More

    ಸತ್ಯಾಸತ್ಯತೆ ಪರಿಶೀಲಿಸಿಯೇ ಸುದ್ದಿ ಪ್ರಕಟಿಸಿ

    ಬೆಳಗಾವಿ: ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳು ವ್ಯಾಪಕವಾಗಿ ಹರಡುತ್ತಿವೆ. ಯಾವುದೇ ಸುದ್ದಿ ಇರಲಿ, ‘ಪ್ರತ್ಯಕ್ಷವಾಗಿ ನೋಡಿದರೂ, ಪ್ರಮಾಣಿಸಿ ನೋಡು’ ಎಂಬಂತೆ ಸುದ್ದಿಯ ಸತ್ಯಾಸತ್ಯತೆ ಪರಿಶೀಲಿಸಿದ ಬಳಿಕವೇ ಮಾಧ್ಯಮಗಳು ಪ್ರಕಟಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಸಲಹೆ ನೀಡಿದರು.

    ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಾಧ್ಯಮದವರಿಗೆ ಸೋಮವಾರ ಆಯೋಜಿಸಿದ್ದ ‘ಫ್ಯಾಕ್ಟ್ ಚೆಕ್’ ತರಬೇತಿ ಶಿಬಿರದಲ್ಲಿ ಅವರು ಮಾತನಾಡಿ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಸುದ್ದಿಗಳಿಂದ ಕೆಲವೊಮ್ಮೆ ಜನರಲ್ಲಿ ಆತಂಕ ಉಂಟಾಗುತ್ತಿದೆ. ಆದ್ದರಿಂದ ಇಂತಹ ಸುದ್ದಿಗಳು ಬಂದಾಗ ಮಾಧ್ಯಮಗಳು ಸತ್ಯಾಸತ್ಯತೆ ಪರಿಶೀಲಿಸಿದ ಬಳಿಕವೇ ಜನರಿಗೆ ನಿಖರ ಮಾಹಿತಿ ನೀಡಬೇಕು ಎಂದರು.

    ಸಾರ್ವಜನಿಕರಲ್ಲಿ ಗೊಂದಲ ಮೂಡಿಸುತ್ತಿರುವ ಸುಳ್ಳು ಸುದ್ದಿ ಹರಡುವಂತಹವರನ್ನು ಗುರುತಿಸಿ ಶಿಕ್ಷಿಸುವ ಅಗತ್ಯವಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಸುಳ್ಳು ಸುದ್ದಿಗಳಿಂದ ಗೊಂದಲ ಉಂಟಾಗುತ್ತಿದೆ ಎಂದ ಅವರು, ಕೆಲವು ಉದಾಹರಣೆಗಳನ್ನು ನೀಡಿದರು.
    ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪ ನಿರ್ದೇಶಕ ಗುರುನಾಥ ಕಡಬೂರ ಮಾತನಾಡಿ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಸುದ್ದಿಗಳ ಸತ್ಯಾಸತ್ಯತೆ ಪತ್ತೆ ಹಚ್ಚುವ ವಿಧಾನಗಳನ್ನು ಪತ್ರಕರ್ತರಿಗೆ ತಿಳಿಸುವ ಉದ್ದೇಶದಿಂದಲೇ ಈ ತರಬೇತಿ ಆಯೋಜಿಸಲಾಗಿದೆ ಎಂದು ತಿಳಿಸಿದರು.

    ಪ್ರಾತ್ಯಕ್ಷಿಕೆ: ‘ಫ್ಯಾಕ್ಟ್ ಚೆಕ್’ ಕುರಿತು ಗೂಗಲ್ ಸಂಸ್ಥೆಯಿಂದ ವಿಶೇಷ ತರಬೇತಿ ಪಡೆದಿರುವ ಸಂಪನ್ಮೂಲ ವ್ಯಕ್ತಿ ಪ್ರಮೋದ ಹರಿಕಾಂತ ಅವರು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ವಿವಿಧ ಬಗೆಯ ಸುದ್ದಿಗಳ ಸತ್ಯಾಸತ್ಯತೆ ಪತ್ತೆ ಹಚ್ಚುವ ಕುರಿತು ತರಬೇತಿ ನೀಡಿದರು. ಎಲ್ಲೋ ಯಾವಾಗಲೋ ನಡೆದ ಹಳೆಯ ಘಟನೆಗಳ ಛಾಯಾಚಿತ್ರ, ವಿಡಿಯೋ ಅಥವಾ ಧ್ವನಿ ತುಣುಕುಗಳನ್ನು ಇನ್ಯಾವುದೋ ಘಟನೆಗೆ ತಳಕು ಹಾಕಿ ಸುಳ್ಳು ಸುದ್ದಿ ಸೃಷ್ಟಿಸಿ ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿದ ಕೆಲ ಘಟನೆಗಳನ್ನು ಪ್ರಾತ್ಯಕ್ಷಿಕೆ ಮೂಲಕ ಅವರು ವಿವರಿಸಿದರು.

    ಶಿಬಿರದಲ್ಲಿ ಫೋಟೋ ವೆರಿಫಿಕೇಷನ್, ವಿಡಿಯೋ ವೆರಿಫಿಕೇಷನ್, ವೆಬ್‌ಸೈಟ್ ವೆರಿಫಿಕೇಷನ್, ಜಿಯೋ ಲೊಕೇಷನ್ ಪತ್ತೆ ಮತ್ತು ಸಾಮಾಜಿಕ ಜಾಲತಾಣಗಳ ಸತ್ಯಾಸತ್ಯತೆ ಪರಿಶೀಲನೆ ಸೇರಿ ಅನೇಕ ವಿಷಯಗಳ ಕುರಿತು ಪ್ರಮೋದ ಮಾಹಿತಿ ನೀಡಿದರು. ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳ 30ಕ್ಕೂ ಅಧಿಕ ವರದಿಗಾರರು, ಉಪ ಸಂಪಾದಕರು ಶಿಬಿರದಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts