More

    ಬಿಜೆಪಿಯಲ್ಲಿ ಆಡಿಯೋ ತಲ್ಲಣ: ಡ್ಯಾಮೇಜ್ ಕಂಟ್ರೋಲ್​ಗೆ ಯತ್ನ, ಬಿಎಸ್​ವೈಗೆ ವ್ಯಾಪಕ ಬೆಂಬಲ..

    ಬೆಂಗಳೂರು: ನಾಯಕತ್ವ ಬದಲಾವಣೆ ಚರ್ಚೆ ಮುಗಿದ ಅಧ್ಯಾಯ, ಅವಧಿಪೂರ್ತಿ ಯಡಿಯೂರಪ್ಪ ಅವರೇ ಸಿಎಂ ಎಂಬ ವಿಶ್ವಾಸವನ್ನು ಕದಲಿಸುವಂತೆ ಭಾನುವಾರ ಸಿಡಿದ ‘ಆಡಿಯೋ ಬಾಂಬ್’ ರಾಜ್ಯ ಬಿಜೆಪಿ ಪಡಸಾಲೆಯಲ್ಲಿ ಕಂಪನದ ಅಲೆಗಳನ್ನು ಎಬ್ಬಿಸಿದೆ. ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರದ್ದೆನ್ನಲಾದ ಆಡಿಯೋ ಅಸಲಿಯಲ್ಲ ಎಂಬ ಸಮಜಾಯಿಷಿ ಮೂಲಕ ನಾಯಕರು ಡ್ಯಾಮೇಜ್ ಕಂಟ್ರೋಲ್​ಗೆ ಮುಂದಾಗಿದ್ದಾರೆ. ಆದರೆ, ಆಡಿಯೋ ಬಗ್ಗೆ ತನಿಖೆ ನಡೆಸುವಂತೆ ಸಿಎಂಗೆ ಪತ್ರ ಬರೆಯುವುದಾಗಿ ಕಟೀಲ್ ಹೇಳಿಕೆ ನೀಡಿ 24 ಗಂಟೆ ಕಳೆದರೂ ಸರ್ಕಾರಕ್ಕೆ ಅಂಥ ಯಾವುದೇ ಪತ್ರ ತಲುಪಿಲ್ಲ. ಮತ್ತೊಂದೆಡೆ ಆಡಿಯೋ ಕುರಿತು ಪ್ರತಿಕ್ರಿಯೆ ನೀಡದ ಸಿಎಂ ಯಡಿಯೂರಪ್ಪ ಆಪ್ತರೊಂದಿಗೆ ಭೋಜನಕೂಟ ನಡೆಸಿದ್ದಾರೆ. ಈ ಎಲ್ಲ ಬೆಳವಣಿಗೆಗಳ ನಡುವೆಯೇ ಆಡಿಯೋ ವಿಚಾರ ಹೈಕಮಾಂಡ್ ಅಂಗಳ ತಲುಪಿದೆ.

    ವರ್ಚಸ್ಸು ಉಳಿಸುವ ಯತ್ನ: ಕಟೀಲ್ ಅವರದ್ದೆನ್ನಲಾದ ಆಡಿಯೋ ನಕಲಿಯಾಗಿದ್ದು, ಕಿಡಿಗೇಡಿಗಳು ಧ್ವನಿ ಅನುಕರಿಸಿ ವೈರಲ್ ಮಾಡಿದ್ದಾರೆ ಎನ್ನುವ ಸಮಜಾಯಿಷಿ ನೀಡುವ ಮೂಲಕ ಕಮಲ ನಾಯಕರು ಬೀಸುವ ದೊಣ್ಣೆಯಿಂದ ಪಾರಾಗುವ ಯತ್ನ ನಡೆಸಿದ್ದಾರೆ. ಸರ್ಕಾರ ಮತ್ತು ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವ ಈ ಪ್ರಯತ್ನದಲ್ಲಿ ಕಟೀಲ್​ರನ್ನು ಬಲಿಪಶುವಾಗಿಸುವ ಷಡ್ಯಂತ್ರ ನಡೆದಿದೆ ಎಂದು ಬೇಸರ ಹೊರಹಾಕಿದ್ದಾರೆ. ಆದರೆ ಈ ಆಡಿಯೋ ವಿಚಾರದಲ್ಲಿ ಪಕ್ಷ ದ್ವಂದ್ವ ನಿಲುವು ತಳೆದಿದೆ ಎಂಬ ವಿಚಾರ ಕಾರ್ಯಕರ್ತರ ಮಧ್ಯೆ ಚರ್ಚೆಯಾಗುತ್ತಿದೆ.

    ಪ್ರಭಾವಿಗಳ ತಂತ್ರ?: ಆಡಿಯೋ ಬಿಡುಗಡೆಯಾಗುವಂತೆ ನೋಡಿ ಕೊಳ್ಳುವ ಮೂಲಕ ಪಕ್ಷದ ಕೆಲವು ಪ್ರಭಾವಿ ನಾಯಕರೇ ಪರಿಸ್ಥಿತಿ ಮೀಟಿ ನೋಡಿದ್ದಾರೆ ಎಂದು ಪಕ್ಷದ ಮೂಲಗಳು ವಿಶ್ಲೇಷಿಸಿವೆ. ಮುಂಬರುವ ವಿಧಾನಸಭೆ, ಲೋಕಸಭೆ ಸಾರ್ವತ್ರಿಕ ಚುನಾವಣೆಗೆ ವರಿಷ್ಠರು ಈಗಿನಿಂದಲೇ ತಯಾರಿ ನಡೆಸಿದ್ದು, ರಾಜ್ಯ ಸಚಿವ ಸಂಪುಟದಲ್ಲಿ ಭಾರಿ ಬದಲಾವಣೆಯ ಚಿಂತನೆ ನಡೆಸಿದ್ದಾರೆ. ಭರ್ಜರಿ ಸರ್ಜರಿಯ ಸುಳಿವು ಯಾವುದೆಲ್ಲ ಆಯಾಮ ನೀಡಲಿದೆ ಎನ್ನುವುದು ಅರಿತು, ಪರ್ಯಾಯ ಪರಿಹಾರೋಪಾಯ ಹೆಣೆಯಲೆಂದು ಈ ತಂತ್ರ ಹೂಡಲಾಗಿದೆ ಎಂದು ರ್ತಸಲಾಗುತ್ತಿದೆ.

    ಕಂದಕ ವಿಸ್ತಾರ: ಯಡಿಯೂರಪ್ಪ ವಿರುದ್ಧ ಪಕ್ಷದೊಳಗೆ ನಡೆಯುತ್ತಿದೆ ಎನ್ನಲಾದ ಷಡ್ಯಂತ್ರದಿಂದ ಉಂಟಾಗಿದ್ದ ಕಂದಕ ಮುಚ್ಚಿ, ಗೊಂದಲ ನಿವಾರಿಸುವ ಪ್ರಯತ್ನಗಳಿಗೆ ‘ಆಡಿಯೋ’ ಅಡ್ಡಗಾಲು ಹಾಕಿದೆ. ಅಪನಂಬಿಕೆ, ಸಂಶಯದ ಕಂದಕ ಇನ್ನಷ್ಟು ವಿಸ್ತಾರವಾಗಿದ್ದು, ಬಿಡುವಿಲ್ಲದ ಕಾರ್ಯಕ್ರಮಗಳು ಹಾಗೂ ಬಿರುಸಿನ ಚಟುವಟಿಕೆಗಳ ಮೂಲಕ ಸಂಘಟನೆ ಬಲಪಡಿಸುವ ಉದ್ದೇಶಕ್ಕೂ ಹಿನ್ನಡೆಯಾಗಲಿದೆ ಎಂದು ಪಕ್ಷದ ಮೂಲಗಳು ಬೇಸರ ವ್ಯಕ್ತಪಡಿಸಿವೆ.

    ನಗರಕ್ಕೆ ಬಾರದ ಕಟೀಲ್: ‘ಬದಲಾವಣೆ’ ಆಡಿಯೋ ಭಾನುವಾರ ರಾತ್ರಿ ಬಹಿರಂಗವಾಗಿ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ ಬೆನ್ನಲ್ಲೇ ನಳಿನ್ ಕುಮಾರ್ ಕಟೀಲ್ ತಡರಾತ್ರಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದರು. ಆಡಿಯೋ ನನ್ನದಲ್ಲ, ಈ ಪ್ರಕರಣದ ತನಿಖೆ ನಡೆಸಿ ಕಿಡಿಗೇಡಿಗಳನ್ನು ಪತ್ತೆ ಹಚ್ಚಲು ಕೋರಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸುವೆ, ಇದಕ್ಕಾಗಿ ಸೋಮವಾರ ಬೆಂಗಳೂರಿಗೆ ಬರುವೆ ಎಂದಿದ್ದರು. ಕಟೀಲ್ ಹೇಳಿಕೆಯಂತೆ ಸೋಮವಾರವಂತೂ ನಡೆದುಕೊಂಡಿಲ್ಲ. ಸಿಎಂ ಬಿಎಸ್​ವೈಗೆ ಈ ಕುರಿತು ಯಾವುದೇ ಮನವಿ ಸಲ್ಲಿಕೆಯಾಗಿಲ್ಲ ಎಂದು ಸಿಎಂ ಕಚೇರಿ ಮೂಲಗಳು ಹೇಳಿವೆ. ಹೀಗಾಗಿ ನಕಲಿ ಎನ್ನಲಾದ ಆಡಿಯೋ ಕುರಿತು ತನಿಖೆ ಸದ್ಯಕ್ಕೆ ದೂರವೇ ಉಳಿದಿದೆ. ಕಟೀಲ್ ಅವರು ಕೊನೇ ಘಳಿಗೆಯಲ್ಲಿ ದೆಹಲಿ ಪ್ರಯಾಣ ರದ್ದುಪಡಿಸಿ, ಮಂಗಳೂರಿನಲ್ಲಿ ಉಳಿದುಕೊಂಡಿದ್ದಾರೆ. ವರಿಷ್ಠರ ಸೂಚನೆಯಂತೆ ಪರಿಸ್ಥಿತಿ ಅವಲೋಕಿಸಿ ಮಂಗಳವಾರ ದೆಹಲಿಗೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಬಿಎಸ್​ವೈ ಭೋಜನ: ಆಡಿಯೋ ಸೃಷ್ಟಿಸಿದ ರಾಜಕೀಯ ಸಂಚಲನ, ರಾಜಕೀಯ ವಲಯದ ಬಿಸಿ ಚರ್ಚೆಗಳು ತಮ್ಮ ಸುತ್ತಲೇ ಗಿರಕಿ ಹೊಡೆಯುತ್ತಿದ್ದರೂ ಬಿಎಸ್​ವೈ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಸೋಮವಾರ ಗೃಹ ಕಚೇರಿ ಕೃಷ್ಣಾದಲ್ಲಿ ಪೂರ್ವ ನಿಗದಿತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ನಂತರ ಸಚಿವರಾದ ವಿ.ಸೋಮಣ್ಣ, ಆರ್.ಅಶೋಕ್, ಬಸವರಾಜ ಬೊಮ್ಮಾಯಿ, ಬಿ.ಸಿ.ಪಾಟೀಲ್, ಬೈರತಿ ಬಸವರಾಜು, ಎಸ್.ಟಿ.ಸೋಮಶೇಖರ್ ಮತ್ತು ಡಾ.ಕೆ.ಸುಧಾಕರ್ ಜತೆ ಆಪ್ತ ಸಮಾಲೋಚನೆ ನಡೆಸಿ ಒಟ್ಟಾಗಿ ಖಾಸಗಿ ಹೋಟೆಲ್​ಗೆ ತೆರಳಿ ಭೋಜನ ಮಾಡಿದ್ದಾರೆ.

    ಪ್ರಧಾನಿ, ಗವರ್ನರ್ ಚರ್ಚೆ: ಭಾನುವಾರ ತಡರಾತ್ರಿ ದಿಢೀರ್ ದೆಹಲಿಗೆ ತೆರಳಿದ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಸೋಮವಾರ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನೂ ಭೇಟಿಯಾಗುವ ಸಾಧ್ಯತೆಗಳಿವೆ. ಆಡಿಯೋ ಹೊರ ಬಂದ ಕೆಲವೇ ತಾಸುಗಳಲ್ಲಿ ಗೆಹಲೋತ್ ದೆಹಲಿಗೆ ಪ್ರಯಾಣ ಬೆಳೆಸಿರುವ ಹಿನ್ನೆಲೆಯಲ್ಲಿ ಎಲ್ಲಿಲ್ಲದ ಕುತೂಹಲ ಕೆರಳಿಸಿದೆ. ಆದರೆ ದೆಹಲಿ ಪ್ರಯಾಣ ‘ಸೌಜನ್ಯದ ಭೇಟಿ’ಗೆ ಎಂದು ಮೂಲಗಳು ಹೇಳಿವೆ.

    ರಾಜ್ಯ ಸರ್ಕಾರ ಮತ್ತು ಬಿಜೆಪಿ ಹೆಸರಿಗೆ ಮಸಿ ಬಳಿದು, ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೆಸರಿನಲ್ಲಿ ಯಾರೋ ನಕಲಿ ಧ್ವನಿ ಮುದ್ರಿಕೆ ಹಂಚಿದ್ದಾರೆ. ಔತಣಕೂಟದಲ್ಲಿ ರಾಜ್ಯದ ಅಭಿವೃದ್ಧಿ ವಿಚಾರವಾಗಿ ಶಾಸಕರೊಂದಿಗೆ ಸಿಎಂ ಮುಕ್ತವಾಗಿ ರ್ಚಚಿಸುವ ನಿರೀಕ್ಷೆಯಿದೆ.

    | ಲಕ್ಷ್ಮಣ ಸವದಿ ಡಿಸಿಎಂ

    ಪಕ್ಷದೊಳಗೆ ಅಪಸ್ವರ: ಕಟೀಲ್​ರ ಆಡಿಯೋ ಪ್ರಕರಣದಿಂದ ಸರ್ಕಾರ ಮತ್ತು ಪಕ್ಷಕ್ಕೆ ಮುಜುಗರ ಎನ್ನುವುದಾದಲ್ಲಿ ನಾಯಕತ್ವದ ವಿರುದ್ಧ ಅಪಸ್ವರ ಎತ್ತಿದ್ದವರ ಬಗ್ಗೆ ಮೌನವಹಿಸಿದ್ದೇಕೆ ಎನ್ನುವ ಪ್ರಶ್ನೆ ಉದ್ಭವವಾಗಿದೆ. ರಾಜ್ಯದಲ್ಲಿ 3 ಪಕ್ಷಗಳ ಸರ್ಕಾರವಿದೆ ಎಂದು ಸಚಿವ ಸಿ.ಪಿ. ಯೋಗೇಶ್ವರ್ ಬಹಿರಂಗವಾಗಿ ಹೇಳಿದ್ದರೆ, ಶಾಸಕ ಅರವಿಂದ ಬೆಲ್ಲದ್ ತಮ್ಮ ಫೋನ್ ಕದ್ದಾಲಿಕೆಯಾಗುತ್ತಿದೆ ಎಂದು ದೂರು ನೀಡಿದ್ದರು. ಬಿಎಸ್​ವೈ ವಿರುದ್ಧ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗಳು, ಕೆಲವು ಶಾಸಕರ ಟ್ವೀಟ್ ‘ಆಡಳಿತದೊಳಗೆ ಪ್ರತಿಪಕ್ಷ’ ಸೃಷ್ಟಿಸುವ ಪ್ರಯತ್ನವೆಂದು ವಿಶ್ಲೇಷಿಸಲಾಯಿತು. ಆ ಎಲ್ಲ ಬೆಳವಣಿಗೆಗಳಿಂದ ಪಕ್ಷ ಮತ್ತು ಸರ್ಕಾರದ ವರ್ಚಸ್ಸಿಗೆ ಧಕ್ಕೆಯಾಗಿರಲಿಲ್ಲವೇ ಎಂದು ಪಕ್ಷದ ಕಾರ್ಯಕರ್ತರು ಕೇಳುತ್ತಿದ್ದಾರೆ.

    ಬಿಎಸ್​ವೈ ಪರ ಗಟ್ಟಿಧ್ವನಿ: ಸಿಎಂ ಬಿ.ಎಸ್. ಯಡಿಯೂರಪ್ಪ ಪದಚ್ಯುತಿಗೆ ಯತ್ನ ವಿಚಾರ ಮುನ್ನೆಲೆಗೆ ಬರುತ್ತಲೇ ವೀರಶೈವ ಲಿಂಗಾಯತ ಸಮುದಾಯದ ಜತೆಗೆ ಪಕ್ಷಾತೀತವಾಗಿ ಸಮುದಾಯದ ನಾಯಕರು ಈ ಬೆಳವಣಿಗೆ ವಿರುದ್ಧ ಧ್ವನಿ ಎತ್ತಿದ್ದಾರೆ. ರಂಭಾಪುರಿ ಶ್ರೀಗಳ ಸಹಿತ ಹಲವು ಮಠಾಧೀಶರು ಬಿಎಸ್​ವೈರನ್ನು ಸಿಎಂ ಆಗಿ ಮುಂದುವರಿಸಬೇಕು ಎಂದು ಬೆಂಬಲಿಸಿದ್ದರೆ, ಕಾಂಗ್ರೆಸ್ ಮುಖಂಡರಾದ ಶಾಮನೂರು ಶಿವಶಂಕರಪ್ಪ, ಎಂ.ಬಿ.ಪಾಟೀಲ್ ಕೂಡ ಯಡಿಯೂರಪ್ಪ ಪರ ಮಾತನಾಡಿದ್ದಾರೆ. ಬಿಎಸ್​ವೈ ಪದಚ್ಯುತಿಗೊಳಿಸಿದರೆ ಹೋರಾಟ ನಡೆಸುವ ಎಚ್ಚರಿಕೆಯೂ ಸಮುದಾಯದಿಂದ ವ್ಯಕ್ತವಾಗಿದೆ.

    ನಳಿನ್​ಕುಮಾರ್ ಕಟೀಲ್ ಅವರೇ ಆಡಿಯೋ ತಮ್ಮದಲ್ಲ ಎಂದಿರುವಾಗ ಈ ಬಗ್ಗೆ ಹೇಳಿಕೆ, ಚರ್ಚೆ ಅನಗತ್ಯ. ನಾಯಕತ್ವದ ಬದಲಾವಣೆ ಕೇವಲ ವದಂತಿಯಷ್ಟೇ ಅಲ್ಲ, ಅಪ್ರಸ್ತುತ. ಮುಂದಿನ ಎರಡು ವರ್ಷವೂ ಯಡಿಯೂರಪ್ಪ ಸಿಎಂ ಆಗಿ ಅವಧಿ ಪೂರ್ಣಗೊಳಿಸಲಿದ್ದಾರೆ.

    | ಡಾ.ಸಿ.ಎನ್. ಅಶ್ವತ್ಥ ನಾರಾಯಣ ಡಿಸಿಎಂ

    ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಿರುವ ಆಡಿಯೋಗೂ ನನಗೂ ಯಾವುದೇ ಸಂಬಂಧವಿಲ್ಲ. ಯಡಿಯೂರಪ್ಪ ನಮ್ಮ ಸರ್ವ ಸಮ್ಮತ ನಾಯಕ. ಅವರು ನಮ್ಮ ಪಾರ್ಟಿಗೆ ಆತ್ಮ. ಈಶ್ವರಪ್ಪ, ಜಗದೀಶ ಶೆಟ್ಟರ್ ಪಾರ್ಟಿಯ ಎರಡು ಕಣ್ಣುಗಳು ಇದ್ದಂತೆ. ಆಡಿಯೋ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಸಿಎಂ ಅವರನ್ನು ವಿನಂತಿಸಲಿದ್ದೇನೆ. ಎಲ್ಲದಕ್ಕೂ ತನಿಖೆಯ ಬಳಿಕ ಉತ್ತರ ನೀಡುತ್ತೇನೆ. ನ್ಯಾಯಾಲಯದ ಮೊರೆ ಹೋಗುವ ಬಗ್ಗೆಯೂ ಚಿಂತನೆ ನಡೆಸಿದ್ದೇನೆ.

    | ನಳಿನ್ ಕುಮಾರ್ ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷ

    ಎಸ್​ಎಸ್​ಎಲ್​ಸಿಯಲ್ಲಿ ಅಂಕ ಕಡಿಮೆ ಬರಬಹುದೇನೋ ಎಂಬ ಭಯದಿಂದ ಆತ್ಯಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ

    ರಾಜಕಾರಣಿಗಳೇ ಈತನ ಟಾರ್ಗೆಟ್, ಬಲೆ ಬೀಸಿದ್ದು ಒಬ್ಬಿಬ್ಬರಿಗಲ್ಲ!; ಶಾಸಕರ ಹೆಸರಿನಲ್ಲಿ ಶಾಸಕಿಗೇ ವಂಚಿಸಿ ಕೊನೆಗೂ ಸಿಕ್ಕಿಬಿದ್ದ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts