More

    ಕೋವಿಡ್ ಪತ್ತೆ ಪ್ರಯೋಗಾಲಯ ಶಿರಸಿಯಲ್ಲಿ

    ಶಿರಸಿ: ಜಿಲ್ಲೆಯ ಎಲ್ಲ ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ನರ್ಸ್​ಗಳಿಗೆ ದಿನಸಿ ಕಿಟ್ ವಿತರಿಸಲು ತೀರ್ವನಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.
    ತಾಲೂಕಿನ ಉಂಚಳ್ಳಿಯಲ್ಲಿ ಮಂಗಳವಾರ ಹೆಬ್ಬಾರ ದಿನಸಿ ಕಿಟ್ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ಜಿಲ್ಲೆಯ ಎಲ್ಲ ಸರ್ಕಾರಿ ಆಸ್ಪತ್ರೆಗಳಿಗೆ ಶೇ. 75-80ರಷ್ಟು ವೈದ್ಯರು ಹಾಜರಾಗಿದ್ದಾರೆ. ಆರೋಗ್ಯ ಕ್ಷೇತ್ರಕ್ಕೆ ಒತ್ತು ನೀಡಿದ್ದೇವೆ ಎಂದರು.
    ಶಿರಸಿಯಲ್ಲಿ ಆಕ್ಸಿಜನ್ ಘಟಕ ಇಪ್ಪತ್ತು ದಿನದೊಳಗೆ ಕಾರ್ಯನಿರ್ವಹಿಸಲಿದೆ. ಕೋವಿಡ್ ಪತ್ತೆ ಪ್ರಯೋಗಾಲಯ ಶಿರಸಿಗೆ ಮಂಜೂರು ಮಾಡಲಾಗಿದೆ. ಎರಡೂವರೆ ಕೋಟಿ ರೂಪಾಯಿಗಿಂತ ಹೆಚ್ಚು ವೆಚ್ಚದಲ್ಲಿ ನಿರ್ವಣವಾಗಲಿದೆ. ತಿಂಗಳೊಳಗೆ ಕಾರ್ಯಾರಂಭ ಮಾಡಲಿದೆ ಎಂದರು. ಕೋವಿಡ್ ಮೂರನೇ ಅಲೆ ತಡೆಯುವ ನಿಟ್ಟಿನಲ್ಲಿ ಪ್ರತಿ ಕ್ಷೇತ್ರದ ಒಂದು ಆಸ್ಪತ್ರೆಯಲ್ಲಿ 20-25 ಹಾಸಿಗೆಯ ಮಕ್ಕಳ ಕೋವಿಡ್ ಆರೈಕೆ ಕೇಂದ್ರ ತೆರೆಯಲಿದ್ದೇವೆ. ಅಲ್ಲಿ ಚಿಕಿತ್ಸೆಗೆ ಬೇಕಿರುವ ವ್ಯವಸ್ಥೆ ಕಲ್ಪಿಸಿಕೊಳ್ಳಲಾಗಿದೆ. ಈಗಾಗಲೇ ಮಕ್ಕಳ ತಜ್ಞರನ್ನು ನೇಮಿಸಲಾಗಿದೆ. ಪಕ್ಕದ ಜಿಲ್ಲೆಯ ನಿವೃತ್ತ ಏಳು ವೈದ್ಯರನ್ನು ಈಗಾಗಲೇ ನೇಮಕ ಮಾಡಲಾಗಿದೆ ಎಂದ ಅವರು, ಕೋವಿಡ್​ಗೆ ಆತಂಕ ಪಡುವ ಅಗತ್ಯವಿಲ್ಲ. ಸಕಾಲಕ್ಕೆ ಚಿಕಿತ್ಸೆ ಪಡೆದುಕೊಳ್ಳಿ ಎಂದರು.
    ಮತದಾರರು ನನ್ನ ಮಾಲೀಕರು, ನಾನು ಸೇವಕನಾಗಿ ಮಾಲೀಕರು ಕಷ್ಟದಲ್ಲಿದ್ದಾಗ ನೆರವಾಗುವುದು ನನ್ನ ಜವಾಬ್ದಾರಿ. ಕಷ್ಟಕಾಲದಲ್ಲಿ ನನ್ನ ಕೈಹಿಡಿದವರಿಗೆ ನೆರವಾಗಲು ಇದು ಸಕಾಲ ಎಂದು ಭಾವಿಸಿ ಋಣ ತೀರಿಸಲು ಮುಂದಾಗಿದ್ದೇನೆ ಎಂದು ಹೇಳಿದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ ನಾಯಕ ಮಾತನಾಡಿ, ಜನರ ಸೇವೆ ಮಾಡುವುದು ಬಿಜೆಪಿ ಕಾರ್ಯಕರ್ತರ ಧ್ಯೇಯವಾಗಿದೆ. ಸ್ವಂತ ಹಣದಲ್ಲಿ ದಿನಸಿ ಕಿಟ್ ನೀಡುವ ಮೂಲಕ ಸಚಿವ ಶಿವರಾಮ ಹೆಬ್ಬಾರ ಮಾದರಿ ಕಾರ್ಯ ಮಾಡಿದ್ದಾರೆ ಎಂದರು. ತಹಸೀಲ್ದಾರ್ ಎಂ.ಆರ್. ಕುಲಕರ್ಣಿ, ಡಿಎಸ್​ಪಿ ರವಿ ನಾಯ್ಕ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಫ್.ಜಿ. ಚಿನ್ನಣ್ಣನವರ್, ಪ್ರಮುಖರಾದ ವಿವೇಕ ಹೆಬ್ಬಾರ, ಉಷಾ ಹೆಗಡೆ, ಮುಖಂಡರಾದ ದ್ಯಾಮಣ್ಣ ದೊಡ್ಮನಿ ಇದ್ದರು. ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ನರಸಿಂಹ ಹೆಗಡೆ ಸ್ವಾಗತಿಸಿದರು. ಉಂಚಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವೇಂದ್ರ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು.
    ಅನುಮಾನಾಸ್ಪದ ನಡೆ ಜಾರಕಿಹೊಳಿ ಜಾಯಮಾನ: ರಾಜ್ಯ ರಾಜಕೀಯದಲ್ಲಿ ರಮೇಶ ಜಾರಕಿಹೊಳಿ ನಡೆ ಕುರಿತು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಶಿವರಾಮ ಹೆಬ್ಬಾರ, ಜಾರಕಿಹೊಳಿ ಅವರಿಗೆ ಆರಂಭದಿಂದಲೂ ರಾಜಕೀಯದಲ್ಲಿ ಅನುಮಾನಾಸ್ಪದ ನಡೆ ತೋರಿಸುವುದು ಜಾಯಮಾನ. ಜಾರಕಿಹೊಳಿ ಅವರು ನನಗೆ ಪರಮಾಪ್ತ ಸ್ನೇಹಿತ. ಆ ವಿಶ್ವಾಸ ಮತ್ತು ಅವರ ಒಡನಾಟದಿಂದ ಸಾಕಷ್ಟು ಅರಿತಿದ್ದೇನೆ. ಅವರು ರಾಜೀನಾಮೆ ನೀಡುತ್ತಾರೆ ಎಂಬ ಸುದ್ದಿ ಸತ್ಯಕ್ಕೆ ದೂರವಾದುದು. ಅವರು ಬಿಜೆಪಿಗೆ ಯಾವತ್ತೂ ರಾಜೀನಾಮೆ ನೀಡುವುದಿಲ್ಲ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts