆ ದೃಷ್ಟಿಯಿಂದಾಗಿ ಸಧ್ಯಕ್ಕೆ ಅಯೋಧ್ಯೆಗೆ ರೈಲುಗಳ ಸಂಚಾರ ಇರುವುದಿಲ್ಲ. ಜ. 31ರ ನಂತರ ಅಯೋಧ್ಯೆಗೆ ರೈಲುಗಳ ಮೂಲಕ ತೆರಳಬೇಕೆನ್ನುವವರು ಆನ್​ಲೈನ್ ಮೂಲಕವೇ ಬುಕ್ಕಿಂಗ್ ಮಾಡಿಸಬೇಕು.

    ಈ ಹಿಂದೆ ವಾರಣಾಸಿಗೆ ಭೇಟಿ ನೀಡುವ ಭಕ್ತರಿಗೆ ಜನಪ್ರತಿನಿಧಿಗಳು ಉಚಿತ ರೈಲು ಪ್ರಯಾಣದ ವ್ಯವಸ್ಥೆ ಮಾಡಲಾಗಿತ್ತು. ಅದೇ ರೀತಿ ಅಯೋಧ್ಯೆಗೆ ತೆರಳುವ ಭಕ್ತರಿಗೂ ಉಚಿತ ಪ್ರಯಾಣ ಘೋಷಿಸುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಛತ್ತಿಸ್​ಗಢದ ಬಿಜೆಪಿ ಸರ್ಕಾರವು ಅಯೋಧ್ಯೆಯಲ್ಲಿ ಶ್ರೀರಾಮ ಮೂರ್ತಿ ದರ್ಶನ ಪಡೆಯುವುದಕ್ಕಾಗಿ ಈಗಾಗಲೇ ಉಚಿತ ರೈಲು ಪ್ರಯಾಣ ಅನುಮೋದಿಸಿದೆ.

    ಕೋಟ್

    ಅಯೋಧ್ಯೆಗೆ ರೈಲು ಸಂಚಾರ ಪ್ರಾರಂಭಿಸುವ ಬಗ್ಗೆ ಇದುವರೆಗೆ ಅಧಿಕೃತ ತೀರ್ಮಾನ ಹೊರಬಂದಿಲ್ಲ. ಪ್ರಯಾಣಿಕರ ಬೇಡಿಕೆ ಆಧರಿಸಿ, ರೈಲು ಸಂಚಾರ ಪ್ರಾರಂಭಿಸುವ ಕುರಿತು ನಿರ್ಧರಿಸಲಾಗುವುದು.

    – ಮಂಜುನಾಥ ಕನಮಡಿ, ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ, ನೈಋತ್ಯ ರೈಲ್ವೆ ವಲಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts