More

    ಆಟೋ ಚಾಲಕನ ಕೊಲೆ ಮಾಡಿ ಅಪಘಾತವೆಂಬಂತೆ ಬಿಂಬಿಸಿದ್ದ ಕೊಲೆಗಡುಕರ ಸೆರೆ

    ಹಾರೋಹಳ್ಳಿ : ವ್ಯಕ್ತಿಯನ್ನು ಕೊಲೆ ಮಾಡಿ ತಮಿಳುನಾಡಿನ ಡಂಕಣಿಕೋಟೆಯಲ್ಲಿ ಬಿಸಾಡಿ ಅಪಘಾತ ವೆಂಬಂತೆ ಬಿಂಬಿಸಿದ್ದ ಆರೋಪಿಗಳನ್ನು ಹಾರೋಹಳ್ಳಿ ಪೊಲೀಸರು ಬಂಧಿಸಿದ್ದಾರೆೆ.

    ತಮಿಳುನಾಡು ಡೆಂಕಣಿಕೋಟೆ ತಾಲೂಕಿನ ಗುಮ್ಲಾಪುರಂ ಗ್ರಾಮದ ಉದಯ್‌ಕುಮಾರ್ (30), ಹರ್ಷ (26), ಮುನಿರಾಜು (26), ಮಂಜುನಾಥ (23), ಡೆಂಕಣಿಕೋಟೆ ತಾಲೂಕಿನ ಮಲ್ಲಿಗುಡ್ಡೆ ಗ್ರಾಮದ ಗಿರೀಶ್ ಶಿವಣ್ಣ (26), ಬೆಂಗಳೂರು ಹೆಬ್ಬಗೋಡಿಯ ಶಿವಕುಮಾರಸ್ವಾಮಿ (28) ಬಂಧಿತರು.

    ತಮಿಳುನಾಡು ಮೂಲದ ಆರೋಪಿಗಳು ಆನೇಕಲ್‌ನಿಂದ ಕನಕಪುರ ತಾಲೂಕಿನ ಕಬ್ಬಾಳು ಗ್ರಾಮ, ಮುತ್ತತ್ತಿಯಲ್ಲಿ ಮದ್ಯದ ಪಾರ್ಟಿ ಮಾಡಿದ್ದಾರೆ. ಆಟೋದಲ್ಲಿ ತೆರಳಿದ್ದ ಇವರು ಮರಳಿ ನಗರಕ್ಕೆ ವಾಪಸಾಗುವಾಗ ಮರಳವಾಡಿ ಹೋಬಳಿಯ ತಟ್ಟೆಕೆರೆ ಬಳಿಯ ನಾಗರ ದೇವಾಲಯದ ಬಳಿ ರಾತ್ರಿ 8.30ಕ್ಕೆ ಮತ್ತೆ ಮದ್ಯ ಸೇವನೆಗೆ ಕುಳಿತಿದ್ದಾರೆ.

    ಈ ವೇಳೆ ರಾತ್ರಿಯಾಗಿದೆ, ದಯಮಾಡಿ ಹೊರಡೋಣ ಎಂದ ಆಟೋ ಚಾಲಕ ಸಂಪಂಗಿಯನ್ನು ಮನಬಂದಂತೆ ಥಳಿಸಿ ಸಾಯಿಸಿ, ಶವವನ್ನು ಉದಯ್ ಕುಮಾರ್ ಬಂದಿದ್ದ ಕಾರಿನ ಡಿಕ್ಕಿಯಲ್ಲಿ ಹಾಕಿಕೊಂಡು ಡಂಕಣಿಕೋಟೆ ಬಳಿ ನಿರ್ಜನ ಪ್ರದೇಶಕ್ಕೆ ತಂದಿದ್ದಾರೆ. ಅಲ್ಲಿ ಸಂಪಂಗಿ ಮೃತದೇಹವನ್ನು ಆಟೋದಲ್ಲಿ ಇರಿಸಿ, ಆರೋಪಿ ಮಂಜುನಾಥ್ ಕರೆಸಿದ್ದ ಗೂಡ್ಸ್ ವಾಹನದಿಂದ ಡಿಕ್ಕಿ ಹೊಡೆಸಿ ಅಪಘಾತವೆಂಬಂತೆ ಬಿಂಬಿಸಿ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದರು. ಈ ಸಂಬಂಧ ಡೆಂಕಣಿಕೋಟೆ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    ಮತ್ತೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬನನ್ನು ಬಂಧಿಸಿದ್ದ ಡೆಂಕಣಿಕೋಟೆ ಪೊಲೀಸರು ಆತನನ್ನು ವಿಚಾರಣೆ ನಡೆಸುತ್ತಿದ್ದ ವೇಳೆ ಆಟೋ ಚಾಲಕ ಸಂಪಂಗಿಯನ್ನು ಕೊಲೆಮಾಡಿ ಅಪಘಾತವೆಂಬಂತೆ ಬಿಂಬಿಸಿದ್ದ ಬಗ್ಗೆ ನೀಡಿದ ಮಾಹಿತಿ ಮೇರೆಗೆ ಪ್ರಕರಣದ ತನಿಖೆಯನ್ನು 2020ರಲ್ಲಿ ಹಾರೋಹಳ್ಳಿ ಠಾಣೆಗೆ ವರ್ಗಾಯಿಸುತ್ತಾರೆ.

    ಕಳೆದ ಮೂರು ತಿಂಗಳ ಅವಧಿಯಲ್ಲಿ ಹಾರೋಹಳ್ಳಿ ಪೊಲೀಸರು 5 ಆರೋಪಿಗಳನ್ನು ಬಂಧಿಸಿದ್ದು, ಕೊನೆಯದಾಗಿ ಬುಧವಾರ ಮತ್ತೊಬ್ಬ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
    ರಾಮನಗರ ಎಸ್ಪಿ ಗಿರೀಶ್ ಮತ್ತು ಡಿವೈಎಸ್ಪಿ ಮೋಹನ್‌ಕುಮಾರ್ ಮಾರ್ಗದರ್ಶನದಲ್ಲಿ ಹಾರೋಹಳ್ಳಿ ಸಿಪಿಐ ರಾಮಪ್ಪ ಬಿ.ಗುತ್ತೇರ್ ಹಾಗೂ ಸಬ್ ಇನ್‌ಸ್ಪೆಕ್ಟರ್ ಮುರಳಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತ್ತು. ತಂಡದಲ್ಲಿ ಸಿಬ್ಬಂದಿ ಅನಂತಕುಮಾರ್, ಬೋರೇಗೌಡ, ವಿಶ್ವನಾಥ್, ಸತೀಶ್, ಫೈರೋಜ್, ಶ್ರೀಕಾಂತ್ ಇದ್ದರು.

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts