More

    ಇ-ಶ್ರಮ್ ಯೋಜನೆ ಪ್ರಯೋಜನ ಪಡೆಯಿರಿ

    ಕೆ.ಆರ್.ನಗರ: ಅಸಂಘಟಿತ ಕಾರ್ಮಿಕ ವಲಯದಲ್ಲಿರುವ ಪತ್ರಿಕಾ ವಿತರಕರಿಗೆ ಇ-ಶ್ರಮ್ ಯೋಜನೆ ರೂಪಿಸಿದ್ದು ಅರ್ಹರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹಿರಿಯ ಕಾರ್ಮಿಕ ನಿರೀಕ್ಷಕಿ ಬಿ.ಮಂಗಳಗೌರಿ ಹೇಳಿದರು.

    ಪಟ್ಟಣದ ಕಾರ್ಮಿಕ ಇಲಾಖೆ ಕಚೇರಿಯಲ್ಲಿ ಕಾರ್ಮಿಕ ಇಲಾಖೆ ಮತ್ತು ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಸಹಯೋಗದಲ್ಲಿ ಆಯೋಜಿಸಿದ್ದ ಪತ್ರಿಕಾ ವಿತರಕರಿಗೆ ಕಾರ್ಮಿಕರ ಅಪಘಾತ ಪರಿಹಾರ ಮತ್ತು ವೈದ್ಯಕೀಯ ಸೌಲಭ್ಯ ಯೋಜನೆಯಡಿ ಇ-ಶ್ರಮ್ ಕಾರ್ಡ್ ನೋಂದಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪತ್ರಿಕಾ ವಿತರಕರು ಪತ್ರಿಕೆ ವಿತರಿಸಲು ದ್ವಿಚಕ್ರ ವಾಹನ, ಸೈಕಲ್ ಬಳಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅಪಘಾತಗಳಾಗುವ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ಅಪಘಾತ ಪರಿಹಾರ ಮತ್ತು ವೈದ್ಯಕೀಯ ಸೌಲಭ್ಯ ಕಲ್ಪಿಸುವುದು ಯೋಜನೆಯ ಉದ್ದೇಶವಾಗಿದೆ ಎಂದು ಹೇಳಿದರು.

    18ರಿಂದ 59 ವರ್ಷದೊಳಗಿನ ಇಎಸ್‌ಐ, ಇಪಿಎಫ್ ಸೌಲಭ್ಯ ಹೊಂದಿರದ ಮತ್ತು ಆದಾಯ ತೆರಿಗೆ ಪಾವತಿದಾರರಾಗಿರದ ಎಲ್ಲರೂ ಯೋಜನೆ ಪಡೆಯಲು ಅರ್ಹರಾಗಿದ್ದಾರೆ. ಈ ಕಾರ್ಮಿಕರು ಅಪಘಾತದಲ್ಲಿ ಮರಣ ಹೊಂದಿದರೆ 2 ಲಕ್ಷ ರೂ., ಶಾಶ್ವತ ದುರ್ಬಲತೆ ಹೊಂದಿದರೆ 2 ಲಕ್ಷ ರೂ. ಹಾಗೂ ಮಾರಣಾಂತಿಕ ಕಾಯಿಲೆ ಅಥವಾ ಗಂಭೀರ ಅನಾರೋಗ್ಯಕ್ಕೆ ತುತ್ತಾದಲ್ಲಿ ಆಸ್ಪತ್ರೆ ವೆಚ್ಚ ಮರುಪಾವತಿ 1 ಲಕ್ಷ ರೂ.ಗಳವರೆಗೆ ಅವಕಾಶವಿದೆ. ಇ-ಶ್ರಮ್ ಪೋರ್ಟಲ್ ಮೂಲಕವೂ ಸ್ವಯಂ ಆಗಿ ನೋಂದಾಯಿಸಿಕೊಳ್ಳಬಹುದಾಗಿದೆ ಎಂದರು.

    ಇ-ಶ್ರಮ್ ಯೋಜನೆ ನೋಂದಣಿಯಲ್ಲಿ ರಾಜ್ಯದಲ್ಲೇ ಮೈಸೂರು ಜಿಲ್ಲೆ 3ನೇ ಸ್ಥಾನದಲ್ಲಿದೆ. ಕಟ್ಟಡ ನಿರ್ಮಾಣ ಕಾರ್ಮಿಕರ ಯೋಜನೆಯಡಿ ತಾಲೂಕಿನಲ್ಲಿ 12 ಸಾವಿರ ಕಾರ್ಮಿಕರು ಹೆಸರು ನೋಂದಾಯಿಸಿಕೊಂಡಿದ್ದು, ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಕೆಲವು ಅನರ್ಹರು ಕಟ್ಟಡ ಕಾರ್ಮಿಕರೆಂದು ನೋಂದಾಯಿಸಿಕೊಂಡು ಸರ್ಕಾರ ಮತ್ತು ಇಲಾಖೆಗೆ ವಂಚಿಸುತ್ತಿದ್ದು, ಈ ಬಗ್ಗೆ ದೂರುಗಳು ಬಂದಿವೆ. ಪರಿಶೀಲನೆ ವೇಳೆ ಸಿಕ್ಕಿ ಬಿದ್ದರೆ ಅಂತಹವರು ಶಿಕ್ಷೆಗೆ ಗುರಿಯಾಗುತ್ತಾರೆ ಎಂದು ಎಚ್ಚರಿಸಿದರು.

    ಇದೇ ವೇಳೆ ಪತ್ರಿಕಾ ವಿತರಕರಿಗೆ ಇ-ಶ್ರಮ್ ಕಾರ್ಡ್ ವಿತರಿಸಲಾಯಿತು. ತಾಲೂಕು ಪತ್ರಕರ್ತರ ಸಂಘದ ಜಿಲ್ಲಾ ನಿರ್ದೇಶಕ ರಾಮಕೃಷ್ಣೇಗೌಡ, ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ಎಸ್.ರವಿಕುಮಾರ್, ನಿರ್ದೇಶಕರಾದ ಕೆ.ಆರ್.ಶ್ರೀನಿವಾಸ್, ಮಹಮದ್ ಶಬೀರ್, ಎಸ್.ಯೋಗಾನಂದ, ಸದಸ್ಯ ಕೆ.ಶಂಕರ್, ಪತ್ರಕರ್ತರಾದ ಕುಪ್ಪೆ ಮಹದೇವಸ್ವಾಮಿ, ಕೆ.ಎಸ್.ವಿನೋದ್ ರಾಜ್, ಕಾರ್ಮಿಕ ಇಲಾಖೆ ಡಿಇಒ ಚಂದ್ರಕಾಂತ್, ಶ್ರೀ ವೀರಭದ್ರೇಶ್ವರ ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಸ್.ನಟರಾಜ್, ಕಚೇರಿ ಸಿಬ್ಬಂದಿ ಧನುಷ್, ಮಧುರ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts