More

    ಮಾಜಿ ಸಿಎಂ ಬಿಎಸ್‌ವೈಗೆ ಜೀವನದಿ ರಾಷ್ಟ್ರೀಯ ಪ್ರಶಸ್ತಿ: ಸಾಹಿತ್ಯ ಶಿವಭೂಷಣ ಗೌರವ ಪಡೆದ ಪ್ರಭು ಚನ್ನಬಸವ ಸ್ವಾಮೀಜಿ

    ಪಾಂಡವಪುರ: ತಾಲೂಕಿನ ಬೇಬಿ ಗ್ರಾಮದ ದುರ್ದಂಡೇಶ್ವರ ಮಠದಲ್ಲಿ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ‘ಜೀವನದಿ ರಾಷ್ಟ್ರೀಯ ಪ್ರಶಸ್ತಿ’ ಹಾಗೂ ಬೆಳಗಾವಿ ಜಿಲ್ಲೆ ಅಥಣಿಯ ಮೋಟಗಿ ಮಠದ ಮತ್ತು ಮಹಾತ್ಮರ ಚರಿತಾಮೃತ ಮಹಾಗ್ರಂಥದ ಕೃತಿಕಾರ ಪ್ರಭು ಚನ್ನಬಸವ ಸ್ವಾಮೀಜಿ ಅವರಿಗೆ ‘ಸಾಹಿತ್ಯ ಶಿವಭೂಷಣ’ ಪ್ರಶಸ್ತಿ ನೀಡಲಾಯಿತು.
    ದುರ್ದಂಡೇಶ್ವರ ಮಠದ ಲಿಂಗೈಕ್ಯ ಮರಿದೇವರು ಶಿವಯೋಗಿಗಳ 14ನೇ ವರ್ಷದ ಪುಣ್ಯ ಸ್ಮರಣೆ ಹಾಗೂ 5ನೇ ವರ್ಷದ ರಥೋತ್ಸವದ ಅಂಗವಾಗಿ ಆಯೋಜಿಸಿದ್ದ ಧಾರ್ಮಿಕ ಸಮಾರಂಭದಲ್ಲಿ ಗಣ್ಯರು ಇಬ್ಬರು ಮಹನೀಯರಿಗೂ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.
    ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮಾಜಿ ಸಿಎಂ ಬಿಎಸ್‌ವೈ, ಅಧಿಕಾರ ಮುಖ್ಯನೂ ಅಲ್ಲ ಹಾಗೂ ಶಾಶ್ವತನೂ ಅಲ್ಲ. ಅಧಿಕಾರ ಇದ್ದಾಗ ಜನರಿಗಾಗಿ ಏನೂ ಮಾಡಿದೆ ಎಂಬುದಷ್ಟೇ ಬಹುಮುಖ್ಯ. ಅಧಿಕಾರದಲ್ಲಿದ್ದಾಗ ರಾಜ್ಯವನ್ನು ಮಾದರಿಯನ್ನಾಗಿಸಬೇಕು ಎಂಬ ಹಂಬಲದಿಂದ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಈ ಸನ್ಮಾನ, ಅಭಿನಂದನೆ ಯಾವುದೂ ನನಗೆ ಸಲ್ಲುವುದಿಲ್ಲ. ಎಲ್ಲವೂ ನನಗೆ ಬೆಂಬಲವಾಗಿ ನಿಂತಿರುವ ನಾಡಿನ ಜನತೆಗೆ ಸಲ್ಲಬೇಕು. ಮಠಾಧೀಶರ ಆಶೀರ್ವಾದವು ನನ್ನ ಬೆಳವಣಿಗೆಗೆ ಶ್ರೀರಕ್ಷೆ ಎಂದರು.
    ನಾನು ಮುಖ್ಯಮಂತ್ರಿಯಾಗಿದ್ದಾಗ ನೀಡಿದ್ದ ಭಾಗ್ಯಲಕ್ಷ್ಮೀ ಯೋಜನೆಯಿಂದ ಹೆಣ್ಣು ಮಕ್ಕಳಿಗೆ 1.25 ಲಕ್ಷ ರೂ ಸಿಗುತ್ತಿದೆ. ಹಾಲಿಗೆ ಪ್ರೋತ್ಸಾಹ ಧನ ಕೊಟ್ಟು ಹೈನುಗಾರಿಕೆಯನ್ನು ಪ್ರೋತ್ಸಾಹಿಸಿದ್ದೇನೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಮುಂದೆಯೂ ಅಭಿವೃದ್ಧಿ ಕೆಲಸಗಳನ್ನು ಮಾಡಲಿದ್ದಾರೆ ಎಂಬ ಭರವಸೆ ಇದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ವಿಶ್ವವೇ ಅಚ್ಚರಿಯಾಗಿ ನೋಡುತ್ತಿದೆ. ಅವರು ಈ ದೇಶಕ್ಕೆ ದೊಡ್ಡ ಕೊಡುಗೆಯಾಗಿದ್ದಾರೆ. ಪ್ರಧಾನಿ ಅವರ ಮನವಿಯಂತೆ ಪ್ರತಿಯೊಬ್ಬರು ತಮ್ಮ ಮನೆಗಳ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಿ ಗೌರವ ಸಲ್ಲಿಸಬೇಕು. ಇಂದು ಯುವಕರು ಮತ್ತು ಯುವತಿಯರಲ್ಲಿ ರಾಷ್ಟ್ರಾಭಿಮಾನ ತುಂಬುವ ಕೆಲಸ ನಡೆಯುತ್ತಿದೆ. ಇದು ಧಾರ್ಮಿಕ ಕಾರ್ಯಕ್ರಮವಾಗಿದ್ದು, ರಾಜಕೀಯ ಮಾತನಾಡುವ ಸಮಯವಲ್ಲ. ಆದರೆ ಜನರಿಗೆ ವಾಸ್ತವವನ್ನು ತಿಳಿಸುವ ಕೆಲಸ ಮಾಡಲೇಬೇಕಿದೆ ಎಂದು ಹೇಳಿದರು.
    ದುರ್ದಂಡೇಶ್ವರ ಮಠದ ಲಿಂಗೈಕ್ಯ ಮರಿದೇವರು ಸ್ವಾಮೀಜಿ ಅವರು ಬದುಕಿದ್ದಾಗ ಮಠಕ್ಕೆ ಭೇಟಿ ನೀಡಿ ಅವರ ಆಶೀರ್ವಾದ ಪಡೆಯುತ್ತಿದ್ದೆ. ಅವರು ನಿನಗೆ ಒಳ್ಳೆಯ ಭವಿಷ್ಯವಿದೆ. ಇಟ್ಟ ಹೆಜ್ಜೆಯನ್ನು ಹಿಂತೆಗೆಯದೆ ಮುಂದಡಿ ಇಡು ಎಂದು ಆಶೀರ್ವದಿಸಿದ್ದರು. ಅದರ ಪರಿಣಾಮ ಮತ್ತು ಜನರ ಬೆಂಬಲದಿಂದ ಎತ್ತರಕ್ಕೆ ಬೆಳೆದೆ ಎಂದು ತಮ್ಮ ಗುರುಗಳನ್ನು ಸ್ಮರಿಸಿಕೊಂಡರು.
    ಪಾಲಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಚಂದ್ರವನ ಆಶ್ರಮದ ಪೂಜ್ಯರು ಶಿಕ್ಷಣಕ್ಕೆ ಒತ್ತು ನೀಡಿ ಗ್ರಾಮೀಣ ಭಾಗದಲ್ಲಿ ಬಡ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವುದು ಒಳ್ಳೆಯ ಕೆಲಸ. ಈ ಕ್ಷೇತ್ರಕ್ಕೆ ಆಗಬೇಕಾಗಿರುವ ಕೆಲಸ ಕಾರ್ಯಗಳನ್ನು ಹೇಳಿದರೆ ಸರ್ಕಾರದ ಗಮನಕ್ಕೆ ತಂದು ಅಗತ್ಯ ಅನುದಾನ ಬಿಡುಗಡೆಗೊಳಿಸಿ ಕ್ಷೇತ್ರದ ಅಭಿವೃದ್ಧಿ ಸಹಕರಿಸಲಾಗುವುದು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts