More

    ಉಗಾಂಡ ಮಗುವಿನ ದತ್ತು ಅಧಿಕೃತಗೊಳಿಸಿ : ಸಿಎಆರ್‌ಎಗೆ ಹೈಕೋರ್ಟ್ ನಿರ್ದೇಶನ

     ಬೆಂಗಳೂರು : ಉಗಾಂಡದ ಮಗುವನ್ನು ದತ್ತು ಪಡೆದಿರುವ ಅನಿವಾಸಿ ಭಾರತೀಯ ದಂಪತಿ ಮನವಿ ಪರಿಗಣಿಸಿ, ಆ ದತ್ತಕವನ್ನು ಅಧಿಕೃತಗೊಳಿಸುವಂತೆ ಕೇಂದ್ರೀಯ ದತ್ತು ಸ್ವೀಕಾರ ಪ್ರಾಧಿಕಾರಕ್ಕೆ (ಸಿಎಆರ್‌ಎ) ಹೈಕೋರ್ಟ್ ನಿರ್ದೇಶನ ನೀಡಿದೆ.
    ಆ ಮೂಲಕ ಕೀನ್ಯಾದಲ್ಲಿ ನೆಲೆಸಿರುವ ಭಾರತೀಯ ಮೂಲದ ದಂಪತಿಗೆ ನ್ಯಾಯಾಲಯ ನೆರವಾಗಿ ನಿಂತಿದೆ.

    ರವಿಕುಮಾರ್ ದಂಪತಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ ಹಾಗೂ ದಂಪತಿಯ ಮನವಿ ಪುರಸ್ಕರಿಸಿದೆ.
    1995ರ ಹೇಗ್ ಒಪ್ಪಂದಕ್ಕೆ ಉಗಾಂಡ ಸಹಿ ಹಾಕಿಲ್ಲದಿದ್ದರೂ ಕೇಂದ್ರ ಸರ್ಕಾರ ಸೆಂಟ್ರಲ್ ಅಡಾಪ್ಷನ್ ರಿಸೋರ್ಸ್ ಅಥಾರಿಟಿ (ಸಿಎಆರ್‌ಎ) ನಿಯಮ 2022 ಹಾಗೂ ಬಾಲ ನ್ಯಾಯ ಕಾಯ್ದೆ (ಆರೈಕೆ ಮತ್ತು ರಕ್ಷಣೆ) ಕಾಯ್ದೆ 2015ರ ಅನ್ವಯ ದತ್ತು ಪಡೆದಿರುವುದನ್ನು ಕಾನೂನು ಬದ್ಧಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಪೀಠ ಆದೇಶಿಸಿದೆ.

    ಕೇಂದ್ರ ಸರ್ಕಾರ ಈ ವಿಚಾರದಲ್ಲಿ ಬೆಂಬಲ ಪತ್ರ ನೀಡುವುದಕ್ಕೆ ತನ್ನನ್ನು ಸೀಮಿತಗೊಳಿಸಿಕೊಳ್ಳುವುದು ಮಾತ್ರವಲ್ಲ, ಭಾರತ ಹೇಗ್ ಒಪ್ಪಂದಕ್ಕೆ ಸಹಿ ಹಾಕಿರುವ ಹಿನ್ನೆಲೆಯಲ್ಲಿ ಅದು ನಿಯಮದಂತೆ ಅನುಮೋದನೆ ಪತ್ರ ಅಥವಾ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ನೀಡಬೇಕು ಎಂದಿತು. ಅಷ್ಟೆ ಅಲ್ಲದೆ, ಹಿಂದು ದತ್ತಕ ಮತ್ತು ನಿರ್ವಹಣಾ ಕಾಯ್ದೆಯಡಿ ದತ್ತು ಪ್ರಕ್ರಿಯೆ ನಡೆದಿಲ್ಲವಾದರೂ ದಂಪತಿ ಭಾರತೀಯ ಪೌರತ್ವ ಹೊಂದಿರುವ ಮಗುವನ್ನು ದತ್ತು ಪಡೆದಿರುವುದರಿಂದ ಆ ದಂಪತಿಯನ್ನು ಅರ್ಧಕ್ಕೆ ಕೈಬಿಡುವುದು ಸರಿಯಲ್ಲ ಎಂದು ಈ ವೇಳೆ ನ್ಯಾಯಪೀಠ ಹೇಳಿದೆ.

    ಅರ್ಜಿದಾರರು ಭಾರತದ ಪ್ರಜೆಗಳು, ಹೀಗಾಗಿ ಸರ್ಕಾರ ಅವರ ನೆರವಿಗೆ ಧಾವಿಸಬೇಕು. ಅರ್ಜಿದಾರರು 2023ರ ಜೂ.8ರಂದು ಸಲ್ಲಿಸಿರುವ ಮನವಿ ಪರಿಗಣಿಸಿ ಆರು ವಾರಗಳಲ್ಲಿ ಎನ್‌ಒಸಿ ವಿತರಿಸಬೇಕು. ಮಗು ದತ್ತಕ ಕಾನೂನುಬದ್ಧಗೊಳಿಸಬೇಕು ಎಂದು ತನ್ನ ಆದೇಶ ತಿಳಿಸಿದೆ.

    ಅಂತಾರಾಷ್ಟ್ರ ದತ್ತು ಪ್ರಕ್ರಿಯೆಗೆ 1995ರ ಹೇಗ್ ಒಪ್ಪಂದದಲ್ಲಿ ಮಾನ್ಯತೆ ಇದೆ. ಆದರೆ, ಆ ಒಪ್ಪಂದಕ್ಕೆ ಉಗಾಂಡ ಸಹಿ ಹಾಕದ್ದರಿಂದ ಸಿಎಆರ್‌ಎ ನಿಯಮ ಮತ್ತು ಬಾಲ ನ್ಯಾಯ ಕಾಯ್ದೆಯ ಅನ್ವಯ ಭಾರತದಲ್ಲಿ ಮಗು ದತ್ತುವನ್ನು ಕಾನೂನುಬದ್ಧಗೊಳಿಸಲಾಗದು.

    ಆದರೆ, ಇಂತಹ ಸಂದರ್ಭಗಳಲ್ಲಿ ಭಾರತ ಸರ್ಕಾರ ನೆರವಿಗೆ ಧಾವಿಸಬಹುದು. ಅದರಂತೆ, ಸರ್ಕಾರಕ್ಕೆ ಮಗು ದತ್ತು ಪ್ರಕ್ರಿಯೆಯನ್ನು ಅಧಿಕೃತಗೊಳಿಸಲು ನಿರ್ದೇಶಿಸಬೇಕು. ಇದು ದಂಪತಿಗೆ ಮಗುವನ್ನು ಕರೆದುಕೊಂಡು ದೇಶಕ್ಕೆ ಬರಲು ಮತ್ತು ಹೋಗಲು ಅನುಕೂಲವಾಗುತ್ತದೆ ಎಂದು ಅರ್ಜಿದಾರರು ವಾದಿಸಿದ್ದರು.

    ಪ್ರಕರಣದ ಹಿನ್ನೆಲೆ
    ಭಾರತೀಯ ದಂಪತಿ 2011ರಿಂದ 2018ರವರೆಗೆ ಉಗಾಂಡ ನಿವಾಸಿಗಳಾಗಿದ್ದರು. ನಂತರ 2019ರಲ್ಲಿ ಕೀನ್ಯಾಕ್ಕೆ ಸ್ಥಳಾಂತರಗೊಂಡರು. ಭಾರತೀಯ ಪೌರತ್ವ ತೊರೆಯದ ಕಾರಣ ಅವರು ಭಾರತೀಯ ಪಾಸ್‌ಪೋರ್ಟ್ ಹೊಂದಿದ್ದರು. ಉಗಾಂಡದಲ್ಲಿದ್ದಾಗ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ನಿಯಮದಂತೆ ಅಲ್ಲಿ ತಮಗೆ ಹೊಂದುವಂತಹ ಮಗುವನ್ನು ದತ್ತು ಪಡೆಯಲು ಮುಂದಾದರು. 2014ರಲ್ಲಿ ಆ ದತ್ತು ಪ್ರಕ್ರಿಯೆ ನಡೆಯಿತು.

    ಉಗಾಂಡ ಹೈಕೋರ್ಟ್, 2015ರಲ್ಲಿ ಮಗುವಿನ ಪೋಷಕತ್ವವನ್ನು ದಂಪತಿಗೆ ವರ್ಗಾಯಿಸಿತ್ತು. ದಂಪತಿ ಆ ದತ್ತು ಪ್ರಕ್ರಿಯೆಯನ್ನು ಭಾರತದಲ್ಲಿ ಅಧಿಕೃತ ಮಾಡಿಕೊಳ್ಳಲು ಬಯಸಿ, ಅದರಂತೆ ಸಿಎಆರ್‌ಎಗೆ ಅರ್ಜಿ ಸಲ್ಲಿಸಿದ್ದರು. ಆದರೆ ಪ್ರಾಧಿಕಾರ ಅವರ ಮನವಿಯನ್ನು ಅಂಗೀಕರಿಸಿರಲಿಲ್ಲ. ಬದಲಿಗೆ ತಿರಸ್ಕರಿಸಿಯೂ ಇರಲಿಲ್ಲ. ಪದೇಪದೆ ಮೇಲ್ ಮಾಡಿದರೂ ಉತ್ತರ ನೀಡಿರಲಿಲ್ಲ. ಹೀಗಾಗಿ ದಂಪತಿ ಹೈಕೋರ್ಟ್ ಮೊರೆ ಹೋಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts